Advertisement

15 ನಿಮಿಷದ ವಿಳಂಬಕ್ಕೆ ಕರ್ನಾಟಕದ ಸ್ಥಬ್ದಚಿತ್ರವನ್ನು ರಕ್ಷಣಾ ಇಲಾಖೆ ತಿರಸ್ಕರಿಸಿತ್ತು!

12:51 PM Jan 18, 2022 | Team Udayavani |

ಬೆಂಗಳೂರು:ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸ್ಥಬ್ದಚಿತ್ರ ಮೆರವಣಿಗೆಗೆ ಆಯ್ಕೆಯಾಗುವುದು ಪ್ರತಿಯೊಂದು ರಾಜ್ಯಕ್ಕೂ ಹೆಮ್ಮೆ. ಈ ಪ್ರತಿಷ್ಠೆಯ ಗರಿಯನ್ನು ಪಡೆಯುವುದರಲ್ಲಿ ಕರ್ನಾಟಕ ಸದಾ ಒಂದು ಹೆಜ್ಜೆ ಮುಂದೆ ಇದೆ. ಹದಿಮೂರನೇ ಬಾರಿಗೆ ರಾಜ್ಯದ ಸ್ಥಬ್ದಚಿತ್ರ ಆಯ್ಕೆಯಾಗುತ್ತಿದೆ. ಆದರೆ ಆಯ್ಕೆ ಪ್ರಕ್ರಿಯೆಗೆ “ಥೀಮ್” ಕೊಡುವ ಸಭೆಗೆ ಹಾಜರಾಗುವುದಕ್ಕೆ ಹದಿನೈದು ನಿಮಿಷ ತಡವಾದ ಕಾರಣಕ್ಕೆ ರಾಜ್ಯದ ಪ್ರಸ್ತಾವನೆ ನಿರಾಕರಿಸಲ್ಪಟ್ಟ ವಿಚಾರ ನಿಮಗೆ ಗೊತ್ತೆ ?

Advertisement

ಹೌದು. ಕೇವಲ ಹದಿನೈದು ನಿಮಿಷದ ವಿಳಂಬಕ್ಕಾಗಿ ಹಿಂದೊಮ್ಮೆ ಕರ್ನಾಟಕದ ಸ್ಥಬ್ದಚಿತ್ರಕ್ಕೆ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸುವ ಅವಕಾಶ ತಪ್ಪಿ ಹೋಗಿತ್ತು. ಭಾರತೀಯ ರಕ್ಷಣಾ ಇಲಾಖೆ ಇಂದಿಗೂ ಪಾಲಿಸಿಕೊಂಡು ಬಂದಿರುವ ಶಿಸ್ತು ಹಾಗೂ ಶಿಷ್ಟಾಚಾರದ ವ್ಯಾಪ್ತಿಯಲ್ಲಿ ಕೊಂಚ ಏರುಪೇರಾದರೂ ಪರೇಡ್‌ಗೆ ಆಯ್ಕೆಯಾಗುವ ಅವಕಾಶ ತಪ್ಪಿಹೋಗುತ್ತದೆ. ಕರ್ನಾಟಕಕ್ಕೆ ಈ ಹಿಂದೆ ಇಂಥ ಸನ್ನಿವೇಶ ಎದುರಾಗಿತ್ತು…ಈ ಕುರಿತ ಕಿರುನೋಟ ಇಲ್ಲಿದೆ…

ರಾಷ್ಟ್ರಪತಿಗಳು ಅನುಮೋದಿಸುತ್ತಾರೆ :
ಸ್ಥಬ್ದ ಚಿತ್ರದ ಆಯ್ಕೆ ಪ್ರಕ್ರಿಯೆ ನಡೆಸುವುದು ರಕ್ಷಣಾ ಇಲಾಖೆ. ಇಲ್ಲಿ ಗುಣಮಟ್ಟಕ್ಕೆ ಮಾತ್ರ ಆದ್ಯತೆ. ಉತ್ತರ-ದಕ್ಷಿಣ, ಭಾಷೆ-ಬಾಂಧವ್ಯ ಇತ್ಯಾದಿ ಪ್ರತ್ಯೇಕಿಕರಣ ಅಥವಾ ಕ್ಷುಲ್ಲಕ ರಾಜಕಾರಣಕ್ಕೆ ಅವಕಾಶವೇ ಇಲ್ಲ. “ಬೆಸ್ಟ್ ಆಫ್ ಬೆಸ್ಟ್ ಥೀಮ್’’ ಮಾತ್ರ ಆಯ್ಕೆಯಾಗುತ್ತದೆ. ಹೀಗೆ ಆಯ್ಕೆಗೊಂಡ ರಾಜ್ಯದ ಥೀಮ್‌ಗೆ ರಕ್ಷಣಾ ಸಚಿವರು ಅಂಕಿತ ಹಾಕಿದ ಬಳಿಕ ರಾಷ್ಟ್ರಪತಿ ಅನುಮೋದಿಸಬೇಕಾಗುತ್ತದೆ. ಅಲ್ಲಿಯವರೆಗೂ ಯಾವ ರಾಜ್ಯ ಆಯ್ಕೆಯಾಗಿದೆ ಎಂಬುದರ ಕಿಂಚಿತ್ ಸುಳಿವೂ ಇರುವುದಿಲ್ಲ. ಈ ಬಾರಿ ಕೋವಿಡ್ ಕಾರಣಕ್ಕೆ 21 ಸ್ಥಬ್ದ ಚಿತ್ರಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ.

