Advertisement

ರಾಜ್ಯದಲ್ಲಿ ಕೋವಿಡ್ ಕಾಟಕ್ಕೆ ಒಂದು ವರ್ಷ :ಮಾ. 8ರಂದು ಮೊದಲ ಪ್ರಕರಣ ಬೆಂಗಳೂರಿನಲ್ಲಿ ಪತ್ತೆ

12:58 AM Mar 08, 2021 | Team Udayavani |

ಬೆಂಗಳೂರು: ರಾಜ್ಯಕ್ಕೆ ಕೊರೊನಾ ಸೋಂಕು ಕಾಲಿಟ್ಟು ಇಂದಿಗೆ (ಮಾ. 8) ಒಂದು ವರ್ಷ. ಅಮೆರಿಕದಿಂದ ಮರಳಿದ್ದ ಬೆಂಗಳೂರಿನ ಟೆಕ್ಕಿಯೊಬ್ಬರಲ್ಲಿ ಸೋಂಕು ಪತ್ತೆಯಾಗಿತ್ತು. ಪ್ರಸ್ತುತ ಪ್ರಕರಣಗಳ ಸಂಖ್ಯೆ ಒಂದು ಮಿಲಿಯ (10 ಲಕ್ಷ) ಸಮೀಪಿಸಿದೆ. ಶೇ. 98ರಷ್ಟು ಮಂದಿ ಗುಣಮುಖರಾಗಿದ್ದು, 12 ಸಾವಿರಕ್ಕೂ ಅಧಿಕ ಮಂದಿ (ಶೇ. 1.2) ಸೋಂಕಿಗೆ ಬಲಿಯಾಗಿದ್ದಾರೆ.

Advertisement

ಸೋಂಕು ಪರೀಕ್ಷೆ ಎರಡು ಕೋಟಿಗೆ ಸಮೀಪಿಸಿದೆ. ಸದ್ಯ ರಾಜ್ಯವಾರು ಸೋಂಕು ಪ್ರಕರಣಗಳ ಮತ್ತು ಸೋಂಕಿತರ ಸಾವಿನ ಪಟ್ಟಿಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. 6 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ.

5 ತಿಂಗಳ ಮುಂಚೆ ನಿತ್ಯ 10 ಸಾವಿರಕ್ಕೂ ಅಧಿಕ ಹೊಸ ಪ್ರಕರಣ ಗಳು, 150 ಸೋಂಕಿತರ ಸಾವು ವರದಿಯಾಗುತ್ತಿದ್ದವು. 2020ರ ಜೂನ್‌ನಿಂದ ಅಕ್ಟೋಬರ್‌ ವರೆಗೂ ಸೋಂಕು ಅಬ್ಬರಿಸಿದರೂ ಸದ್ಯ ಸೋಂಕು ಹತೋಟಿಯಲ್ಲಿದೆ. ಆದರೆ ಸಂಪೂರ್ಣ ನಿರ್ಮೂಲನೆಯಾಗಿಲ್ಲ. ಜತೆಗೆ ಎರಡನೇ ಅಲೆ, ರೂಪಾಂತರ ಸೋಂಕಿನ ಆತಂಕವೂ ಇದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಸರಕಾರ, ಆರೋಗ್ಯ ತಜ್ಞರು ಮನವಿ ಮಾಡಿದ್ದಾರೆ.

ಆರನೇ ಪ್ರಕರಣಕ್ಕೆ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ
ರಾಜ್ಯದಲ್ಲಿ 2020ರ ಮಾರ್ಚ್‌ 14ರಂದು 6ನೇ ಪ್ರಕರಣ ದೃಢಪಡು ತ್ತಿದ್ದಂತೆ ಎಚ್ಚೆತ್ತ ಸರಕಾರ “ಕೊರೊನಾ ಬಂದ್‌’ ಘೋಷಣೆ ಮಾಡಿತು. ಮಾ. 25ರಿಂದ ಕೇಂದ್ರ ಸರಕಾರದ ಲಾಕ್‌ಡೌ ನ್‌ 1.0 ಜಾರಿಗೊಳಿಸಿತ್ತು. ಈ ಲಾಕ್‌ಡೌ ನ್‌ಗೂ ಮುನ್ನ ರಾಜ್ಯದಲ್ಲಿ ಒಟ್ಟು 42 ಸೋಂಕು ಪ್ರಕರಣಗಳಿದ್ದವು. ಒಬ್ಬ ಸೋಂಕಿತರು ಸಾವಿಗೀಡಾಗಿದ್ದರು. ಈ ಎಲ್ಲ ಸೋಂಕಿತರು ವಿದೇಶಗಳಿಂದ ರಾಜ್ಯಕ್ಕೆ ಬಂದವರು.

