ಬೆಂಗಳೂರು: ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ದುಷ್ಕರ್ಮಿಯೊಬ್ಬ ಕತ್ತು ಕೊಯ್ದು ಕೊಲೆಗೈದಿರುವ ಘಟನೆ ಕಾಮಾಕ್ಷಿಪಾಳ್ಯದ ಸುಂಕದಕಟ್ಟೆಯ ಕೆಬ್ಬೆಹಳ್ಳದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.ತಸ್ಲಿಮ ಬಾನು (29) ಕೊಲೆಯಾದ ಮಹಿಳೆ. ಸದ್ಯ ಆರೋಪಿಗಳ ಬಗ್ಗೆ ಮಾಹಿತಿಯಿದ್ದು, ಬಂಧನಕ್ಕಾಗಿ ಮೂರು ವಿಶೇಷ ತಂಡ ರಚಿಸಲಾಗಿದೆ.
ಉತ್ತರ ಕನ್ನಡದ ಶಿರಸಿ ತಾಲೂಕಿನ ತಸ್ಲಿಮಬಾನು 13 ವರ್ಷಗಳ ಹಿಂದೆ ಅಬ್ದುಲ್ ರಜಾಕ್ ಎಂಬುವರನ್ನು ಮದುವೆಯಾಗಿದ್ದು, ಇಬ್ಬರು ಗಂಡು ಮಕ್ಕಳೊಂದಿಗೆ ಸುಂಕದಕಟ್ಟೆ ಬಳಿಯ ಕೆಬ್ಬೆಹಳ್ಳದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ.
ಅಬ್ದುಲ್ ರಜಾಕ್ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದು, ಮಂಗಳವಾರ ಬೆಳಗ್ಗೆ ಕೆಲಸಕ್ಕೆ ಹೋಗಿದ್ದಾರೆ. ನಂತರ ಮಕ್ಕಳು ಸುಂಕದಕಟ್ಟೆ ಮುಖ್ಯರಸ್ತೆಯಲ್ಲಿರುವ ಶಾಂತಿಧಾಮ ಶಾಲೆಗೆ ಹೋಗಿದ್ದಾರೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆ ಬಳಿ ಬಂದ ದುಷ್ಕರ್ಮಿ ಈ ರಸ್ತೆಯಲ್ಲಿ ಮುಸ್ಲಿಂ ವಾಸವಿರುವ ಮನೆ ಯಾವುದು ಎಂದು ಕೇಳಿದ್ದಾನೆ.
ಇದಕ್ಕೆ ಪಕ್ಕ ಮನೆಯವರು ತಸ್ಲಿಮಬಾನು ಮನೆ ತೋರಿಸಿದ್ದಾರೆ. ಬಳಿಕ ಆರೋಪಿ ಮೃತರ ಮನೆಗೆ ಹೋಗಿದ್ದು, ಮಕ್ಕಳನ್ನು ಕರೆ ತರಲು ಆಗತಾನೇ ಮನೆಯಿಂದ ಹೊರ ಬಂದ ತಸ್ಲಿಮಬಾನು ಅವರನ್ನು ಮಾತನಾಡಿಸಿ ಮತ್ತೆ ಮನೆಯೊಳಗೆ ಕರೆದೊಯ್ದಿದ್ದಾನೆ.
ಇತ್ತ ನಿತ್ಯ ತಮ್ಮನ್ನು ಕರೆ ತರಲು ಬರುತ್ತಿದ್ದ ತಾಯಿ ತಸ್ಲಿಮಬಾನು, ಶಾಲೆ ಬಿಟ್ಟು ಬಹಳ ಹೊತ್ತಾದರೂ ಬಾರದ್ದರಿಂದ ಇಬ್ಬರು ಮಕ್ಕಳು ಶಾಲೆ ಬಳಿಯಿರುವ ಮಾವನ ಮನಗೆ ಹೋಗಿದ್ದಾರೆ. ಸಂಜೆಯಾದರು ತಾಯಿ ಬಂದಿಲ್ಲ. ನಂತರ ಟ್ಯೂಟೋರಿಯಲ್‌ಗೆ ಹೋಗಬೇಕಾದ್ದರಿಂದ ಇಬ್ಬರು ಮನೆಗೆ ಬಂದಿದ್ದಾರೆ.
ಬಾಗಿಲು ತೆರೆದ್ದಿದ್ದರಿಂದ ನೇರವಾಗಿ ಒಳಗಡೆ ಹೋಗುತ್ತಿದ್ದಂತೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನು ಕಂಡು ಮಕ್ಕಳು ಜೋರಾಗಿ ಕಿರುಚಿಕೊಂಡಿದ್ದಾರೆ. ಮಕ್ಕಳ ಕೂಗಾಟ ಕೇಳಿಸಿಕೊಂಡು ತಸ್ಲಿಮಬಾನು ಮನೆಗೆ ಬಂದ ಪಕ್ಕದ ಮನೆ ನಿವಾಸಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹರಿತವಾದ ಅಸ್ತ್ರದಿಂದ ಕತ್ತು ಕೊಯ್ದು ಕೊಲೆ ಮಾಡಲಾಗಿದೆ.
ಮನೆಯಲ್ಲಿ ಯಾವುದೇ ವಸ್ತುಗಳ ಕಳವು ಆಗಿಲ್ಲ. ಅಲ್ಲದೇ ತಸ್ಲಿಮಬಾನು ಮೈಮೇಲಿದ್ದ ಒಡವೆಗಳು ಕೂಡ ನಾಪತ್ತೆಯಾಗಿಲ್ಲ. ಹೀಗಾಗಿ ವೈಯಕ್ತಿಕ ದ್ವೇಷದಿಂದಲೇ ಕೊಲೆಯಾಗಿರುವ ಸಾಧ್ಯತೆಯಿದೆ. ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಉದಯವಾಣಿಗೆ ತಿಳಿಸಿದ್ದಾರೆ.