ಬೆಂಗಳೂರು: ರಾಜ್ಯ ವಿಧಾನ ಮಂಡಲ ಅಧಿವೇಶನ ಗುರುವಾರ ಆರಂಭವಾಗಲಿದೆ. ಮೊದಲ ದಿನ ರಾಜ್ಯಪಾಲ ವಜುಭಾç ವಾಲಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದರೆ, ಕೊನೆಯ 2 ದಿನ “ಒಂದು ದೇಶ; ಒಂದು ಚುನಾವಣೆ’ ಬಗ್ಗೆ ಚರ್ಚೆ ನಡೆಯಲಿದೆ ಎಂದು ವಿಧಾನ ಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಹೇಳಿದ್ದಾರೆ.
ಮೊದಲ ದಿನ ರಾಜ್ಯಪಾಲರ ಭಾಷಣದ ಅನಂತರ ಸಂತಾಪ ಸೂಚನೆ ನಡೆಯಲಿದೆ. ಉಳಿದ ಆರು ದಿನ ಪ್ರಶ್ನೋತ್ತರ ಹಾಗೂ ವಿವಿಧ ಚರ್ಚೆಗಳಿಗೆ ಕಲಾಪದಲ್ಲಿ ಅವಕಾಶ ಕಲ್ಪಿಸಲಾಗುವುದು. ಸದ್ಯ 11 ಮಸೂದೆಗಳು ಮಂಡನೆಗೆ ಬಂದಿದ್ದು, ಸರಕಾರ ಬೇರೆ ಮಸೂದೆ ಮಂಡನೆ ಮಾಡುವುದಿದ್ದರೆ ಶೀಘ್ರ ಕಳುಹಿಸಿ ಕೊಡುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಸಾರ್ವಜನಿಕರಿಗಿಲ್ಲ ಪ್ರವೇಶ :
ಕೊರೊನಾ ನಿರ್ಬಂಧಗಳ ಹಿನ್ನೆಲೆಯಲ್ಲಿ ಈ ಬಾರಿಯೂ ಕಳೆದ ಅಧಿವೇಶನದಂತೆ ಕೊರೊನಾ ಹಿನ್ನೆಲೆಯಲ್ಲಿ ಕಲಾಪ ವೀಕ್ಷಿಸಲು ಸಾರ್ವಜನಿಕರಿಗೆ ಪ್ರವೇಶಾವಕಾಶ ಇಲ್ಲ. ಎಂದು ಕಾಗೇರಿ ಹೇಳಿದರು.
ದಿಲ್ಲಿ ಘಟನೆ ಪ್ರಜಾತಂತ್ರಕ್ಕೆ ಕಪ್ಪುಚುಕ್ಕೆ. ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಪ್ರಜಾಪ್ರಭುತ್ವದಲ್ಲಿ ಅವಕಾಶ ಇದೆ. ರೈತರ ಸಮಸ್ಯೆ ಪರಿಹರಿಸಲು ಕೇಂದ್ರ ಸರಕಾರ ಕೂಡ ಹಲವಾರು ಬಾರಿ ಮಾತುಕತೆ ನಡೆಸಿದೆ. ಆದರೆ ಮಂಗಳವಾರ ನಡೆದ ಘಟನೆ ದೇಶದ ಜನರಿಗೆ ಘಾಸಿ ಉಂಟು ಮಾಡಿದೆ. ಕೆಂಪುಕೋಟೆ ಮೇಲೆ ಬೇರೆ ಬಾವುಟ ಹಾರಿದ್ದು ಸರಿಯಲ್ಲ.
– ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್