– ಮದುವೆ ನಂತರವೂ ಪತ್ರ ಬರೆಯುತ್ತಿದ್ದ “ಕೃಷ್ಣ’
Advertisement
ಕಲ್ಪನಾ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯ ಮುಖ್ಯ ಡಯಟಿಷಿಯನ್. ಸಾಹಿತಿ, ಹಾಸ್ಯ ಭಾಷಣಕಾರ ಪ್ರೊ. ಕೃಷ್ಣೇಗೌಡರ ಪತ್ನಿ. ಎಂಎಸ್‌ಸಿ ಫುಡ್‌ಸೈನ್ಸ್ ಆ್ಯಂಡ್ ನ್ಯೂಟ್ರಿಷನ್ ಓದುವಾಗಲೇ ಕೃಷ್ಣೇಗೌಡರನ್ನು ಮದುವೆಯಾದರಂತೆ. “ಆಗ ಕೃಷ್ಣೇಗೌಡರ ಜೊತೆ ಮದುವೆಯಾಗಲು ನನಗೆ ಸ್ವಲ್ಪವೂ ಇಷ್ಟ ಇರಲಿಲ್ಲ. ಒಂದು ವೇಳೆ ಆವತ್ತು ನಾನವರನ್ನು ಮದುವೆಯಾಗದೇ ಇದ್ದಿದ್ದರೆ ಇವತ್ತು ತುಂಬಾ ಪಶ್ಚಾತಾಪ ಪಡುತ್ತಿದ್ದೆ. ಇಷ್ಟು ಒಳ್ಳೆಯ ಗಂಡ ಸಿಗಲು ಪುಣ್ಯವೂ ಇರಬೇಕು’ ಎನ್ನುತ್ತಾರೆ ಕಲ್ಪನಾ. ಬದುಕು ದೊಡ್ಡದು. ನಾಲ್ಕು ಜನರಿಗೆ ಉಪಯೋಗವಾಗುವಂಥ ಬಾಳು ಬಾಳಬೇಕು ಎಂಬ ಅಲಿಖೀತ ನಿಯಮ ಇವರ ಬದುಕಿನಲ್ಲಿದೆ ಎಂಬುದು ಇವರ ಮಾತಿನಿಂದ ತಿಳಿಯುತ್ತದೆ. ಕಲ್ಪನಾ ಇಬ್ಬರು ಹೆಣ್ಣು ಮಕ್ಕಳ ತಾಯಿಯೂ ಹೌದು.– – –
– ನಿಮ್ಮ ಮದುವೆ ಒಂದು ಪ್ರಹಸನ ಅಂತ ಕೇಳಿದ್ದೇವೆ. ಅದರ ಬಗ್ಗೆ ಹೇಳಿ?
ನಾನು ಎಂಎಸ್ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದೆ. ನನಗೆ ಮದುವೆ ಮಾಡುವ ಯೋಚನೆಯನ್ನು ನಮ್ಮ ಮನೆಯಲ್ಲಿ ಆಗಿನ್ನೂ ಮಾಡಿರಲೇ ಇಲ್ಲ. ಆದರೆ, ಅಲ್ಲೊಂದು ಅಚಾತುರ್ಯವಾಯಿತು. ನಮ್ಮ ಕುಟುಂಬಕ್ಕೆ ಪರಿಚಿತರಾಗಿದ್ದ ಮದುವೆ ಮಧ್ಯಸ್ತಿಕೆ ವಹಿಸುವವರೊಬ್ಬರು ಕೃಷ್ಣೇಗೌಡರಿಗೆ ಹೆಣ್ಣು ತೋರಿಸಬೇಕಿತ್ತು. ನಮ್ಮ ಹಿಂದಿನ ಬೀದಿಯಲ್ಲಿ ಕಲ್ಪನಾ ಎಂಬ ಮತ್ತೂಬ್ಬಳು ಹುಡುಗಿಯಿದ್ದಳು. ಅವರ ಅಪ್ಪನ ಹೆಸರೂ ತಿಮ್ಮೇಗೌಡ ಎಂದಿತ್ತು. ಮಧ್ಯಸ್ತಿಕೆಯ ಪರಿಚಯಸ್ಥರು ಗೊಂದಲಕ್ಕೀಡಾಗಿ ನಮ್ಮ ಮನೆಗೆ ಕೃಷ್ಟೇಗೌಡರು ಮತ್ತು ಅವರ ಇಬ್ಬರು ಸಂಬಂಧಿಕರನ್ನು ಕರಕೊಂಡು ಬಂದರು. ನಮ್ಮಮ್ಮ “ನನ್ನ ಮಗಳಿಗೆ ಈಗಲೇ ಮದುವೆ ಮಾಡುವುದಿಲ್ಲ. ನಾವು ಹೆಣ್ಣು ತೋರಿಸುವುದಿಲ್ಲ’ ಎಂದರು. “ಅವರನ್ನು ಕರೆದುಕೊಂಡು ಬಂದಿದ್ದೀನಿ. ದಯವಿಟ್ಟು ನನ್ನ ಮರ್ಯಾದೆ ಉಳಿಸಲಾದರೂ ನಿಮ್ಮ ಮಗಳನ್ನು ತೋರಿಸಿ’ ಎಂದು ತುಂಬಾ ಬೇಡಿಕೊಂಡರು. ಹೀಗಾಗಿ ನಾನು ಕೃಷ್ಣೇಗೌಡರ ಎದುರು ಹೋಗಬೇಕಾಯಿತು. ಅವರನ್ನು ಮದುವೆಯಾಗಬೇಕೆಂಬ ಕಲ್ಪನೆಯೇ ಇಲ್ಲದ ನಾನು ಕಡೆಗೆ ಅವರ ಹೆಂಡತಿಯೇ ಆದೆ.
ಅಯ್ಯೋ, ಇವರು ನಮ್ಮ ಮನೆಗೆ ಬಂದಾಗ ನಾನು ಇವರನ್ನು ಕಿರುಗಣ್ಣಿನಲ್ಲೂ ನೋಡಿರಲಿಲ್ಲ. ಆದರೆ, ಇವರಿಗೆ ನನ್ನ ಮೇಲೆ ಮನಸ್ಸಾಗಿತ್ತು. ಮೇಲಿಂದ ಮೇಲೆ ಮಧ್ಯಸ್ತಿಕೆಯವರಿಂದ ಒತ್ತಡ ಹಾಕುತ್ತಿದ್ದರು. ನಾನು ಯಾವ ಕಾರಣಕ್ಕೂ ಲೆಕ್ಚರರ್‌ಅನ್ನು ಮಾತ್ರ ಮದುವೆಯಾಗಬಾರದು ಎಂದು ತೀರ್ಮಾನಿಸಿದ್ದೆ. ಆದರೆ, ರಜೆಗೆಂದು ಮನೆಗೆ ಬಂದ ಅಕ್ಕ ನನ್ನ ಬ್ರೇನ್‌ವಾಶ್ ಮಾಡಿದಳು. ಆವಳು ಮಾನಸ ಗಂಗೋತ್ರಿಯಲ್ಲಿ ಓದುವಾಗ ಕೃಷ್ಟೇಗೌಡರೂ ಅಲ್ಲಿಯೇ ಓದುತ್ತಿದ್ದರು. ಹೀಗಾಗಿ, ಅಕ್ಕ ನಮ್ಮವರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಳು. ಅವರನ್ನು ಕಂಡರೆ ಅವಳಿಗೆ ಅಭಿಮಾನ ಇತ್ತು. “ಗಂಗೋತ್ರಿಯ ಪ್ರತಿ ಗಿಡಮರಗಳಿಗೂ ಗೊತ್ತು ಕೃಷ್ಣೇಗೌಡ ಯಾರು ಅಂತ. ಮುಂದೆ ಅವರು ತುಂಬಾ ಪ್ರಸಿದ್ಧರಾಗುತ್ತಾರೆ. ನೀನು ಅವರನ್ನು ತಿರಸ್ಕರಿಸಿದರೆ ಮುಂದೊಂದು ದಿನ ಪಶ್ಚಾತ್ತಾಪ ಪಡುತ್ತೀಯ’ ಎಂದಳು. ನಾನೂ ಒಪ್ಪಿಕೊಂಡೆ. – ನೀವು ಸಿಟಿಯವರು, ಕೃಷ್ಣೇಗೌಡರು ಹಳ್ಳಿಯವರು. ಅವರ ಕುಟುಂಬಕ್ಕೆ ಹೇಗೆ ಹೊಂದಿಕೊಂಡಿರಿ?
