Advertisement

ಒನ್‍ಪ್ಲಸ್‍ 10 ಟಿ: ಏನಿದರ ವಿಶೇಷ? ಹೇಗಿದೆ ಈ ಫೋನು?

10:48 AM Dec 01, 2022 | Team Udayavani |

ಒನ್‍ ಪ್ಲಸ್‍ ಕಂಪೆನಿಯ ಫೋನ್‍ಗಳು ತಮ್ಮ ಗುಣಮಟ್ಟದಿಂದ ಹೆಸರು ಗಳಿಸಿವೆ. ಹೆಚ್ಚಿನ ದರ ವಿಧಿಸುವ ಪ್ರತಿಸ್ಪರ್ಧಿ ಕಂಪೆನಿಗಳ ಫೋನುಗಳಲ್ಲಿರುವ ಸ್ಪೆಸಿಫಿಕೇಷನ್ ಗಳನ್ನು ಶೇ. 30ರಿಂದ 40ರಷ್ಟು ಕಡಿಮೆ ದರಕ್ಕೆ ಒನ್‍ ಪ್ಲಸ್‍ ನೀಡುತ್ತದೆ.

Advertisement

ಹಾಗಾಗಿಯೇ ತಾವು ನೀಡುವ ಹಣಕ್ಕೆ ತಕ್ಕ ಮೌಲ್ಯ ದೊರಕಬೇಕೆಂದು ಬಯಸುವ ಗ್ರಾಹಕರು ಒನ್‍ ಪ್ಲಸ್‍ ನತ್ತ ನೋಡುತ್ತಾರೆ. ಒನ್‍ ಪ್ಲಸ್‍ ಪ್ರತಿ ವರ್ಷದ ಆರಂಭದಲ್ಲಿ ತನ್ನ ಪ್ರೊ ಸರಣಿಯ ಫ್ಲಾಗ್ ಶಿಪ್‍ ಫೋನ್‍ಗಳನ್ನು ಹೊರತರುತ್ತದೆ. ಉದಾಹರಣೆಗೆ ಒನ್‍ಪ್ಲಸ್‍ 9 ಪ್ರೊ, 10 ಪ್ರೊ ಇತ್ಯಾದಿ.

ಅದೇ ಸಂದರ್ಭದಲ್ಲಿ ಸಣ್ಣಪುಟ್ಟ ಬದಲಾವಣೆಯೊಂದಿಗೆ ಪ್ರೊ ಅಲ್ಲದ (ಪರದೆಯ ಅಳತೆ ಸ್ವಲ್ಪ ಚಿಕ್ಕದಾದ, ಕ್ಯಾಮರಾ ಬದಲಾವಣೆ ಮಾಡಿದ) ಒನ್‍ಪ್ಲಸ್‍ 9, ಒನ್‍ಪ್ಲಸ್‍ 10 ಫೋನುಗಳನ್ನೂ ಒಟ್ಟಿಗೇ ಬಿಡುಗಡೆ ಮಾಡುತ್ತದೆ. ಪ್ರೊ ಗಿಂತ ಇವುಗಳ ದರ ಸ್ವಲ್ಪ ಕಡಿಮೆ ಇರುತ್ತದೆ.

ಇಷ್ಟಲ್ಲದೇ ವರ್ಷದ ಕೊನೆಯ ಕ್ವಾರ್ಟರ್ ನಲ್ಲಿ ಇದೇ ಸರಣಿಯ ಟಿ ಹೆಸರು ಹೊತ್ತ ಫೋನ್‍ಗಳನ್ನು ಹೊರ ತರುತ್ತದೆ. ಒನ್‍ಪ್ಲಸ್‍ 8ಟಿ, 9ಟಿ ಇತ್ಯಾದಿ. ಈ ವರ್ಷದ 10 ಸರಣಿಯಲ್ಲಿ ಒನ್‍ಪ್ಲಸ್‍ 10 ಟಿ ಫೋನ್‍ ಹೊರತರಲಾಗಿದೆ. ಈ ಫೋನಿನ ವಿಶೇಷಗಳು ಇಲ್ಲಿವೆ.

