ಕ್ಲಬ್‌ನಲ್ಲಿ ಅನುಚಿತ ವರ್ತನೆ ತೋರುವವರನ್ನು ಹೊರಗೆ ಕಳಿಸುವ, ಕುಡಿದು ರಾದ್ಧಾಂತ ಮಾಡುವವರಿಗೆ ಗೂಸಾ ಕೊಟ್ಟು ಹೊರಕ್ಕೆ ಅಟ್ಟುವ ಲೇಡಿ ಬೌನ್ಸರ್ ಕತೆಯಿದು…
ದೆಹಲಿಯಲ್ಲಿ “ಸೋಷಿಯಲ್’ ಅನ್ನೋ ಒಂದು ನೈಟ್ ಕ್ಲಬ್ ಇದೆ. ಸಂಜೆಯಾಗುತ್ತಲೇ ದೆಹಲಿಯ ಕಾಲೇಜು ಹುಡುಗ ಹುಡುಗಿಯರ ದಂಡೇ ಅಲ್ಲಿ ಸೇರುತ್ತೆ. ಮ್ಯೂಸಿಕ್, ಪಾನಗೋಷ್ಠಿ, ಚರ್ಚೆಗಳಿಗೆ ಪಡ್ಡೆ ಹುಡುಗರ ನಡುವೆ ಹೆಸರಾದ ತಾಣ ಅದು. ಅದಕ್ಕಿಂತಲೂ ಹೆಚ್ಚಾಗಿ ಅದು ಪ್ರಖ್ಯಾತಿಯನ್ನು ಪಡೆಯುವುದಕ್ಕೆ ಒಂದು ಬಲವಾದ ಕಾರಣವಿದೆ. ಏನೆಂದರೆ, ಅಲ್ಲಿ ಮೆಹರುನ್ನಿಸಾ ಎನ್ನುವ ಹೆಣ್ಣುಮಗಳೊಬ್ಬಳು ಬೌನ್ಸರ್ ಆಗಿ ಕೆಲಸ ಮಾಡುತ್ತಾಳೆ!
ಕ್ಲಬ್‌ನಲ್ಲಿ ಅನುಚಿತ ವರ್ತನೆ ತೋರುವವರನ್ನು ಹೊರಗೆ ಕಳಿಸುವ, ಕುಡಿದು ರಾದ್ಧಾಂತ ಮಾಡುವವರಿಗೆ ಗೂಸಾ ಕೊಟ್ಟು ಹೊರಕ್ಕೆ ಅಟ್ಟುವ ಬೌನ್ಸರ್‌ಗಳನ್ನು ಒಮ್ಮೆಯಾದರೂ ನೋಡಿದ್ದರೆ ನಿಮಗೆ ಅವರ ಕಟ್ಟುಮಸ್ತಾದ ಪರ್ಸನಾಲಿಟಿಯ ಪರಿಚಯ ಇದ್ದೇ ಇರುತ್ತದೆ. ಅಂಥದ್ದರಲ್ಲಿ ಒಬ್ಬ ಹೆಣ್ಣುಮಗಳು ಈ ಕೆಲಸ ಮಾಡುತ್ತಾಳೆ ಎನ್ನುವುದೇ ಬಹುತೇಕರಿಗೆ ಆಶ್ಚರ್ಯ ತರುವ ವಿಷಯ! ಮೆಹರುನ್ನಿಸಾ ಇದ್ದೆಡೆ ತಾವೆಲ್ಲರೂ ಸೇಫ್ ಎನ್ನುವ ಭಾವನೆ ಅಲ್ಲಿನ ಕಾಲೇಜು ತರುಣಿಯರಿಗೆಲ್ಲಾ…! ಒಬ್ಬ ಹುಡುಗಿಯ ಕಷ್ಟವನ್ನು ಹುಡುಗಿಯೇ ಅರ್ಥಮಾಡಿಕೊಳ್ಳಬಲ್ಲಳು ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ?
