ಯಾರಿಗೆ ಏನೇ ಖಾಯಿಲೆ ಬಂದರೂ ವಾಸಿ ಮಾಡುವ ಪ್ರಕೃತಿ ಮಧ್ಯದಲ್ಲಿರುವ ಆರೋಗ್ಯಧಾಮ ಆಸ್ಪತ್ರೆ. ಇಂಥ ಆಸ್ಪತ್ರೆಯಲ್ಲೇ ಮೂರು ಲವ್ ಟ್ರ್ಯಾಕ್‌ನಲ್ಲಿ ತನ್ನ ಲವ್‌ಸ್ಟೋರಿಯನ್ನು ಪ್ರೇಕ್ಷಕರಿಗೆ ಹೇಳಿಕೊಂಡು ಹ್ಯಾಪಿಯಾಗಿ ಹೋಗುತ್ತಿರುತ್ತಾನೆ ವಾರ್ಡ್ ಬಾಯ್ ಚಿರಂಜೀವಿ ಅಲಿಯಾಸ್ ಚಿರು.
ಹೀಗೆ ಸರಾಗವಾಗಿ ಸಾಗುತ್ತಿದ್ದ ಚಿರು ಲವ್ ಟ್ರ್ಯಾಕ್ ನಡುವೆ ಒಂದೆರಡು ಕಡೆ ಹಂಪ್ಸ್ ಸಿಕ್ಕಿ, ಲವ್ ಟ್ರ್ಯಾಕ್‌ಗೆ ಟ್ವಿಸ್ಟ್ ಸಿಗುತ್ತದೆ. ಹಾಗಾದ್ರೆ ಚಿರು ಲವ್ ಟ್ರ್ಯಾಕ್‌ನಲ್ಲಿ ಸಿಗುವ ಟ್ವಿಸ್ಟ್ ಏನು? ಚಿರುಗೆ ಪ್ರೀತಿಯ ಸಂಜೀವಿನಿ ಸಿಗುತ್ತಾ, ಇಲ್ಲವಾ? ಇದು ಈ ವಾರ ತೆರೆಗೆ ಬಂದಿರುವ “ಯಾರಿಗೆ ಯಾರುಂಟು’ ಚಿತ್ರದ ಕಥೆಯ ಒಂದು ಎಳೆ.
ಈ ಚಿತ್ರದ ಕಥೆಯಲ್ಲಿ ತೀರಾ ಹೊಸದೇನನ್ನೂ ನಿರೀಕ್ಷಿಸುವಂತಿಲ್ಲ. ಒಬ್ಬ ಹುಡುನಿಗೆ ಮೂವರು ಹುಡುಗಿಯರು. ಇವರಲ್ಲಿ ಯಾರು ಯಾರಿಗೆ, ಸಿಗುತ್ತಾರೆ ಅಥವಾ ಇಲ್ಲವಾ? ಅನ್ನೋದನ್ನೆ ಒಂದಷ್ಟು ಮಸಾಲೆ ಅಂಶಗಳೊಂದಿಗೆ ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ ನಿರ್ದೇಶಕ ಕಿರಣ್ ಗೋವಿ.
ಅದನ್ನು ಹೊರತುಪಡಿಸಿದರೆ, ಚಿತ್ರದ ಕಥೆಯಲ್ಲಿ ಪ್ರೇಕ್ಷಕರ ಕುತೂಹಲ ಕೆರಳಿಸುವ ಅಂಶಗಳನ್ನು ನಿರೀಕ್ಷಿಸುವಂತಿಲ್ಲ. ಚಿತ್ರದ ಕಥೆಗಿಂತ, ಚಿತ್ರಕಥೆ ಮತ್ತು ನಿರೂಪಣೆಯೇ ಈ ಚಿತ್ರದ ಜೀವಾಳ. ಒಂದೇ ಮಾತಿನಲ್ಲಿ ಹೇಳುವುದಾದರೆ, ಸರಳವಾದ ಕಥೆಗೆ ಮೆಲೋಡಿ ಹಾಡುಗಳು, ಬ್ಯೂಟಿಫುಲ್ ಲೊಕೇಶನ್‌ಗಳು, ದೊಡ್ಡ ತಾರಾಗಣವನ್ನು ಬಳಸಿಕೊಂಡು ಕಲರ್‌ಫುಲ್ ಆಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.
ಚಿತ್ರದ ಪಾತ್ರದಲ್ಲಿ ಪ್ರಶಾಂತ್ ಕೆಲವು ಕಡೆ ಪ್ರಬುದ್ಧ ಅಭಿನಯ ತೋರಿಸಿದರೆ, ಕೆಲವು ಕಡೆ ಅಷ್ಟೇ ಪೇಲವ ಅಭಿನಯವನ್ನೂ ನೀಡಿದ್ದಾರೆ. ಉಳಿದಂತೆ ಕೃತಿಕಾ ರವೀಂದ್ರ, ಲೇಖಾಚಂದ್ರ ತಮ್ಮ ಪಾತ್ರವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ. ಅಚ್ಯುತಕುಮಾರ್, ನರ್ಸ್ ಜಯಲಕ್ಷ್ಮೀ, ಸುಂದರ್ ಸೇರಿದಂತೆ ಕೆಲವು ಪಾತ್ರಗಳು ಚಿತ್ರಕ್ಕೆ ಭಾರವಾಗಿ ಪರಿಣಮಿಸಿವೆ.
ಚಿತ್ರದ ತಾಂತ್ರಿಕ ಗುಣಮಟ್ಟ ಚೆನ್ನಾಗಿದೆ. ಛಾಯಾಗ್ರಹಣ, ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್ ಎನ್ನಬಹುದು. ಸಂಕಲನ ಇನ್ನಷ್ಟು ಮೊನಚಾಗಿದ್ದರೆ, ಚಿತ್ರ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುವ ಸಾಧ್ಯತೆಗಳಿದ್ದವು. ಒಟ್ಟಾರೆ ಲವ್, ಸೆಂಟಿಮೆಂಟ್ ಸೇರಿದಂತೆ ಒಂದಷ್ಟು ಕಮರ್ಷಿಯಲ್ ಸಿದ್ಧ ಸೂತ್ರಗಳ ಪ್ರಯೋಗವಾಗಿರುವ “ಯಾರಿಗೆ ಯಾರುಂಟು’ ಚಿತ್ರವನ್ನು ಒಮ್ಮೆ ಥಿಯೇಟರ್‌ನಲ್ಲಿ ನೋಡಿಬರಲು ಅಡ್ಡಿಯಿಲ್ಲ.
ಯಾರಿಗೆ ಯಾರುಂಟು
ನಿರ್ಮಾಣ: ರಘುಪತಿ
ನಿರ್ದೇಶನ: ಕಿರಣ್ ಗೋವಿ
ತಾರಾಗಣ: ಪ್ರಶಾಂತ್, ಕೃತಿಕಾ ರವೀಂದ್ರ, ಲೇಖಾಚಂದ್ರ, ಅದಿತಿ ರಾವ್, ಸುಂದರ್, ಕುರಿ ಪ್ರತಾಪ್, ಅಚ್ಯುತ ಕುಮಾರ್, ನರ್ಸ್ ಜಯಲಕ್ಷ್ಮೀ, ಶ್ರೀಕಾಂತ್ ಹೆಬ್ಳೀಕರ್ ಮತ್ತಿತರರು
ಸುಧನ್