ಸಾಮಾನ್ಯವಾಗಿ ಹಣವಂತರು, ಸೆಲೆಬ್ರಿಟಿಗಳು ಹೆಚ್ಚು ದರದ ಫೋನ್ ಹೊಂದಲು ಬಯಸುತ್ತಾರೆ. ಅವರ ಆಯ್ಕೆ ದುಬಾರಿ ಬ್ರಾಂಡ್‍ಗಳ ಅತ್ಯುನ್ನತ ದರದ ಫೊನ್ ಆಗಿರುತ್ತದೆ. ಎಷ್ಟೋ ಶ್ರೀಮಂತರು ಮೊಬೈಲ್‍ನಲ್ಲಿ ವಾಟ್ಸಪ್ ಮತ್ತು ಕಾಲ್ ಮಾಡುವುದನ್ನು ಬಿಟ್ಟು ಬೇರೇನನನ್ನೂ ಬಳಸದಿದ್ದರೂ ಲಕ್ಷಾಂತರ ರೂ.ಗಳ ಮೊಬೈಲ್ ಫೋನ್ ಅನ್ನೇ ಬಳಸುತ್ತಾರೆ. ಅನೇಕ ಆಪ್ಷನ್ ಗಳೇ ಗೊತ್ತಿರದಿದ್ದರೂ, ನಿಮಗೇಕೆ ಇಷ್ಟು ದುಬಾರಿ ದರದ ಫೋನು? ಎಂದು ಕೇಳಿದರೆ, ಇದು ಸ್ಟೇಟಸ್‍ಗಾಗಿ, ಈ ಫೋನ್ ಕೈಯಲ್ಲಿದ್ದರೆ ನನ್ನ ಕ್ಲೈಂಟುಗಳು ನನ್ನನ್ನು ನೋಡೋ ರೀತಿಯೇ ಬೇರೆ! ಎಂದು ಹೇಳುತ್ತಾರೆ!
ಹಾಗೆಯೇ ಗ್ಯಾಜೆಟ್ ಗಳ ಬಗ್ಗೆ ಕ್ರೇಜ್ ಇರುವವರು, ಗ್ಯಾಜೆಟ್ ಗಳ ಬಗ್ಗೆ ಒಂದಷ್ಟು ಸಾಮಾನ್ಯ ಜ್ಞಾನ ಉಳ್ಳವರು, ಹೆಚ್ಚಿನ ಟೆಕ್ಕಿಗಳು ಅತ್ಯುನ್ನತ ಗುಣವೈಶಿಷ್ಟ್ಯಗಳುಳ್ಳ ಮೊಬೈಲ್ ಫೋನ್ ಗಳನ್ನು ಕೊಳ್ಳಲು ಬಯಸುತ್ತಾರೆ. ತಮ್ಮ ಬಜೆಟ್‍ಗೆ ತಕ್ಕಂತೆ, ತಮ್ಮ ಅವಶ್ಯಕತೆಗೆ ತಕ್ಕಂತೆ, ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಮೊಬೈಲ್ ಯಾವುದು? ಅದರಲ್ಲಿ ಯಾವ ಪ್ರೊಸೆಸರ್ ಇದೆ? ಕ್ಯಾಮರಾ ಯಾವುದಿದೆ? ನೀಡುವ ಹಣಕ್ಕೆ ತಕ್ಕದಾಗಿದೆಯೇ? ಎಂದು ಪರಿಶೀಲಿಸಿ ಕೊಳ್ಳುತ್ತಾರೆ. ಅಂಥವರು ಪರಿಶೀಲಿಸಬಹುದಾದ ಇತ್ತೀಚಿಗೆ ತಾನೇ ಬಿಡುಗಡೆಯಾದ ಫ್ಲಾಗ್‍ಶಿಪ್ ಫೋನ್, ಒನ್‍ಪ್ಲಸ್ 10 ಪ್ರೊ 5ಜಿ. ಇದರ ದರ ಅಮೆಜಾನ್. ಇನ್ ನಲ್ಲಿ 8 ಜಿಬಿ ರ್ಯಾಮ್, 128 ಜಿಬಿ ಸಂಗ್ರಹ ಮಾದರಿಗೆ 66,999 ರೂ. ಹಾಗೂ 12 ಜಿಬಿ ರ್ಯಾಮ್ ಹಾಗೂ 256 ಸಂಗ್ರಹ ಮಾದರಿಗೆ 71,999 ರೂ. ಇದೆ. ಸಾಮಾನ್ಯವಾಗಿ ಯಾವುದಾದರೂ ಕ್ರೆಡಿಟ್ ಕಾರ್ಡ್ ಗೆ 5000 ರೂ. ತಕ್ಷಣದ ರಿಯಾಯಿತಿ ಇದೆ. ಪ್ರಸ್ತುತ ಐಸಿಐಸಿಐ ಕಾರ್ಡ್ ಗೆ 5000 ರೂ. ಡಿಸ್ಕೌಂಟ್ ಇದೆ.
