ಹೊಸದಿಲ್ಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರಕಾರವು, ಈಗ ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ಯಲ್ಲಿ ಇರುವ ಕೆಲವು ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ(ಒಪಿಎಸ್)ಗೆ ಬದಲಾವಣೆ ಮಾಡಿಕೊಳ್ಳಲು ಒಂದು ಬಾರಿ ಅವಕಾಶ ನೀಡಲು ಮುಂದಾಗಿದೆ.
2003ರ ಡಿ. 22ರ ಹಿಂದೆ ಹುದ್ದೆಗಳಿಗೆ ನೀಡಲಾಗಿದ್ದ ಜಾಹೀರಾತು ಅಥವಾ ಅಧಿಸೂಚನೆಯಡಿ ಆ ಹುದ್ದೆಗಳಿಗೆ ಸೇರಿದವರು ಒಪಿಎಸ್‌ಗೆ ಸೇರಬಹುದು. ಅಂದರೆ, ಡಿ.22ರಂದು ಹೊಸ ಪಿಂಚಣಿ ಯೋಜನೆ ದೇಶಾದ್ಯಂತ ಜಾರಿಗೆ ಬಂದಿತ್ತು. ಆಗ ಈ ದಿನಾಂಕದ ಹಿಂದೆ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದವರೂ ಹೊಸ ಪಿಂಚಣಿ ವ್ಯವಸ್ಥೆಯಡಿಗೆ ಬಂದಿದ್ದರು. ಈಗ ಮಾರ್ಪಡಿಸಿ, 2003ರ ಡಿ.22ರ ಮುನ್ನ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ, ಹೊಸ ಪಿಂಚಣಿ ಯೋಜನೆ ಜಾರಿಗೆ ಬಂದ ಮೇಲೆ ಕೆಲಸಕ್ಕೆ ಸೇರಿದವರು ಈ ಅನುಕೂಲ ಪಡೆಯಬಹುದು ಎಂದು ಸಿಬಂದಿ ಸಚಿವಾಲಯ ಆದೇಶದಲ್ಲಿ ತಿಳಿಸಿದೆ.
ವಿತ್ತ ಇಲಾಖೆ, ಸಿಬಂದಿ ಮತ್ತು ತರಬೇತಿ ವಿಭಾಗ, ವೆಚ್ಚ ಇಲಾಖೆ ಮತ್ತು ಕಾನೂನು ವ್ಯವಹಾರ ಇಲಾಖೆಯ ಪ್ರತಿನಿಧಿಗಳ ಜತೆಗೆ ಚರ್ಚಿಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಚಿವಾಲಯ ಹೇಳಿದೆ.
ಹಳೆ ಪಿಂಚಣಿ ಯಾಕೆ ಬೇಕು?
ಇತ್ತೀಚಿನ ದಿನಗಳಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗಾಗಿ ಆಗ್ರಹಿಸಿ ದೇಶದ ಹಲವೆಡೆ ಪ್ರತಿಭಟನೆ, ಧರಣಿಗಳು ನಡೆಯುತ್ತಲೇ ಇವೆ. ಹೊಸ ಪಿಂಚಣಿ ವ್ಯವಸ್ಥೆಗೆ ಹೋಲಿಸಿದರೆ, ಒಪಿಎಸ್‌ನಲ್ಲಿ ಅನುಕೂಲತೆಗಳು ಹೆಚ್ಚಿವೆ. ಅಂದರೆ, ಈ ವ್ಯವಸ್ಥೆಯಲ್ಲಿ ನಿವೃತ್ತಿಯ ಬಳಿಕವೂ ಉದ್ಯೋಗಿಗೆ ಆದಾಯ ಭದ್ರತೆ ಸಿಗುತ್ತದೆ. ಪಿಂಚಣಿ ನಿಧಿಯ ವೆಚ್ಚವನ್ನು ಸರಕಾರವೇ ಭರಿಸುತ್ತದೆ. ನಿವೃತ್ತಿಯ ಕಡೇ ದಿನ ತೆಗೆದುಕೊಂಡ ವೇತನದ ಅರ್ಧದಷ್ಟು ಮೊತ್ತ ನಿವೃತ್ತಿಯ ಜೀವನದಲ್ಲಿ ಪಿಂಚಣಿ ರೂಪದಲ್ಲಿ ಸಿಗುತ್ತದೆ.