Advertisement

ಒನ್‌ ಪ್ಲಸ್‌ ನಾರ್ಡ್‌ ಬಡ್ಸ್‌ ಸಿಇ: ಬಜೆಟ್‌ನಲ್ಲಿ ಉತ್ತಮ ವೈರ್‌ಲೆಸ್‌ ಇಯರ್‌ ಬಡ್ಸ್

06:55 PM Sep 24, 2022 | Team Udayavani |

ಈಗ ಟ್ರೂ ವೈರ್‌ ಲೆಸ್‌ ಇಯರ್‌ ಬಡ್‌ಗಳು ಜನಪ್ರಿಯವಾಗುತ್ತಿವೆ. ವೈರ್‌ಗಳ ಗೋಜಲುಗಳಿಲ್ಲದೇ, ಕಿವಿಗಳ ಕಿಂಡಿಯೊಳಗೆ ನೀಟಾಗಿ ಕುಳಿತುಕೊಂಡು ಇಷ್ಟವಾದ ಹಾಡುಗಳನ್ನು ಯಾವ ಅಡಚಣೆಯೂ ಇಲ್ಲದೇ ಕೇಳುವ ಸೌಲಭ್ಯವನ್ನು ಈ ಟ್ರೂ ವೈರ್‌ ಲೆಸ್‌ ಇಯರ್‌ ಬಡ್‌ಗಳು ಒದಗಿಸುತ್ತವೆ. ಈ ಇಯರ್‌ ಬಡ್‌ಗಳು ಹೆಚ್ಚು ಬಳಕೆಗೆ ಬರುತ್ತಿರುವಂತೆ  ಪ್ರಖ್ಯಾತ ಬ್ರಾಂಡ್‌ ಗಳು ಎಕಾನಮಿ ದರದಲ್ಲಿ ಬಡ್‌ಗಳನ್ನು ಹೊರತರುತ್ತಿರುವುದು ಒಳ್ಳೆಯ ಬೆಳವಣಿಗೆ.

Advertisement

ಒನ್‌ ಪ್ಲಸ್‌ ಕಂಪೆನಿ 10  ಸಾವಿರ ರೂ. 5 ಸಾವಿರ ರೂ. ದರದಲ್ಲಿ ಬಡ್‌ಗಳನ್ನು ಹೊರತಂದಿತ್ತು. ಇಷ್ಟು ದರ ನೀಡಿ ಇಯರ್‌ ಬಡ್‌ ಕೊಳ್ಳುವುದು ಅನೇಕ ಮಂದಿಗೆ ಸಾಧ್ಯವಾಗುವುದಿಲ್ಲ. ಹಲವರಿಗೆ ಸಾಧ್ಯವಾದರೂ, ಇಯರ್‌ಬಡ್‌ಗಳಿಗಾಗಿ ಇಷ್ಟೊಂದು ಹಣ ತೆರುವುದು ಇಷ್ಟವಿರುವುದಿಲ್ಲ. ಇಂಥ ಬಜೆಟ್‌ ಪ್ರಿಯರಿಗಾಗಿ ಒನ್‌ ಪ್ಲಸ್‌ ತನ್ನ ನಾರ್ಡ್‌ ಶ್ರೇಣಿಯಲ್ಲಿ ಹೊರ ತಂದಿರುವ ಹೊಸ ಇಯರ್‌ ಬಡ್‌ , ಒನ್‌ ಪ್ಲಸ್‌ ನಾರ್ಡ್‌ ಬಡ್ಸ್‌ ಸಿಇ. ಇದರ ದರ 2,300 ರೂ.  ಒನ್‌ ಪ್ಲಸ್‌ ಸ್ಟೋರ್‌ ಹಾಗೂ ಫ್ಲಿಪ್‌ ಕಾರ್ಟ್‌ ನಲ್ಲಿ ಲಭ್ಯ. ಫ್ಲಿಪ್‌ಕಾರ್ಟ್‌ ನಲ್ಲಿ ಬಿಗ್‌ ಬಿಲಿಯನ್‌ ಡೇ ಮಾರಾಟ ನಡೆಯುತ್ತಿರುವುದರಿಂದ ಈಗ ಇದರ ದರ 1,900 ರೂ. ಇದೆ.  ಈ ಇಯರ್‌ ಬಡ್‌ ಹೇಗಿದೆ ಎಂದು ನೋಡೋಣ.

