Advertisement
ಅಲ್ಲಿಗೆ ಹೋದ ಮೇಲೆ ತಕ್ಷಣ ತಿನ್ನೋಕೆ ಏನು ಮಾಡೋದು? ನನ್ನ ಎರಡು ವರ್ಷದ ಪುಟ್ಟ ಮಗುವಿಗೆ ಏನು ತೆಗೆದುಕೊಂಡು ಹೋಗಲಿ? ವಿಮಾನದೊಳಗೆ ಯಾವ ತಿಂಡಿ ಅಲೋ ಮಾಡ್ತಾರೆ? ಯಾವ ಸಾಮಾನುಗಳು ವಿಮಾನ ಪ್ರಯಾಣಕ್ಕೆ ಬಾಹಿರ? ಸಾವಿರಾರು ಪ್ರಶ್ನೆಗಳಿಗೆ ಉತ್ತರ ಹುಡುಕುವಲ್ಲೇ ತಿಂಗಳು ಉರುಳಿಹೋಯ್ತು. ಹೆಂಡತಿ-ಮಗುವನ್ನು ಜೊತೆಯಲ್ಲಿ ಕರೆದುಕೊಂಡು ಹೊರಟಿದ್ದ ನನ್ನವರಿಗೆ ಬಾಡಿಗೆಗೆ ಮನೆ ಸಿಗದೆ, ಕೈಕಾಲು ಕಟ್ಟಿ ಹಾಕಿದ ಹಾಗಾಗಿತ್ತು. ಸದ್ಯ ಹೊರಡೋ ನಾಲ್ಕು ದಿನದ ಹಿಂದೆ ಅಲ್ಲಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಇವರ ಸ್ನೇಹಿತ ಮನೆ ಬುಕ್ ಮಾಡಿದ್ದ.
Related Articles
“ಸರ್, ಈ ಬ್ಯಾಗ್ ಓವರ್ ವೈಟ್ ಇದೆ. ಐದು ಕೆಜಿ ಕಡಿಮೆ ಮಾಡಿ’ ಅಂದ. ಅಯ್ಯೋ! ನಿಗದಿಸಲಾಗಿದ್ದ ತೂಕಕ್ಕೆ ಅನುಗುಣವಾಗಿ ಲಗ್ಗೇಜ್ ಪ್ಯಾಕ್ ಮಾಡಿಯಾಗಿತ್ತು. ಆದರೆ, ಇವನೇಕೆ ಹೀಗನ್ನುತ್ತಿದ್ದಾನೆ ಎಂದು ಗಾಬರಿಯಾಯಿತು. ಈಗ ಲಗ್ಗೇಜ್ ತೆರೆದರೆ ಕೊಬ್ಬರಿಯೂ ಇವರ ಕಣ್ಣಿಗೆ ಬೀಳುತ್ತೆ. ಮೊದಲೇ ಇವರಿಗೆ ಮೂಗಿನ ತುದೀಲೇ ಕೋಪ. ಕೊಬ್ಬರಿ ಜೊತೆ ನನ್ನನ್ನೂ ಕಸದ ಬುಟ್ಟಿಗೆ ಎಸೆದು ಹೋಗಿºಟ್ರೆ! ಹೇಗಾದರೂ ಮಾಡಿ ಈ ಸಂದರ್ಭದಿಂದ ಪಾರಾಗಲು ಯೋಚಿಸುತ್ತಿದ್ದೆ. ಅಷ್ಟರಲ್ಲೇ ಇವರು, “”ನೋಡಿ ಸರ್, ಇನ್ನೊಂದು ಕೇವಲ 20 ಕೆ. ಜಿ. ತೂಕ ಇದೆ. ಅದಕ್ಕೆ ಕಂಪನ್ಸೇಷನ್ ಮಾಡಿಬಿಡಿ” ಅಂತ ರಿಕ್ವೆಸ್ಟ್ ಮಾಡಿದರು. ಅವನು ಇವರನ್ನೊಮ್ಮೆ, ನನ್ನನ್ನೊಮ್ಮೆ ಕಂಕುಳಲ್ಲಿದ್ದ ಮಗುನ್ನೊಮ್ಮೆ ನೋಡಿ, “ಹೆವಿ ಬ್ಯಾಗ್ ಅಂತ ಟ್ಯಾಗ್ ಹಾಕಿ ದೂಕಿದ’ ನೆಮ್ಮದಿಯ ಉಸಿರುಬಿಟ್ಟೆವು.