ಟಿ ಸರಣಿಯ ಫೋನ್‍ಗಳು ಮೂಲ ಫೋನ್‍ಗಳು ಹೊಂದಿರುವ ಪ್ರೊಸೆಸರ್‍ ಗಳನ್ನೇ ಹೊಂದಿರುತ್ತವೆ. ಕ್ಯಾಮರಾ ವಿಭಾಗದಲ್ಲಿ ಕೊಂಚ ಬದಲಾವಣೆ ಹೊರತುಪಡಿಸಿದರೆ ಪ್ರೊ ಸರಣಿಯ ಫೋನ್‍ಗಳಷ್ಟೇ ಗುಣಗಳನ್ನು ಹೊಂದಿರುತ್ತವೆ. ದರ ಅವುಗಳಿಗಿಂತ ಕಡಿಮೆ ಇರುತ್ತದೆ. ಪ್ರಸ್ತುತ ಹೊರತಂದಿರುವ 10 ಟಿ ಆರಂಭಿಕ ದರ 49,999 ರೂ. ಇದ್ದರೆ, ಇದರ ಹಿರಿಯಣ್ಣ 10 ಪ್ರೊ ಆರಂಭಿಕ ದರ 61,999 ರೂ. ಇದೆ.

Advertisement

ಒನ್‍ಪ್ಲಸ್‍ 10 ಟಿ ಎರಡು ಆವೃತ್ತಿಗಳನ್ನು ಹೊಂದಿದೆ. 8 ಜಿಬಿ ರ್ಯಾಮ್‍, 128 ಜಿಬಿ ಆಂತರಿಕ ಸಂಗ್ರಹ (49,999 ರೂ.) ಹಾಗೂ 16 ಜಿಬಿ ರ್ಯಾಮ್‍, 256 ಜಿಬಿ ಆಂತರಿಕ ಸಂಗ್ರಹ (55,999 ರೂ.)

ವಿನ್ಯಾಸ: 204 ಗ್ರಾಂ ತೂಕ ಹೊಂದಿದೆ. 8.8 ಮಿ.ಮೀ. ದಪ್ಪ ಹೊಂದಿದೆ. 163 ಮಿ.ಮೀ. ಉದ್ದ ಹಾಗೂ, 75.4 ಮಿ.ಮೀ ಅಗಲವಿದೆ. ಫೋನು ಸ್ಲಿಮ್‍ ಆಗಿದೆ. ಹಿಂಬದಿ ರಕ್ಷಾ ಕವಚ ಗಾಜಿನದ್ದಾಗಿದೆ. ಇದಕ್ಕೆ ಕಾರ್ನಿಂಗ್‍ ಗೊರಿಲ್ಲಾ ಗಾಜಿನ ಪದರ ಇದೆ. ಎಡಭಾಗದಲ್ಲಿ ಧ್ವನಿ ಏರಿಸುವ ಇಳಿಸುವ ಬಟನ್‍ ಇದೆ.  ಬಲಬದಿಯಲ್ಲಿ ಆನ್‍ ಅಂಡ್‍ ಆಫ್‍ ಬಟನ್ ‍ಇದೆ. ಸಿಮ್‍ ಟ್ರೇ, ಸ್ಪೀಕರ್‍ ಗ್ರಿಲ್‍, ಚಾರ್ಜಿಂಗ್‍ ಪೋರ್ಟ್‍ ತಳಭಾಗದಲ್ಲಿವೆ. ಒನ್‍ಪ್ಲಸ್‍ ಫ್ಲಾಗ್‍ಶಿಪ್‍ ಫೋನ್‍ಗಳಲ್ಲಿರುವ ಸೈಲೆಂಟ್‍, ವೈಬ್ರೇಷನ್‍ ಮೋಡ್‍ ಗೆ ಬದಲಿಸುವ ಸ್ಲೈಡರ್ ಬಟನ್‍ ಇದರಲ್ಲಿಲ್ಲ. ಹಿಂಬದಿ ಎಡಮೂಲೆಯಲ್ಲಿ ಮೂರು ಕ್ಯಾಮರಾ ಲೆನ್ಸ್ ಹಾಗೂ ಒಂದು ಫ್ಲಾಶ್‍ ಇರುವ ಕ್ಯಾಮರಾ ಅಳವಡಿಸಲಾಗಿದೆ. ಫೋನಿನ ವಿನ್ಯಾಸ ಆಕರ್ಷಕವಾಗಿದೆ.

