Advertisement

ಲಸಿಕೆ ಅಭಿಯಾನಕ್ಕೆ ಒಂದು ವರ್ಷ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶೇ. 98 ಸಾಧನೆ

12:25 AM Jan 17, 2022 | Team Udayavani |

ಮಂಗಳೂರು: ದೇಶದಲ್ಲಿ ಕೊರೊನಾ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಿ ಒಂದು ವರ್ಷ ಪೂರ್ತಿಗೊಂಡಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದುವರೆಗೆ ಸರಾಸರಿ ಶೇ. 98ರಷ್ಟು ಲಸಿಕಾಕರಣ ಪೂರ್ಣಗೊಂಡಿದೆ.

Advertisement

ದೇಶಾದ್ಯಂತ ಲಸಿಕಾ ಅಭಿಯಾನವು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ 2021 ಜನವರಿ 16ರಂದು ಹಾಗೂ 2ನೇ ಹಂತದಲ್ಲಿ ಮುಂಚೂಣಿಯ ಕಾರ್ಯಕರ್ತರಿಗೆ ಒಂದು ತಿಂಗಳ ಬಳಿಕ ಆರಂಭಗೊಂಡಿತ್ತು.

ದ.ಕ. ಜಿಲ್ಲೆಯಲ್ಲಿ ವರ್ಷದ ಹಿಂದೆ ಮೊದಲ ದಿನದಂದು 100 ಮಂದಿ ಆರೋಗ್ಯ ಕಾರ್ಯ ಕರ್ತರಿಗೆ ಲಸಿಕೆ ಹಾಕ ಲಾಗಿತ್ತು. ಇದೀಗ ಅಭಿಯಾನಕ್ಕೆ ಒಂದು ವರ್ಷ ಆದಾಗ (2022 ಜ. 16) ಒಟ್ಟು ಇರುವ 52,523 ಆರೋಗ್ಯ ಕಾರ್ಯಕರ್ತರ ಪೈಕಿ 50,983 ಮಂದಿಗೆ ಮೊದಲ ಡೋಸ್‌ (ಶೇ. 97.07) ಹಾಗೂ 35,345 ಮಂದಿಗೆ ದ್ವಿತೀಯ ಡೋಸ್‌ ಲಸಿಕೆ ನೀಡಲಾಗಿದೆ. ಅಲ್ಲದೆ 9,076 ಮಂದಿ ಮುನ್ನೆಚ್ಚರಿಕೆ (ಬೂಸ್ಟರ್‌) ಡೋಸ್‌ ಪಡೆದಿದ್ದಾರೆ.

ಮುಂಚೂಣಿಯ ಕಾರ್ಯಕರ್ತರ ಪೈಕಿ 15,925 ಜನರಿಗೆ ಮೊದಲ ಡೋಸ್‌ ನೀಡಿ ಶೇ. 100 ಸಾಧನೆ ಆಗಿದೆ. 9,208 ಮಂದಿ ದ್ವಿತೀಯ ಡೋಸ್‌ (ಶೇ. 57.82) ಹಾಗೂ 2,764 ಮಂದಿ ಮುನ್ನೆಚ್ಚರಿಕೆ ಲಸಿಕೆ ಪಡೆದಿದ್ದಾರೆ.

15 ವರ್ಷದಿಂದ 17 ವರ್ಷದೊಳಗಿನ ಮಕ್ಕಳಿಗೆ ಇದೇ ಜ. 3ರಿಂದ ಲಸಿಕೆ ನೀಡುವ ಅಭಿಯಾನ ಆರಂಭವಾಗಿದ್ದು, ಜ. 16ರ ತನಕ 1,00,084 ಮಂದಿಗೆ (ಶೇ. 98.56) ಲಸಿಕೆ ಹಾಕಲಾಗಿದೆ. 18ರಿಂದ 44 ವರ್ಷ ವಯೋಮಿತಿಯ 8,46,058 (ಶೇ. 87.62) ಮೊದಲ ಡೋಸ್‌ ಹಾಗೂ 7,20,159 (ಶೇ. 85.12) ಮಂದಿ ದ್ವಿತೀಯ ಡೋಸ್‌ ಲಸಿಕೆ ಪಡೆದಿದ್ದಾರೆ. 45ರಿಂದ 60 ವರ್ಷದೊಳಗಿನವರ ವಿಭಾಗದಲ್ಲಿ 4,23,612 ಮಂದಿ ಮೊದಲ ಡೋಸ್‌ ಲಸಿಕೆ ತೆಗೆದುಕೊಳ್ಳುವ ಮೂಲಕ ಗುರಿ ಮೀರಿ (ಶೇ. 101.80) ಸಾಧನೆ ಮಾಡಲಾಗಿದೆ. 3,81,767 ಮಂದಿ ದ್ವಿತೀಯ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ.

