Advertisement

ಒನ್ ಪ್ಲಸ್ ನಾರ್ಡ್ ವಾಚ್: ಹೀಗಿದೆ ನೋಡಿ ಇದರ ವಿಶೇಷತೆಗಳು

02:32 PM Jan 30, 2023 | Team Udayavani |

ಈಗಂತೂ ಸ್ಮಾರ್ಟ್ ವಾಚ್ ಗಳು ಅತ್ಯಂತ ಜನಪ್ರಿಯ ಗ್ಯಾಜೆಟ್ ಗಳಾಗಿವೆ. ಸಾಂಪ್ರದಾಯಿಕ ವಾಚ್ ಗಳನ್ನು ಧರಿಸುವುದಕ್ಕಿಂತ ಸ್ಮಾರ್ಟ್ ವಾಚ್ ಗಳನ್ನು ಧರಿಸುವುದೇ ಲೇಟೆಸ್ಟ್ ಟ್ರೆಂಡ್ ಆಗಿದೆ.

Advertisement

ಒಂದು ಸಾವಿರ ರೂ.ಗಳಿಂದ ಲಕ್ಷ ರೂ.ಗಳವರೆಗೆ ಸ್ಮಾರ್ಟ್ ವಾಚ್ ಗಳನ್ನು ಕಂಪೆನಿಗಳು ಹೊರತರುತ್ತಿವೆ. ಇತ್ತ ಅಗ್ಗದ್ದೂ ಅಲ್ಲದ, ದುಬಾರಿಯೂ ಅಲ್ಲದ ವಾಚ್ ಗಳನ್ನು ಬಯಸುವರಿದ್ದಾರೆ. ಅಂಥವರಿಗಾಗಿ ಒನ್ ಪ್ಲಸ್ ಕಂಪೆನಿ ಒನ್ ಪ್ಲಸ್ ನಾರ್ಡ್ ವಾಚ್ ಅನ್ನು ಹೊರ ತಂದಿದೆ. ಇದು ಒನ್ ಪ್ಲಸ್ ನಲ್ಲಿ, ನಾರ್ಡ್ ಸರಣಿಯ ಮೊದಲ ವಾಚು.

ಎಲ್ಲರಿಗೂ ತಿಳಿದಿರುವಂತೆ, ನಾರ್ಡ್ ಸರಣಿಯ ಫೋನ್ ಗಳು ಬಜೆಟ್ ದರದಲ್ಲಿರುತ್ತವೆ. ಹಾಗೆಯೇ ನಾರ್ಡ್ ವಾಚ್ ಸಹ ಬಜೆಟ್ ದರದಲ್ಲಿದೆ. ಇದರ ದರ 4,999 ರೂ.  ಸಾಮಾನ್ಯವಾಗಿ ಅಮೆಜಾನ್ ನಲ್ಲಿ ಇದಕ್ಕೆ ಯಾವುದಾದರೊಂದು ಕ್ರೆಡಿಟ್ ಕಾರ್ಡ್ ಮೂಲಕ 500 ರೂ. ರಿಯಾಯಿತಿ ಇರುತ್ತದೆ. ಹೀಗಾದಾಗ 4500 ರೂ.ಗೆ ವಾಚ್ ಲಭ್ಯವಾಗುತ್ತದೆ. ಈ ಸ್ಮಾರ್ಟ್ ವಾಚ್‌ ನ ಗುಣಲಕ್ಷಣಗಳು, ಕಾರ್ಯಾಚರಣೆ ಕುರಿತ ವಿವರಣೆ ಇಲ್ಲಿದೆ.