ಆಯ್ಕೆ ಹೇಗೆ ? :
ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಬಗ್ಗೆ ಸಾಕಷ್ಟು ಮುಂಚಿತವಾಗಿಯೇ ಮಾಹಿತಿ ನೀಡಲಾಗಿರುತ್ತದೆ. ಮೊದಲ ಹಂತದಲ್ಲಿ ಆಯಾ ರಾಜ್ಯಗಳು ತಾವು ರಚನೆ ಮಾಡಲು ಉದ್ದೇಶಿಸಿರುವ ಸ್ಥಬ್ದಚಿತ್ರಕ್ಕೆ ಸಂಬಂಧಪಟ್ಟಂತೆ 5ರಿಂದ6 ಥೀಮ್ ಕಳುಹಿಸಿಕೊಡಬೇಕಾಗುತ್ತದೆ. ಗುಣಮಟ್ಟ ಹಾಗೂ ಶಿಷ್ಟಚಾರ ಆಧರಿಸಿ ಆ ಪೈಕಿ ಅತ್ಯುತ್ತಮವಾದ 2 ಥೀಮ್‌ನ್ನು ಆಯ್ಕೆ ಮಾಡಲಾಗುತ್ತದೆ. ನಂತರ ಇವೆರಡರ ಪೈಕಿ ಯಾವುದು ಶ್ರೇಷ್ಠ ಎಂಬುದನ್ನು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳ ಸಮಿತಿ ನಿರ್ಧರಿಸುತ್ತದೆ.

ಈ ರೀತಿ ಆಯ್ಕೆಯಾದ “ಥೀಮ್” ಸ್ಥಬ್ಧಚಿತ್ರ ಮೆರವಣಿಗೆಗೆ ಸೆಲೆಕ್ಟ್ ಆಗಿದೆ ಎಂದು ಅರ್ಥವಲ್ಲ. ಈ ಥೀಮ್‌ಗೆ ಅನುಗುಣವಾದ ಸಾಹಿತ್ಯ, ಬೊಂಬೆಗಳು, ಹಿನ್ನೆಲೆ ಸಂಗೀತ, ನೃತ್ಯ, ಬೇಕಾದ ಕಲಾವಿದರ ಬಗ್ಗೆ ಆಯಾ ರಾಜ್ಯಗಳು ಮಾಹಿತಿ ನೀಡಬೇಕಾಗುತ್ತದೆ. ಗರಿಷ್ಠ 12 ಕಲಾವಿದರು ಮಾತ್ರ ಭಾಗವಹಿಸುವುದಕ್ಕೆ ಅವಕಾಶ ಇರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಸ್ಥಬ್ದ ಚಿತ್ರದಿಂದ ಯಾವ ಭಾವನೆಗೂ ಧಕ್ಕೆಯಾಗುವಂತ ಸನ್ನಿವೇಶ ಒದಗಬಾರದು ಎಂದು ರಕ್ಷಣಾ ಇಲಾಖೆ ಪೂರ್ವಸೂಚನೆ ನೀಡುತ್ತದೆ. ಚಿತ್ರಗಳ ಎತ್ತರ, ಗಾತ್ರ ಸೇರಿದಂತೆ ಎಲ್ಲದಕ್ಕೂ ಶಿಷ್ಟಾಚಾರ ಇರುತ್ತದೆ. ಈ ಪ್ರಕ್ರಿಯೆ ಸಂದರ್ಭದಲ್ಲೇ ಸಾಕಷ್ಟು ರಾಜ್ಯಗಳು ಸ್ಪರ್ಧೆಯಿಂದ ಹೊರ ಬೀಳುತ್ತವೆ. ಈ ಸಭೆಗೆ ಹದಿನೈದು ನಿಮಿಷ ತಡವಾಗಿ ಹಾಜರಾದ ಕಾರಣಕ್ಕೆ ಕರ್ನಾಟಕ ಒಮ್ಮೆ ಸ್ಪರ್ಧೆಯ ಅವಕಾಶವನ್ನೇ ಕಳೆದುಕೊಂಡಿತ್ತು.

