ಬೆಂಗಳೂರು: ಸರಕು ಸಾಗಣೆ ಲಾರಿಯಲ್ಲಿ ಈರುಳ್ಳಿ ಹಾಗೂ ಆಲೂಗಡ್ಡೆ ಮೂಟೆಗಳ ಮಧ್ಯೆ ರೂ. 2 ಸಾವಿರ ಹಾಗೂ 500 ಮುಖಬೆಲೆಯ 4.13 ಕೋಟಿ ಹಣವನ್ನು ಕೇರಳಕ್ಕೆ ಸಾಗಿಸುತ್ತಿದ್ದ ಮೂವರನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಕೇರಳದ ಮಹಮದ್ ಅಫಲ್ (23), ಅಬುÉಲ್ ನಾಸಿರ್ (44), ಶಂಶುದ್ದಿನ್ (39) ಬಂಧಿತರು.
ಆರೋಪಿಗಳಿಂದ ಶೇ.75ರಷ್ಟು 2 ಸಾವಿರ ಮುಖಬೆಲೆಯ ನೋಟು, ಶೇ.5ರಷ್ಟು 500 ಮುಖಬೆಲೆಯ ಹೊಸ ನೋಟು ಹಾಗೂ ಶೇ.20 ರಷ್ಟು 100 ಮುಖಬೆಲೆಯ ನೋಟು ಸೇರಿ ಒಟ್ಟು 4.13 ಕೋಟಿ ನಗದು ಹಾಗೂ ಸರಕು ಸಾಗಣೆ ಲಾರಿ, 35 ಈರುಳ್ಳಿ ಮೂಟೆಗಳು ಹಾಗೂ ಒಂದು ಕಾರು ಜಪ್ತಿ ಮಾಡಲಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್, “ಕೋಡಿಗೆಹಳ್ಳಿ ಸಮೀಪದ ಆನಂದನಗರ ಬಡಾವಣೆಯ ಮನೆಯೊಂದರಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಪೊಲೀಸ್ ಮಾಹಿತಿದಾರರೊಬ್ಬರು ವಿಷಯ ಮುಟ್ಟಿಸಿದ್ದರು. ಸೋಮವಾರ ರಾತ್ರಿ ಮನೆ ಮೇಲೆ ದಾಳಿ ನಡೆಸಿದಾಗ ಹಣ ಜಪ್ತಿಯಾಗಿದೆ. ಮಹಮದ್ ಅಫಲ್ ಪ್ರಕರಣದ ಪ್ರಮುಖ ಆರೋಪಿ,” ಎಂದು ಮಾಹಿತಿ ನೀಡಿದರು.
“ಅಫಲ್ ಕೇರಳದಲ್ಲಿ ಅಗರಬತ್ತಿ ಕಾರ್ಖಾನೆ ಹೊಂದಿದ್ದು, ನಾಲ್ಕು ತಿಂಗಳ ಹಿಂದೆ ನಗರದ ವಿದ್ಯಾರಣ್ಯಪುರದಲ್ಲಿ ನೆಲೆಸಿದ್ದ. ಆರೋಪಿ ಹವಾಲ ದಂಧೆಯಲ್ಲಿ ತೊಡಗಿದ್ದು, ಮುಂಬೈನಿಂದ ಹಣ ಬರುತ್ತಿತ್ತು. ಈ ಹಣವನ್ನು ಸಂಗ್ರಹಿಸುಡುವುದಕ್ಕಾಗಿಯೇ ಕೊಡಿಗೇಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿದ್ದ. ಯಾರಿಗೂ ತಿಳಿಯಬಾರದೆಂದು ರಾತ್ರಿ ವೇಳೆ ಹಣವನ್ನು ಕೇರಳಕ್ಕೆ ಸಾಗಿಸುತ್ತಿದ್ದ,” ಎಂದು ಹೇಳಿದರು.
“ಸೋಮವಾರ ರಾತ್ರಿ ನಾಸಿರ್ 4.13 ಕೋಟಿ ರೂ. ಹಣದೊಂದಿಗೆ ಫಾಚೂನರ್ ಕಾರಿನಲ್ಲಿ ಮನೆ ಹತ್ತಿರ ಬಂದಿದ್ದ. ಅಫjಲ್ ಹಾಗೂ ಶಂಶುದ್ದೀನ್ ಹಣವನ್ನು ಸರಕು ಸಾಗಣೆ ಲಾರಿಗೆ ತುಂಬುತ್ತಿದ್ದರು. ಯಾರಿಗೂ ತಿಳಿಯಬಾರದೆಂದು ಹಣದ ಪೆಟ್ಟಿಗೆಗಳನ್ನು ಆಲೂಗಡ್ಡೆ ಮತ್ತು ಈರುಳ್ಳಿ ಮೂಟೆಯಿಂದ ಮುಚ್ಚಿದ್ದರು. ಈ ವೇಳೆ ದಾಳಿ ನಡೆಸಲಾಯಿತು,” ಎಂದು ತಿಳಿಸಿದರು.
ಲಕ್ಷಕ್ಕೆ 100 ರೂ.ಕಮಿಷನ್: ಆರೋಪಿಗಳು 1ಲಕ್ಷ ರೂ.ಸಾಗಾಟ ಮಾಡಿದರೆ ಅದಕ್ಕೆ 100 ರೂ.ಕಮಿಷನ್ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳು ಯಾರಿಂದ ಹಣ ಸಂಗ್ರಹಿಸುತ್ತಿದ್ದರು, ಇದರ ಹಿಂದೆ ಯಾರ್ಯಾರಿದ್ದಾರೆ ಎಂಬುದರ ತನಿಖೆ ನಡೆಸಲಾಗುವುದು. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಎಸ್.ರವಿ ತಿಳಿಸಿದರು.