ವಿನ್ಯಾಸ: ಈ ವಾಚು ಬೆಲ್ಟ್ ಸೇರಿ 52.4 ಗ್ರಾಂ ತೂಕ ಹೊಂದಿದೆ.  ಬೆಲ್ಟ್ ರಹಿತವಾಗಿ 35.6 ಗ್ರಾಂ ತೂಕ ಹೊಂದಿದೆ. ವಾಚಿನ ಕೇಸ್ ಝಿಂಕ್ ಅಲಾಯ್ ಲೋಹದ್ದಾಗಿರುವುದು ವಿಶೇಷ. ಸಾಮಾನ್ಯವಾಗಿ ಬಜೆಟ್ ದರದ ವಾಚುಗಳು ಪ್ಲಾಸ್ಟಿಕ್ ನದ್ದಾಗಿರುತ್ತವೆ. ವಾಚ್‌ನ ಬೆಲ್ಟ್ (ಸ್ಟ್ರ್ಯಾಪ್) ಸಿಲಿಕಾನ್ ನದ್ದಾಗಿದ್ದು, ಸ್ಟೀಲ್ ಬಕಲ್ ಹೊಂದಿದೆ. ಸ್ಟ್ಯಾಪ್ ಹೈಪೋ ಅಲರ್ಜಿಕ್ ಆಗಿದ್ದು, ಕೈಯಲ್ಲಿ ಕಟ್ಟಿದಾಗ ತುರಿಕೆ ಉಂಟಾಗುವುದಿಲ್ಲ ಎಂದು ಕಂಪೆನಿ ತಿಳಿಸಿದೆ.

ಸ್ಟ್ರ್ಯಾಪ್ ಸಾಂಪ್ರದಾಯಿಕ ವಾಚ್ ಗಳ ಬೆಲ್ಟ್ ನಂತೆ ನಮ್ಮ ಕೈ ಅಳತೆಗೆ ಹೊಂದುವ ಕಿಂಡಿಗಳಿಗೆ ಬಕಲ್ ಹಾಕುವಂಥ ವಿನ್ಯಾಸ ಹೊಂದಿದೆ. ವಾಚನ್ನು ಕೈಯಲ್ಲಿ ಕಟ್ಟಿಕೊಂಡಾಗ ಇತ್ತ ತೀರಾ ಹಗುರವೂ ಅಲ್ಲದ, ತೂಕವೂ ಅಲ್ಲದ ಅನುಭವ ನೀಡುತ್ತದೆ. ಇದರ ಕೇಸ್ ಚೌಕಟ್ಟಾದ ಆಕಾರ ಹೊಂದಿದೆ. ಕೈಯಲ್ಲಿ ಕಟ್ಟಿಕೊಂಡಾಗ ಅಂದವಾಗಿ ಕಾಣುತ್ತದೆ. ಐಪಿ 68 ನೀರು ನಿರೋಧಕ ಹಾಗೂ ಧೂಳು ನಿರೋಧಕ ಸಾಮರ್ಥ್ಯ ಹೊಂದಿದ್ದು, ವಾಚಿಗೆ ನೀರು ಬಿದ್ದರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ.

Advertisement

ಈ ವಾಚನ್ನು ಬಳಸುವ ಮುನ್ನ ಸೆಟಿಂಗ್ ಮಾಡಲು, ಒನ್ ಪ್ಲಸ್ ಎನ್ ಹೆಲ್ತ್ ಆಪ್ ಅನ್ನು ಪ್ಲೇ ಸ್ಟೋರ್ ‍ಮೂಲಕ ಮೊಬೈಲ್ ನಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಆ ಆಪ್ ಅನ್ನು ತೆರೆದು ಬ್ಲೂಟೂತ್ ಆನ್ ಮಾಡಿ, ಈ ವಾಚ್‌ನ್ನು ಆಡ್ ಮಾಡಬೇಕು. ಹೀಗೆ ಮಾಡಿದಾಗ ವಾಚ್‌ನ ಹೊಸ ಅಪ್ ಡೇಟ್ ಗಳು ದೊರಕುತ್ತವೆ. ಮತ್ತು ವಾಚ್‌ನ ಡಯಲ್ ಮೇಲೆ ಬೇರೆ ಬೇರೆ ವಿನ್ಯಾಸದ ಫೇಸ್ ಗಳನ್ನು ಹೊಂದಿಸಿಕೊಳ್ಳಬಹುದು. ಅಲ್ಲದೇ ಬೇರೆ ಬೇರೆ ಸೆಟಿಂಗ್ ಗಳನ್ನು ಹೊಂದಿಸಿಕೊಳ್ಳಬಹುದು.