Advertisement

ಕರಕುಶಲ ತೊಟ್ಟಿಲು :
ಈ ಬಾರಿಯೂ ಕರ್ನಾಟಕ ಸ್ಥಬ್ದಚಿತ್ರ ಮೆರವಣಿಗೆಗೆ ಆಯ್ಕೆಯಾಗಿದೆ. ಕರ್ನಾಟಕ ಕರಕುಶಲ ಕಲೆಗಳ ತೊಟ್ಟಿಲು ಎಂಬ ಶೀರ್ಷಿಕೆಯ ಅನ್ವಯ ನೀಡಲಾದ ಥೀಮ್ ಈ ಬಾರಿ ಆಯ್ಕೆಯಾಗಿದೆ. ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ರಾಜ್ಯ ಕರ್ನಾಟಕ. ತಮಿಳುನಾಡು, ಕೇರಳ, ಗೋವಾ, ಆಂಧ್ರಪ್ರದೇಶ, ಪುದುಚೇರಿ, ತೆಲಂಗಾಣ ಸಲ್ಲಿಸಿದ ಥೀಮ್‌ಗಳು ನಿರಾಕರಿಸಲ್ಪಟ್ಟಿದೆ. ಯಾವುದೇ ರಾಜ್ಯದ ಪ್ರಸ್ತಾಪ ಆಯ್ಕೆಯಾಗಿಲ್ಲ.

ಪ್ರಶಸ್ತಿ ಕೈ ತಪ್ಪಿತ್ತು :
ಕಳೆದ ವರ್ಷವೂ ರಾಜ್ಯದ ಸ್ಥಬ್ದಚಿತ್ರ ಗಣರಾಜ್ಯೋತ್ಸವ ಮೆರವಣಿಗೆಗೆ ಆಯ್ಕೆಯಾಗಿತ್ತು. ವಿಜಯನಗರ ವೈಭವದ ಥೀಮ್ ಆಯ್ಕೆಯಾಗಿತ್ತು. ಮೊದಲ ಮೂರು ಸ್ಥಾನಗಳ ಪೈಕಿ ಒಂದು ರಾಜ್ಯದ ಪಾಲಾಗುವ ಎಲ್ಲ ಸಾಧ್ಯತೆ ಇತ್ತು. ಆದರೆ ಪರೇಡ್ ನಡೆಯುವ ಸಂದರ್ಭದಲ್ಲಿ ಪ್ರತಿಭಟನಾ ನಿರತ ರೈತರ ಗುಂಪು ಕೆಂಪುಕೋಟೆಯತ್ತ ಸಾಗಿಬಂತು. ಎಲ್ಲೆಡೆ ಬೊಬ್ಬೆ, ಆತಂಕದ ಸನ್ನಿವೇಶ ನಿರ್ಮಾಣವಾದಾಗ ರಾಜ್ಯದ ಸ್ಥಬ್ದಚಿತ್ರದ ವಾಹನದಲ್ಲಿದ್ದ ಕಲಾವಿದರು ಗಾಬರಿಯಾಗಿ ವಾಹನದಿಂದ ಜಿಗಿದು ಸುರಕ್ಷಿತ ಸ್ಥಳಕ್ಕೆ ಓಡಿ ಹೋಗಿದ್ದರು. ತಳ್ಳಾಟ-ನೂಕಾಟ, ಭಯದ ಓಡಾಟದಿಂದ ಗೊಂದಲ ಸೃಷ್ಟಿಯಾಗಿತ್ತು. ಆ ಸಂದರ್ಭದಲ್ಲಿ ನಮ್ಮ ರಾಜ್ಯದ ಸ್ಥಬ್ದಚಿತ್ರ ವಾಹನದಲ್ಲಿದ್ದ ಸುಮಾರು 5 ಲಕ್ಷ ರೂ. ಮೌಲ್ಯದ ಬಂಗಾರವೂ ಕಾಣೆಯಾಗಿತ್ತು. ಅಂತಿಮ ಕ್ಷಣದಲ್ಲಿ ಕಲಾವಿದರು ವಾಹನದಲ್ಲಿ ಇಲ್ಲದ ಕಾರಣಕ್ಕೆ ಕರ್ನಾಟಕಕ್ಕೆ ಪ್ರಶಸ್ತಿ ಕೈ ತಪ್ಪಿತ್ತು ಎಂಬ ಕುತೂಹಲಕಾರಿ ಸಂಗತಿ ಬಹಳಷ್ಟು ಜನರಿಗೆ ಗೊತ್ತೇ ಇಲ್ಲ.

*ರಾಘವೇಂದ್ರ ಭಟ್

Advertisement

Udayavani is now on Telegram. Click here to join our channel and stay updated with the latest news.

Next