ವಿನ್ಯಾಸ: ಪರದೆಯ ಅಂಚಿನಲ್ಲಿ ಬಾಗಿದ (ಕರ್ವ್ ಗ್ಲಾಸ್) ವಿನ್ಯಾಸ ಇರುವ ಫೋನ್‍ಗಳನ್ನು ಫ್ಲಾಗ್‍ಶಿಪ್ ಫೋನ್‍ಗಳಲ್ಲಿ ಗ್ರಾಹಕರು ಬಯಸುತ್ತಾರೆ. ಕೈಗೆತ್ತಿಕೊಂಡಂತೆ ಫೋನಿನ ಡಿಸೈನ್ ಆಕರ್ಷಿಸುತ್ತದೆ. ಹಿಂಬದಿಯ ಕವಚವನ್ನೂ ಅಂಚಿನಲ್ಲಿ ಕರ್ವ್ ಮಾಡಲಾಗಿದೆ. ಕೈಯಲ್ಲಿ ಫೋನ್ ಹಿಡಿದಾಗ ಅಂಚು ಅಂಗೈಗೆ ಒರಟೆನಿಸದಂತೆ ಮೃದುವಾಗಿ ಸ್ಪರ್ಶವಾಗುವಂತೆ ವಿನ್ಯಾಸ ಮಾಡಲಾಗಿದೆ. ಹಿಂಬದಿಯ ಎಡಮೂಲೆಯಲ್ಲಿ ಬಹಳ ವಿಶಿಷ್ಟವಾಗಿ ಕ್ಯಾಮರಾ ಲೆನ್ಸ್ ಗಳ ಭಾಗವನ್ನು ವಿನ್ಯಾಸ ಮಾಡಲಾಗಿದೆ. ಮೂರು ಲೆನ್ಸ್ ಗಳು ಒಂದು ಫ್ಲಾಶ್ ಅನ್ನು ಇರಿಸಲಾಗಿದೆ. ಹಿಂದಿನ ಯಾವುದೇ ಫೋನ್ ನಲ್ಲಿ ಈ ವಿನ್ಯಾಸ ಇರಲಿಲ್ಲ. ನೂತನ ಶೈಲಿಯಲ್ಲಿ ಹಿಂಬದಿಯ ಕ್ಯಾಮರಾ ಪ್ರದೇಶವನ್ನು ವಿನ್ಯಾಸಗೊಳಿಸಲಾಗಿದೆ. ಹಿಂಬದಿಯ ನಟ್ಟನಡುವಿನಲ್ಲಿ ಒನ್ ಪ್ಲಸ್ ಲೋಗೋ ಇದೆ.