ವಿನ್ಯಾಸ: ಮೊದಲಿಗೆ ಬಡ್‌ ಅನ್ನು ಚಾರ್ಜ್‌ ಮಾಡುವ ಕೇಸ್‌ ಬಗ್ಗೆ ಹೇಳುವುದಾದರೆ ಶರ್ಟ್‌ ಅಥವಾ ಪ್ಯಾಂಟ್‌ ಜೇಬಿನಲ್ಲಿ ಇಟ್ಟುಕೊಳ್ಳಲು ಬಹಳ ಅನುಕೂಲಕರವಾದ ಚಪ್ಪಟೆ ಅಂಡಾಕಾರದಲ್ಲಿ ಕೇಸ್‌ ವಿನ್ಯಾಸಗೊಳಿಸಲಾಗಿದೆ. ಬಡ್‌ಗಳನ್ನು ಇದರೊಳಗೆ ಲಂಬವಾಗಿರಿಸಬೇಕು. ಕೇಸ್‌ನ ಮೇಲ್ತುದಿಯನ್ನು ಒತ್ತಿದಾಗ ಚಾರ್ಜಿಂಗ್‌ ಕೇಸ್‌ ತೆರೆದುಕೊಳ್ಳುತ್ತದೆ.  ಕೇಸ್‌ನ ತಳಭಾಗದಲ್ಲಿ ಟೈಪ್‌ ಸಿ ಚಾರ್ಜಿಂಗ್‌ ಪೋರ್ಟ್‌ ಇದೆ. ಮಧ್ಯಭಾಗದಲ್ಲಿ ಒನ್‌ಪ್ಲಸ್‌ ಲೋಗೋ ಇದ್ದು, ಅದರ ಮೇಲೆ ಬ್ಯಾಟರಿ ಚಾರ್ಜಿಂಗ್‌ ಸಂಕೇತ ತೋರಿಸುವ ಚುಕ್ಕೆಯಾಕಾರದ ಎಲ್‌ಇಡಿ ಲೈಟ್‌ ಇದೆ.

ಇಯರ್‌ ಬಡ್‌ನ ವಿನ್ಯಾಸ ಆಪಲ್‌ ಏರ್‌ ಪೋಡ್ಸ್‌ ಸೆಕೆಂಡ್‌ ಜನರೇಷನ್‌ ಮಾದರಿಯಲ್ಲಿದೆ. ಅಂದರೆ ಇದು ಕಿವಿಯ ಕೊಳವೆಯೊಳಗೆ ಸೇರಿಸುವಂಥದ್ದಲ್ಲ. ಕಿವಿಯ ಹೊರಭಾಗದಲ್ಲೇ  ನೀಟಾಗಿ ಕುಳಿತುಕೊಳ್ಳುತ್ತದೆ. (ಈ ಮಾದರಿಗೆ ಸೆಮಿ ಇನ್‌ ಇಯರ್‌ ಬಡ್ಸ್‌ ಎಂದು ಹೇಳಲಾಗುತ್ತದೆ.)  ಒಮ್ಮೆ ಸರಿಯಾಗಿ ಫಿಟ್‌ ಆಗುವಂತೆ ಹಾಕಿಕೊಂಡರೆ  ಕಿವಿಯನ್ನು ಎಷ್ಟೇ ಅಲುಗಾಡಿಸಿದರೂ ಇದು ಬೀಳುವುದಿಲ್ಲ. ಕೆಲವರು ಈ ಮಾದರಿಯ ಇಯರ್‌ ಬಡ್‌ ಬಯಸುತ್ತಾರೆ. ಕಾರಣ ಸಿಲಿಕಾನ್‌ ಟಿಪ್‌ ಇದ್ದು, ಕಿವಿಯೊಳಗೆ ಕೂರುವ ಇಯರ್‌ ಬಡ್‌ಗಳು ಗಪ್ಪಂತ ಮುಚ್ಚಿಕೊಳ್ಳುತ್ತವೆ. ಕೆಲವರಿಗೆ ಇದರಿಂದ ಕೆರೆತ ಬರುತ್ತದೆ. ಕಾಲ್‌ ಮಾಡುವ ಉದ್ದೇಶಕ್ಕೆ ಬಡ್‌ ಹಾಕಿಕೊಳ್ಳುವವರಿಗೆ, ಮಾತನಾಡದ ಸಮಯದಲ್ಲಿ ಹೊರಗಿನ ಶಬ್ದಗಳು ಸ್ಪಷ್ಟವಾಗಿ ಕೇಳಿಸಬೇಕು. ಅಂಥವರಿಗೆ ಇಂಥ ಬಡ್‌ಗಳು ಸೂಕ್ತ. ಬಡ್‌ನ ಸ್ಟೆಮ್‌ (ಕಡ್ಡಿ) ಒಂದೂ ಕಾಲು ಇಂಚಿನಷ್ಟಿದೆ. ಬಡ್ಸ್ ಸ್ಟೆಮ್‌ ಉದ್ದ ಸ್ವಲ್ಪ ಹೆಚ್ಚಾಯಿತು ಎನಿಸುತ್ತದೆ. ಒಂದು ಇಂಚಿನಷ್ಟಿದ್ದರೆ ಚೆನ್ನಾಗಿತ್ತು. ಬಡ್‌ ನ ತೂಕ ತಲಾ 3.5 ಗ್ರಾಂ ಇದೆ. ಕೇಸ್‌ ತೂಕ 33 ಗ್ರಾಂ. ಇದೆ. 13.4 ಮಿ.ಮೀ. ಡ್ರೈವರ್‌ ಇದೆ. ಹೊಳಪಾದ ಬಿಳಿಯ ಬಣ್ಣ ಹೊಂದಿದೆ.  2 ಸಾವಿರ ರೂ. ದರ ಪಟ್ಟಿಯಲ್ಲಿ ಇದರ ವಿನ್ಯಾಸ ಪ್ರೀಮಿಯಂ ಆಗಿದೆ ಎನ್ನಬಹುದು.

