ಹೊಸದಿಲ್ಲಿ: ಕೊರೊನಾ ಸೋಂಕಿನ ಎರಡನೇ ಅಲೆಯ ವೇಳೆ ಭಾರೀ ಸಾವು-ನೋವುಗಳನ್ನು ಕಂಡಿರುವ ನಾವು, ಈಗ ಮೂರನೇ ಅಲೆಗೆ ಪ್ರವೇಶ ಪಡೆದಿದ್ದೇವೆ. ದಿನಂಪ್ರತಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗುತ್ತಿದೆ. 2ನೇ ಅಲೆಯಲ್ಲಿದ್ದ ಡೆಲ್ಟಾ ರೂಪಾಂತರಿಗೆ ಹೋಲಿಸಿದರೆ ಈಗಿನ ಒಮಿಕ್ರಾನ್ ರೂಪಾಂತರಿಯು ಸೋಂಕಿತರ ಸಂಖ್ಯೆಯನ್ನು ಹಲವು ಪಟ್ಟು ಹೆಚ್ಚಿಸುತ್ತಿದೆ. ಈ ಎರಡೂ ಅಲೆಗಳಲ್ಲಿ ಸೋಂಕು ಹರಡುವಿಕೆಯ ಸ್ವರೂಪದ ಬಗ್ಗೆ ಮಾಹಿತಿ ಇಲ್ಲಿದೆ.
ದೇಶದಲ್ಲಿ ಸದ್ಯ ಕಾಡುತ್ತಿರುವುದು ಯಾವುದು?: ಮುಂಬಯಿ, ಹೊಸದಿಲ್ಲಿ ಮತ್ತಿತರ ನಗರಗಳಲ್ಲಿನ ಪ್ರಕರಣ ಗಳನ್ನು ಗಮನಿಸಿದರೆ ಪ್ರಸ್ತುತ ದೇಶದಲ್ಲಿ ಏಕಾಏಕಿ ಸೋಂಕು ಹೆಚ್ಚಾಗಲು ಒಮಿಕ್ರಾನ್ ರೂಪಾಂತರಿಯೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ವ್ಯಾಪಿಸುವಿಕೆಯ ವೇಗ: ಸೋಂಕಿನ ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯಲ್ಲಿ ಸೋಂಕಿನ ವ್ಯಾಪಿಸುವಿಕೆಯ ತೀವ್ರತೆ ಹೆಚ್ಚಿದೆ. ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ಪ್ರಕರಣ ಪತ್ತೆಯಾದ ಕೇವಲ 7 ದಿನಗಳಲ್ಲೇ 10 ದೇಶಗಳಿಗೆ ಅದು ಹಬ್ಬಿಬಿಟ್ಟಿತ್ತು. ಎಲ್ಲ ರೀತಿಯ ಪ್ರಯಾಣ ನಿರ್ಬಂಧವನ್ನೂ ಮೀರಿ ಒಮಿಕ್ರಾನ್ ಜಗದಗಲ ವ್ಯಾಪಿಸಿತು.
ಆರ್ ವ್ಯಾಲ್ಯೂ- ಆಗ, ಈಗ?: ಆರ್ ವ್ಯಾಲ್ಯೂ ಎನ್ನುವುದು ಸೋಂಕಿನ ಪ್ರಸರಣವನ್ನು ಸೂಚಿಸುತ್ತದೆ. ಎರಡನೇ ಅಲೆಯು ಉತ್ತುಂಗದ ಸ್ಥಿತಿಯಲ್ಲಿದ್ದಾಗ ಈ “ಆರ್’ ವ್ಯಾಲ್ಯೂ 1.69 ಆಗಿತ್ತು. ಆದರೆ ಈಗ ಅಂದರೆ ಮೂರನೇ ಅಲೆಯಲ್ಲಿ ಇದು 2.69ಕ್ಕೇರಿದೆ.
