Advertisement

ಐತಿಹಾಸಿಕ ಆಗ್ರಾದಲ್ಲಿ ನಮ್ಮದೊಂದು ಅಗ್ರ ದಿನ

05:33 PM Sep 22, 2020 | Karthik A |

ಉನ್ನತ ಶಿಕ್ಷಣ ವಿಭಾಗಳಲ್ಲಿ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣದ ಜತೆಗೆ ಪ್ರವಾಸವು ಒಂದು ಭಾಗವಾಗಿರುವ ಕಾರಣ 12 ದಿನಗಳ ಸುದೀರ್ಘ‌ ಪ್ರವಾಸವನ್ನು ಕೈಗೊಂಡಿದ್ದೆವು.

Advertisement

ಗಂಗಾಮೂಲ ಉತ್ತರಾಖಂಡವನ್ನು ಸಂದರ್ಶನ ಮುಗಿಸಿ ಆಗ್ರಾದ ಸೌಂದರ್ಯೋಪಾಸನೆಗೆ ಆಗಮಿಸಿದ್ದೆವು. ರಾತ್ರಿಯೆಲ್ಲ ಬಸ್‌ನಲ್ಲೇ ಪ್ರಯಾಣಿಸಿ ಆಗ್ರಾಕ್ಕೆ ತಲುಪುವ ಹೊತ್ತಿಗಾಗಲೇ ಸೂರ್ಯ ಉದಯಿಸಿದ್ದನು. ಅಲ್ಲಿಂದ ಹೊಟೇಲೊಂದಕ್ಕೆ ತೆರಳಿ ಸಿದ್ಧಗೊಂಡು ಆಗ್ರಾ ಸೌಂದರ್ಯ ಸವಿಯಲು ತೆರಳಿದೆವು. ಆಗ್ರಾ ತಾಜ್‌ ಮಹಲ್‌ನಿಂದ ಜಗತ್ತಿನೆಲ್ಲೆಡೆ ಪ್ರಸಿದ್ಧಿ. ಮೊಘಲರ ಕಾಲದಲ್ಲಿ ರಾಜಧಾನಿಯಾಗಿದ್ದ ಆಗ್ರಾವು ಅನೇಕ ರಾಜರಿಂದ ಆಳ್ವಿಕೆಗೆ ಒಳಪಟ್ಟಿತ್ತು. ಇಸ್ಲಾಂ ಶೈಲಿಯ ವಾಸ್ತು ಶಿಲ್ಪಗಳು ಇಲ್ಲಿ ಕಾಣಬಹುದು. ದಿಲ್ಲಿಗೆ ಸಮೀಪವಿರುವ ಈ ನಗರವು ಪ್ರವಾಸಿಗರನ್ನಂತೂ ಕೈಬೀಸಿ ಕರೆಯುತ್ತಿದೆ.

ಪ್ರವಾಸಿ ತಾಣಗಳೆಲ್ಲ ಆಗ್ರಾ ನಗರಕ್ಕೆ ಹತ್ತಿರವಿದ್ದು ತುಂಬಾ ಕ್ರಮಿಸುವ ಅಗತ್ಯ ಇಲ್ಲ. ಅಂದು ನಾವು ಮೊದಲು ಭೇಟಿ ಕೊಟ್ಟದ್ದು ಅಕ್ಬರ್‌ನ ಸಮಾಧಿ ಸ್ಥಳವಾದ ಸಿಕಂದರ್‌ಗೆ. ಆ ಸಮಾಧಿಯನ್ನು ಅಕºರನ ಮಗ ಜಹಾಂಗೀರನು ನಿರ್ಮಿಸಿದ್ದಾನೆ. ಎದುರುಗಡೆ ಪ್ರವೇಶ ದ್ವಾರವಿದ್ದು ಮೊಘಲರ ವಾಸ್ತು ಶಿಲ್ಪಗಳ ಶೈಲಿಯಲ್ಲಿ ನಿರ್ಮಿಸಿದ್ದಾರೆ. ಹೊರಗಡೆ ಸಂಕೀರ್ಣದಲ್ಲಿ ಗ್ಯಾಲರಿ ಇದೆ. ಇದರ ಸುತ್ತಲೂ ಉದ್ಯಾನವನ ನೋಡಬಹುದು.