ನಾವು ಮೈಸೂರಿನವರು. ಕೃಷ್ಣೇಗೌಡರದ್ದು ದೊಡ್ಡ ಕುಟುಂಬ. ಅವರಿಗೆ ಚಿಕ್ಕ ವಯಸ್ಸಿನಿಂದಲೂ ಸಾಮಾಜಿಕ ಕಳಕಳಿ ಜಾಸ್ತಿ. ಜೊತೆಗೆ ತಮ್ಮ ಹಳ್ಳಿಯ ಮಕ್ಕಳನ್ನು ಮೈಸೂರಿಗೆ ಕರೆದುಕೊಂಡು ಬಂದು ಅವರನ್ನು ಓದಿಸಬೇಕು ಎಂಬ ಆಸೆ. ಮದುವೆಯಾಗುತ್ತಿದ್ದಂತೆ ನಮ್ಮ ಮನೆಗೆ ಪುಟ್ಟಪುಟ್ಟ ಮಕ್ಕಳ ಒಂದು ಗುಂಪೇ ಬಂತು. ಅವರನ್ನು ನೋಡಿಕೊಳ್ಳುವ, ಓದಿಸುವ ಜೊತೆಗೆ ಅವರನ್ನು ಸಿಟಿ ಜೀವನಕ್ಕೆ ಒಗ್ಗಿಸುವ ದೊಡ್ಡ ಜವಾಬ್ದಾರಿ ನನ್ನ ಮೇಲಿತ್ತು. ಅದರಲ್ಲೇ ನಾನು ಕಳೆದುಹೋದೆ. ಹನಿಮೂನ್, ಪ್ರವಾಸ ಅಂತೆಲ್ಲ ಹೋಗಲೇ ಇಲ್ಲ. ಮದುವೆಯಾಗಿ 6 ವರ್ಷಗಳ ಕಾಲ ಕೆಲಸಕ್ಕೆ ಸೇರಿಕೊಳ್ಳುವ ಯೋಚನೆಯನ್ನೂ ಮಾಡಲಿಲ್ಲ.
Related Articles
ಮನೆಯಲ್ಲಿ ಜವಾಜಾªರಿ ಇತ್ತು ನಿಜ. ಆದರೆ, ನಮ್ಮನೆಯವರು ತೋರುತ್ತಿದ್ದ ಪ್ರೀತಿಯಿತ್ತಲ್ಲಾ ಅದು ಯಾವತ್ತೂ ನಾನು ಬೇಸರಪಟ್ಟುಕೊಳ್ಳದಂತೆ ಮಾಡುತ್ತಿತ್ತು. ಮದುವೆ ನಂತರವೂ ಪತ್ರ ಬರೆಯುತ್ತಿದ್ದರು. ನನ್ನ ಮೇಲೆ ಕವನ ಬರೆದು ಪತ್ರಿಕೆಗಳಿಗೆ ಕಳುಹಿಸುತ್ತಿದ್ದರು. ಪ್ರೀತಿಗಾಗಲೀ, ಅನುಕೂಲತೆಗಳಿಗಾಗಲೀ ಅವರು ಯಾವತ್ತೂ ಏನೂ ಕೊರತೆ ಮಾಡಿಲ್ಲ. ಜೊತೆಗೆ ಮಕ್ಕಳನ್ನು ಓದಿಸುವುದು, ಅವರನ್ನು ವಿದ್ಯಾವಂತರನ್ನಾಗಿಸುವ ಕೆಲಸ ನನಗೂ ಅಚ್ಚುಮೆಚ್ಚಿನದಾಗಿತ್ತು. ಈಗ 5 ವರ್ಷವಾದವು ನಮ್ಮ ಮನೆಯಲ್ಲಿ ಯಾವ ಮಕ್ಕಳೂ ಇಲ್ಲದೆ. ನಮ್ಮ ಮಕ್ಕಳಿಬ್ಬರ ಮದುವೆಯೂ ಆಗಿದೆ. ಈಗ ಮನೆಯಲ್ಲಿ ನಾವಿಬ್ಬರೇ ಇರುವುದು. 15 ಲೀ ಕುಕ್ಕರ್, ದೊಡ್ಡ ಪಾತ್ರೆಯಲ್ಲಿ ಅಡುಗೆ ಮಾಡುತ್ತಿದ್ದವಳು ನಾನು. ಒಮ್ಮೆಗೆ 3 ಸೇರು ಅಕ್ಕಿ ಒಲೆ ಮೇಲೆ ಇಡುತ್ತಿದ್ದೆ. ದೊಡ್ಡ ಪಾತ್ರೆಗಳ ಜಾಗದಲ್ಲಿ ಈಗ ಪುಟ್ಟಪುಟ್ಟ ಪಾತ್ರೆಗಳು ಬಂದಿವೆ. ಮಕ್ಕಳಿಲ್ಲದೇ ಮನೆ ಬಣಗುಟ್ಟುತ್ತಿದೆ ಅಂತ ಬೇಸರವಾಗುತ್ತದೆ.
