Advertisement

ಒನ್‍ ಪ್ಲಸ್‍ ನಾರ್ಡ್ ಸಿಇ 2: ಸ್ಲಿಮ್ ಬ್ಯೂಟಿ ಪರ್ಫಾರ್ಮೆನ್ಸ್ ನಲ್ಲೂ ಚೂಟಿ

08:42 AM Apr 03, 2022 | Team Udayavani |

ಒನ್‍ ಪ್ಲಸ್ ಮೊಬೈಲ್‍ ಎಂದರೆ ಸ್ವಲ್ಪ ದುಬಾರಿ. ಅದು ಮಧ್ಯಮ ಬಜೆಟ್‍ ನಲ್ಲಿ ಕೊಳ್ಳೋರಿಗೆ ಎಟಕುವುದಿಲ್ಲ ಎಂಬ ಗೊಣಗಾಟವನ್ನು ದೂರವಾಗಿಸಲು ಆ ಕಂಪೆನಿ ನಾರ್ಡ್ ಸರಣಿಯಲ್ಲಿ 25 ಸಾವಿರ ರೂ. ದರದೊಳಗೆ ಮೊಬೈಲ್‍ಗಳನ್ನು ಹೊರತರುತ್ತಿದೆ. ಈ ಸರಣಿಯ ಇನ್ನೊಂದು ಹೊಸ ಫೋನ್‍ ಒನ್‍ ಪ್ಲಸ್‍ ನಾರ್ಡ್ ಸಿಇ 2 5G.

Advertisement

ಇದರ ದರ 6 ಜಿಬಿ ರ್ಯಾಮ್‍ ಹಾಗೂ 128 ಆಂತರಿಕ ಸಂಗ್ರಹ ಆವೃತ್ತಿಗೆ 23,999 ರೂ. ಹಾಗೂ 8+128 ಜಿಬಿ ಆವೃತ್ತಿಗೆ 24,999 ರೂ. ಇದೆ. ಈ ಫೋನಿನ ವೈಶಿಷ್ಯಗಳೇನು? ಇದರಲ್ಲಿ ಗಮನ ಸೆಳೆಯುವ ಅಂಶಗಳೇನು? ಇದು ನಾವು ಕೊಡುವ ಹಣಕ್ಕೆ ತಕ್ಕ ಮೌಲ್ಯ ನೀಡುವುದೇ? ಇದರ ಕಾರ್ಯನಿರ್ವಹಣೆ ಹೇಗಿದೆ? ಇಲ್ಲಿದೆ ಮಾಹಿತಿ.

ರಚನೆ ವಿನ್ಯಾಸ: ಸಾಮಾನ್ಯವಾಗಿ 25 ಸಾವಿರ ರೂ. ದರದಲ್ಲಿ ಹಲವು ಫೋನ್‍ ಗಳು ಸ್ವಲ್ಪ ದಪ್ಪ ಎನಿಸುವಂತಿರುತ್ತವೆ. ಆದರೆ ಒನ್‍ಪ್ಲಸ್‍ ನಾರ್ಡ್ ಸಿಇ 2 ಬಹಳ ಸ್ಲಿಮ್‍ ಆಗಿದೆ.  ಕೈಯಲ್ಲಿ ಹಿಡಿದಾಗ ಹೆಚ್ಚು ಮೊತ್ತದ ಫೋನ್ ಗಳನ್ನು ಹಿಡಿದಂತೆ ಅನಿಸುತ್ತದೆ. ಒನ್‍ ಪ್ಲಸ್‍ನ 9 ಪ್ರೊ ಗಿಂತ ಸ್ಲಿಮ್‍ ಆಗಿದೆ. ಇದರ ಮಂದ 7.8 ಮಿ.ಮೀ. ಇದೆ. ಇಷ್ಟು ತೆಳುವಿಗೂ 3.5 ಎಂ.ಎಂ. ಹೆಡ್‍ ಫೋನ್‍ ಜಾಕ್‍ ನೀಡಲಾಗಿದೆ. ಇದರ ತೂಕ 173 ಗ್ರಾಂ. ಎಡ ಬದಿಯಲ್ಲಿ ವ್ಯಾಲ್ಯೂಮ್‍ ಹೆಚ್ಚು ಕಡಿಮೆ ಮಾಡಲು ಎರಡು ಬಟನ್‍ ನೀಡಲಾಗಿದೆ. ಇವುಗಳ ಮೇಲೆ ಸಿಮ್‍ ತೆಗೆಯುವ ಟ್ರೇ ಇದೆ. ಒಳ ಬದಿಯಲ್ಲಿ ಆನ್‍ ಅಂಡ್‍ ಆಫ್‍ ಬಟನ್‍ ನೀಡಲಾಗಿದೆ. ಕೆಳ ಬದಿಯಲ್ಲಿ 3.5 ಎಂ.ಎಂ. ಆಡಿಯೋ ಜಾಕ್‍ ಪೋರ್ಟ್, ಯುಎಸ್‍ಬಿ ಟೈಪ್‍ ಸಿ ಪೋರ್ಟ್‍ ಹಾಗೂ ಸ್ಪೀಕರ್ ನೀಡಲಾಗಿದೆ. ಹಿಂಬದಿ ಹೆಚ್ಚು ಕಡಿಮೆ ಒನ್‍ ಪ್ಲಸ್‍ 9 ಪ್ರೊ ದಂತೆಯೇ ಇದೆ. ಹಿಂಬದಿ ಪಾಲಿಕಾರ್ಬೊನೆಟ್‍ ಆದರೂ ಲೋಹದ ಬಾಡಿಯಂತೆ ಕಾಣುತ್ತದೆ. ಫ್ರೇಂ ಅಲ್ಯುಮಿನಿಯಂದಾಗಿದೆ. ಒಟ್ಟಾರೆ ಈ ಫೋನಿನ ವಿನ್ಯಾಸ ಹೆಚ್ಚು ಬೆಲೆಯ ಫೋನ್‍ ನಂತೆಯೇ ಇದೆ.

