ಹೊಸದಿಲ್ಲಿ: ದೇಶಾದ್ಯಂತ ಈರುಳ್ಳಿ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದೆ. ಶುಕ್ರವಾರ ದೇಶದಲ್ಲಿ ಸರಾಸರಿ ಈರುಳ್ಳಿ ದರ ಪ್ರತೀ ಕೆ.ಜಿ.ಗೆ 47 ರೂ. ಇತ್ತು. ಬೆಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಂಡಿದ್ದು, ಹೆಚ್ಚುವರಿಯಾಗಿ ದಾಸ್ತಾನು ಮಾಡಿರುವ ಈರುಳ್ಳಿಯನ್ನು ಸಬ್ಸಿಡಿ ದರದಲ್ಲಿ ಕೆ.ಜಿ.ಗೆ 25 ರೂ.ಗಳಂತೆ ಮಾರಾಟ ಮಾಡಲು ತೀರ್ಮಾನಿಸಿದೆ.
ಕರಾವಳಿಯಲ್ಲೂ ಹೆಚ್ಚಳ
ದಾಸ್ತಾನಿನಲ್ಲಿ ಆಗಿರುವ ಏರುಪೇರಿನಿಂದಾಗಿ ಕರಾವಳಿಯಲ್ಲಿಯೂ ಈರುಳ್ಳಿ ದರ ಕಳೆದ 10 ದಿನಗಳಲ್ಲಿ ದುಪ್ಪಟ್ಟಾಗಿದೆ.
ಕೆ.ಜಿ.ಗೆ 30ರಿಂದ 35 ರೂ. ಆಸುಪಾಸಿನಲ್ಲಿ ಇದ್ದ ಈರುಳ್ಳಿ ದರವು ಈಗ 65 ರೂ. ನಿಂದ 70 ರೂ.ಗೆ ತಲುಪಿದೆ. ರಾಜ್ಯ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಈ ಬಾರಿ ಪ್ರತಿಕೂಲ ಹವಾ ಮಾನ ದಿಂದಾಗಿ ಬೆಳೆ ಕಡಿಮೆಯಾಗಿದೆ. ಇದರಿಂದಾಗಿ ಒಟ್ಟು ನೀರುಳ್ಳಿ ಆವಕ ಇಳಿಮುಖ ವಾಗಿದೆ ಎಂದು ವರ್ತಕರು ತಿಳಿಸಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಈರುಳ್ಳಿ ದರ ಇನ್ನಷ್ಟು ಏರಬಹುದು ಎನ್ನಲಾಗುತ್ತಿದೆ.
ಹುಬ್ಬಳ್ಳಿ, ಚಿಕ್ಕಮಗಳೂರು ಕಡೆ ಯಿಂದ ಕರಾವಳಿಗೆ ಈರುಳ್ಳಿ ಬರುತ್ತದೆ. 15 ದಿನಗಳ ಹಿಂದೆ 28 ರೂ. ಇದ್ದ ದರ ಕ್ರಮವಾಗಿ 30, 33 ರೂ.ಗೆ ಏರಿಕೆ ಯಾಗಿದೆ, ಬಳಿಕ ದಿಢೀರ್ ಆಗಿ 60 ರೂ. ದಾಟಿದೆ.