ಪರದೆ:  ಇದರ ಪರದೆ 1.78 ಇಂಚಿನದಾಗಿದ್ದು, ಅಮೋಲೆಡ್ ಡಿಸ್ ಪ್ಲೇ ಹೊಂದಿದೆ. ಇದೊಂದು ಉತ್ತಮ ಅಂಶ. 368 * 448 (326 ಪಿಪಿಐ) ರೆಸ್ಯೂಲೇಷನ್ ಇದೆ. 500 ನಿಟ್ಸ್ ಹೊಂದಿದ್ದು, 60 ಹರ್ಟ್ಜ್ ರಿಫ್ರೆಶ್ ರೇಟ್ ಹೊಂದಿದೆ.  ಶೇ. 70.7 ಸ್ಕ್ರೀನ್ ಬಾಡಿ ರೇಶಿಯೋ ಹೊಂದಿದೆ. ಡಿಸ್ ಪ್ಲೇ ಗುಣಮಟ್ಟ ನೋಡಿದಾಗ ಅಗ್ಗದ ದರದ ಅನ್ ಬ್ರಾಂಡೆಡ್ ವಾಚ್ ಗಳಿಗೂ ಇಂಥ ವಾಚ್ ಗಳಿಗೂ ಇರುವ ವ್ಯತ್ಯಾಸ ತಿಳಿಯುತ್ತದೆ. ಪರದೆಯ ಅಮೋಲೆಡ್ ಡಿಸ್ಪ್ಲೇ ತುಂಬಾ ರಿಚ್ ಆಗಿದೆ. ಬಿಸಿಲಿನಲ್ಲಿ ನೋಡಿದರೂ, ಪರದೆ ಸ್ಪಷ್ಟವಾಗಿ ಕಾಣುತ್ತದೆ.

ಕಾರ್ಯಾಚರಣೆ: ದೇಹದ ಚಲನೆ, ಚಟುವಟಿಕೆಗಳನ್ನು ಅಳೆಯುವ 3 ಆಕ್ಸಿಸ್ ಅಕ್ಸೆಲೋಮೀಟರ್, ಆಪ್ಟಿಕಲ್ ಹಾರ್ಟ್ ರೇಟ್ ಸೆನ್ಸರ್ ಹಾಗೂ ಬ್ಲಡ್ ಆಕ್ಸಿಜನ್ ಸೆನ್ಸರ್ ಗಳನ್ನು ಈ ವಾಚ್ ಹೊಂದಿದೆ. ಈ ಮೂಲಕ ನಮ್ಮ ನಡಿಗೆ, ವ್ಯಾಯಾಮ, ಯೋಗ ಇತ್ಯಾದಿ ಚಟುವಟಿಕೆಗಳ ಮಾಪನವನ್ನು ಈ ವಾಚ್ ಸಮರ್ಪಕವಾಗಿ ಮಾಡುತ್ತದೆ. ಉದಾಹರಣೆಗೆ ನಾವು ವಾಕಿಂಗ್ ಆಯ್ಕೆ ಒತ್ತಿದಾಗ ಎಷ್ಟು ಕಿ.ಮೀ. ನಡೆದೆವು, ಇದಕ್ಕೆ ತೆಗೆದುಕೊಂಡ ಸಮಯ, ಹೃದಯ ಬಡಿತದ ದರ, ಹಾಕಿದ ಹೆಜ್ಜೆಗಳ ಸಂಖ್ಯೆ, ನಾವು ಕಳೆದುಕೊಂಡ ಕ್ಯಾಲರಿಗಳು ಇತ್ಯಾದಿಗಳನ್ನು ತೋರಿಸುತ್ತದೆ.

