Advertisement

ಚಿತ್ರಮಂದಿರಗಳಲ್ಲಿ ಏಕರೀತಿ ಪ್ರವೇಶ ದರ ಶೀಘ್ರ ಜಾರಿ

11:29 AM Apr 27, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್‌ಗಳೂ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೀತಿಯ ಪ್ರವೇಶದರ ನೀತಿ ಜಾರಿಗೆ ತರುವ ಜೊತೆಗೆ, 200 ರೂಪಾಯಿಗಳ ಗರಿಷ್ಠ ಪ್ರವೇಶದರವನ್ನು ನಿಗದಿಪಡಿಸುವ ಕುರಿತು ಸರ್ಕಾರಿ
ಆದೇಶವಾಗಿದ್ದು, ಗುರುವಾರ ಅಧಿಕೃತ ಪ್ರಕಟಣೆಯಾಗುವುದರ ಜೊತೆಗೆ ತಕ್ಷಣದಿಂದಲೇ ಕಾರ್ಯರೂಪಕ್ಕೆ ಬರಲಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ಹೇಳಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್‌ಗಳೂ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೀತಿಯ ಪ್ರವೇಶದರ ನೀತಿ ಜಾರಿಗೆ ತರುವ ಜೊತೆಗೆ, 200 ರೂಪಾಯಿಗಳ ಗರಿಷ್ಠ ಪ್ರವೇಶದರವನ್ನು ನಿಗದಿಪಡಿಸುವ ಕುರಿತು ಸಿಎಂ ಘೋಷಿಸಿದ್ದರು. 

Advertisement

ಆದರೆ, ಅದು ಜಾರಿಗೆ ಬಂದಿರಲಿಲ್ಲ. ಈಗ ಆ ವಿಷಯವಾಗಿ ಸರ್ಕಾರಿ ಆದೇಶವಾಗಿದ್ದು, ಅಧಿಕೃತ ಪ್ರಕಟಣೆ ಹೊರಬೀಳುವುದು ಮಾತ್ರ ಬಾಕಿ ಇದೆ. ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತ ನಾಡಿರುವ
ಸಾ.ರಾ. ಗೋವಿಂದು, “ಸರ್ಕಾರಿ ಆದೇಶವಾಗಿದೆ ಎಂಬ ಅಧಿಕೃತ ಮಾಹಿತಿ ಸಿಕ್ಕಿದೆ. ಅದಿನ್ನು ಪ್ರಕಟಣೆಯಾಗವುದಷ್ಟೇ
ಬಾಕಿ ಇದೆ. ಇಂದು ಆ ಅಧಿಕೃತ ಪ್ರಕಟಣೆ ಹೊರಬೀಳಲಿದ್ದು, ತಕ್ಷಣದಿಂದಲೇ ಕಾರ್ಯರೂಪಕ್ಕೆ ಬರಲಿದೆ’ ಎಂದು
ಗೋವಿಂದು ಹೇಳಿದರು.

ಜಾಸ್ತಿ ಕೊಟ್ಟಿದ್ದರೆ ವಾಪಸ್‌ ಪಡೆಯಿರಿ:
“ತೆಲುಗಿನ “ಬಾಹುಬಲಿ’ ಚಿತ್ರದ ಬಿಡುಗಡೆಯ ಹೊತ್ತಿನಲ್ಲೇ ಇಂಥದ್ದೊಂದು ಪ್ರಕಟಣೆ ಬಂದರೆ ಚೆನ್ನಾಗಿರುತ್ತದೆ ಎಂಬ
ಆಸೆ ಇತ್ತು. ಅದೀಗ ಸಾಧ್ಯವಾಗುತ್ತಿದೆ. ರಾಜ್ಯದ ಯಾವುದೇ ಚಿತ್ರಮಂದಿರದಲ್ಲೂ ಇನ್ನು ಮುಂದೆ ಟಿಕೆಟ್‌ ದರ 200
ರೂಪಾಯಿ ದಾಟುವ ಹಾಗಿಲ್ಲ. ಎಲ್ಲರೂ ಈ ಆದೇಶವನ್ನು ಪಾಲಿಸಬೇಕು. ಕೆಲವು ಚಿತ್ರಮಂದಿರದವರು “ಬಾಹುಬಲಿ’
ಚಿತ್ರದ ಟಿಕೆಟ್‌ ದರವನ್ನು 500 ರೂ. ವರೆಗೂ ಏರಿಸಿದ್ದಾರೆ. ಹಾಗೇನಾದರೂ ಪ್ರೇಕ್ಷಕರು 200 ರೂಪಾಯಿಗಿಂತ ಹೆಚ್ಚು
ದರ ಕೊಟ್ಟು ಟಿಕೆಟ್‌ ಖರೀದಿಸಿದ್ದರೆ, ಮಿಕ್ಕ ಹಣವನ್ನು ಚಿತ್ರಮಂದಿರದವರಿಂದ ವಾಪಸ್ಸು ಪಡೆದುಕೊಳ್ಳಿ. ಒಂದು ಪಕ್ಷ
ಚಿತ್ರಮಂದಿರ ದವರು, ಪ್ರೇಕ್ಷಕರಿಂದ 200 ರೂಪಾಯಿಗಿ ಂಥ ಜಾಸ್ತಿ ಹಣ ಪಡೆದಿದ್ದರೆ, ಅದನ್ನು ವಾಪಸ್ಸು ಮಾಡಬೇಕು’ ಎಂದು ಗೋವಿಂದು ಅವರು ಚಿತ್ರಮಂದಿರಗಳಿಗೆ ಕಿವಿಮಾತು ಹೇಳಿದರು.

