Advertisement

ಒಂದಲ್ಲಾ ಎರಡಲ್ಲಾ..

04:48 PM Jun 22, 2021 | Team Udayavani |

ಒಂದಲ್ಲಾ ಎರಡಲ್ಲಾ  ಎಂಬುವುದು ನಾನು ನೋಡಿದ ಅದ್ಭುತ ಚಲನಚಿತ್ರಗಳಲ್ಲಿ ಒಂದು.  ಮಧ್ಯಮ ಕುಟುಂಬದ ಹುಡುಗನೊಬ್ಬನ ಗೆಳತಿ ಕಳೆದುಹೋದಾಗ ಆತನಿಗಾಗುವ ನೋವು, ಅವಳನ್ನು ಹುಡುಕಲು ಪಡುವ ಪ್ರಯತ್ನ ಈ ಸಿನೆಮಾದ ಮೂಲ ಕಥೆ.

Advertisement

ಸತ್ಯಪ್ರಕಾಶ್‌ ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾದ ಬಗ್ಗೆ ಅದೇನೆನ್ನಲಿ ಹೇಳಿ. ಮೊದಮೊದಲು ಇದೇನಪ್ಪಾ ಎಂದು ಕೌತುಕ ತರಿಸಿದರೂ ಧರ್ಮ, ಜಾತಿ, ಪಂಥಕ್ಕಿಂತ ಮೇಲಾದ ಶಕ್ತಿ ಪ್ರೀತಿಗಿದೆ ಎಂದು ಸಾರುವ ಈ ಚಿತ್ರದಲ್ಲಿ  ಸಮೀರಾ, ಬಾನು ಅವರದ್ದೇ ವಿಶೇಷ ಪಾತ್ರ. ಗೊಂದಲಕ್ಕೊಳಗಾಗಬೇಡಿ. ಇಲ್ಲಿ ಸಮೀರಾ ಎಂಬುವ ಬಾಲಕ ಚಿತ್ರದ ನಟ, ಬಾನು ಎಂಬಾಕೆ ಅವನ ಸ್ನೇಹಿತೆ. ಅವಳು ಶ್ವೇತ ವರ್ಣದ ಹಸು. ಹುಟ್ಟಿದ್ದು ಅದ್ಯಾವ ಧರ್ಮದಲ್ಲಾದರೇನು…ಪ್ರೀತಿ ಸ್ನೇಹದ ಬಂಧಕ್ಕೆ ಅದರ ಅನಿವಾರ್ಯವೇನು ಎಂದು ಕೇಳುತ್ತದೆ ಈ ಸಿನೆಮಾ.

ಆರಂಭದಿಂದಲೂ ನೋಡುಗರನ್ನು ಹಿಡಿದಿಟ್ಟುಕೊಳ್ಳುವ ಚಿತ್ರ ಮೊದಲಿಗೆ ಆತನ ಆಟ, ಮುಗ್ಧತೆ, ಪ್ರೀತಿಯಲ್ಲಿ ಸೆಳೆದರೆ ಮತ್ತೆ ಮುಂದೆ ಬರುವ ಹಲವು ವಿಭಿನ್ನ ಪಾತ್ರಗಳು ಸಮಾಜದ ವಿಭಿನ್ನ ಮನೋಭಾವಗಳನ್ನು ಚಿತ್ರಿಸುತ್ತದೆ. ಬಾನು ಕಳೆದುಹೋದ ಮೇಲೆ ಒಂದೇ ದಿನದಲ್ಲಿ ಮುಗಿಯುವ ಹುಟುಕಾಟದಲ್ಲಿ ಸಮೀರಾ ಹಲವಾರು ಸವಾಲುಗಳನ್ನು ಎದುರಿಸುತ್ತಾನೆ. ತಾನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಬಾನು ಒಮ್ಮೆ ಕಳೆದು ಹೋದಾಗ ತಾನು ಪಟ್ಟ ಕಷ್ಟ, ಇಟ್ಟ ಬೇಡಿಕೆಗಳು ದೇಗುಲ- ಮಸೀದಿಗಳನ್ನು ಭೇದವಾಗಿ ನೋಡಲೇ ಇಲ್ಲ. ಅಲ್ಲಿ ಎಲ್ಲವೂ ಸಮಾನ. ಸಿನೆಮಾದಲ್ಲಿ ಬರುವ ಎರಡು ಕುಟುಂಬಗಳ ಮಧ್ಯೆ ಇದ್ದದ್ದು ಪ್ರೀತಿಯೆಂಬ ಅನುಬಂಧವೇ ಹೊರತು ಧರ್ಮದ ಮೇಲಿನ ಲೆಕ್ಕಾಚಾರವಲ್ಲ. ವ್ಹಾವ್‌…. ಹೀಗೊಂದಿದೆ ಬದುಕು. ನಾವು ಬದುಕುವ ರೀತಿಯಲ್ಲಿ  ಎಲ್ಲವೂ ಅಡಗಿದೆ ಅನ್ನುತ್ತದೆ ಪ್ರತೀ ದೃಶ್ಯವ ಕಣ್ತುಂಬಿಕೊಂಡಾಗ ನಮ್ಮ ಮನಸ್ಸು.