ಇದೇ ರೀತಿ ಓಟ, ಬೆಟ್ಟ ಹತ್ತುವಿಕೆ, ಟ್ರೆಡ್ ಮಿಲ್, ಸೈಕ್ಲಿಂಗ್ ಇತ್ಯಾದಿ ಚಟುವಟಿಕೆಗಳ ಮಾಪನ ಆಯ್ಕೆ ಇದೆ. ಅಲ್ಲದೇ ಸುಮ್ಮನೆ ಒಂದೇ ಕಡೆ ಕೂತಾಗ ಎಚ್ಚರಿಸುವ ಸೆಡೆಂಟರಿ ರಿಮೈಂಡರ್, ಬ್ಲಡ್ ಆಕ್ಸಿಜನ್ ಮಾಪಕ, ನಿದ್ರೆ ಮಾಡಿದ ಅಂಕಿ ಅಂಶಗಳನ್ನು ತಿಳಿಸುವ ಮಾಪನಗಳಿವೆ. ಎನ್ ಹೆಲ್ತ್ ಆಪ್ ಅನ್ನು ವಾಚ್ ಜೊತೆ ಸಂಪರ್ಕಿಸಿದ್ದರೆ ಈ ಎಲ್ಲ ಮಾಹಿತಿಗಳೂ ಆಪ್ ನಲ್ಲಿ ಶೇಖರವಾಗುತ್ತವೆ.

ಇದರಲ್ಲಿ ಪ್ರತಿನಿತ್ಯ ಇಷ್ಟು ನಡೆದೆವು, ಇಷ್ಟು ಹೊತ್ತು ನಿದ್ರಿಸಿದೆವು, ಇಷ್ಟು ಹೊತ್ತು ವ್ಯಾಯಾಮ ಮಾಡಿದೆವು, ಇಷ್ಟು ಕ್ಯಾಲರಿ ಕಳೆದುಕೊಂಡೆವು ಎಂಬೆಲ್ಲ ಮಾಹಿತಿಗಳು ತಿಳಿಯುತ್ತವೆ.

ಉಸಿರಾಟ ನಿಯಂತ್ರಣ ಸಹಾಯಕ: ಇದರಲ್ಲಿರುವ ಒಂದು ಫೀಚರ್ ಗಮನ ಸೆಳೆಯಿತು. ಸರಳ ರೀತಿಯ ಉಸಿರಾಟದ ಪ್ರಾಣಾಯಾಮ ಮಾಡಬೇಕೆಂದುಕೊಂಡಿರುವವರಿಗೆ ಇದು ಉತ್ತಮ ಆಯ್ಕೆ. ಸ್ಮಾರ್ಟ್ ವಾಚ್ ನ ಅತ್ಯುತ್ತಮ ಫೀಚರ್ ಇದು ಎಂದೇ ಹೇಳಬಹುದು.

ಬ್ರೀದ್ ಎಂಬ ಆಯ್ಕೆ ಮಾಡಿಕೊಂಡಾಗ, ನ್ಯಾಚುರಲ್ ಬ್ರೀದಿಂಗ್, ಬಂಬ್ಲಬೀ ಬ್ರೀದಿಂಗ್, ರಿಲ್ಯಾಕ್ಸೇಷನ್ ಬ್ರೀದಿಂಗ್  ಎಂಬ ಮೂರು ಆಯ್ಕೆಗಳಿವೆ. ದಿನದಲ್ಲಿ ಯಾವುದಾದರೂ ಬಿಡುವಿನ ಸಮಯದಲ್ಲಿ ಈ ಮೂರು ಆಯ್ಕೆಗಳನ್ನು ನೋಡಿಕೊಂಡು ನಾವು ಉಸಿರಾಟ ನಡೆಸಿದರೆ, ಪ್ರಾಣಾಯಾಮ ಮಾಡಿದಂತೆಯೇ.  ನ್ಯಾಚುರಲ್ ಬ್ರೀದಿಂಗ್ ಆಯ್ಕೆಯಲ್ಲಿ ಉಸಿರು ಒಳತೆಗೆದುಕೊಳ್ಳುವುದು, ಹೊರ ಬಿಡುವುದರ ಸಮಾನ ಸಮಯವನ್ನು ಹೊಂದಾಣಿಕೆ ಮಾಡಲಾಗಿದೆ. ಅಲ್ಲಿ ಇನ್ಹೇಲ್ ಅಂತ ಬಂದು ವೈಬ್ರೇಟ್ ಆಗುವಷ್ಟು ಸಮಯ ಉಸಿರು ತೆಗೆದುಕೊಳ್ಳುವುದು, ಎಕ್ಸೇಲ್ ಎಂಬುದು ಬಂದಾಗ ಉಸಿರು ಹೊರ ಬಿಡುವುದು .. ಇದೊಂದು ಸರಳ ಪ್ರಾಣಾಯಾಮ.