ಪರದೆ: ಇದು 6.7 ಇಂಚಿನ, 120 ಹರ್ಟ್ಜ್ ಅಮೋಲೆಡ್‍ ಡಿಸ್‍ಪ್ಲೇ ಹೊಂದಿದೆ. 2412*1080 ಪಿಕ್ಸಲ್‍ಗಳಿದ್ದು, 394 ಪಿಪಿಐ ಇದೆ. ಪರದೆಗೆ ಎಂದಿನಂತೆ ಕಾರ್ನಿಂಗ್‍ ಗೊರಿಲ್ಲಾ ಗಾಜಿನ ರಕ್ಷಣೆ ಇದೆ. ಎಚ್‍ಡಿಆರ್‍ 10 ಪ್ಲಸ್‍ ಪರದೆ ಒಳಗೊಂಡಿದೆ. ಪರದೆಯ ಗುಣಮಟ್ಟ ಅತ್ಯುನ್ನತ ಫೋನ್‍ಗಳ ಗುಣಮಟ್ಟಕ್ಕೆ ಸಮನಾಗಿದೆ. ಆಟೋ ಬ್ರೈಟ್‍ನೆಸ್‍ ಆಯ್ಕೆ ಮಾಡಿಕೊಂಡಾಗ ಬಿರು ಬಿಸಿಲಿನಲ್ಲಿ ನಿಂತರೂ ಪರದೆ ಚೆನ್ನಾಗಿ ಕಾಣುತ್ತದೆ. ಪರದೆಯ ರಿಫ್ರೆಶ್‍ರೇಟ್‍ ಅನ್ನು 120 ಹರ್ಟ್ಜ್ ಅಥವಾ 60 ಹರ್ಟ್ಜ್ ಗೆ ಹೊಂದಾಣಿಕೆ ಮಾಡಿಕೊಳ್ಳಬಹುದು. 120 ಹ. ನಲ್ಲಿ ಪರದೆ ಸರಾಗವಾಗಿ ಚಲಿಸುತ್ತದೆ. 60 ಹ. ನಲ್ಲಿ ಸ್ವಲ್ಪ ತಡೆದಂತೆ ಇರುತ್ತದೆ. ಆದರೆ ಸಾಮಾನ್ಯ ಬಳಕೆದಾರರಿಗೆ 60 ಹ. ಆಯ್ಕೆ ಸಾಕು. ಏಕೆಂದರೆ ಇದರಿಂದ ಬ್ಯಾಟರಿ ಉಳಿತಾಯ ಆಗುತ್ತದೆ.

ಪ್ರೊಸೆಸರ್ ಮತ್ತು ಕಾರ್ಯಾಚರಣೆ:  ಇದರಲ್ಲಿ ಒನ್‍ಪ್ಲಸ್‍ 10 ಪ್ರೊ ದಲ್ಲಿದ್ದ ಸ್ನಾಪ್‍ಡ್ರಾಗನ್‍ 8ಪ್ಲಸ್‍ ಜೆನ್‍ 1 ಪ್ರೊಸೆಸರೇ ಇದೆ.  ಸದ್ಯ ಸ್ನಾಪ್‍ಡ್ರಾಗನ್‍ ಚಿಪ್‍ಸೆಟ್‍ಗಳ ಪೈಕಿ ಇದು ಅಗ್ರಗಣ್ಯ. ಅತ್ಯುನ್ನತ ದರ್ಜೆಯ ಆಂಡ್ರಾಯ್ಡ್ ಫೋನ್‍ಗಳಲ್ಲಿ ಇದೇ ಪ್ರೊಸೆಸರ್‍ ಹಾಕಲಾಗುತ್ತದೆ. ಆಕ್ಸಿಜನ್‍ ಓಎಸ್‍ ಮಿಳಿತವಾದ ಆಂಡ್ರಾಯ್ಡ್ 12 ಕಾರ್ಯಾಚರಣೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ಎಲ್ಲ ಅಂಶಗಳಿಂದ ಫೋನು ತುಂಬಾ ಸರಾಗವಾಗಿ, ವೇಗವಾಗಿ ಸ್ವಲ್ಪವೂ ಅಡೆತಡೆಯಿಲ್ಲದೇ ಕೆಲಸ ನಿರ್ವಹಿಸುತ್ತದೆ. ಗೇಮ್‍ಗಳಾಗಲೀ ಯಾ ನಿತ್ಯದ ಬಳಕೆಗಾಗಲೀ ಫೋನು ಸಲೀಸಾಗಿ ಕಾರ್ಯಾಚರಿಸುತ್ತದೆ.