ಫೋನಿನ ಬಲ ಬದಿಯಲ್ಲಿ ಒನ್‍ಪ್ಲಸ್ ಗೆ ಮಾತ್ರ ವಿಶಿಷ್ಟವಾದ ರಿಂಗ್, ವೈಬ್ರೇಟರ್, ಸೈಲೆಂಟ್ ಮೋಡ್ ಗೆ ನಿಲ್ಲಿಸುವ ಬಟನ್ ಇದೆ. ಅದರ ಕೆಳಗೆ ಆನ್ ಅಂಡ್ ಆಫ್ ಬಟನ್ ಇದೆ. ಎಡಭಾಗದಲ್ಲಿ ಕೇವಲ ಧ್ವನಿ ಹೆಚ್ಚಿಸುವ, ಕಡಿಮೆ ಮಾಡುವ ಬಟನ್ ಇದೆ. ತಳಭಾಗದಲ್ಲಿ ಸಿಮ್ ಟ್ರೇ, ಸಿ ಟೈಪ್ ಚಾರ್ಜರ್ ಪೋರ್ಟ್, ಸ್ಪೀಕರ್ ಇದೆ. ಫೋನು 200 ಗ್ರಾಂ ತೂಕ ಇದೆ. ರಕ್ಷಣಾ ಕವಚ (ಬ್ಯಾಕ್ ಕವರ್) ಹಾಕಿಕೊಳ್ಳದೇ ಬಳಸಿದರೆ ಸ್ಲಿಮ್ ಆಗಿರುತ್ತದೆ.
ಪರದೆ: ಇದರಲ್ಲಿ, ಅಮೋಲೆಡ್ ಪರದೆಗೆ LTPO (ಲೋ ಟೆಂಪರೇಚರ್ ಪಾಲಿಕ್ರಿಸ್ಟಲೈನ್ ಆಕ್ಸೈಡ್ ) ತಂತ್ರಜ್ಞಾನ ನೀಡಿರುವುದು ವಿಶೇಷ. ಈ ತಂತ್ರಜ್ಞಾನವುಳ್ಳ ಡಿಸ್ ಪ್ಲೇ ಆಪಲ್ ಫೋನ್ ಮತ್ತು ವಾಚ್ ಗಳಲ್ಲಿ ಇರುತ್ತಿತ್ತು. ಡಿಸ್ ಪ್ಲೇ 6.7 ಇಂಚಿನ QHD (525 ಪಿಪಿಐ) ರೆಸ್ಯೂಲೇಷನ್ ಹೊಂದಿದೆ. ಪರದೆಗೆ ಕಾರ್ನಿಂಗ್ ಗೊರಿಲ್ಲಾ ಗಾಜಿನ ರಕ್ಷಣೆ ಇದೆ. ಈ ಎಲ್ಲ ಅಂಶಗಳು ಸೇರಿ, ಪರದೆಯ ಗುಣಮಟ್ಟ ಉತ್ತಮವಾಗಿದೆ. 120 ರಿಫ್ರೆಶ್‍ರೇಟ್ ಇರುವುದರಿಂದ ಪರದೆಯನ್ನು ಮೇಲೆ ಕೆಳಗೆ ವೇಗವಾಗಿ ಸರಿಸಿದಾಗ ಸರಾಗವಾಗಿ ಚಲಿಸುತ್ತದೆ. ಪರದೆಯ ಅಂಚಿನಲ್ಲಿ ಕರ್ವ್ ಇರುವುದರಿಂದ ಪರದೆಯ ಲುಕ್ ಕೂಡ ಚೆನ್ನಾಗಿದೆ. ಪರದೆಯ ಮೇಲೆ ಬೆರಳಚ್ಚು ಸ್ಕ್ಯಾನರ್ ಇದೆ. ಬಹಳ ವೇಗವಾಗಿ ಫೋನ್ ಅನ್‍ಲಾಕ್ ಆಗುತ್ತದೆ. ಸ್ಕ್ಯಾನರ್ ನ ಸಂವೇದನೆ ಬಹಳ ಸೂಕ್ಷ್ಮವಾಗಿದೆ. ಸ್ಕ್ಯಾನರ್ ಮಾತ್ರವಲ್ಲ, ಪರದೆಯ ಸ್ಪರ್ಶ ಸಂವೇದನೆ ಫೋನ್ ಲಾಕ್ ಆಗಿದ್ದಾಗ ಬೆರಳಚ್ಚು ಸ್ಕ್ಯಾನರ್ ಗುರುತು ಕಾಣುವುದಿಲ್ಲ. ಫೋನ್ ಸ್ವಲ್ಪ ಅಲುಗಾಡಿದರೂ ಬೆರಳಚ್ಚು ಗುರುತು ಕಾಣುತ್ತದೆ.