ಪರದೆ: 6.43 ಇಂಚಿನ ಫುಲ್‍ ಎಚ್‍ ಡಿ ಪ್ಲಸ್‍, ಅಮೋಲೆಡ್‍ ಪರದೆ ಹೊಂದಿದೆ. 90 ಹರ್ಟ್ಜ್ ರಿಫ್ರೆಶ್‍ರೇಟ್‍ ಹೊಂದಿದೆ. ಅಮೋಲೆಡ್‍ ಪರದೆ ಆದ್ದರಿಂದ ಮೊಬೈಲ್‍ನ ಯೂಸರ್‍ ಇಂಟರ್ ಫೇಸ್‍ ಆಕರ್ಷಕವಾಗಿ ಕಾಣುತ್ತದೆ. ರಿಫ್ರೆಶ್‍ ರೇಟ್‍ 120 ಹರ್ಟ್ಜ್ ಕೊಟ್ಟಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.

Advertisement

ಪ್ರೊಸೆಸರ್, ಓಎಸ್‍, ಕಾರ್ಯಾಚರಣೆ: ಒನ್‍ ಪ್ಲಸ್‍ ನ ಮುಖ್ಯ ಸರಣಿಯ ಫೋನ್‍ ಗಳಲ್ಲಿ ಸ್ನಾಪ್‍ಡ್ರಾಗನ್‍ ಪ್ರೊಸೆಸರ್ ಬಳಸಲಾಗುತ್ತದೆ. ಈ ಫೋನಿನ ಹಿರಿಯಣ್ಣ ಒನ್‍ ಪ್ಲಸ್‍ ನಾರ್ಡ್ ಸಿಇ ಯಲ್ಲಿ ಸ್ನಾಪ್‍ಡ್ರಾಗನ್‍ 750 ಜಿ ಪ್ರೊಸೆಸರ್ ಬಳಸಲಾಗಿತ್ತು. ಈ ಮಾಡಲ್‍ನಲ್ಲಿ ಮೀಡಿಯಾಟೆಕ್‍ ಡೈಮೆನ್ಸಿಟಿ 900 ಪ್ರೊಸೆಸರ್ ಹಾಕಲಾಗಿದೆ. ಅಂಡ್ರಾಯ್ಡ್ 11ನೇ ಆವೃತ್ತಿ ನೀಡಲಾಗಿದೆ. ಒನ್‍ಪ್ಲಸ್‍ನ ಆಕ್ಸಿಜನ್‍ ಓಎಸ್‍ 11 ಬೆಂಬಲವಿದೆ. ಒನ್‍ಪ್ಲಸ್‍ ಬಳಕೆದಾರರಿಗೆ ಚಿರಪರಿಚಿತವಾದ ಅದೇ ಯೂಸರ್ ಇಂಟರ್ ಫೇಸ್‍. ಪ್ಯೂರ್ ಆಂಡ್ರಾಯ್ಡ್ ಗೆ ಸನಿಹವಾಗಿದೆ. ಫೋನ್‍ ಕಾಲ್‍, ಕಾಂಟಾಕ್ಟ್, ಮೆಸೇಜ್‍ ಇತ್ಯಾದಿ ಆಪ್‍ ಗಳು ಮೂಲ ಆಂಡ್ರಾಯ್ಡ್ ನವೇ ಇವೆ. ಸ್ವಲ್ಪ ವರ್ಷಗಳ ಮುಂದೆ ಒನ್‍ಪ್ಲಸ್‍ ಇವಕ್ಕೆಲ್ಲ ತಾನು ರೂಪಿಸಿದ ಆಪ್‍ಗಳನ್ನು ನೀಡುತ್ತಿತ್ತು. ಇದರಲ್ಲಿ ಆಲ್ ವೇಸ್‍ ಆನ್‍ ಡಿಸ್ ಪ್ಲೇ ಸವಲತ್ತು ನೀಡಲಾಗಿದೆ.