Related Articles
ಆಸ್ಪತ್ರೆ ಸೇರುವ ಪ್ರಮಾಣ
ಎರಡನೇ ಅಲೆ – ಡೆಲ್ಟಾ ರೂಪಾಂತರಿ ಹಬ್ಬಿದ ವ್ಯಕ್ತಿಗಳಲ್ಲಿ ಉಸಿರಾಟದ ಸಮಸ್ಯೆ, ಶ್ವಾಸಕೋಶಕ್ಕೆ ಹಾನಿಯಾಗುವಂಥ ಕೇಸುಗಳು ಹೆಚ್ಚಿದ್ದವು. ಹೀಗಾಗಿ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಿತ್ತು. ದೇಶದೆಲ್ಲೆಡೆ ಆಕ್ಸಿಜನ್ ಹಾಗೂ ವೆಂಟಿಲೇಟರ್‌ಗಳ ಕೊರತೆ ಉಂಟಾಗಿತ್ತು. ಇವುಗಳ ಅಭಾವದಿಂದಾಗಿಯೇ ಹಲವರು ಅಸುನೀಗಬೇಕಾಯಿತು. ಎರಡನೇ ಅಲೆಯಲ್ಲಿ ಆಸ್ಪತ್ರೆಗೆ ಸೇರುವವರ ಪ್ರಮಾಣವು ಶೇ.20 ಆಗಿತ್ತು.
ಮೂರನೇ ಅಲೆ – ಒಮಿಕ್ರಾನ್ ಕಾಳಿYಚ್ಚಿನಂತೆ ವ್ಯಾಪಿಸಿದರೂ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಪ್ರಮಾಣ ಕಡಿಮೆ. ಸದ್ಯದ ಮಾಹಿತಿ ಪ್ರಕಾರ, 10 ಮಂದಿಯಲ್ಲಿ ಒಬ್ಬ ಮಾತ್ರ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಸೋಂಕು ಎಷ್ಟೇ ವೇಗವಾಗಿ ಹರಡಿದರೂ ಸೋಂಕಿತರಲ್ಲಿ ರೋಗ ಲಕ್ಷಣ ಅಲ್ಪ ಪ್ರಮಾಣದಲ್ಲಷ್ಟೇ ಇರುತ್ತದೆ ಮತ್ತು ಬಹುತೇಕರು ಮನೆಯಲ್ಲೇ ಗುಣಮುಖರಾಗುತ್ತಾರೆ. ಈ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಕೇವಲ ಶೇ.3.7ರಷ್ಟಿದೆ.
ಇದನ್ನೂ ಓದಿ:ಸರ್ಕಾರಿ ಶಾಲೆಯ 21ವಿದ್ಯಾರ್ಥಿಗಳು, ಓರ್ವ ಶಿಕ್ಷಕರಲ್ಲಿ ಕೋವಿಡ್ ದೃಢ : ಶಾಲೆಗೆ 7 ದಿನ ರಜೆ
ಮಾಲ್‌ಗಳಿಗೆ ಬೀಳಲಿದೆ ದಂಡ
ಗುವಾಹಾಟಿ: ಎರಡೂ ಡೋಸ್ ಲಸಿಕೆ ಪಡೆಯದವರನ್ನು ಒಳಗೆ ಸೇರಿಸಿಕೊಂಡರೆ 25 ಸಾವಿರ ರೂ. ದಂಡ! ಇಂಥದ್ದೊಂದು ಕಠಿನ ನಿಯಮವನ್ನು ಅಸ್ಸಾಂ ಸರಕಾರ ಅಲ್ಲಿನ ಹೊಟೇಲ್, ರೆಸ್ಟೋರೆಂಟ್, ಸಿನೆಮಾ ಮಂದಿರ ಮತ್ತು ಮಾಲ್‌ಗಳಿಗೆ ವಿಧಿಸಿದೆ. ಹಾಗೆಯೇ ರಾಜ್ಯದಲ್ಲಿ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ನೈಟ್ ಕರ್ಫ್ಯೂ ವಿಧಿಸಲಾಗಿದೆ. 2 ಡೋಸ್ ಲಸಿಕೆ ಪಡೆಯದವರಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಜ.15ರಿಂದ ಸರಕಾರಿ ಕಚೇರಿಗಳಿಗೆ 2ಡೋಸ್ ಲಸಿಕೆ ಪಡೆದ ಸಿಬಂದಿ ಮಾತ್ರವೇ ಬರಬಹುದು. ಉಳಿದವರಿಗೆ ಸಂಬಳರಹಿತ ರಜೆ ಘೋಷಿಸಲಾಗಿದೆ. 5ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. 9-12ನೇ ತರಗತಿ ವಿದ್ಯಾರ್ಥಿಗಳು 3 ದಿನ ಭೌತಿಕ ತರಗತಿಯಲ್ಲಿ ಭಾಗವಹಿಸಿದರೆ ಇನ್ನು 3 ದಿನ ಆನ್‌ಲೈನ್ ತರಗತಿಯಲ್ಲಿ ಭಾಗವಹಿಸಲಿದ್ದಾರೆ.