ಮಲ್ಟಿಪ್ಲೆಕ್ಸ್‌ಗಳಿಗೆ ಎಚ್ಚರಿಕೆ: ಅಧಿಕ ಟಿಕೆಟ್‌ ದರದ ಜೊತೆಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಎಂ.ಆರ್‌.ಪಿಗಿಂಥ ಹೆಚ್ಚಿನ ಬೆಲೆಗೆ ಆಹಾರ
ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಕುರಿತು ಮಾತನಾಡಿದ ಅವರು, “ಮಲ್ಟಿಪ್ಲೆಕ್ಸ್‌ಗಳಲ್ಲಿ ಆಹಾರ
ಪದಾರ್ಥಗಳಿಗೆ ಎಂ.ಆರ್‌.ಪಿಗಿಂಥ ಜಾಸ್ತಿ ದರ ಪಡೆಯಲಾಗುತ್ತಿದೆ. ಇದು ಹೀಗಿಯೇ ಮುಂದುವರೆದರೆ, ಸಾರ್ವಜನಿಕರು ತಮ್ಮ ತಿಂಡಿಯನ್ನು ತಾವೇ ತರಬೇಕಾಗುತ್ತದೆ. ಹಾಗಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ದರ ಕಡಿಮೆ ಮಾಡಬೇಕು ಅಥವಾ ಪ್ರೇಕ್ಷಕರಿಗೆ ತಮಗಿಷ್ಟವಾಗಿದ್ದನ್ನು ತಂದು ಕೊಳ್ಳುವುದಕ್ಕೆ ಅನುಮತಿ ಕೊಡಬೇಕು. ಇದು ಮನವಿ ಅಂತಾದರೂ ಸರಿ, ಎಚ್ಚರಿಕೆ ಅಂತಾದರೂ ಸರಿ. ಈ ವಿಷಯದಲ್ಲಿ ಮಲ್ಟಿಪ್ಲೆಕ್ಸ್‌ಗಳು ಮಾನವೀಯತೆ ಮೆರೆಯಬೇಕು’ ಎಂದು ಗೋವಿಂದು ಹೇಳಿದರು.

ಕನ್ನಡದ ಬಗ್ಗೆ ಕಾಳಜಿ ಇರಲಿ: ಊರ್ವಶಿ ಚಿತ್ರಮಂದಿರದಲ್ಲಿ ಕನ್ನಡ ಚಿತ್ರಗಳನ್ನು ಕಡೆಗಣಿಸಲಾಗುತ್ತಿರುವ ಕುರಿತು
ಮಾತನಾಡಿದ ಗೋವಿಂದು, “ಊರ್ವಶಿ ಚಿತ್ರಮಂದಿರವು ಕರ್ನಾಟಕದಲ್ಲಿದ್ದು, ಕನ್ನಡದ ಬಗ್ಗೆ ಕಾಳಜಿ ಇಟ್ಟುಕೊಂಡಿಲ್ಲ. ಆ
ಚಿತ್ರಮಂದಿರವು ಕನ್ನಡ ಚಿತ್ರಗಳ ವಿರುದ್ಧ ತಾತ್ಸಾರ ಭಾವನೆ ತೋರಿಸುತ್ತಿದೆ. ಕನ್ನಡ ಚಿತ್ರಗಳನ್ನು ಪ್ರದರ್ಶಿಸುವುದಕ್ಕೆ ಸಹಕಾರ ಕೊಡದಿದ್ದರೆ, ಇಡೀ ಚಿತ್ರೋದ್ಯಮ ಪ್ರತಿಭಟನೆ ಮಾಡಬೇಕಾಗುತ್ತದೆ. ಮೊದಲು ಕನ್ನಡ ಚಿತ್ರಗಳಿಗೆ ಪ್ರಾಧಾನ್ಯತೆ ಸಿಗಲಿ. ಇನ್ನು ಕನ್ನಡ ಸಿನಿಮಾಗಳಿಗೆ ತೊಂದರೆ ಕೊಟ್ಟು, “ಬಾಹುಬಲಿ’ ಚಿತ್ರವನ್ನು ಬಿಡುಗಡೆ ಮಾಡಬಾರದು. ಒಳ್ಳೆಯ ಪ್ರದರ್ಶನ ಕಾಣುತ್ತಿರುವ ಕನ್ನಡ ಸಿನಿಮಾಗಳನ್ನು ತೆಗೆದು “ಬಾಹುಬಲಿ’ ಪ್ರದರ್ಶಿಸಿದರೆ, ಗಮನಕ್ಕೆ ತರಬೇಕು’ ಎಂದು ಪ್ರೇಕ್ಷಕರಿಗೆ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next