ಕ್ಯಾಮರಾ: ತಮ್ಮ ಫೋನಿನಲ್ಲಿ ಉತ್ತಮ ಕ್ಯಾಮರಾ ಇರಬೇಕು ಎನ್ನುವವರಿಗೆ ಇದು ತಕ್ಕದಾದ ಫೋನು. ಕ್ಯಾಮರಾಕ್ಕೆ ಹೆಸರಾದ ಸ್ವೀಡನ್ನಿನ ಹ್ಯಾಸಲ್ ಬ್ಲಾಡ್ ಕ್ಯಾಮರಾವನ್ನು ಹಿಂಬದಿ ಕ್ಯಾಮರಾ ಹೊಂದಿದೆ. ಇದಕ್ಕೆ ಸೋನಿ ಐಎಂಎಕ್ಸ್ 789 ಸೆನ್ಸರ್ ಬಳಸಲಾಗಿದೆ. 48 ಮೆಗಾಪಿಕ್ಸಲ್ ಮುಖ್ಯ ಕ್ಯಾಮರಾ, 50 ಮೆ.ಪಿ. ಅಲ್ಟ್ರಾ ವೈಡ್, 8 ಮೆ.ಪಿ. ಟೆಲಿಫೋಟೋ ಲೆನ್ಸ್ ಹೊಂದಿದೆ. ಸೆಲ್ಫಿ ಕ್ಯಾಮರಾ 32 ಮೆ.ಪಿ. ಇದೆ.
ಹೊಸ ಅಲ್ಟ್ರಾ-ವೈಡ್ ಕ್ಯಾಮೆರಾದೊಂದಿಗೆ 150 ° ವೀಕ್ಷಣೆಯನ್ನು ನೀಡುತ್ತದೆ, ಇತರ ಸ್ಮಾರ್ಟ್‌ಫೋನ್‌ಗಳಲ್ಲಿ 120 ° ಅಲ್ಟ್ರಾ-ವೈಡ್ ಕ್ಯಾಮೆರಾಗಳಿಂದ ಸೆರೆಹಿಡಿಯಲಾದ ಫೋಟೋಗಳಿಗಿಂತ ಹೆಚ್ಚಿನ ವೈಡ್ ಆ್ಯಂಗಲ್ ಫೋಟೋಗಳನ್ನು ತೆಗೆಯಬಹುದಾಗಿದೆ. ಅಲ್ಲದೇ 12-ಬಿಟ್ RAW ಫೋಟೋ ಸೆರೆಹಿಡಿಯುತ್ತದೆ. ಇದು ಹೆಚ್ಚಿನ ಡಿಟೇಲ್ ಉಳ್ಳ ಗುಣಮಟ್ಟದ ಫೋಟೋ ನೀಡುತ್ತದೆ.
ಫೋಟೋಗಳ ಗುಣಮಟ್ಟ ನಿಜಕ್ಕೂ ಅದ್ಭುತವಾಗಿದೆ. ಮಂದ ಬೆಳಕು ಹಾಗೂ ರಾತ್ರಿಯಲ್ಲೂ ಕೂಡ, ಮಸುಕಾಗದಂತೆ, ಗ್ರೇನ್ಸ್ ಮೂಡದಂತೆ ಚಿತ್ರಗಳು ಮೂಡಿಬರುತ್ತವೆ. ಝೂಮ್ ಮಾಡಿ ತೆಗೆದಾಗಲೂ ಫೋಟೋಗಳ ಗುಣಮಟ್ಟ ಚೆನ್ನಾಗಿದೆ. ಒಂದು ಉತ್ತಮ ಕ್ಯಾಮರಾದಲ್ಲಿ ತೆಗೆದಷ್ಟೇ ಫೋಟೋಗಳು ಗುಣಮಟ್ಟದಿಂದ ಕೂಡಿವೆ.
