Advertisement

ಒಂದು ಏಶ್ಯಾಡ್‌ ಪದಕ ಗೆದ್ದೊಡನೆ ಕುಸ್ತಿ ಹೀರೋ ಆಗಲಾರೆ: ಭಜರಂಗ್‌

06:00 AM Aug 28, 2018 | |

ಸೋನೆಪತ್‌: ಜಕಾರ್ತಾ ಏಶ್ಯಾಡ್‌ನ‌ಲ್ಲಿ ಭರವಸೆಯ ಕುಸ್ತಿಪಟು ಸುಶೀಲ್‌ ಕುಮಾರ್‌ ಮೊದಲ ಸುತ್ತಿನಲ್ಲೇ ಸೋತದ್ದು, ಭಜರಂಗ್‌ ಪೂನಿಯ ಚಿನ್ನದ ಪದಕ ಜಯಿಸಿದ್ದು ಒಂದೇ ದಿನ ಎಂಬುದು ಕಾಕತಾಳೀಯ. ಇದು ಭಾರತೀಯ ಕುಸ್ತಿಯ ಪರಿವರ್ತನೆಯ ಸಂಕೇತವೇ? ಇಂಥದೊಂದು ಪ್ರಶ್ನೆ ಕೆಲವರನ್ನಾದರೂ ಕಾಡದೇ ಇರಲಿಕ್ಕಿಲ್ಲ.

Advertisement

ಇದೇ ಪ್ರಶ್ನೆಯನ್ನು ಭಜರಂಗ್‌ ಪೂನಿಯ ಅವರಿಗೆ ಕೇಳಿದಾಗ ಅವರು ನೀಡಿದ ಉತ್ತರ ಮಾರ್ಮಿಕವಾಗಿತ್ತು-“ಒಂದು ಏಶ್ಯಾಡ್‌ ಪದಕ ಗೆದ್ದೊಡನೆ ನಾನು ಕುಸ್ತಿ ಹೀರೋ ಎನಿಸಿಕೊಳ್ಳುವುದಿಲ್ಲ. ಸುಶೀಲ್‌ ಕುಮಾರ್‌ ಪದಕ ಗೆಲ್ಲಲಿಲ್ಲ, ನಾನು ಗೆದ್ದಿದ್ದೇನೆ ಅಂದಮಾತ್ರಕ್ಕೂ ನಾನು ಹೀರೋ ಆಗುವುದಿಲ್ಲ. ನಮ್ಮಲ್ಲಿ ಮೌಸಮ್‌ ಖತ್ರಿ, ಸುಮಿತ್‌ ಮೊದಲಾದ ಸಾಕಷ್ಟು ಸೀನಿಯರ್‌ ಕುಸ್ತಿಪಟುಗಳಿದ್ದಾರೆ. ನನ್ನ ತಾಂತ್ರಿಕತೆಯಲ್ಲಿ ಏನಾದರೂ ಸಂಶಯವಿದ್ದರೆ ಅವರಲ್ಲಿ ಕೇಳಲು ನಾನು ಹಿಂಜರಿಯುವುದಿಲ್ಲ’ ಎಂದು ಸೋನೆಪತ್‌ಗೆ ಆಗಮಿಸಿದ ಭಜರಂಗ್‌ ಪೂನಿಯ ಸಂದರ್ಶನವೊಂದರಲ್ಲಿ ಹೇಳಿದರು.

ಜಕಾರ್ತಾದಲ್ಲಿ ಚಿನ್ನ ಗೆದ್ದು ಭಾರತಕ್ಕೆ ಬಂದಿಳಿದ ಭಜರಂಗ್‌ ಕೇವಲ ಒಂದು ದಿನ ಕುಟುಂಬದವರೊಂದಿಗೆ ಕಳೆದು ಅಭ್ಯಾಸಕ್ಕೆ ಮರಳಿದ್ದಾರೆ. “ನನ್ನ ಅಮ್ಮನಿಗೆ ನಾನು ಸಾಧ್ಯವಾದಷ್ಟು ಹೆಚ್ಚು ಸಮಯ ಮನೆಯಲ್ಲೇ ಇರಬೇಕೆಂಬ ಅಭಿಲಾಷೆ. ಆದರೆ ಅಕ್ಟೋಬರ್‌ನಲ್ಲೇ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ ನಡೆಯಲಿದೆ. ಇದಕ್ಕೆ ಸಿದ್ಧತೆ ಆರಂಭಿಸಬೇಕು. ಮುಂದಿನ ಒಲಿಂಪಿಕ್ಸ್‌ನಲ್ಲೂ ನಾನು ಪದಕ ಗೆಲ್ಲಬೇಕೆಂಬುದು ಮನೆಯವರ ಬಯಕೆ’ ಎಂದು ಭಜರಂಗ್‌ ಹೇಳಿದರು.

2013ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಭಜರಂಗ್‌ ಪೂನಿಯ, ಸೆಪ್ಟಂಬರ್‌ ಮೊದಲ ವಾರ ಅಜರ್‌ಬೈಜಾನ್‌ಗೆ ತೆರಳಿ ಅಭ್ಯಾಸ ನಡೆಸುವರು. ಬಳಿಕ ತವರಿಗೆ ಆಗಮಿಸಿ ಸ್ವಲ್ಪ ದಿನ ಇದ್ದು, ಬುಡಾಪೆಸ್ಟ್‌ಗೆ ವಿಮಾನ ಏರುವರು. ಅಲ್ಲಿ ಅ. 22ರಿಂದ 26ರ ತನಕ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ ನಡೆಯಲಿದೆ.

ಒಲಿಂಪಿಕ್ಸ್‌  ಪದಕವೇ ಡಿ.ಪಿ.!
ಭಜರಂಗ್‌ ಪೂನಿಯ ಈಗಾಗಲೇ ಒಲಿಂಪಿಕ್ಸ್‌ ಪದಕದ ಗುರಿ ಹಾಕಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ವ್ಯಾಟ್ಸ್‌ಅಪ್‌ ಡಿ.ಪಿ.ಯಲ್ಲೂ 2010ರ ಟೋಕಿಯೊ ಒಲಿಂಪಿಕ್ಸ್‌ ಪದಕವೊಂದರ ಚಿತ್ರವನ್ನು ಹಾಕಿಕೊಂಡಿದ್ದಾರೆ. ಟೋಕಿಯೊದಲ್ಲಿ ಯಶಸ್ಸು ಕಾಣದೆ ಈ ಚಿತ್ರವನ್ನು ಬದಲಿಸುವುದಿಲ್ಲ ಎಂಬುದು ಪೂನಿಯ ಅವರ ಶಪಥವೂ ಹೌದು!
 

Advertisement
Advertisement

Udayavani is now on Telegram. Click here to join our channel and stay updated with the latest news.

Next