Advertisement

ಜಿಲ್ಲೆಗೊಂದು ಹೆಚ್ಚುವರಿ ಬಾಲ ನ್ಯಾಯ ಮಂಡಳಿ ಸ್ಥಾಪಿಸಿ: ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

08:26 PM Feb 18, 2021 | Team Udayavani |

ಬೆಂಗಳೂರು: “ಬಾಲ ನ್ಯಾಯ ಕಾಯ್ದೆ’ ಪ್ರಕಾರ ಕಾನೂನು ಜೊತೆಗಿನ ಸಂಘರ್ಷಕ್ಕೊಳಗಾಗಿರುವ ಮಕ್ಕಳ ಪ್ರಕರಣಗಳ ನಿರ್ವಹಣೆಗೆ ಪ್ರತಿ ಜಿಲ್ಲೆಗೆ ಒಂದೊಂದು ಹೆಚ್ಚುವರಿ ಬಾಲ ನ್ಯಾಯ ಮಂಡಳಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ರಾಜ್ಯದಲ್ಲಿ ಬಾಲ ನ್ಯಾಯ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ವಿಚಾರವಾಗಿ ಹೈಕೋರ್ಟ್‌ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡ ಹಾಗೂ “ಬಚಪನ್‌ ಬಚಾವೋ ಆಂದೋಲನ್‌’ ಸ್ವಯಂಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಹಾಗೂ ನ್ಯಾ. ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

ಬಾಲ ನ್ಯಾಯ ಮಂಡಳಿಗಳು ನಿಯಮಿತವಾಗಿ ಕಾರ್ಯನಿರ್ವಹಿಸುವಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು. ಬಾಲ ನ್ಯಾಯ ಕಾಯ್ದೆ ಅನುಸರಿಸಿ ಎಲ್ಲಾ ಬಾಲ ನ್ಯಾಯ ಮಂಡಳಿಗಳ ಕಚೇರಿಗಳನ್ನು ಸಮಾನ ರೀತಿಯಲ್ಲಿ ವಿನ್ಯಾಸಗೊಳಿಸಬೇಕು. ಜೊತೆಗೆ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಜೊತೆಗೆ ಸಮಾಲೋಚಿಸಿದ ಬಳಿಕ ಅವುಗಳಿಗೆ ಮೂಲಸೌಕರ್ಯ ಹಾಗೂ ಮಾನವ ಸಂಪನ್ಮೂಲ ಒದಗಿಸಲು ಏಕರೂಪ ನೀತಿ ಅನುಸರಿಸಬೇಕು. ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲ ಒದಗಿಸುವುದರ ಬಗ್ಗೆ ಹೈಕೋರ್ಟ್‌ ಅಂತಿಮ ಮಾರ್ಗಸೂಚಿ ಹೊರಡಿಸುವವರೆಗೆ ಸರ್ಕಾರ ಸಪರ್ಮಕ ಪ್ರಮಾಣದಲ್ಲಿ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಹೈಕೋರ್ಟ್‌ ಹೇಳಿದೆ.

ಇದನ್ನೂ ಓದಿ:ದೇಶದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಮಳಿಗೆ: ಸದಾನಂದ ಗೌಡ

ಬಾಲ ನ್ಯಾಯ ಕಾಯ್ದೆ ಅನುಷ್ಠಾನ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಯಾವುದಾದರೂ ಕ್ರಮಗಳನ್ನು ಕೈಗೊಂಡಿದೆಯೇ ಎಂಬ ಬಗ್ಗೆ ಒಂದು ತಿಂಗಳಲ್ಲಿ ಮಾಹಿತಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಬಾಲ ನ್ಯಾಯ ಕಾಯ್ದೆಯಡಿ ಕಾರ್ಯಚರಿಸುತ್ತಿರುವ ಸಂಸ್ಥೆಗಳ ಕಾರ್ಯನಿರ್ವಹಣೆ ಮತ್ತು ಮಕ್ಕಳಿಗೆ ಸಂಬಂಧಿಸಿದ ನೀತಿಗಳ ಜಾರಿ ಬಗ್ಗೆ ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಸಲು ಪರಿಗಣಿಸುವಂತೆ, ಎಲ್ಲಾ ಬಾಲ ನ್ಯಾಯ ಮಂಡಳಿಗಳಲ್ಲಿ ವಿಡಿಯೋ ಕಾನ್ಫರೆನ್ಸ್‌ ನಡೆಸಲು ಬೇಕಾಗುವ ಮೂಲಭೂತಸೌಕರ್ಯಗಳನ್ನು ಒದಗಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್‌ ಇದರ ಅನುಪಾಲ ವರದಿಯನ್ನು ಒಂದು ತಿಂಗಳಲ್ಲಿ ಸಲ್ಲಿಸಲು ನಿರ್ದೇಶನ ನೀಡಿ ವಿಚಾರಣೆಯನ್ನು ಮಾ.2ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next