ದಿಲ್ಲಿಯಲ್ಲಿ 17,335 ಸೋಂಕು ದೃಢ
ದಿಲ್ಲಿಯಲ್ಲಿ ಶುಕ್ರವಾರ ಒಂದೇ ದಿನ 17,335 ಸೋಂಕು ಪ್ರಕರಣ ದೃಢಪಟ್ಟಿದೆ. ಗುರುವಾರಕ್ಕೆ ಹೋಲಿಸಿದರೆ ಸೋಂಕಿತರ ಸಂಖ್ಯೆಯಲ್ಲಿ ಶೇ. 15 ಏರಿಕೆಯಾಗಿದೆ. ಪಾಸಿಟಿವಿಟಿ ಪ್ರಮಾಣ ಶೇ. 17.73ರಷ್ಟಿದೆ. ಇದೇ ವೇಳೆ, ಮುಂಬಯಿಯಲ್ಲಿ ಶುಕ್ರವಾರ 20,971 ಕೊರೊನಾ ಪ್ರಕರಣ ಕಾಣಿಸಿಕೊಂಡಿದೆ. ಗುರುವಾರ ಪತ್ತೆಯಾದ ಪ್ರಕರಣಗಳಿಗಿಂತ 790 ಪ್ರಕರಣಗಳು ಹೆಚ್ಚಾಗಿ ಕಾಣಿಸಿ ಕೊಂಡಿವೆ. ಧಾರಾವಿಯಲ್ಲಿ 150 ಪ್ರಕರಣಗಳು ದೃಢವಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 558ಕ್ಕೆ ಏರಿಕೆ ಯಾಗಿದೆ. ಸದ್ಯ ಮುಂಬಯಿ ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 91,731 ಸಕ್ರಿಯ ಪ್ರಕರಣಗಳಿವೆ. ಇದೇ ವೇಳೆ, ಮಹಾರಾಷ್ಟ್ರದಲ್ಲಿ 40,925 ಹೊಸ ಪ್ರಕರಣಗಳು ದೃಢಪಟ್ಟಿವೆ. ಗುರುವಾರಕ್ಕೆ ಹೋಲಿಕೆ ಮಾಡಿದರೆ ಶೇ.13 ಹೆಚ್ಚಾಗಿದೆ.
173 ಮಂದಿಗೆ ಸೋಂಕು
ಇಟಲಿಯಿಂದ ಪಂಜಾಬ್‌ನ ಅಮೃತಸರ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಬಂದಿಳಿದ ವಿಮಾನವೊಂದರಲ್ಲಿದ್ದ 285 ಪ್ರಯಾಣಿ ಕರ ಪೈಕಿ 173 ಪ್ರಯಾಣಿಕರಿಗೆ ಕೊರೊನಾ ಸೋಂಕು ದೃಢವಾಗಿದೆ. ಇವರೆಲ್ಲರು ಏರೋ ಅಟ್ಲಾಂಟಿಕ್ ಏರ್‌ವೆàಸ್‌ನ ವಿಮಾನದಲ್ಲಿ ಬಂದಿಳಿದಿದ್ದಾರೆ. ಗುರುವಾರ ಕೂಡ ಇದೇ ವಿಮಾನ ನಿಲ್ದಾಣದಲ್ಲಿ ಇಟಲಿಯಿಂದ ಬಂದ ವಿಮಾನ ವೊಂದರಲ್ಲಿದ್ದ 179 ಪ್ರಯಾಣಿಕರ ಪೈಕಿ 125 ಮಂದಿಗೆ ಸೋಂಕು ದೃಢವಾಗಿತ್ತು.