ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಇಂದು ಮತ್ತೊಂದು ಕೋವಿಡ್-19 ಪ್ರಕರಣ ಪತ್ತೆಯಾಗಿದೆ.
ಈ ಮೂಲಕ ಬಿಸಿಲ ನಾಡಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.
ನಗರದ ಕೋಟೆ ಪ್ರದೇಶದಲ್ಲಿನ 61 ವರ್ಷದ ವ್ಯಕ್ತಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಆ ವ್ಯಕ್ತಿ ತೀವ್ರ ಉಸಿರಾಟ ತೊಂದರೆಯಿಂದದ ಬಳಲುತ್ತಿದ್ದಾರೆ.
ಹೀಗೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಈ ವ್ಯಕ್ತಿಯನ್ನು ನಗರದ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಈ ಸಂದರ್ಭದಲ್ಲಿ ಕೋವಿಡ್ ಮಾದರಿ ಪರೀಕ್ಷೆಯಲ್ಲಿ ಇವರಿಗೆ ಸೋಂಕು ಪಾಸಿಟಿವ್ ಇರುವುದು ಪತ್ತೆಯಾಗಿತ್ತು.
ಆ ಬಳಿಕ ಸೋಂಕಿತ ವ್ಯಕ್ತಿಯನ್ನು ತಕ್ಷಣವೇ ಇಲ್ಲಿನ ಕೋವಿಡ್ (ಜಿಲ್ಲಾ) ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಆದರೆ, ಸರ್ಕಾರದ ಮೀಡಿಯಾ ಬುಲೆಟಿನಲ್‌ನಲ್ಲಿ ಈ ಹೊಸ ಸೋಂಕು ಪ್ರಕರಣ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.
ಗಣಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 18 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಹೊಸಪೇಟೆಯ 11, ಬಳ್ಳಾರಿಯ ಗುಗ್ಗರಹಟ್ಟಿ, ಸಿರುಗುಪ್ಪ ತಾಲೂಕು ಎಚ್.ಹೊಸಳ್ಳಿಯ ತಲಾ ಒಂದೊಂದು ಸೇರಿ ಒಟ್ಟು 13 ಜನರು ಸೋಂಕಿನಿಂದದ ಗುಣಮುಖಹೊಂದಿ ಮನೆಗೆ ತೆರಳಿದ್ದಾರೆ.
ಇದೀಗ ಭಾನುವಾರ ಪತ್ತೆಯಾದ ಹೊಸ ಪ್ರಕರಣ ಸೇರಿ ಜಿಲ್ಲೆಯಲ್ಲಿ ಒಟ್ಟು 6 ಪ್ರಕರಣಗಳು ಸಕ್ರಿಯವಾಗಿವೆ.