ಇಡೀ ಸಿನೆಮಾದಲ್ಲಿ  ಸಮೀರಾನ ಕಷ್ಟದ ಬದುಕಿನ ನಡುವೆಯೂ ಆತನ ಬಾನುವಿನ ಹುಡುಕಾಟದ ನಡುವೆ ಸಿಕ್ಕಿ ಮುದ್ದೆಯಾದರೂ ಮತ್ತೆ ಸಿಲುಕ ಬಯಸುವುದು ಅಲ್ಲೇ…. ಮತ್ತದೇ ಪ್ರೀತಿಯಲ್ಲಿ.

ಜಾತಿ, ಧರ್ಮಗಳಿಗೆ ಮೀರಿದ್ದು ಪ್ರೀತಿ. ಸಮೀರಾನಿಗೆ  ಬಾನುವಿನ ಮೇಲಿದ್ದ ಪ್ರೀತಿ, ಆತನ ಮುಗ್ಧ ಮನಸ್ಸು ಚಿತ್ರದಲ್ಲಿ ಬರುವವರ ಹಲವರ ಮನವನ್ನು ಬದಲಾಯಿಸುತ್ತದೆ.  “ಭೂಮಿ ತುಂಬ ಚಿಕ್ಕದಿದೆ..ಬಾಂಧವ್ಯ ದೊಡ್ಡದಿದೆ ಕೇಳು ಮನುಜನೇ ಜೊತೆಯಾಗು ಸುಮ್ಮನೆ ಬಾಂಧವ್ಯ ದೊಡ್ಡದಿದೆ’ ಎನ್ನುತ್ತಾ ಸಿನೆಮಾ ಮುಗಿಯುತ್ತದೆ. ಆದರೆ ನೋಡುಗರಿಗೆ ಒಂದೊಳ್ಳೆಯ ಸಂದೇಶವನ್ನು ನೀಡುತ್ತಾ ತಮ್ಮ ಬದುಕನ್ನು ವಿಮರ್ಶಿಸುವಂತೆ ಮಾಡುತ್ತದೆ.

Advertisement

ಎಲ್ಲವನ್ನು  ಜಾತಿ, ಧರ್ಮ ಎಂದು ಮಲಿನ ಮನಸ್ಸಿನಲ್ಲೇ ಅಳೆಯುವ ಮನುಜ ನಿರ್ದೇಶಕರ ಇಂತಹ ಯೋಚನೆಗೆ ತಲೆಬಾಗಲೇಬೇಕು. ಚಿತ್ರದ ಕೊನೆಯಲ್ಲಿ ಬಾನು ಸಮೀರಾ ಒಂದಾದಾಗ ಕೆನ್ನೆ ತೋಯುವ ಕಂಬನಿಯೂ ಕೂಡ ಧರ್ಮ, ಜಾತಿಯನ್ನು ಮೀರಿ ನೆಲ ಸ್ಪರ್ಶಿಸುತ್ತದೆ.  ಭೂಮಿ ಚಿಕ್ಕದಿದೆ, ಭಾಂದವ್ಯ ದೊಡ್ಡದಿದೆ ಎಂಬ ಅರ್ಥಗರ್ಭಿತ ಹಾಡಿನೊಂದಿಗೆ ಸಿನಿಮಾ ಅಂತ್ಯವಾಗುತ್ತದೆ. ನಮ್ಮ  ಭಾವ ಮನದಲ್ಲೇ ಸಮರ ಮಾಡುತ್ತದೆ…..

 

 ಅರ್ಪಿತಾ ಕುಂದರ್‌

ವಿವೇಕಾನಂದ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next