Advertisement
– ಕೆಲಸಕ್ಕೆ ಸೇರಿದ್ದು ಯಾವಾಗ? ಕೆಲಸ, ಮನೆ ನಿಭಾಯಿಸಲು ಕಷ್ಟ ಆಗಲಿಲ್ಲವೇ? 1991ನೇ ಇಸವಿಯಲ್ಲಿ ನಾನು 2ನೇ ಸಲ ಗರ್ಭಿಣಿಯಾಗಿದ್ದೆ. ಮೂರು ತಿಂಗಳಾಗಿತ್ತು ಅಷ್ಟೇ. ಹಳೇ ನ್ಯೂಸ್‌ಪೇಪರ್ ತಿರುವಿಹಾಕುವಾಗ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಮಧುಮೇಹ ಕೇಂದ್ರಕ್ಕೆ ಡಯಟೀಶಿಯನ್‌ಗಾಗಿ ಜಾಹೀರಾತು ಕೊಟ್ಟಿದ್ದರು. ಈ ಕೆಲಸಕ್ಕೆ ಅರ್ಜಿ ಹಾಕಿದರೆ ಕನಿಷ್ಠಪಕ್ಷ ನನ್ನ ಸಿಲೆಬಸ್ ಅನ್ನು ಒಮ್ಮೆ ತಿರುವಿಹಾಕಿದಂತಾಗುತ್ತದೆ ಎಂದು ಅರ್ಜಿ ಹಾಕಿದೆ. ಸಂದರ್ಶನಕ್ಕೆ ಕರೆದರು. ನನಗೆ 2 ವರ್ಷದ ಪುಟ್ಟ ಮಗಳಿರುವುದಾಗಲಿ, ಈಗ ಮತ್ತೆ ಗರ್ಭಿಣಿಯಾಗಿರುವುದಾಗಲಿ ನಾನು ಹೇಳಲಿಲ್ಲ. ಸಂದರ್ಶನದಲ್ಲಿ ನಾನು ಆಯ್ಕೆಯಾದೆ. ಮನೆಯಲ್ಲಿ ಎಲ್ಲರನ್ನೂ ಒಪ್ಪಿಸಿ ಕಡೆಗೂ ಕೆಲಸಕ್ಕೆ ಸೇರಿದೆ. ಕೆಲಸಕ್ಕೆ ಸೇರಿದ ಮೇಲೂ ಮನೆ, ಮಕ್ಕಳನ್ನು ಯಾವ ಕೊರತೆಯೂ ಇಲ್ಲದೇ ನಿಭಾಯಿಸಿದ್ದೇನೆ. – ನ್ಯೂಟ್ರಿಶಿಯನ್ ಕೆಲಸವನ್ನು ಮನೆಯಲ್ಲೂ ಮಾಡುತ್ತೀರಾ?
