Advertisement
ಇಂಡೋನೇಷ್ಯಾದ ಬಾಲಿ ದ್ವೀಪದ ಸಾಂಸ್ಕೃತಿಕ ರಾಜಧಾನಿ ಉಬುಡ್ ಪಟ್ಟಣ. ಇಲ್ಲಿಂದ ದಕ್ಷಿಣಕ್ಕೆ ಮೂರು ಕಿಮೀ ದೂರದಲ್ಲಿ ಪಾಡಂತೆಗಾಲ್ ಎಂಬ ಪುಟ್ಟ ಹಳ್ಳಿ.ಅದರ ಅಂಚಿನಲ್ಲಿ ಸುಮಾರು ಇಪ್ಪತ್ತೇಳು ಎಕರೆ ವಿಶಾಲವಾದ ಮಳೆಕಾಡು. ಇದೇ ಉಬುಡ್ ಮಂಕಿ ಫಾರೆಸ್ಟ್. ಬಾಲಿಯಲ್ಲಿ ಅಲ್ಲಲ್ಲಿ ಈ ರೀತಿಯ ವಾನರ ವನಗಳನ್ನು ಕಾಣಬಹುದು. ಬಾಲಿಯಲ್ಲಿರುವ ಹಿಂದೂಗಳ ತ್ರಿಹಿತಕರಣ ಸಿದ್ಧಾಂತ ಇದಕ್ಕೆ ಮೂಲ. ಸಮಾಜದ ಜನರು, ಪ್ರಕೃತಿ ಮತ್ತು ದೇವರೊಡನೆ ಶಾಂತಿಯಿಂದ ನಡೆಸುವ ಸಹಜೀವನದಲ್ಲಿ ಎಲ್ಲರ ಹಿತ ಅಡಗಿದೆ ಎಂಬುದು ಇದರ ಅರ್ಥ. ಸೃಷ್ಟಿಸಿದ ದೇವರನ್ನು ನೆನೆಯುತ್ತ, ಬದುಕಿಗೆ ಆಧಾರವಾಗಿರುವ ಪ್ರಕೃತಿಯನ್ನು ಕಾಪಾಡುವುದು ಇಲ್ಲಿನ ಪ್ರಮುಖ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆ. ಹೀಗಾಗಿ, ಬಾಲಿಯಲ್ಲಿ ಎÇÉೆಲ್ಲೂ ಮರ, ಗಿಡ, ಪ್ರಾಣಿ-ಪಕ್ಷಿಗಳನ್ನು ಗೌರವದಿಂದ ಕಾಣಲಾಗುತ್ತದೆ. ಕಾಡು-ನೀರು ಇದ್ದಲೆಲ್ಲ ದೇಗುಲ ನಿರ್ಮಿಸಿ ಪವಿತ್ರ ಜಾಗ ಎಂದು ಗುರುತಿಸಲಾಗುತ್ತದೆ. ಇಲ್ಲಿ ದೇಗುಲ ಅಂದರೆ ಬರೀ ಗುಡಿ-ಗೋಪುರ, ಪ್ರಾಂಗಣವಲ್ಲ; ಕಾಡು, ನೀರು, ಕಲ್ಲು, ಬೆಟ್ಟದ ನಡುವಿನಲ್ಲಿ ಪರಿಸರಕ್ಕೆ ಧಕ್ಕೆ ಬಾರದ ಹಾಗೆ ಕಲ್ಲಿನ ಕಟ್ಟಡ. ವಾನರ ವನ ಪ್ರವೇಶಿಸುವಾಗಲೇ ಇದು ಪವಿತ್ರವಾದದ್ದು. ಇಲ್ಲಿರುವ ಮರ-ಪ್ರಾಣಿಗಳನ್ನು-ಪರಿಸರವನ್ನು ಗೌರವಿಸಿ ಎಂಬ ಕಟ್ಟುನಿಟ್ಟಾದ ಸೂಚನೆ ನೀಡಲಾಗಿತ್ತು. ಏಕೆಂದರೆ, ವಾನರ ವನ ಇಲ್ಲಿನವರಿಗೆ ಆಧ್ಯಾತ್ಮಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಂರಕ್ಷಣಾ ಕೇಂದ್ರವಾಗಿ ಮಹತ್ವದ್ದು. ಬೆಳಗ್ಗೆ ಎಂಟರಿಂದ ಸಂಜೆ ಆರರವರೆಗೆ ತೆರೆದಿರುವ, ಪ್ರವೇಶಧನ ಹೊಂದಿರುವ ವಾನರ ವನದ ಸಂಪೂರ್ಣ ನಿರ್ವಹಣೆ ಪಾಡಂತೆಗಾಲ್ ಗ್ರಾಮಸ್ಥರ ಸಮಿತಿಯದ್ದು.