Advertisement
ಮೊದಲ ಮಳೆಯ ಗುಟುಕಿಗೆ, ಘಮಲಿಗೆ ಕಾಯುವ ಚಾತಕ ಪಕ್ಷಿಯಂತೆ ಕಾದಿದ್ದ ನಾನು ವಿಮಾನ ನಿಲ್ದಾಣ ಒಳಹೊಕ್ಕ ಕ್ಷಣದಿಂದ ಪುಳಕಿತಳಾಗಿದ್ದೆ. ಸರಣಿಯಲ್ಲಿ ಕಾದದ್ದಾಯ್ತು. ಪಾಸ್‌ಪೋರ್ಟ್, ಬ್ಯಾಗ್ ಹಾಗೂ ದೇಹದ ಪರಿಶೀಲನ ಕಾರ್ಯಗಳು ಸಾಂಗವಾಗಿ ನೆರವೇರಿದವು.
ವಿಮಾನ ಪ್ರವೇಶದ ಕ್ಷಣಗಣನೆ ಶುರುವಾಯಿತು. ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ಮೂರು ವರ್ಷ ಒಳಗಿನ ಮಗು ಹೊಂದಿರುವ ಪೋಷಕರಿಗೆ ಮೊದಲ ಆದ್ಯತೆ. ಉದ್ದನೆಯ ದೊಡ್ಡ ಕೊಳವೆಯ ಮೂಲಕ ನಾವು ವಿಮಾನದ ಬಾಗಿಲಿಗೆ ಪಾದಾರ್ಪಣೆ ಮಾಡಿದೆವು. ಅಲ್ಲಿ ನಿಂತಿದ್ದ ಸಿಬ್ಬಂದಿ ವರ್ಗ ಹಾಗೂ ಗಗನಸಖೀಯರು ಶುಭಕಾಮನೆ ಕೋರಿ ನಗುಮೊಗದಿಂದ ಆಹ್ವಾನಿಸಿದರು.
ವಿಮಾನ ಟೇಕ್ ಆಫ್ ಆಗುವಾಗ ಕ್ಯಾಬಿನ್ ಹಾಗೂ ಹೊರಗಿನ ಗಾಳಿಯ ಒತ್ತಡದ ವ್ಯತ್ಯಾಸದಿಂದ ಕಿವಿ ಗುಂಯ್‌ಗಾಡುತ್ತದೆ. ಆಗ ಬಾಯಲ್ಲಿ ಏನಾದರೂ ಹಾಕಿಕೊಂಡು ಜಗಿಯಲು ಶುರು ಮಾಡ್ಬೇಕು ಅನ್ನೋ ಅನುಭವಿ ಗೆಳತಿಯರ ಸಲಹೆಯ ಮೇರೆಗೆ ಜೇಬಿನಲ್ಲಿದ್ದ ಚಾಕಲೇಟ್ ಬಾಯಿಗೆ ಹೋಯಿತು. ಮೂವರೂ ಬೆಲ್ಟ… ಸರಿಯಾಗಿ ಹಾಕಿಕೊಂಡೆವೋ ಇಲ್ಲವೋ ಅಂತ ಪುನಃ ಪುನಃ ಪರಿಶೀಲಿಸಿಕೊಂಡದ್ದಾಯಿತು. ಇನ್ನು ಆಕಾಶಕ್ಕೆ ಜಿಗಿಯಲು ಕೆಲವೇ ನಿಮಿಷಗಳು. ದೇವರು ಮತ್ತೆ ನೆನಪಾದ ! ಸಂಸಾರ ಈಗ ಶುರುವಾಗ್ತಿದೆ, ಹಳೆಯ ಕಹಿಘಟನೆಗಳು, ವೈಮನಸ್ಯ ಮರೆತು ಹೊಸ ಜೀವನಕ್ಕೆ ಕಾಲಿಟಿ¤ದ್ದೀವಿ. ಯಾವುದೇ ಅಡೆತಡೆ, ಅಹಿತಕರ ಘಟನೆಗಳು ನಡೆಯದಂತೆ ಪ್ರಯಾಣ ಸುಖಕರವಾಗಿ ರಲೆಂದು ಬೇಡಿಯಾಯ್ತು. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ವಿಮಾನ ಟೇಕ್ ಆಫ್ ಆಗೇ ಬಿಟ್ಟು. ವಾವ್! ಅದ್ಭುತ ! ಕಿಟಕಿಯ ಪಕ್ಕ ಕೂತಿದ್ದ ನನಗೆ ವಿಮಾನದ ರೆಕ್ಕೆಗಳು ಮೇಲೊಮ್ಮೆ ಕೆಳಗೊಮ್ಮೆ ಆಗುತ್ತ ಮೋಡಗಳನ್ನು ಸೀಳಿಕೊಂಡು ಹೋಗುತ್ತಿದ್ದುದನ್ನು ನೋಡಿ ಮೈನವಿರೇಳುತ್ತಿತ್ತು. ಭೂಮಿಯಿಂದ 10 ರಿಂದ 12 ಕಿ. ಮೀ. ಎತ್ತರದಲ್ಲಿ ಗಾಳಿಯ ಪ್ರಕ್ಷುಬ್ಧತೆಯಿಂದ ವಿಮಾನ ಹೊಯ್ದಾಟವಾಡುವಾಗ ಜೀವ ಬಾಯಿಗೆ ಬಂದಂತಾಗುತ್ತಿತ್ತು. ಆದರೆ, ಅದು ಸಹಜವೆಂದು ಓದಿ ತಿಳಿದಿದ್ದರ ಪರಿಣಾಮವಾಗಿ ಸಾವರಿಸಿಕೊಂಡು ಮಗುವಿನ ಮುಖ ನೋಡುತ್ತ ಪ್ರತಿ ಹೊಯ್ದಾಟವನ್ನೂ ಆನಂದಿಸಲು ಶುರು ಮಾಡಿದೆ. ಭೂಮಿ ಸ್ವಲ್ಪವೂ ಕಾಣದಾಗಿ ಮೋಡಗಳ ಮೇಲೆ ಬರೇ ಬಿಳಿಯ ಬಿತ್ತರದ ಆಗಸದಲ್ಲಿ ತೇಲುವಾಗ ಜೀವನ ಸಾರ್ಥಕವೆನಿಸಿದ್ದಂತೂ ದಿಟ !