ಅದಾಗಲೇ ಸೂರ್ಯ ನೆತ್ತಿಯ ಮೇಲೆ ಬಂದಿದ್ದ. ಹೊಟೇಲ್‌ಗೆ ಹೋಗಿ ಮಧ್ಯಾಹ್ನದ ಭೋಜನ ಸ್ವೀಕರಿಸಿ ಅಲ್ಲಿಂದ ಆಗ್ರಾ ಕೋಟೆಯ ಕಡೆಗೆ ಹೊರಟೆವು. ಬೃಹತ್ತಾದ ಈ ಕೋಟೆಯು ತಾಜ್‌ ಮಹಲ್‌ನಿಂದ 2.5 ಕಿ.ಮೀ. ದೂರದಲ್ಲಿದೆ. ಯಮುನಾ ನದಿಯ ಹತ್ತಿರವಿರುವ ಈ ಕೋಟೆಯನ್ನು ಹುಮಯೂನ್‌ನ ಅನಂತರ ಆಡಳಿತಗಾರರ ವಾಸಸ್ಥಾನವಾಗಿತ್ತು. ಇದು ಅರ್ಧ ಚಂದ್ರಾಕಾರವಾಗಿದ್ದು ಕೆಂಪು ಶಿಲೆಯಿಂದ ನಿರ್ಮಿತವಾಗಿದೆ. ಇದರ ಒಳಗಡೆ ಮಸೀದಿ, ಬಲು ವಿಶೇಷವಾಗಿ ನಿರ್ಮಿಸಿದ ಪ್ರೇಕ್ಷಕರ ಸಭಾಂಗಣ, ಶಹಜಾನ್‌ ಮಹಲ್ ಅಕ್ಬರ್ ಮಹಲ್‌ ಕೂಡ ಇದೆ. ‌

ಶಹಜಾನ್‌ನ ಕಾಲದಲ್ಲಿ ನಿರ್ಮಾಣವಾದ ಕಟ್ಟಡಗಳೆಲ್ಲ ಅಮೃತ ಶಿಲೆಯಿಂದಲೇ ನಿರ್ಮಾಣವಾಗಿದೆ. ಇಲ್ಲಿಯೂ ಕೂಡ ಶಹಜಾನ್‌ ಮಹಲ್‌ ಮತ್ತು ಮಸೀದಿಯು ಅಮೃತ ಶಿಲೆಯಿಂದ ‌ನಿರ್ಮಿಸಲಾಗಿದೆ. ಊರಿಗೆ ಹೋಗಿ ನೀರಿಗೆ ಹೋಗದಿದ್ದರೆ ಹೇಗಾದೀತು? ಎಂಬಂತೆ ನಮ್ಮೆಲ್ಲರ ಕುತೂಹಲವಾಗಿದ್ದ ತಾಜ್‌ಮಹಲ್‌ಗೆ ಕೊನೆಗೆ ತಲುಪಿದೆವು. ಕೆಲವು ಕೆಲ ದಿನಗಳಲ್ಲಿ ಟ್ರಂಪ್‌ ಭೇಟಿ ಕೊಡುವ ಕಾರಣಕ್ಕಾಗಿ ತಾಜ್‌ಮಹಲ್‌ನ್ನು ಇನ್ನಷ್ಟು ಶೃಂಗಾರಿಸಲಾಗಿತ್ತು. ಪ್ರೀತಿಸುವ ಒಂದಿಷ್ಟು ಜನಕ್ಕೆ ಪ್ರೇಮಸೌಧ ಹಾಗೂ ಪ್ರೀತಿಯ ಸಂಕೇತವಾದ ಮಹಲ್‌ನ ಮುಂದೆ ಉನ್ಮತ್ತ ತನ್ಮಯ ಭಾವದಲ್ಲಿ ನಿಂತಿದ್ದೆವು.