ದೇಶದಲ್ಲೇ ಮೊದಲ ಸಾವು ರಾಜ್ಯದಲ್ಲಿ
ದೇಶಕ್ಕೆ ಜ. 30ಕ್ಕೆ ಕೊರೊನಾ ಕಾಲಿಟ್ಟರೂ ಮೊದಲ ಸಾವು ಸಂಭವಿಸಿದ್ದು ರಾಜ್ಯದಲ್ಲಿ. ಸೌದಿ ಅರೇಬಿಯಾ ಪ್ರಯಾಣ ಹಿನ್ನೆಲೆ ಹೊಂದಿದ್ದ ಕಲಬುರಗಿಯ 76 ವರ್ಷದ ವೃದ್ಧ ಮಾ. 12ರಂದು ಮೃತಪಟ್ಟಿದ್ದರು. ಇದು ದೇಶದಲ್ಲೇ ಕೊರೊನಾದಿಂದ ಸಂಭವಿಸಿದ ಮೊದಲ ಸಾವಾಗಿತ್ತು.

Advertisement

ಆರ್ಭಟಿಸಿದ ಆ ನಾಲ್ಕು ತಿಂಗಳು
ಮಾರ್ಚ್‌ನಲ್ಲಿ ವೈರಸ್‌ ಕಾಲಿಟ್ಟರೂ ಆರ್ಭಟ ಹೆಚ್ಚಿದ್ದು ಜುಲೈಯಿಂದ ಅಕ್ಟೋಬರ್‌ವರೆಗೆ. ಈ ಅವಧಿಯಲ್ಲಿ ಸತತ 100 ದಿನಗಳು ಸರಾಸರಿ 100ಕ್ಕೂ ಹೆಚ್ಚು ಸೋಂಕಿತರು ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಬಾರಿ ಸೋಂಕು 10 ಸಾವಿರ ಗಡಿದಾಟಿದೆ. ಜೂನ್‌ನಲ್ಲಿ ರಾಜ್ಯವಾರು ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಕರ್ನಾಟಕ ಅಕ್ಟೋಬರ್‌ನಲ್ಲಿ ಎರಡನೇ ಸ್ಥಾನಕ್ಕೇರಿತು. ಅಲ್ಲದೆ ರಾಜ್ಯದ ಸಕ್ರಿಯ ಪ್ರಕರಣಗಳು ಒಂದೂವರೆ ಲಕ್ಷ ಸಮೀಪಿಸಿದ್ದವು. ನವೆಂಬರ್‌ನಿಂದ ಇಳಿಕೆ ಹಾದಿ ಹಿಡಿದು ಸದ್ಯ ಹೊಸ ಪ್ರಕರಣಗಳು 500, ಸಾವು ಐದರ ಆಸುಪಾಸಿನಲ್ಲಿವೆ.

ಹತೋಟಿ ಹಾದಿ ಇದು
ಸೋಂಕು ಪರೀಕ್ಷೆಗಳನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದೇ ರಾಜ್ಯದಲ್ಲಿ ಸೋಂಕು ಹತೋಟಿಗೆ ಬರಲು ಪ್ರಮುಖ ಕಾರಣ. ಅಕ್ಟೋಬರ್‌ನಲ್ಲಿ ನಿತ್ಯ 1 ಲಕ್ಷ ಪರೀಕ್ಷೆಗಳನ್ನು ಮಾಡು ತ್ತಿದ್ದರು. ಇದರಿಂದ ಸೋಂಕಿತರನ್ನು ಶೀಘ್ರ ಪತ್ತೆಮಾಡಿ ಹೊಸ ಪ್ರಕರಣ ಗಳನ್ನು ನಿಯಂತ್ರಿಸ ಲಾಯಿತು. ಅಲ್ಲದೆ ಸಾಮುದಾಯಿಕ ರೋಗ ಪ್ರತಿರೋಧಕತ್ವ ಹೆಚ್ಚಳ ವಾಗಿರುವುದು ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next