ವಿಡಿಯೋ ಚಿತ್ರೀಕರಣದ ಗುಣಮಟ್ಟ ಕೂಡ ಅತ್ಯುತ್ತಮವಾಗಿದೆ. ಎಷ್ಟೇ ಅಲುಗಾಟದ ವಿಡಿಯೋ ಮಾಡಿದಾಗಲೂ ಕೂಡ ಓಐಎಸ್ ನ ಉತ್ತಮ ಗುಣಮಟ್ಟದಿಂದಾಗಿ ವಿಡಿಯೋಗಳು ಅಲುಗಾಟವೇ ಇಲ್ಲದಂತೆ ಬಹಳ ನಾಜೂಕಾಗಿ ಮೂಡಿಬರುತ್ತವೆ.
ಕಾರ್ಯಾಚರಣೆ: ಇದರಲ್ಲಿ Snapdragon 8 Gen 1 ಇತ್ತೀಚಿನ ಫ್ಲಾಗ್ ಶಿಪ್ ಪ್ರೊಸೆಸರ್ ಅಳವಡಿಸಲಾಗಿದೆ. 5-ಪದರದ 3D ಕೂಲಿಂಗ್ ವ್ಯವಸ್ಥೆಯನ್ನು ಸಹ ಹೊಂದಿದೆ, ಇದು OnePlus ಫೋನ್ ಗಳಲ್ಲಿ ಅತ್ಯಂತ ಸುಧಾರಿತ ಕೂಲಿಂಗ್ ವ್ಯವಸ್ಥೆಯಾಗಿದ್ದು ಪ್ರೊಸೆಸರ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೀಗಾಗಿ ಫೋನಿನ ಕಾರ್ಯಾಚರಣೆ ಅತ್ಯಂತ ವೇಗವಾಗಿದೆ. ಫೋನ್ ಬಿಸಿಯಾಗುವುದಿಲ್ಲ. ಮಲ್ಟಿ ಟಾಸ್ಕಿಂಗ್‍ನಲ್ಲೂ ಕೂಡ ಫೋನು ತನ್ನ ಚುರುಕುತನವನ್ನು ಕಾಯ್ದುಕೊಳ್ಳುತ್ತದೆ.
ಈ ಫೋನು Android 12 ಆಧಾರಿತ OxygenOS 12.1 ಹೊಂದಿದ್ದು, ಆಕ್ಸಿಜನ್ ಓಎಸ್ ಗಜಿಬಿಜಿ ಇಲ್ಲದ, ಒಂದು ಕ್ಲೀನ್ ಓಎಸ್ ಆಗಿದ್ದು, ಪ್ಯೂರ್ ಆಂಡ್ರಾಯ್ಡ್ ಗೆ ಅತ್ಯಂತ ಸನಿಹವಾಗಿದೆ. ಈ ಫೋನಿಗೆ ಇತರ OnePlus ಫೋನ್‌ಗಳಂತೆ 3 ಪ್ರಮುಖ ಆಂಡ್ರಾಯ್ಡ್ ಅಪ್ ಡೇಟ್ ಹಾಗೂ 4 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್ ದೊರಕಲಿದೆ ಎಂದು ಕಂಪೆನಿ ತಿಳಿಸಿದೆ. ಇನ್ನು ನಾವು ಗಮನಿಸಿಯೇ ಇಲ್ಲದ ಸೂಕ್ಷ್ಮ ಇಶ್ಯುಗಳ ನಿವಾರಣೆಗೆ ಆಗಾಗ ಅಪ್ ಡೇಟ್ ಗಳು ದೊರಕುತ್ತಲೇ ಇರುತ್ತವೆ.