ಕಾರ್ಯಾಚರಣೆ: ಈ ಬಡ್ ಗಳು ಹೊರಗಿವಿಯ ಮೇಲೆ ಕುಳಿತುಕೊಳ್ಳುವಂಥದ್ದು ಎಂದು ಮೊದಲೇ ತಿಳಿಸಿದೆ. ಸಂಗೀತ ಆಲಿಸುವಾಗ ಈ ಅಂಶ ಪರಿಣಾಮ ಬೀರುತ್ತದೆ. ಕಿವಿಯ ಕೊಳವೆ ಒಳಗೆ ಕುಳಿತುಕೊಳ್ಳುವಂಥ ಬಡ್‌ಗಳಲ್ಲಿ ಸಂಗೀತ ಹಾಡುಗಳ ಎಫೆಕ್ಟ್‌ ಹೆಚ್ಚಿರುತ್ತದೆ. ಅದು ಕಿವಿಯ ಒಳಗೆ ಇರುವುದರಿಂದ. ಆದರೆ ಈ ಬಡ್‌ಗಳು ಹೆಚ್ಚು ಒಳಗೆ ಹೋಗದ ಬಡ್‌ಗಳಾಗಿರುವುದರಿಂದ ಸಂಗೀತ ಕೇಳುವಾಗ ಬಾಸ್‌ ಶಬ್ದ ಹೆಚ್ಚು ಇರುವುದಿಲ್ಲ. ಆದರೆ ಅನೇಕರಿಗೆ ಕಿವಿಯೊಳಗೆ ಇರುವ ಬಡ್‌ಗಳು ಕಿರಿಕಿರಿ ಎನಿಸುತ್ತದೆ. ಅಂಥವರಿಗೆ ಈ ಬಡ್‌ಗಳು ಸೂಕ್ತ. ಇಷ್ಟಾದರೂ ಇದರಲ್ಲಿ ಬಾಸ್‌ ಸಹ ಚೆನ್ನಾಗಿದೆ. ಸಂಗೀತ ಹಾಡುಗಳು ಚೆನ್ನಾಗಿ ಕೇಳುತ್ತವೆ. ಸಂಗೀತ ಉಪಕರಣಗಳ ಶಬ್ದಗಳು ಸಹ ಚೆನ್ನಾಗಿಯೇ ಕೇಳಿಬರುತ್ತವೆ. ನಿಮ್ಮ ಮೊಬೈಲ್‌ನಲ್ಲಿನ ಈಕ್ವಲೈಜರ್‌ಗಳನ್ನು ಸರಿಯಾಗಿ ಹೊಂದಿಸಿಕೊಳ್ಳಬೇಕು.