Advertisement

60 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ 2,57,154 (ಶೇ. 95.60) ಮಂದಿ ಮೊದಲ ಡೋಸ್‌, 2,33,986 (ಶೇ. 90.99) ಮಂದಿ 2ನೇ ಡೋಸ್‌ ಹಾಗೂ 2644 ಮಂದಿ ಮುನ್ನೆಚ್ಚರಿಕೆ ಡೋಸ್‌ ಪಡೆದಿದ್ದಾರೆ.

ಒಟ್ಟಾರೆಯಾಗಿ ದ.ಕ.ದಲ್ಲಿ ಇದುವರೆಗೆ 15 ವರ್ಷ ಮೇಲ್ಪಟ್ಟ ವಯೋಮಿತಿಯ 18,16,000 ಮಂದಿ ಫಲಾನುಭವಿಗಳ ಪೈಕಿ 17,17,469 ಮಂದಿ (ಶೇ. 94.57) ಲಸಿಕೆ ಪಡೆದಿದ್ದಾರೆ. 18 ವರ್ಷ ಮೇಲ್ಪಟ್ಟ ಶೇ. 96 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಶೇ. 98.16 ಮಂದಿ ಮೊದಲ ಡೋಸ್‌ ಹಾಗೂ ಶೇ. 86.12 ಮಂದಿ ದ್ವಿತೀಯ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ.

ಪ್ರತಿಶತ ಸಾಧನೆ ಆಗದಿರಲು ಕಾರಣ
ಲಸಿಕೆ ಪಡೆಯಲು ನಿರಾಕರಿಸುವವರು ಶೇ. 1ರಷ್ಟು ಮಂದಿ ಇದ್ದರೆ ತೀವ್ರ ಅಸ್ವಸ್ಥರಾಗಿ ಹಾಸಿಗೆ ಹಿಡಿದವರು, ಅಲರ್ಜಿ ಮತ್ತಿತರ ಸಮಸ್ಯೆ ಇರುವವರು ಶೇ. 1ರಷ್ಟಿದ್ದಾರೆ. ವಿದೇಶಗಳಲ್ಲಿ ಅಥವಾ ಹೊರ ರಾಜ್ಯಗಳಲ್ಲಿ ಇರುವ ಜಿಲ್ಲೆಯ ಜನರು ಲಸಿಕೆ ಪಡೆದಿರುವ ಬಗ್ಗೆ ನಿಖರ ಮಾಹಿತಿ ಇಲ್ಲ. ಹಾಗಾಗಿ ಶೇ. 2ರಷ್ಟು ಮಂದಿ ಲಸಿಕೆ ಪಡೆಯಲು ಇನ್ನೂ ಬಾಕಿ ಇದ್ದಾರೆ. ಇದರಿಂದಾಗಿ ವ್ಯಾಕ್ಸಿನೇಶನ್‌ನಲ್ಲಿ ಶೇ. 100 ಸಾಧನೆ ಸಾಧ್ಯವಾಗಿಲ್ಲ. ಆದರೆ ಶೇ. 98 ಸಾಧನೆ ಆಗಿರುವ ಬಗ್ಗೆ ತೃಪ್ತಿ ಇದೆ ಎಂದು ದ.ಕ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಕಿಶೋರ್‌ ರಾವ್‌ ಉದಯವಾಣಿಗೆ ತಿಳಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಇನ್ನೂ 90,000 ಮಂದಿ ಇನ್ನೂ ಲಸಿಕೆ ಪಡೆದಿಲ್ಲ. ಲಸಿಕೆ ಪಡೆದರೆ ಸೋಂಕಿನ ಪರಿಣಾಮ ತೀರಾ ಕಡಿಮೆ ಆಗಿರುತ್ತದೆ. ಆದ್ದರಿಂದ ಬಾಕಿ ಇರುವ ಎಲ್ಲರೂ ಲಸಿಕೆ ತೆಗೆದುಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡುತ್ತದೆ.
– ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ

ಉಡುಪಿ ಜಿಲ್ಲೆಯಲ್ಲಿ ಅಭಿಯಾನವನ್ನು ಕೈಗೊಂಡು ಲಸಿಕಾ ಮಿತ್ರರು ಪ್ರತೀ ಮನೆ ಮನೆಗೆ ಹೋಗಿ ಲಸಿಕೆ ಪಡೆಯುವಂತೆ ಮನವಿ ಮಾಡಿದ್ದಾರೆ. 103 ವರ್ಷ ಪ್ರಾಯದವರಿಗೂ ಲಸಿಕೆ ಕೊಡಿಸಲಾಗಿದೆ. ವ್ಯಾಕ್ಸಿನೇಶನ್‌ಗೆ ಸಂಬಂಧಿಸಿ ಜಿಲ್ಲೆಯಲ್ಲಿ ಶೇ. 98 ಸಾಧನೆ ಆಗಿದೆ.
– ಕೂರ್ಮಾ ರಾವ್‌, ಉಡುಪಿ ಜಿಲ್ಲಾಧಿಕಾರಿ

 

Advertisement

Udayavani is now on Telegram. Click here to join our channel and stay updated with the latest news.

Next