ಬ್ಯಾಟರಿ: 5000 ಎಂಎಎಚ್ ಬ್ಯಾಟರಿ ಇದ್ದು, ಇದಕ್ಕೆ 80 ವ್ಯಾಟ್ಸ್ ಸೂಪರ್ ವೂಕ್ ಚಾರ್ಜರ್ ಅನ್ನು ಬಾಕ್ಸ್ ಜೊತೆಗೇ ನೀಡಲಾಗಿದೆ. ಈ ಚಾರ್ಜರ್ ನಲ್ಲಿ ಶೇ. 1 ರಿಂದ ಶೇ. 100ರವರೆಗೆ 32 ರಿಂದ 35 ನಿಮಿಷದಲ್ಲಿ ಪೂರ್ತಿ ರೀಚಾರ್ಜ್ ಆಗುತ್ತದೆ.
ಬ್ಯಾಟರಿ ಸಾಧಾರಣ ಬಳಕೆಗೆ ಒಂದು ದಿನ ಬರುತ್ತದೆ. ಹೆಚ್ಚಿನ ಶಕ್ತಿಯ ಪ್ರೊಸೆಸರ್ ಇರುವುದರಿಂದ, ಬ್ಯಾಟರಿಯನ್ನೂ ಹೆಚ್ಚು ಬಳಸುತ್ತದೆ. ಬಹಳ ವೇಗದ ಚಾರ್ಜರ್ ಇರುವುದರಿಂದ ಬ್ಯಾಟರಿ ಇಳಿದರೂ ಅಂತಹ ಸಮಸ್ಯೆಯಿಲ್ಲ. 10-15 ನಿಮಿಷ ಚಾರ್ಜ್‍ಗೆ ಇಟ್ಟರೆ ಶೆ. 40 ರಿಂದ 50ರಷ್ಟು ಬ್ಯಾಟರಿ ಭರ್ತಿಯಾಗುತ್ತದೆ.
ಇತರ ಅಂಶಗಳ ಬಗ್ಗೆ ಹೇಳುವುದಾದರೆ, ಆಡಿಯೋ ಕ್ವಾಲಿಟಿ ಚೆನ್ನಾಗಿದೆ. ಡಾಲ್ಬಿ ಅಟಮೋಸ್ ಆಡಿಯೋ ಇದೆ. ಬೇರೆ ಬೇರೆ ಪ್ರೊಫೈಲ್ ಆಡಿಯೋ ಆಯ್ಕೆ ಇದೆ. ಆಡಿಯೋ ಜಾಕ್ ಹಾಕುವ ಸೌಲಭ್ಯ ಇಲ್ಲ. ವೈರ್ ಲೆಸ್ ಇಯರ್ ಬಡ್ ಬಳಸಬೇಕು. ಒಂದು ಉತ್ತಮ ಗುಣಮಟ್ಟದ ಇಯರ್ ಬಡ್ ಇದ್ದರೆ ಅತ್ಯುತ್ತಮ ಆಡಿಯೋ ಅನುಭವಿಸಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಲಕ್ಷ ರೂ. ಬಜೆಟ್ ತೆರಲು ಸಾಧ್ಯವಿಲ್ಲ. ಆದರೂ ಅತ್ಯುತ್ತಮ ಪ್ರೀಮಿಯಂ ಫ್ಲ್ಯಾಗ್‍ಶಿಪ್ ಫೋನ್ ಬೇಕು ಎನ್ನುವವರಿಗೆ ಅತ್ಯುತ್ತಮ ಕ್ಯಾಮರಾ, ಡಿಸ್‍ಪ್ಲೇ, ನೀಟಾದ ಯೂಐ ಉಳ್ಳ ಡೀಸೆಂಟ್ ಫೋನಿದು ಎಂದು ಹೇಳಬಹುದು.
ಕೆ.ಎಸ್. ಬನಶಂಕರ ಆರಾಧ್ಯ.