ಬಳಿಕ ಭ್ರಮರಿ ಪ್ರಾಣಾಯಾಮ. ಐದು ಸೆಕೆಂಡ್ ‍ಉಸಿರು ಒಳತೆಗೆದುಕೊಂಡು, 10 ಸೆಕೆಂಡ್ ಕಾಲ ಮ್ ಕಾರ ಶಬ್ದ ಮಾಡುತ್ತಾ ಮೂಗಿನ ಮೂಲಕ ಉಸಿರು ಬಿಡುವುದು, ನಂತರ ರಿಲ್ಯಾಕ್ಸೇಷನ್ ಬ್ರೀದಿಂಗ್. ಇದನ್ನು 4-7-8 ಉಸಿರಾಟ ಅಂತಲೂ ಕರೆಯಲಾಗುತ್ತದೆ.  ನಾಲ್ಕು ಸೆಕೆಂಡ್ ಉಸಿರು ತೆಗೆದುಕೊಂಡು ಅದನ್ನು 7 ಸೆಕೆಂಡ್ ಹಿಡಿದಿಟ್ಟು, 8 ಸೆಕೆಂಡ್ ಕಾಲ ಹೊರ ಹಾಕುವುದು,ಇದನ್ನು ನಾಲ್ಕೈದು ಬಾರಿ ಪುನರಾವರ್ತಿಸುವುದು. ಈ ಪ್ರಾಣಾಯಾಮಗಳನ್ನು ವಾಚ್ ನೋಡುತ್ತಾ ಮಾಡಿದಾಗ ತುಂಬಾ ಸುಲಭವಾಗಿ ಮಾಡಬಹುದು. ವೈಬ್ರೇಷನ್ ಮತ್ತು ಗ್ರಾಫಿಕ್ ಮೂಲಕ ತೋರಿಸುವುದರಿಂದ ನಿಖರವಾಗಿ ಮಾಡಲು ಸಾಧ್ಯವಾಗುತ್ತದೆ. ಸರಳವೂ ಆಗುತ್ತದೆ.

ಇನ್ನಿತರ ಸವಲತ್ತುಗಳು:  ಫೋನಿನ ಮ್ಯೂಸಿಕ್ ಅನ್ನು ವಾಚ್ ಮೂಲಕ ನಿಯಂತ್ರಿಸಬಹುದು. ಕ್ಯಾಲ್ಕುಲೇಟರ್, ಹವಾಗುಣ ಮಾಹಿತಿ ಮತ್ತಿತರ ಸವಲತ್ತುಗಳಿವೆ.

ಒಂದೆರಡು ಸಾವಿರಕ್ಕೆ ಅಗ್ಗದ ದರದ, ನಿರ್ದಿಷ್ಟ ಮಾನದಂಡಗಳಿಲ್ಲದ, ಕಳಪೆ ಇಂಟರ್ ಫೇಸ್ ಉಳ್ಳ, ಅಗ್ಗದ ದರದ ಸ್ಮಾರ್ಟ್ ವಾಚ್ ಗಳನ್ನು ಕೊಳ್ಳುವುದಕ್ಕಿಂತ ಒಂದೆರಡು ಸಾವಿರ ಹೆಚ್ಚಿನ ಮೊತ್ತ ಸೇರಿಸಿ, ಇಂಥ ಸರ್ಟಿಫೈಡ್ ವಾಚ್ ಗಳನ್ನು ಕೊಳ್ಳುವುದು ಜಾಣತನದ ಆಯ್ಕೆ.

-ಕೆ.ಎಸ್. ಬನಶಂಕರ ಆರಾಧ್ಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next