Advertisement

ಒನ್‌ ಪ್ಲಸ್‌ ಫೋನ್‌ ಗಳಲ್ಲಿ ಆಡಿಯೋ ಪ್ರೊಫೈಲ್‌ಗಳು ಈಕ್ವಲೈಜರ್‌ ಗಳು ಫೋನ್‌ನಲ್ಲೇ ಅಂತರ್ಗತವಾಗಿರುವ ಆಪ್‌ನಲ್ಲಿರುತ್ತವೆ. ಇತರ ಫೋನ್‌ಗಳುಳ್ಳವರು ಹೇ ಮೆಲೋಡಿ ಎಂಬ ಆಪ್‌ ಇನ್‌ ಸ್ಟಾಲ್‌ ಮಾಡಿಕೊಂಡು ಅದರಲ್ಲಿ ಈಕ್ವಲೈಜರ್‌ಗಳನ್ನು ಸೆಟ್‌ ಮಾಡಿಕೊಳ್ಳಬೇಕು.  ಅದರಲ್ಲಿ ನಾಲ್ಕು ಮಾದರಿಯ ಪ್ರಿಸೆಟಿಂಗ್‌ ಆಡಿಯೋ ಪ್ರೊಫೈಲ್‌ಗಳಿವೆ. ಬಾಸ್‌, ಸೆರೆನೇಡ್‌, ಜಂಟ್ಲ್‌ ಮತ್ತು ಬ್ಯಾಲೆನ್ಸೆಡ್‌ ಇದರಲ್ಲಿ ನಿಮಗೆ ಯಾವುದರಲ್ಲಿ ಸಂಗೀತ ಕೇಳಲು ಹಿತಕರವಾಗಿದೆ ಅದನ್ನು ಸೆಟ್‌ ಮಾಡಿಕೊಳ್ಳಬಹುದು.

ಕರೆ ಗುಣಮಟ್ಟ: ಇಂಥ ಬಡ್‌ಗಳನ್ನು ಕೊಳ್ಳುವುದು ಸಂಗೀತ ಕೇಳುವುದಕ್ಕೆ ಮತ್ತು ಕಾಲ್‌ ಮಾಡುವುದಕ್ಕಾಗಿಯೂ ಸಹ. ಇದರ ಮೂಲಕ ಕರೆ ಮಾಡಿದಾಗ ಆ ಬದಿಯವರಿಗೆ ಹೆಚ್ಚಿನ ಹೊರ ಶಬ್ದಗಳು ಕೇಳಿಬಂದಿಲ್ಲ. ವಾತಾವರಣದ ಶಬ್ದಗಳು ಹಾಗೂ ಗಾಳಿಯ ಗುಂಯ್‌ಗುಟ್ಟುವಿಕೆ ಶಬ್ದ ಕಡಿಮೆ ಇದೆ. ಈ ದರದಲ್ಲಿ ಇಷ್ಟು ಮಟ್ಟಿಗಿನ ಸುಧಾರಣೆ ಮಾಡಿರುವುದು ಹೆಚ್ಚು. ಕರೆಗಳನ್ನು ಬಡ್ಸ್‌ ನಲ್ಲಿ ಒಮ್ಮೆ ಟ್ಯಾಪ್‌ ಮಾಡುವ ಮೂಲಕ ಸ್ವೀಕರಿಸಬಹುದು. ಎರಡು ಟ್ಯಾಪ್‌ ಮಾಡುವ ಮೂಲಕ ಕಡಿತಗೊಳಿಸಬಹುದು.

ಬ್ಯಾಟರಿ: ಇದರಲ್ಲಿ 300 ಎಂಎಎಚ್‌ ಬ್ಯಾಟರಿ ಇದೆ. ಇಯರ್‌ ಬಡ್‌ ತಲಾ 27 ಎಂಎಎಚ್‌ ಬ್ಯಾಟರಿ ಹೊಂದಿವೆ. ಇದನ್ನು ಸಂಪೂರ್ಣ ಚಾರ್ಜ್‌ ಮಾಡಿದಾಗ 4.5 ಗಂಟೆಗಳ ಕಾಲ ಸಂಗೀತ ಆಲಿಸಬಹುದು. 3 ಗಂಟೆಗಳ ಕಾಲ ಕರೆ ಮಾಡಬಹುದು. ಕೇಸ್‌ನಲ್ಲಿ 20 ಗಂಟೆಗಳ ಬ್ಯಾಟರಿ ಬರುತ್ತದೆ.

ಒಟ್ಟಾರೆ ಹೇಳುವುದಾದರೆ, ಈ ಬಡ್‌ಗಳು ಆರಂಭಿಕ ಬಜೆಟ್‌ ದರದಲ್ಲಿ ನಾವು ನೀಡುವ ಹಣಕ್ಕೆ ತಕ್ಕ ಮೌಲ್ಯ ನೀಡುತ್ತವೆ.

 

-ಕೆ.ಎಸ್‌. ಬನಶಂಕರ ಆರಾಧ್ಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next