ಬೌನ್ಸರ್ ಆಗಿ ಕೆಲಸಕ್ಕೆ ಸೇರಿಕೊಂಡ ಶುರುವಿನಲ್ಲಿ ಮೆಹರುನ್ನಿಸಾಗೆ ಅಕ್ಕಪಕ್ಕದ ಮನೆಯವರು, ಅಷ್ಟೇ ಏಕೆ ನೆಂಟರಿಷ್ಟರಿಂದಲೇ ತೀಕ್ಷ್ಣ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗಿ ಬಂದಿತ್ತು. ಅವ್ಯಾವುದಕ್ಕೂ ಅವಳು ಜಗ್ಗಲಿಲ್ಲ. ಏಕೆಂದರೆ, ಅದು ಅವಳ ಹೊಟ್ಟೆಪಾಡಿನ ಪ್ರಶ್ನೆಯಾಗಿತ್ತು. ಅವಳೊಬ್ಬಳದೇ ಅಲ್ಲ, ಅವಳ ಕುಟುಂಬದ್ದು ಕೂಡಾ. ಬೌನ್ಸರ್ ಕೆಲಸ ಬೇಡವೆಂದು ಹೀಗಳೆಯುತ್ತಿದ್ದವರ್ಯಾರೂ ತನ್ನ ಕುಟುಂಬವನ್ನು ಸಾಕಲಾರರು ಎನ್ನುವುದು ಅವಳಿಗೆ ಖಚಿತವಾಗಿ ಗೊತ್ತಿತ್ತು. ಅಂದು ಅವಳನ್ನು ಆಡಿಕೊಂಡಿದ್ದವರೆಲ್ಲಾ ಈಗ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.
ಮೆಹರುನ್ನಿಸಾ ರಫ್ ಆ್ಯಂಡ್ ಟಫ್ ಹುಡುಗಿ, ನಿಜ. ಕ್ಲಬ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ ಅನ್ನೋದೂ ನಿಜ. ಆದರೆ, ವೃತ್ತಿಗೆ ವ್ಯತಿರಿಕ್ತವಾದ ವ್ಯಕ್ತಿತ್ವ ಅವಳದು. ಕ್ಲಬ್‌ನಲ್ಲಿ ಯುನಿಫಾರ್ಮ್ ತೊಟ್ಟು ಸ್ಟ್ರಿಕ್ಟಾಗಿರುವ ಮೆಹರುನ್ನಿಸಾ ಮನೆಗೆ ಬಂದರೆ ಪಕ್ಕಾ ಸಂಪ್ರದಾಯವಾದಿ. ಬಡ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಅವಳಿಗೆ ಒಬ್ಬಳು ತಂಗಿಯೂ ಇದ್ದಾಳೆ. ಅವಳು ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಾಳೆ. ರಾತ್ರಿ ಕೆಲಸದ ಅವಧಿ ಮುಗಿಯುತ್ತಲೇ ಅಕ್ಕ ತಂಗಿಯರಿಬ್ಬರೂ ಒಟ್ಟಿಗೇ ಆವತ್ತಿನ ದಿನದ ಕೆಲಸದ ಕುರಿತು ಮಾತನಾಡುತ್ತಾ ರಾತ್ರಿ ದೆಹಲಿಯ ಬೀದಿಗಳಲ್ಲಿ ನಡೆದು ಮನೆ ಸೇರುತ್ತಾರೆ. ಮನೆಯಲ್ಲಿ, ಮುದಿ ಜೀವವೊಂದು ಅಡುಗೆ ಮಾಡಿಟ್ಟು ತಮ್ಮ ಇಬ್ಬರು ಹೆಣ್ಮಕ್ಕಳ ಬರುವಿಕೆಯನ್ನೇ ಎದುರು ನೋಡುತ್ತಿರುತ್ತದೆ. ಅಕ್ಕತಂಗಿಯರಿಬ್ಬರೂ ಊಟ ಮಾಡಿ ಮಲಗಿದರೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮನೆ ಕೆಲಸಗಳಲ್ಲಿ ಬ್ಯುಸಿ. ತರಕಾರಿ- ರೇಷನ್ನು ತಂದುಕೊಡುವುದೋ, ಅಥವಾ ಇನ್ನೇನೋ ರಿಪೇರಿ ಮಾಡಿಸುವುದೋ ಏನಾದರೊಂದು ಕೆಲಸ ಇದ್ದೇ ಇರುತ್ತೆ. ಮನೆಯಲ್ಲಿ ಗಂಡುಮಕ್ಕಳಿಲ್ಲದ ಕೊರತೆ ಕಾಡದಂತೆ ಅಕ್ಕ ತಂಗಿಯರಿಬ್ಬರೇ ಅವೆಲ್ಲವನ್ನೂ ಮಾಡಿ ಮುಗಿಸಿಟ್ಟು ಕೆಲಸಕ್ಕೆ ಹೋಗುತ್ತಾರೆ. ಅಲ್ಲಿಂದ ಅವರ ದಿನಚರಿ ಯಥಾಪ್ರಕಾರ ಮುಂದುವರಿಯುತ್ತದೆ…