Advertisement

ಸಹಕಾರ ಸಚಿವ ಪುತ್ರನಿಗೆ ಬ್ಲ್ಯಾಕ್‌ ಮೇಲ್‌: ಜ್ಯೋತಿಷಿ ಪುತ್ರ ಸಿಸಿಬಿ ಪೊಲೀಸ್‌ ವಶಕ್ಕೆ

11:54 PM Jan 09, 2022 | Team Udayavani |

ಬೆಂಗಳೂರು: ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಅವರ ಪುತ್ರ ನಿಶಾಂತ್‌ ಅವರಿಗೆ ಬ್ಲ್ಯಾಕ್‌ ಮೇಲ್‌ ಮಾಡಿ ಕೋಟ್ಯಂತರ ರೂ. ಬೇಡಿಕೆ ಇಟ್ಟ ಆರೋಪದಲ್ಲಿ ಖ್ಯಾತ ಜ್ಯೋತಿಷಿಯೊಬ್ಬರ ಪುತ್ರನನ್ನು ಬಂಧಿಸಲಾಗಿದೆ.

Advertisement

ರಾಹುಲ್‌ ಭಟ್‌ (23) ಬಂಧಿತ ಆರೋಪಿ. ಬೆಂಗಳೂರು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಹೆಚ್ಚಿನ ವಿಚಾರಣೆಗಾಗಿ 5 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಗೋವಾದಲ್ಲಿ ತಲೆಮರೆಸಿಕೊಂಡಿದ್ದ ಈತನ ಸ್ನೇಹಿತ ರಾಕೇಶ್‌ ಅಪ್ಪಣ್ಣನವರ್‌ನನ್ನು ವಶಕ್ಕೆ ಪಡೆಯಲಾಗಿದೆ. ರಾಹುಲ್‌ಗೆ ಸಹಕಾರ ನೀಡಿದ ಆರೋಪದ ಮೇಲೆ ಸ್ನೇಹಿತ ರಾಕೇಶ್‌ ಶೆಟ್ಟಿ ಮತ್ತು ಸಚಿವರ ಪುತ್ರ ನಿಶಾಂತ್‌ನ ಮಾಜಿ ಸಹಾಯಕ ರವಿ ಅವರನ್ನು ವಿಚಾರಣೆ ನಡೆಸಿದ್ದಾರೆ.

25 ಕೋಟಿ ರೂ.ಗೆ ಬೇಡಿಕೆ?
ನಿಶಾಂತ್‌ ಡಿ. 27ರಂದು ಸೈಬರ್‌ ಕ್ರೈಂನವರಿಗೆ ದೂರು ನೀಡಿದ್ದಾರೆ. ಮೊದಲಿಗೆ ಆರೋಪಿಗಳು ಡಿ. 25ರ ಸಂಜೆ ಸಚಿವರ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಗೌಡ ಮತ್ತು ಆಪ್ತ ಸಹಾಯಕ ಭಾನುಪ್ರಕಾಶ್‌ ಅವರ ವಾಟ್ಸ್‌ಆ್ಯಪ್‌ ಗಳಿಗೆ ಬ್ಲ್ಯಾಕ್‌ಮೇಲ್‌ ಸಂದೇಶ ಕಳಿಸಿದ್ದಾರೆ.

ಇದಕ್ಕೆ ವಿದೇಶಿ (ಬ್ರಿಟನ್‌) ನೋಂದಣಿ ಮೊಬೈಲ್‌ ನಂಬರ್‌ ಬಳಸಿದ್ದಾರೆ. “25 ಕೋ. ರೂ.  ಕೊಡಬೇಕು. ಇಲ್ಲವಾದರೆ ನಿಮ್ಮ ಸಚಿವರ ಪುತ್ರ ನಿಶಾಂತ್‌ ಮಹಿಳೆ ಜತೆ ಇರುವ ಅಶ್ಲೀಲ ವೀಡಿಯೋಗಳು ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಹರಿಯಬಿಡುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ.

ಇದರಿಂದ ಗಾಬರಿಗೊಂಡ ಶ್ರೀನಿವಾಸ ಗೌಡ ಮತ್ತು ಭಾನುಪ್ರಕಾಶ್‌ ಕೂಡಲೇ ಸಚಿವರ ಗಮನಕ್ಕೆ ತಂದಿದ್ದಾರೆ. ಎಚ್ಚೆತ್ತ ಸಚಿವರು, ಮತ್ತವರ ಪುತ್ರ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ನೀಡಿದ್ದರು.