ಹೈಪರ್‍ ಬೂಸ್ಟ್ ಗೇಮಿಂಗ್ ‍ಇಂಜಿನ್‍ ಅಳವಡಿಸಿರುವುದರಿಂದ ಹೆವಿ ಗೇಮ್‍ಗಳನ್ನೂ ಸರಾಗವಾಗಿ ಆಡಬಹುದಾಗಿದೆ. ಪ್ರೊಸೆಸರ್‍ ಬಿಸಿಯಾಗದಂತೆ 3ಡಿ ಕೂಲಿಂಗ್‍ ಸಿಸ್ಟಂ ಅಳವಡಿಸಲಾಗಿದೆ. ಹೀಗಾಗಿ ಫೋನು ಹೆಚ್ಚು ಬಳಕೆಯಲ್ಲೂ ಬಿಸಿಯಾಗುವುದಿಲ್ಲ.

ಕ್ಯಾಮರಾ: ಇದು ಮೂರು ಲೆನ್ಸ್ ಗಳ ಹಿಂಬದಿ ಕ್ಯಾಮರಾ ಹೊಂದಿದೆ.  ಮುಖ್ಯ ಕ್ಯಾಮರಾ ಸೋನಿ ಐಎಂಎಕ್ಸ್ 766 ಸೆನ್ಸರ್‍ ಹೊಂದಿದ್ದು 50 ಮೆಗಾಪಿಕ್ಸಲ್ಸ್ ಹೊಂದಿದೆ.  8 ಮೆಗಾ ಪಿಕ್ಸಲ್ಸ್ ಅಲ್ಟ್ರಾ ವೈಡ್‍ ಲೆನ್ಸ್, 2 ಮೆಗಾಪಿಕ್ಸಲ್ಸ್ ಮ್ಯಾಕ್ರೋ ಲೆನ್ಸ್ ಹೊಂದಿದೆ. ಕ್ಯಾಮರಾದಲ್ಲಿ ರಾತ್ರಿ ದೃಶ್ಯಗಳನ್ನು ಸೆರೆಹಿಡಿಯಲು ನೈಟ್ ಸ್ಕೇಪ್‍, ಅಲ್ಟ್ರಾ ಎಚ್‍ಡಿಎಆರ್‍. ಪ್ರೊ. ಮೋಡ್‍, ಮುಂತಾದ ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ. ಸೆಲ್ಫಿ ಕ್ಯಾಮರಾ 16 ಮೆ. ಪಿ. ಹೊಂದಿದೆ.

ಎಐ ಸೀನ್ ಆಯ್ಕೆ ಆನ್‍ ಮಾಡಿಕೊಂಡರೆ ಆಯಾ ಸಂದರ್ಭಕ್ಕೆ ಅಗತ್ಯವಾದ ಹೊಂದಾಣಿಕೆಗಳನ್ನು ಮಾಡಿಕೊಂಡು ಉತ್ತಮ ಫೋಟೋ ನೀಡುತ್ತದೆ. ಒಟ್ಟಾರೆಯಾಗಿ ಕ್ಯಾಮರಾ ಗುಣಮಟ್ಟ ಚೆನ್ನಾಗಿದೆ. ಇದರ ಕ್ಯಾಮರಾವನ್ನು 10 ಪ್ರೊ ಕ್ಯಾಮರಾ ಗುಣಮಟ್ಟಕ್ಕೆ ಹೋಲಿಸಲಾಗದು. 10 ಪ್ರೊ ಫ್ಲಾಗ್ ಶಿಪ್‍ ಫೋನಾದ್ದರಿಂದ ಅದರ ದರವೂ ಹೆಚ್ಚು, ಕ್ಯಾಮರಾ ಗುಣಮಟ್ಟವೂ ಹಾಗೇ ಇದೆ. 10 ಟಿ ದರಕ್ಕೆ ಹೋಲಿಕೆ ಮಾಡಿದಾಗ ಕ್ಯಾಮರಾ ಆ ರೇಂಜಿಗೆ ಚೆನ್ನಾಗಿದೆ.