Advertisement

ತಾಜ್‌ಮಹಲ್‌ನ ಎದುರುಗಡೆ ನೀರು ಚಿಮ್ಮುವ ಕಾರಂಜಿ ಇದ್ದು ಎರಡು ಬದಿಗಳಲ್ಲಿ ವರ್ಣರಂಜಿತ ಉದ್ಯಾನವನಕ್ಕೆ ಅಂದ ನೀಡುವ ಹೂವಿನ ಗಿಡಗಳಿವೆ. ಅಂದಹಾಗೆ ಒಳಗಡೆ ಅಲ್ಲಿ ಕೊಡುವ ಬಟ್ಟೆಯ ಕವರನ್ನು ಕಾಲಿಗೆ ಧರಿಸಿ ಹೋಗಬೇಕು, ಪೂರ್ತಿ ಅಮೃತ ಶಿಲೆಯಿಂದಲೇ ನಿರ್ಮಾಣ ಮಾಡಲಾದ ತಾಜ್‌ ಮಹಲ್‌ ಸೂಕ್ಷಾತಿಸೂಕ್ಷ ಕೆತ್ತನೆಗಳು ಕಣ್ಮನ ಸೆಳೆಯುತ್ತವೆ. ತಾಜ್‌ ಮಹಲ್‌ನ ಹಿಂದಿನ ಭಾಗದಲ್ಲಿ ಶಿವಾಲಿಕ ಬೆಟ್ಟಗಳಿಂದ ಹರಿದು ಬರುವ ಯಮುನಾ ನದಿಯು ಹರಿಯುತ್ತದೆ. ಇಲ್ಲಿಂದ ಆಗ್ರಾ ಕೋಟೆಯ ನೋಟ ಇನ್ನಷ್ಟು ಅಂದವಾಗಿ ತೋರುತ್ತದೆ.

ಮರುದಿನದ ನಮ್ಮ ಭೇಟಿ ವಿಶ್ವ ಪಾರಂಪರಿಕ ತಾಣ ಅಕ್ಬರ್ ರಾಜಧಾನಿ ಫ‌ತೇಪುರ್‌ ಸಿಕ್ರಿಗೆ. ಇದು ಬೃಹತ್‌ ಆಕಾರದ ಸಂಕೀರ್ಣವನ್ನು ಹೊಂದಿದೆ. ನಾವು ಹೊರಡುವ ಜಾಗದಿಂದಲೇ ಕೋಟೆಯ ಪ್ರಾಂಗಣ ಆರಂಭವಾಗುತ್ತದೆ. ಆದರೆ ಈಗ ಅದೆಲ್ಲ ಅಲ್ಪ ಸ್ವಲ್ಪ ಇದೆಯಷ್ಟೇ. ಯುದ್ಧ ಸಮಯದಲ್ಲಿ ನಾಶಗೊಂಡಿದೆ ಎಂದು ಅಲ್ಲಿನ ಗೈಡ್‌ ತಿಳಿಸಿದರು. ಈ ಕೋಟೆಯ ಮುಖ್ಯ ದ್ವಾರ ಪ್ರವೇಶವೇ “ಬುಲಂದ್‌ ದರ್ವಾಜ್‌’. ಮುಂದೆ ಹೋದಾಗ ಬೇರೆ ಬೇರೆ ವಾಸ್ತು ಶಿಲ್ಪಗಳು ಕಟ್ಟಡಗಳು ಕಾಣಸಿಗುತ್ತವೆ. ಒಳಗಡೆ ಐದು ಮಹಡಿಯುಳ್ಳ ಕಟ್ಟಡ (ಪಂಚ ಮಹಲ್) ಕೂಡ ಕಾಣಬಹುದು.

  ರೋಹಿತ್‌ ದೋಳ್ಪಾಡಿ, ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆ 

Advertisement

Udayavani is now on Telegram. Click here to join our channel and stay updated with the latest news.

Next