Related Articles
Advertisement
ಹಾಗೆಂದು, ಮರವನ್ನು ಹೇಗೆಂದರಲ್ಲಿ ಕಡಿಯುವಂತಿಲ್ಲ. ಒಳ್ಳೆಯ ದಿನ ಗೊತ್ತು ಮಾಡಿ, ಪೂಜಾರಿಯಿಂದ ಮರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಭಕ್ತಿಯಿಂದ ಮರದ ಆತ್ಮವನ್ನು, ಒಂದು ಕೊಂಬೆ ಕತ್ತರಿಸಲು ಅನುಮತಿ ಬೇಡಲಾಗುತ್ತದೆ. ನಂತರ ಕತ್ತರಿಸುವುದೂ ಮುಖವಾಡಕ್ಕೆ ಬೇಕಾದಷ್ಟೇ. ಎಲ್ಲೂ ಮರಕ್ಕೆ ಪೆಟ್ಟಾಗದಂತೆ, ಮರ ಸಾಯದಂತೆ ಕಾಳಜಿ ವಹಿಸಲಾಗುತ್ತದೆ. ಇದಲ್ಲದೇ ಎತ್ತೆತ್ತರಕ್ಕೆ ಬೆಳೆದ ಜಾಯಿಕಾಯಿ ಮರಗಳು ಪರ್ವತ ಪ್ರದೇಶದಿಂದ, ಬಹಳ ಹಿಂದೆ ಮೈದಾನಕ್ಕೆ ನಡೆದು ಬರುತ್ತಿದ್ದವು, ಆಗ ಮಾನವರು ಕಂಡದ್ದರಿಂದ ಇಲ್ಲಿಯೇ ನೆಲೆ ನಿಂತವು ಎಂಬ ಕತೆಯಿಂದ ಅವುಗಳಿಗೆ ವಿಶೇಷ ಸ್ಥಾನ.
ಬಾಲಿಯಲ್ಲಿ ದೇವಾಲಯಗಳ ಬಳಿ ಅಲ್ಲಲ್ಲಿ ವಿಗ್ರಹಗಳು, ಕೆಲವು ಮರಗಳ ಕಾಂಡಕ್ಕೆ ಕಪ್ಪು ಬಿಳಿ ಬಣ್ಣದ ಚೌಕಗಳಿರುವ ಬಟ್ಟೆ ಸುತ್ತಿರುವುದನ್ನು ಕಂಡಾಗ ಆಶ್ಚರ್ಯವಾಗಿತ್ತು. ವಿಚಾರಿಸಿದಾಗ ಸಿಕ್ಕ ಮಾಹಿತಿ; ಕಪ್ಪು ಮತ್ತು ಬಿಳಿ ಒಳ್ಳೆಯ ಮತ್ತು ಕೆಟ್ಟ ಶಕ್ತಿಯನ್ನು ಪ್ರತಿನಿಧಿಸುತ್ತವೆ. ಜಗತ್ತಿನಲ್ಲಿ ಎರಡೂ ಇವೆ, ಎರಡರ ನಡುವೆ ಸಮತೋಲನ ಇ¨ªಾಗ ಮಾತ್ರ ಶಾಂತಿ ಸಾಧ್ಯ. ಮರದಲ್ಲಿ, ವಿಗ್ರಹಗಳಲ್ಲಿ ವಿಶೇಷ ಶಕ್ತಿ ಇದೆಯೆಂದು ಸೂಚಿಸಲು ಹೀಗೆ ಮಾಡಲಾಗುತ್ತದೆ! ಇಂಥ ಮರ- ವಿಗ್ರಹ ಕಂಡಾಗ ಜನರು ತಲೆತಗ್ಗಿಸಿ ಪ್ರಾರ್ಥಿಸಿ ಮುನ್ನಡೆಯುತ್ತಾರೆ. ವಾನರವನದಲ್ಲಿಯೂ ಹೀಗೆ ಬಟ್ಟೆ ಸುತ್ತಿಟ್ಟ ಅನೇಕ ಮರಗಳನ್ನು ಕಾಣಬಹುದು.ಅಂದರೆ ಪ್ರಕೃತಿಯಲ್ಲಿ ದೇವರನ್ನು ಕಾಣುವ-ಕಾಪಾಡುವ ಸಂಸ್ಕೃತಿ ಇವರದ್ದು.ಒಟ್ಟಿನಲ್ಲಿ ವಾನರವನ ಜೀವವೈವಿಧ್ಯದ ನೆಲೆ ಮತ್ತು ಪ್ರಕೃತಿಪೂಜೆಯ ತಾಣವಾಗಿ ಮನಸೆಳೆಯುವುದರಲ್ಲಿ ಸಂಶಯವಿಲ್ಲ. – ಕೆ. ಎಸ್. ಚೈತ್ರಾ