ಬ್ಯಾಟರಿ: ಈ ಫೋನಿನ 4800 ಎಂಎಎಚ್‍ ಬ್ಯಾಟರಿ ಇದೆ. ಇದಕ್ಕೆ 150 ವ್ಯಾಟ್ಸ್ ಸೂಪರ್‍ ವೂಕ್‍ ಚಾರ್ಜರ್ ಇದೆ. ಇದರ ಚಾರ್ಜಿಂಗ್‍ ವೇಗ ಅದ್ಭುತವಾಗಿದೆ! ಬ್ಯಾಟರಿ ಕಡಿಮೆಯಾಯಿತೆಂದು ಚಿಂತಿಸುವ ಅಗತ್ಯವೇ ಇಲ್ಲ. ಹೊರಗೆ ಹೊರಡುವ ಮುನ್ನ 10 ನಿಮಿಷ ಚಾರ್ಜ್ ಗೆ ಇಟ್ಟರೂ ಸಾಕು ಶೆ. 50ರಷ್ಟು ಚಾರ್ಜ್ ಆಗುತ್ತದೆ. ಐದೇ ನಿಮಿಷಕ್ಕೆ ಶೂನ್ಯದಿಂದ ಶೇ. 30ರಷ್ಟು ಚಾರ್ಜ್, 10 ನಿಮಿಷಕ್ಕೆ ಶೇ. 50ರಷ್ಟು, 20 ರಿಂದ 22 ನಿಮಿಷಕ್ಕೆ ಶೇ. 100ರಷ್ಟು ಚಾರ್ಜ್ ಆಗುತ್ತದೆ! ಅತ್ಯಂತ ವೇಗವಾಗಿ ಚಾರ್ಜ್ ಆಗುವ ಅಗ್ರಶ್ರೇಣಿಯ ಮೊಬೈಲ್‍ಗಳ ಸಾಲಿನಲ್ಲಿ ಇದು ನಿಲ್ಲುತ್ತದೆ. 10 ಪ್ರೊನಲ್ಲೇ 80 ವ್ಯಾಟ್ಸ್ ಚಾರ್ಜರ್ ಇದ್ದು ಅದರಲ್ಲಿ ಪೂರ್ಣ ಚಾರ್ಜ್ ಗೆ 35 ನಿಮಿಷ ತಗುಲುತ್ತದೆ. ಈ ಫೋನಿನಲ್ಲಿ ಅದಕ್ಕಿಂತ ವೇಗದ ಚಾರ್ಜರ್‍ ನೀಡಿರುವುದು ವಿಶೇಷ.

ಕರೆ ಗುಣಮಟ್ಟ: ಈ ಮೊಬೈಲ್‍ನ ಇನ್ನೊಂದು ಪ್ಲಸ್‍ ಪಾಯಿಂಟ್‍ ಎಂದರೆ ಉತ್ತಮ ಗುಣಮಟ್ಟದ ಸಿಗ್ನಲ್‍ ಹಿಡಿದಿಡುವಿಕೆ. ಇದರಲ್ಲಿ 15 ಆಂಟೆನಾಗಳಿದ್ದು, ದುರ್ಬಲ ಸಿಗ್ನಲ್‍ಗಳನ್ನೂ ಕ್ಯಾಚ್‍ ಮಾಡುತ್ತದೆ. ಅಂದರೆ ಒಂದು ಏರಿಯಾದಲ್ಲಿ ಟವರ್‍ ಸಿಗ್ನಲ್‍ ಹೆಚ್ಚಿರದಿದ್ದಾಗಲೂ ಇದು ಉಳಿದ ಫೋನ್‍ಗಳಿಗಿಂತ ಸಮರ್ಥವಾಗಿ ಸಿಗ್ನಲ್‍ ದೊರಕುತ್ತದೆ. ಹಾಗಾಗಿ ಕರೆಯ ಗುಣಮಟ್ಟವೂ ಚೆನ್ನಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಫ್ಲಾಗ್ ಶಿಪ್‍ ಫೋನ್‍ ಗೆ ಅಷ್ಟೊಂದು ಹಣ ನೀಡಲಾಗುವುದಿಲ್ಲ. ಆದರೆ ಒಂದು ಹಂತಕ್ಕೆ ಫ್ಲಾಗ್ ಶಿಪ್‍ ನಷ್ಟೇ ಗುಣಮಟ್ಟವಿರುವ ದರ 50 ಸಾವಿರ ರೂ. ಆಸುಪಾಸಿನಲ್ಲಿರಬೇಕು ಎಂದು ಬಯಸುವವರಿಗೆ ಒನ್‍ಪ್ಲಸ್‍ 10 ಟಿ ಉತ್ತಮ ಆಯ್ಕೆ.

Advertisement

Udayavani is now on Telegram. Click here to join our channel and stay updated with the latest news.

Next