ಡೈಮೆನ್ಸಿಟಿ 900 ಶಕ್ತಿಶಾಲಿ ಪ್ರೊಸೆಸರ್ ಆಗಿದ್ದು, ವೇಗದ ಕಾರ್ಯಾಚರಣೆಗೆ ಅನುಕೂಲಕರವಾಗಿದೆ. ಫೋನ್‍ ಕಾರ್ಯಾಚರಣೆಯಲ್ಲಿ ಅಡೆತಡೆ ಕಂಡು ಬರುವುದಿಲ್ಲ. ಇದು 5ಜಿ ಚಿಪ್‍ಸೆಟ್‍ ಆಗಿದ್ದು, ಭಾರತದಲ್ಲಿ ಮುಂಬರುವ 5ಜಿ ನೆಟ್‍ವರ್ಕ್ ಬೆಂಬಲಿಸುತ್ತದೆ.

ಕ್ಯಾಮರಾ: 64 ಮೆಗಾ ಪಿಕ್ಸಲ್ ಮುಖ್ಯ ಸೆನ್ಸರ್, 8 ಮೆಪಿ ಅಲ್ಟ್ರಾ ವೈಡ್‍, 2 ಮೆ.ಪಿ. ಮ್ಯಾಕ್ರೋ ಸೆನ್ಸರ್ ಹೊಂದಿದೆ. 16 ಮೆ.ಪಿ. ಸೆಲ್ಫಿ ಕ್ಯಾಮರಾ ಇದೆ. ಕ್ಯಾಮರಾ ಗುಣಮಟ್ಟ ಚೆನ್ನಾಗಿದೆ.  ಈ ದರದ ಅನೇಕ ಫೋನ್‍ ಗಳಲ್ಲಿ ಕ್ಯಾಮರಾ ಗುಣಮಟ್ಟ ಅಷ್ಟೊಂದು ತೃಪ್ತಿದಾಯಕವಾಗಿರುವುದಿಲ್ಲ. ಇದರ ಕ್ಯಾಮರಾ ನಿರಾಶೆ ಮೂಡಿಸುವುದಿಲ್ಲ. ಹೊರಾಂಗಣ ಹಾಗೂ ಒಳಾಂಗಣ ಚಿತ್ರಗಳೂ ಉತ್ತಮವಾಗಿ ಮೂಡಿ ಬರುತ್ತವೆ. ಈ ದರದಲ್ಲಿ ಅಲ್ಟ್ರಾ ವೈಡ್‍ ಆಂಗಲ್‍ ಲೆನ್ಸ್ ಕೂಡ ಉತ್ತಮವಾಗಿದೆ. ಹಿಂಬದಿ ಎಡಮೂಲೆಯಲ್ಲಿ ಅಳವಡಿಸಿರುವ ಅಗಲ ಲೆನ್ಸ್ ಗಳ ವಿನ್ಯಾಸ ಪ್ರೀಮಿಯಂ ಫೋನ್‍ ಲುಕ್‍ ನೀಡಿದೆ.