ನಾನು ಮನೆ ಮಟ್ಟಿಗೆ ಊಟತಿಂಡಿ ವಿಚಾರದಲ್ಲಿ ಶಿಸ್ತಿನ ಜೊತೆ ಯಾವತ್ತೂ ರಾಜಿ ಮಾಡಿಲ್ಲ. ಮನೆಗೆ ಬೇಕಾದ ತರಕಾರಿಗಳನ್ನು ನಾನೇ ಬೆಳೆಯುತ್ತಿದ್ದೆ. ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಸಂಜೆಯ ತಿಂಡಿ ನಾನೇ ತಯಾರಿಸಿಕೊಡುತ್ತಿದ್ದೆ. ಉದಾಸೀನ ಮಾಡಿ ಬಿಸ್ಕೆಟ್, ಬ್ರೆಡ್ ಕೊಟ್ಟು ಕೈತೊಳೆದುಕೊಳ್ಳುವ ಕೆಲಸ ಮಾಡುತ್ತಿರಲಿಲ್ಲ. ಹೊರಗಡೆ ತಿಂಡಿ ಮಕ್ಕಳಿಗೆ ಕೊಡುತ್ತಿದ್ದದ್ದು ಬಹಳ ಅಪರೂಪ. ಕೃಷ್ಣೇಗೌಡರಿಗೆ ಬಾಳೆಹಣ್ಣು, ತುಪ್ಪ, ಬೆಣ್ಣೆ ಎಲ್ಲಾ ತುಂಬಾ ಇಷ್ಟ. ಅವರು ಸ್ವಲ್ಪ ಹೆಚ್ಚು ತಿಂದರೆ ನಾನು ಕಡಿವಾಣ ಹಾಕುತ್ತೇನೆ. ಅದಕ್ಕೆ ಅವರು, “ನಿನ್ನ ನ್ಯೂಟ್ರಿಷಿಯನ್ ಬುದ್ಧಿಯೆಲ್ಲಾ ಆಸ್ಪತ್ರೆಯಲ್ಲಿ ಮಾತ್ರ ಇಟ್ಕೊàಬೇಕು ಆಯ್ತಾ’ ಅಂತ ರೇಗಿಸುತ್ತಾ ಇರ್ತಾರೆ. – ಕೃಷ್ಣೇಗೌಡರ ಇಂದಿನ ಪ್ರಸಿದ್ಧಿಯನ್ನು ಪತ್ನಿಯಾಗಿ ಹೇಗೆ ಅರ್ಥೈಸುತ್ತೀರ?
ಅವರ ಬೆಳವಣಿಗೆಯನ್ನು ಇಂಚಿಂಚೂ ನೋಡಿದ್ದೇನೆ. ಅವರು ಇಷ್ಟೊಂದು ಪ್ರಸಿದ್ಧರಾಗುತ್ತಾರೆ ಅಂತ ಅಂದುಕೊಂಡಿರಲಿಲ್ಲ. ಇವತ್ತು ಅವರು ಏನಾಗಿದ್ದಾರೋ ಅದಕ್ಕೆಲ್ಲಾ ಅವರ ಶ್ರಮವಷ್ಟೇ ಕಾರಣವಲ್ಲ. ಅವರ ಒಳ್ಳೆತನ, ನಿಷ್ಕಲ್ಮಶ ಮನಸ್ಸು, ಬುದ್ಧಿವಂತಿಕೆ ಜೊತೆಗೆ ಅನುವಂಶೀಯವಾಗಿ ಬಂದಿರುವ ಹಾಸ್ಯಪ್ರಜ್ಞೆ ಕಾರಣ ಅಂತ ನಾನು ಅಂದುಕೊಂಡಿದ್ದೇನೆ. ಅವರು ಗಂಭೀರ ಭಾಷಣಗಳಿಗೆ ಜನಪ್ರಿಯರಾಗಿದ್ದರು. ಗಂಭೀರ ಭಾಷಣಕಾರರು ಸಭೆಯನ್ನು ಹಿಡಿದಿಟ್ಟುಕೊಳ್ಳಲು ಕೆಲವೊಮ್ಮೆ ಸೋಲುತ್ತಾರೆ. ಆದರೆ, ಇವರ ಭಾಷಣವನ್ನು ಜನ ಮಂತ್ರಮುಗ್ಧರಾಗಿ ಕೇಳಿಸಿಕೊಳ್ಳುವುದನ್ನು ನೋಡಿ ನಾನು ಸಂಭ್ರಮಿಸಿದ್ದೇನೆ. ಹಾಸ್ಯ ಭಾಷಣಕಾರರಾಗಿಯೂ ಇವರು ಯಶಸ್ವಿಯಾಗಿದ್ದು ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ. – ಕೃಷ್ಣೇಗೌಡರ ಕೆಲ ಉತ್ತಮ ಗುಣಗಳನ್ನು ಪಟ್ಟಿ ಮಾಡುವುದಾದರೆ?
