Advertisement

ಆಡಕಿ ಗ್ರಾಮದ ಅಭಿವೃದ್ದಿಗೆ ಒಂದು ಕೋಟಿ ರೂ. ಘೋಷಿಸಿದ ಆರ್.ಅಶೋಕ್‌

03:17 PM Aug 21, 2022 | Team Udayavani |

ಕಲಬುರಗಿ: ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ಅದರಲ್ಲೂ ಗ್ರಾಮಸ್ಥರೆಲ್ಲರೂ ಗ್ರಾಮ ವಾಸ್ತವ್ಯಕ್ಕೆ ಸಂಪೂರ್ಣವಾಗಿ ಕೈ ಜೋಡಿಸಿರುವುದು ಸಂತಸ ತಂದಿರುವ  ಹಿನ್ನೆಲೆಯಲ್ಲಿ ಸೇಡಂ ತಾಲೂಕಿನ ಆಡಕಿ ಗ್ರಾಮಾಭಿವೃದ್ದಿಗೆ  ಒಂದು ಕೋಟಿ ರೂ ಘೋಷಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಪ್ರಕಟಿಸಿದರು. ‌

Advertisement

ರವಿವಾರ ಬೆಳಿಗ್ಗೆ ಗ್ರಾಮ‌ ಪಂಚಾಯತ್ ಆವರಣದಲ್ಲಿ ಗ್ರಾಮ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಪಡೆದು ಮಾತನಾಡಿ ಒಂದು ಕೋಟಿ ರೂ ಅನುದಾನ ಘೋಷಣೆ ಮಾಡಿದರು.

ಒಂದು ಕೋಟಿ. ರೂ ಅನುದಾನವನ್ನು ಇಂದು ಅಥವಾ ನಾಳೆ ಜಿಲ್ಲಾಧಿಕಾರಿಯವರಿಗೆ ನೀಡಲಾಗುತ್ತದೆ. ಗ್ರಾಮಸ್ಥರೇ ಪರಸ್ಪರ ಚರ್ಚಿಸಿ ಗ್ರಾಮದಲ್ಲಿ ರಸ್ತೆ, ಚರಂಡಿ, ಕೆರೆ ಅಭಿವೃದ್ಧಿ, ಬಡವರಿಗೆ ಮನೆ ನಿರ್ಮಾಣ, ಕುಡಿಯುವ ನೀರು ಹೀಗೆ ಯಾವ ಕಾಮಗಾರಿಯನ್ನು ಮಾಡಬೇಕೆಂದು ನಿರ್ಧರಿಸಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದಲ್ಲಿ ಅವರು ಕೂಡಲೆ ಅನುಮೋದನೆ ನೀಡಿ ಕಾಮಗಾರಿಗಳಿಗೆ ಚಾಲನೆ ನೀಡುವರು ಎಂದರು.

ಗ್ರಾಮ ವಾಸ್ತವ್ಯ ಹೀಗೆ ಬಂದು ಹಾಗೇ ಹೋಗುವುದಲ್ಲ. ನಾನೊಬ್ಬನೆ ಸಹ ಬಂದಿಲ್ಲ. ನನ್ನೊಂದಿಗೆ ಸ್ಥಳೀಯ ಶಾಸಕರು, ಡಿ.ಸಿ., ಎ.ಸಿ. ತಹಶೀಲ್ದಾರರು ಇಡೀ ತಂಡ ಗ್ರಾಮಕ್ಕೆ ಬಂದು ನಿಮ್ಮ‌ ಸಮಸ್ಯೆ ಆಲಿಸಿದ್ದೇವೆ. ಸರ್ಕಾರಿ ಕಚೇರಿಗೆ ಜನರು ಅಲೆದಾಡುವುದನ್ನು ತಪ್ಪಿಸಲು ಮತ್ತು ಮನೆ ಬಾಗಿಲಿಗೆ ಆಡಳಿತ ತೆಗೆದುಕೊಂಡು ಹೋಗಬೇಕೆಂಬುದೇ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲ ಪರಿಕಲ್ಪನೆಯಾಗಿದೆ ಎಂದು ಆರ್.ಅಶೋಕ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.