Advertisement

ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ರಾಹುಲ್‌ ವಿದೇಶಿ ನೋಂದಣಿಯ ಸಿಮ್‌ಕಾರ್ಡ್‌ ಬಳಕೆ ಮಾಡಿ ಬ್ಲ್ಯಾಕ್‌ ಮಾಡುತ್ತಿರುವುದು ಪತ್ತೆಯಾಗಿತ್ತು. ವೀಡಿಯೋದ ಅಸಲಿಯತ್ತು ಏನು ಎಂಬ ಬಗ್ಗೆ ತನಿಖೆಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಹಿಮವರ್ಷ : ರಾಜ್ಯದ 400ಕ್ಕೂ ಅಧಿಕ ಪ್ರಮುಖ ರಸ್ತೆಗಳು ಬಂದ್‌

ಶಾಸಕರ ಪುತ್ರಿಯ ಸಿಮ್‌ ಕಾರ್ಡ್‌ ಬಳಕೆ
ಸಿಮ್‌ ಕಾರ್ಡ್‌ನ ಜಾಡು ಹಿಡಿದು ಹೊರಟಾಗ ಅದು ವಿಜಯಪುರ ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ಶಾಸಕ ಯಶವಂತರಾಯ ಗೌಡ ಪಾಟೀಲ್‌ ಅವರ ಪುತ್ರಿಯ ಹೆಸರಿನಲ್ಲಿರುವುದು ಗೊತ್ತಾಗಿದ್ದು ಇದು ಕುತೂಹಲಕ್ಕೆ ಕಾರಣವಾಗಿದೆ. ಶಾಸಕರ ಪುತ್ರಿ ವಿದೇಶಕ್ಕೆ ತೆರಳುವ ಮುನ್ನ ತನ್ನ ಸಿಮ್‌ಕಾರ್ಡ್‌ ಅನ್ನು ವಿಜಯಪುರದ ರಾಕೇಶ್‌ ಅಪ್ಪಣ್ಣನವರ್‌ಗೆ ಕೊಟ್ಟಿದ್ದರು. ಇತ್ತೀಚೆಗೆ ವಿಚಾರವೊಂದಕ್ಕೆ ಸಂಬಂಧಿಸಿದಂತೆ ರಾಕೇಶ್‌ ಅಪ್ಪಣ್ಣನವರ್‌ ಶಾಸಕರ ಪುತ್ರಿಯಿಂದ ಒಟಿಪಿ ಪಡೆದುಕೊಂಡಿದ್ದ ಎಂದು ಗೊತ್ತಾಗಿದೆ.

ಅದೇ ನಂಬರ್‌ನಿಂದಲೇ ಆರೋಪಿಗಳು ಸಚಿವರ ಪುತ್ರನಿಗೆ ಬ್ಲ್ಯಾಕ್‌ಮೇಲ್‌ ಮಾಡಿರುವುದು ಗೊತ್ತಾಗಿದೆ. ಆದರೆ ಇದುವರೆಗಿನ ತನಿಖೆಯಲ್ಲಿ ಶಾಸಕರ ಪುತ್ರಿಯ ಪಾತ್ರ  ನೇರವಾಗಿ ಕಂಡು ಬಂದಿಲ್ಲ. ಅವರ ಸಿಮ್‌ಕಾರ್ಡ್‌ ಅನ್ನು ರಾಕೇಶ್‌ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಸಿಸಿಬಿ  ಮೂಲಗಳು ತಿಳಿಸಿವೆ.