ಎಷ್ಟೇ ಸುಸ್ತಾಗಿ ಮನೆಗೆ ಬಂದರೂ ಅವರು ಒಂದು ದಿನವೂ ಆಯಾಸವನ್ನು ತೋರಿಸುವುದಿಲ್ಲ. ಸಿಡುಕುವುದಿಲ್ಲ. ನಗುನಗುತ್ತಲೇ ತಮ್ಮ ಅನುಭವವನ್ನು ಮನೆಯಲ್ಲಿದ್ದವರ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ಮಕ್ಕಳು ಅಪ್ಪ ಇಂತಲ್ಲಿ ಹೋಗೋಣ ಎಂದರೆ, ಮರುಕ್ಷಣವೇ ತಯಾರಾಗಿರುತ್ತಾರೆ. ಊರಿಗೆ ಹೋದರೆ ಮನೆಯವರು ನೆರೆಮನೆಯವರು, ಬಡವರು ಬಲ್ಲಿದರು ಎಂಬ ಯಾವ ಭೇದವನ್ನೂ ತೋರದೆ ಎಲ್ಲರನ್ನೂ ಪ್ರೀತಿಯಿಂದ ಮಾತಾಡಿಸುತ್ತಾರೆ. ನನ್ನ ತವರಿನವರನ್ನೂ ಅಷ್ಟೇ ಆದರದಿಂದ ಕಾಣುತ್ತಾರೆ. ತುಂಬಾ ಓದುವವರು ಬರವಣಿಗೆ ಮಾಡುವವರು ತುಂಬಾ ಗಂಭೀರ ಸ್ವಭಾವದವರಾಗಿರುತ್ತಾರೆ. ಆದರೆ, ಇವರು ಹಾಗಲ್ಲ. ಜೀವನದ ಪ್ರತಿ ಕ್ಷಣವನ್ನು ಸಂಭ್ರಮಿಸುತ್ತಾರೆ. ಹೊಸತನಕ್ಕೆ ತೆರೆದುಕೊಳ್ಳುತ್ತಾರೆ.
– ಮಕ್ಕಳಿಗೂ ಓದುವ, ಬರೆಯುವ ಅಭ್ಯಾಸ ಇದೆಯಾ?
ಇಬ್ಬರು ಮಕ್ಕಳಿಗೂ ಓದುವ, ಬರೆಯುವ ಅಭ್ಯಾಸ ಅಪ್ಪನಿಂದ ಬಂದಿದೆ. ಜೊತೆಗೆ ಇವರ ಕುಟುಂಬದಲ್ಲಿರುವ ಹಾಸ್ಯಪ್ರಜ್ಞೆ ನಮ್ಮ ಮಕ್ಕಳಿಗೂ ಇದೆ. ಇಬ್ಬರೂ ಈಗ ಸಾಫ್ಟ್ವೇರ್ ಎಂಜಿನಿಯರ್‌ಗಳು. ಅವರ ಲೋಕದಲ್ಲಿ ಅವರು ಬ್ಯುಸಿ. ಪ್ರತಿಭೆ ಪ್ರಕಟವಾಗಲೂ ಸಮಯ ಬೇಕಲ್ವಾ? ಒಂದಲ್ಲಾ ಒಂದು ದಿನ ಆಗುತ್ತದೆ. – ಕೃಷ್ಣೇಗೌಡರಿಗೆ ನಿಮ್ಮಿಂದ ಕಿರಿಕಿರಿ ಆಗಿದ್ದಿದೆಯಾ?
ನಾನು ಜನರನ್ನು ಗುರುತಿಟ್ಟುಕೊಳ್ಳುವುದರಲ್ಲಿ ಸ್ವಲ್ಪ ಹಿಂದೆ. ಪಾಪ, ಕೃಷ್ಣೇಗೌಡರಿಗೆ ಅದರಿಂದ ಬಹಳ ಮುಜುಗರವಾಗುತ್ತದೆ. ಮುಜುಗರ ತಪ್ಪಿಸಿಕೊಳ್ಳಲೆಂದೇ ಯಾರಾದರೂ ಪರಿಚಯಸ್ತರು ಎದುರಿಗೆ ಸಿಕ್ಕರೆ ಅವರು ನಮ್ಮನ್ನು ನೋಡುವ ಮೊದಲೇ, “ಇವರು ಗೊತ್ತಲ್ವಾ ನಮ್ಮ ಆತ್ಮೀಯರು’ ಅಂತೆಲ್ಲಾ ಹೇಳಲು ಶುರು ಮಾಡುತ್ತಾರೆ. ನಾನು ಹೌದು ಎಂಬಂತೆ ತಲೆಯಾಡಿಸುತ್ತೇನೆ. – ಚೇತನ ಜೆ.ಕೆ.