ವಿಮಾನದಲ್ಲಿ ಕುಳಿತು ಇನ್ನೂ 20 ನಿಮಿಷಗಳೂ ಉರುಳಿರಲಿಲ್ಲ. ನನ್ನ ಎರ ಡು ವರ್ಷದ ಮಗುವಿಗೆ ಮೂಗಿನಲ್ಲಿ ರಕ್ತ ಬರಲು ಶುರುವಾಯಿತು. ಎಲ್ಲೋ ಹೀಗೆ ಗೂಗಲ್‌ನಲ್ಲಿ ಓದಿದ್ದು ನೆನಪಿಗೆ ಬಂದದ್ದರ ಜೊತೆಗೆ ಗಾಬರಿಯೂ ಶುರುವಾಯಿತು. ನನ್ನವರನ್ನೂ ಹೆದರಿಸಿದೆ. “ರೀ ಗೂಗಲ್‌ನಲ್ಲಿ ಓದಿದ್ದೆ, ಪ್ರಸರ್ ಡಿಪರೆನ್ಸ್‌ನಿಂದ ಉಸಿರು ಕಟ್ಟೋದು, ಮೂಗಲ್ಲಿ ರಕ್ತ ಬರೋದು ಎಲ್ಲಾ ಆಗುತ್ತೆ’ ಎಂದೆ. ಎದುರಲ್ಲೇ ಇದ್ದ ಗಗನಸಖೀಯನ್ನು ಆಹ್ವಾನಿಸುವ ದುಂಡನೆಯ ಕೆಂಪು ಬಟನ್ ಒತ್ತಿದ್ದೂ ಆಯ್ತು.
ಮೂರ್ನಾಲ್ಕು ನಿಮಿಷಗಳಲ್ಲಿ ರಕ್ತವೇನೋ ನಿಂತಿತು. ಗಗನಸಖೀ ವಿಚಾರಣೆಗೆ ಬಂದಳು. ಸದ್ಯಕ್ಕೆ ನಿಂತಿದೆ ಅಂತ ಅವಳನ್ನು ಅಲ್ಲಿಂದ ಸಾಗು ಹಾಕಿದೆವು. ಅಸಲಿಗೆ ಮೂಗಿನ ಎರಡೂ ಹೊಳ್ಳೆಗಳಿಗೆ ಪುಟ್ಟ ಬೆರಳುಗಳನ್ನು ತೂರಿಸಿ ಉಗುರಿನಿಂದ ಗಾಯವಾಗಿ ಬಂದ ರಕ್ತವಾಗಿತ್ತು. ಇದು ಹೊಸತೇನಲ್ಲ ಸಾಕಷ್ಟು ಬಾರಿ ರೀತಿ ಮಗು ಮಾಡಿಕೊಂಡದ್ದು ನೋಡಿಯಾಗಿತ್ತು. ಆದರೆ ಈ ಬಾರಿ ಅತಿ ಬುದ್ಧಿವಂತಿಕೆಯಿಂದಾಗಿ ವಿಮಾನ ಪ್ರಯಾಣದ ಬಗ್ಗೆ ಓದಿದ್ದರ, ಅವರಿವರ ಸಲಹೆ-ಸೂಚನೆಗಳನ್ನು ಕೇಳಿದ್ದರ ಫಲವಾಗಿ ಮಂಕು ಕವಿದಿತ್ತು.
ಅರ್ಚನಾ ಎಚ್.