ಗ್ರಾಮ ವಾಸ್ತವ್ಯ ಹೊಸ ಆಧ್ಯಾಯ: ಕಂದಾಯ ಸಚಿವರು ಗ್ರಾಮ ವಾಸ್ತವ್ಯ ಮಾಡಿದ ಕಡೆ 1 ಕೋಟಿ ರೂ. ಗ್ರಾಮಾಭಿವೃದ್ಧಿಗೆ ನೀಡಲಾಗುತ್ತದೆ. ಜನರ ಮನೆ ಬಾಗಿಲಿಗೆ ಹೋಗುವ ಮತ್ತು ಅವರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇದು ರಾಜ್ಯದಲ್ಲಿ ಹೊಸ ಆಧ್ಯಾಯವಾಗಿದೆ. ಈ ಕಾರ್ಯಕ್ರಮ ಆರಂಭವಾದ ನಂತರ ಅಧಿಕಾರಿಗಳು ಹಳ್ಳಿಗೆ ಬರ್ತಾರೆ, ಜನಪ್ರತಿನಿಧಿ ಎಲ್ಲಿ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಇನ್ನು ಮುಂದೆ ತಾಲೂಕಿನಲ್ಲಿ ಪ್ರತಿ ತಿಂಗಳು ಡಿ.ಸಿ., ತಹಶೀಲ್ದಾರ ಜೊತೆಗೆ ಸ್ಥಳೀಯ ಶಾಸಕರು ಭಾಗವಹಿಸುವಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

Advertisement

ಪೌತಿ ಅಭಿಯಾನಕ್ಕೂ ಚಾಲನೆ: ಇದೇ ಸಂದರ್ಭದಲ್ಲಿ ಪೌತಿ ವಿತರಣೆ ಅಭಿಯಾನಕ್ಕೆ ಚಾಲನೆ‌ ನೀಡಿದ ಸಚಿವ ಆರ್.ಅಶೋಕ ಅವರು ಗ್ರಾಮದ 29 ಫಲಾನುಭವಿಗಳಿಗೆ ಪೌತಿ ಖಾತೆ ವಿತರಿಸಿ ಉಳಿದವರಿಗೂ ಕೂಡಲೆ ಪೌತಿ ವಿತರಿಸಬೇಕೆಂದು ಸೂಚಿಸಿದರು.

ಗ್ರಾಮಸ್ಥರರು, ಅಧಿಕಾರಿ ವರ್ಗಕ್ಕೆ ಧನ್ಯವಾದ: ಗ್ರಾಮ‌ ವಾಸ್ತವ್ಯಕ್ಕೆ ಬಂದ‌ ತಮ್ಮನ್ನು ಭವ್ಯ ಸ್ವಾಗತ ಕೋರಲು ಇಡೀ ಗ್ರಾಮ‌ ಸಿಂಗರಿಸಿದಲ್ಲದೆ, ಇಂದು ಬೆಳಗಿನ ಉಪಹಾರವಾಗಿ ಇಲ್ಲಿನ ವಿಶೇಷ ಜೋಳದ ರೊಟ್ಟಿ ಊಟ ನೀಡಿ ಉಪಚರಿಸಿ ಗ್ರಾಮ ವಾಸ್ತವ್ಯ ಯಶಸ್ವಿಯಾಗಿ ನೆರವೇರಲು ಕಾರಣರಾದ ಗ್ರಾಮಸ್ಥರಿಗೆ ಮತ್ತು ಇದಕ್ಕೆ ಶ್ರಮಿಸಿದ ಅಧಿಕಾರಿ ವರ್ಗಕ್ಕೆ ಸಚಿವ ಆರ್.ಅಶೋಕ‌ಧನ್ಯವಾದ ತಿಳಿಸಿ ಕಲಬುರಗಿ‌ ಮೂಲಕ ಬೆಂಗಳೂರಿನತ್ತ ಹೊರಟರು.

ದಲಿತ‌ರ‌ ಮನೆಯಲ್ಲಿ ಊಟ ಸವಿದ ಆರ್.ಅಶೋಕ: ಕಂದಾಯ ಸಚಿವ ಆರ್.ಅಶೋಕ ಅವರು ಜಿಲ್ಲೆಯ ಸೇಡಂ ತಾಲೂಕಿನ ಆಡಕಿ ಗ್ರಾಮ ವಾಸ್ತವ್ಯ ಮುಗಿಸಿ ಭಾನುವಾರ ಬೆಳಿಗ್ಗೆ ಗ್ರಾಮದ ದಲಿತರ ಮನೆಯಲ್ಲಿ ಉತ್ತರ ಕರ್ನಾಟಕದ ವಿಶೇಷ ಜೋಳದ ರೊಟ್ಟಿ ಊಟ ಸವಿದರು.

ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ರೈತ ದಶರಥ ರಾಠೋಡ ಅವರ ಮನೆಯಲ್ಲಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮೂಡ, ಡಿ.ಸಿ ಯಶವಂತ ವಿ. ಗುರುಕರ್ ಜೊತೆ ಬೆಳಗಿನ ಉಪಹಾರಕ್ಕೆ ತೆರಳಿ ಜೋಳದ ರೊಟ್ಟಿ‌ ಊಟ ಮಾಡಿದರು. ದಶರಥ ರಾಠೋಡ ಮತ್ತು ವಿಮಲಾಬಾಯಿ ರಾಠೋಡ ಅವರು ಸಚಿವರಿಗೆ ಜೋಳದ ರೊಟ್ಟಿ, ಪುಂಡಿಪಲ್ಯಾ, ಘಟಬ್ಯಾಳಿ, ಹೆಸರುಕಾಳು, ಮೊಸರು, ಶೇಂಗಾ ಹಿಂಡಿ ಜೊತೆಗೆ ಸೌತೆಕಾಯಿ, ಗಜರಿಯನ್ನು ಬಡಿಸಿದರು.

ಇದನ್ನೂ ಓದಿ:ಮೊಬೈಲ್ ಚಾರ್ಜರ್‌ನಲ್ಲಿ ರಹಸ್ಯ ಕ್ಯಾಮೆರಾವಿಟ್ಟು ಅಶ್ಲೀಲ ದೃಶ್ಯ ಸೆರೆ: ಆರೋಪಿ ಬಂಧನ

ನಂತರ ಅಲ್ಲೆ‌ ನೆರದ ಗ್ರಾಮಸ್ಥರ ಅಹವಾಲನ್ನು ಸಚಿವರು ಆಲಿಸಿದರು. ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಒದಗಿಸಬೇಕೆಂದು ಸಚಿವರಲ್ಲಿ ಗ್ರಾಮದ‌ ಮಹಿಳೆ ಶ್ರೀದೇವಿ ಕೋರಿಕೊಂಡರು. ಗ್ರಾಮದಲ್ಲಿ ಬಸ್ ನಿಲ್ದಾಣ ಸ್ಥಾಪಿಸಬೇಕು ಮತ್ತು ಗ್ರಾಮದ ಪುರಾತನ ದೇಗುಲ ಕಸ್ತೂರಿ ರಂಗನಾಥನ ದೇವಸ್ಥಾನ ಜೀರ್ಣೋದ್ಧಾರ ಮಾಡಬೇಕು ಎಂದು ಜಗನ್ನಾಥ ಸ್ವಾಮಿ ಹೇಳಿದರು. ಇದಲ್ಲದೆ ರಸ್ತೆ, ಸ್ಮಶಾನ ಭೂಮಿ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡಿದರು. ಗ್ರಾಮಕ್ಕೆ ರುದ್ರಭೂಮಿ ಮಂಜೂರು ಮಾಡಲಾಗುವುದು. ಇದಕ್ಕೆ ಗ್ರಾಮಸ್ಥರು ಜಮೀನು ನೀಡಲು ಮುಂದೆ ಬಂದಲ್ಲಿ ಉಪ ನೊಂದಣಾಧಿಕಾರಿಗಳ ಕಚೇರಿ ಮೂಲ ದರದ ಮೂರು ಪಟ್ಟು ಹೆಚ್ಚು ಹಣ ನೀಡಿ ಖರೀದಿಸಲಾಗುವುದು ಎಂದು ಸಚಿವ ಆರ್.ಅಶೋಕ ತಿಳಿಸಿದರು.

ನಂತರ ಸಚಿವರು ಗ್ರಾಮದ ಕಲ್ಲು ಗಣಿ ಕೂಲಿ ಕಾರ್ಮಿಕನಾಗಿರುವ ಭೋವಿ ಸಮುದಾಯದ ತಾಯಪ್ಪ ಭೋವಿ ಮನೆಯಲ್ಲಿ ಚಹಾ ಸೇವಿಸಿದರು. ನಂತರ ಶ್ಯಾಮ್ ಬುರುಕಲ್ ಮನೆಗೆ ತೆರಳಿದ ಸಚಿವರು, ಅಲ್ಲಿ ಎಳೆ ನೀರು ಕುಡಿದರು. ಮನೆಗೆ ಬಂದ‌ ಸಚಿವರನ್ನು ಆರತಿ ಮೂಲಕ ಬೆಳಗಿ ಸ್ವಾಗತಿಸಿದ ಮಕ್ಕಳನ್ನು ಸಚಿವರು 1,000 ರೂ. ದಕ್ಷಿಣೆ‌ ನೀಡಿದರು.

ಸಂಸದ ಡಾ.ಉಮೇಶ ಜಾಧವ , ಸಹಾಯಕ ಆಯುಕ್ತ ಕಾರ್ತಿಕ್, ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ ಮತ್ತಿತರ ಸ್ಥಳೀಯ ಮುಖಂಡರು, ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next