ಬ್ಯಾಟರಿ: ಇದರಲ್ಲಿ 4500 ಎಂಎಎಚ್‍ ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ.  ಇದನ್ನು ಚಾರ್ಜ್ ಮಾಡಲು 65 ವ್ಯಾಟ್ಸ್ ನ ಸೂಪರ್‍ ವೂಕ್‍ ಎಂಬ ವಿಶೇಷಣದ ಚಾರ್ಜರ್‍ ನೀಡಲಾಗಿದೆ. ಈ ಮುಂಚೆ ಒನ್‍ ಪ್ಲಸ್‍ ಫೋನ್‍ ಗಳಿಗೆ ವಾರ್ಪ್ ಎಂಬ ಹೆಸರಿನ ವಿಶೇಷಣ ನೀಡಲಾಗಿತ್ತು. ಇತ್ತೀಚಿಗೆ ಒನ್‍ ಪ್ಲಸ್‍ ತನ್ನದೇ ಕುಟುಂಬದ ಬ್ರಾಂಡ್‍ ಒಪ್ಪೋ ಕಾರ್ಯಾಚರಣೆ ಜೊತೆ ಮಿಳಿತವಾಗುತ್ತಿರುವುದರಿಂದ ಅಲ್ಲಿನ ಹೆಸರುಗಳನ್ನೇ ತೆಗೆದುಕೊಳ್ಳುತ್ತಿದೆ. ತನ್ನ ವಿಶೇಷವಾದ ಆಕ್ಸಿಜನ್‍ ಓಎಸ್‍ ಅನ್ನು ಒನ್‍ಪ್ಲಸ್‍ ಫೋನ್‍ ಗಳಲ್ಲಿ ಬದಲಿಸಿ ಇತರ ದೇಶಗಳಲ್ಲಿ ಕಲರ್ ಓಎಸ್‍ ನೀಡಲಾಗುತ್ತಿದೆ. ಭಾರತದಲ್ಲೂ ಒನ್‍ ಪ್ಲಸ್‍ ಫೋನ್‍ ಗಳಿಗೆ ಮುಂದಿನ ದಿನಗಳಲ್ಲಿ ಕಲರ್ ಓಎಸ್‍ ಬಂದರೂ ಬರಬಹುದು.

65 ವಾಟ್ಸ್ ನ ವೇಗದ ಚಾರ್ಜರ್ ಶೂನ್ಯದಿಂದ 100% ರವರೆಗೆ ಚಾರ್ಜ್ ಆಗಲು 37 ನಿಮಿಷ ತೆಗೆದುಕೊಳ್ಳುತ್ತದೆ.  ಕೇವಲ 17 ನಿಮಿಷದಲ್ಲಿ 50% ಚಾರ್ಜ್ ಆಗುತ್ತದೆ. ಸುಮಾರು 6 ರಿಂದ 7 ಗಂಟೆಗಳ ಸ್ಕ್ರೀನ್‍ ಆನ್‍ ಟೈಮ್‍ (ಪರದೆ ಆನ್‍ ಆಗಿರುವಷ್ಟು ಸಮಯದಲ್ಲಿ ಬ್ಯಾಟರಿ ಬಾಳಿಕೆ ಸಾಮರ್ಥ್ಯ) ಹೊಂದಿದೆ. ಸಾಧಾರಣ ಬಳಕೆಗೆ ಒಂದು ದಿನದ ಬ್ಯಾಟರಿ ಬಾಳಿಕೆಗೆ ಅಡ್ಡಿಯಿಲ್ಲ. ಈಗ ಪ್ರಮುಖ ಕಂಪೆನಿಯೊಂದು ಮೊಬೈಲ್‍ ಗಳ ಜೊತೆ ಚಾರ್ಜರ್ ನೀಡುವುದನ್ನು ನಿಲ್ಲಿಸಿದೆ. ಇಂಥ ಸನ್ನಿವೇಶದಲ್ಲಿ ಫೋನಿನ ಜೊತೆ 65 ವ್ಯಾಟ್ಸ್ ಚಾರ್ಜರ್‍ ನೀಡಿರುವುದು ದೊಡ್ಡ ಪ್ಲಸ್‍ ಪಾಯಿಂಟ್‍.

ಒಟ್ಟಾರೆ ಗ್ರಾಹಕ ಕೊಡುವ ಹಣಕ್ಕೆ ತಕ್ಕ ಮೌಲ್ಯವನ್ನು ಈ ಫೋನ್‍ ನೀಡುತ್ತದೆ. 6 ಜಿಬಿ ರ್ಯಾಮ್‍, 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯದ ಫೋನಿಗೆ 23,999 ರೂ. ಇದ್ದು, ಕೆಲವೊಮ್ಮೆ ಕ್ರೆಡಿಟ್‍ ಕಾರ್ಡ್ ಆಫರಿನಲ್ಲಿ 2 ಸಾವಿರ ರೂ. ರಿಯಾಯಿತಿಯಲ್ಲಿ ದೊರಕುತ್ತದೆ. ಈ ಆಫರ್‌ ಲಗತ್ತಿಸಿ ಕೊಂಡಾಗ ಮಧ್ಯಮ ದರದ ಫೋನಿನ ದರಕ್ಕೆ ಮೇಲ್ಮಧ್ಯಮ ದರ್ಜೆಯ ಸ್ಪೆಸಿಫಿಕೇಷನ್ ಗಳುಳ್ಳ ಫೋನ್ ದೊರಕಿದಂತಾಗುತ್ತದೆ.

ಕೆ.ಎಸ್‍. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next