ಸಿಸಿಬಿ ಅಧಿಕಾರಿಗಳು ಶಾಸಕ ಯಶವಂತರಾಯ ಗೌಡ ಪಾಟೀಲ್‌ಗೆ ಕರೆ ಮಾಡಿ ಕೆಲವೊಂದು ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಶಾಸಕರು, ಪುತ್ರಿ ವಿದೇಶಕ್ಕೆ ಹೋಗುವ ಮೊದಲು ಸ್ನೇಹಿತ ರಾಕೇಶ್‌ ಅಪ್ಪಣ್ಣನವರ್‌ಗೆ ಸಿಮ್‌ಕಾರ್ಡ್‌ ನೀಡಿರುವುದು ಹೌದು, ಆದರೆ ರಾಹುಲ್‌ ಭಟ್‌ನ ಪರಿಚಯ ಆಕೆಗಿಲ್ಲ. ತನಿಖೆಗೆ ಸಹಕಾರ ನೀಡುತ್ತೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ದುರ್ಬಳಕೆ
ರಾಕೇಶ್‌ ಅಪ್ಪಣ್ಣನವರ್‌ ಹಾಗೂ ಶಾಸಕರ ಪುತ್ರಿ ಬಾಲ್ಯ ಸ್ನೇಹಿತರು. ರಾಕೇಶ್‌ ತನ್ನ ಉದ್ಯಮದ ವ್ಯವಹಾರಕ್ಕಾಗಿ ಸ್ನೇಹಿತೆಯ ಸಿಮ್‌ಕಾರ್ಡ್‌ ಪಡೆದುಕೊಂಡಿದ್ದಾನೆ. ಇತ್ತೀಚೆಗೆ ಆ ಸಿಮ್‌ನಂಬರ್‌ನಲ್ಲಿ ವಾಟ್ಸ್‌ಆ್ಯಪ್‌ ಸೃಷ್ಟಿಸಿ, ಆಕೆಯಿಂದಲೇ ಒಟಿಪಿ ಪಡೆದುಕೊಂಡಿದ್ದಾನೆ. ಬಳಿಕ ಈ ಮೊಬೈಲ್‌ ಅನ್ನು ರಾಹುಲ್‌ಗೆ ಕೊಟ್ಟಿದ್ದಾನೆ. ಈತ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಮಾಜಿ ಸಹಾಯಕನ ಮೇಲೆ ಅನುಮಾನ
ತಮಗೆ ಸಹಾಯಕನಾಗಿದ್ದ ರವಿ ಎನ್ನುವ ವ್ಯಕ್ತಿಯೇ ಕೃತ್ಯಕ್ಕೆ ಸಹಕಾರ ನೀಡಿದ್ದಾನೆ ಎಂದು ನಿಶಾಂತ್‌ ಅನುಮಾನ ವ್ಯಕ್ತಪಡಿಸಿದ್ದರು.  ಈ ಹಿಂದೆ ನಿಶಾಂತ್‌ ಸಾರ್ವಜನಿಕ ಕಾರ್ಯಕ್ರಮಗಳ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಹಾಕುತ್ತಿದ್ದ. ಈಗ ಅವರ ಬಳಿ ಕೆಲಸ ಬಿಟ್ಟಿದ್ದಾನೆ. ಹೀಗಾಗಿ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಪ್ರಾಥಮಿಕವಾಗಿ ಯಾವುದೇ ಆರೋಪ ಕಂಡು ಬಂದಿಲ್ಲ. ಸದ್ಯ ಎಚ್ಚರಿಕೆ ನೀಡಿ ಆತನನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಘಟನೆ ಬಗ್ಗೆ ನನ್ನ ಮಗಳನ್ನು ವಿಚಾರಿಸಿದೆ. ಅವಳು ಸ್ನೇಹಿತನೊಬ್ಬನಿಗೆ ಕ್ಲೈಂಟ್‌ಗೆ ಬೇಕು ಅಂತ ಸಿಮ್‌ ಕೇಳಿದ್ದಕ್ಕೆ ಕೊಟ್ಟಿದ್ದಾಳೆ. ಆತ ರಾಹುಲ್‌ ಭಟ್‌ಗೆ ಸಿಮ್‌ ಕೊಟ್ಟಿದ್ದಾನೆ. ಸಚಿವ ಸೋಮಶೇಖರ್‌ ಅವರನ್ನೂ ಭೇಟಿ ಮಾಡಿ, ಸೂಕ್ತ ತನಿಖೆ ಮಾಡಿಸುವಂತೆ ಮನವಿ ಮಾಡಿದ್ದೇನೆ.
– ಯಶವಂತರಾಯ ಗೌಡ ಪಾಟೀಲ್‌, ಇಂಡಿ ಕ್ಷೇತ್ರದ ಶಾಸಕ

ನಮ್ಮ ಪಿಎಸ್‌ ಮತ್ತು ಪಿಎಗೆ ಫೋನ್‌ ಮಾಡಿ ಸೆಟಲ್‌ಮೆಂಟ್‌ ಮಾಡಿಕೊಳ್ಳುವಂತೆ ಪದೇಪದೆ ಮೆಸೇಜ್‌ ಮಾಡಿದ್ದರು. ಈ ಬಗ್ಗೆ ದೂರು ಕೊಡುವಂತೆ ಮಗನಲ್ಲಿ ಹೇಳಿದ್ದೆ. ನನ್ನ ತೇಜೋ ವಧೆಗಾಗಿ ಮಗನಿಗೆ ಬ್ಲ್ಯಾಕ್‌ವೆುàಲ್‌ ಮಾಡುತ್ತಿದ್ದಾರೆಯೇ ಎಂದು ಪತ್ತೆಹಚ್ಚುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದೇನೆ.
– ಎಸ್‌.ಟಿ. ಸೋಮಶೇಖರ್‌,
ಸಹಕಾರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next