Advertisement

ಸಮೃದ್ಧಿ , ಸಂತೋಷದ ಹೊನಲಿನಲ್ಲಿ “ಓಣಂ’

08:30 PM Sep 09, 2019 | Sriram |

ಕಾಸರಗೋಡು: ದೇವರ ನಾಡು ಎಂಬ ವೈಶಿಷ್ಟ್ಯವನ್ನು ಪಡೆದಿರುವ ಕೇರಳದಲ್ಲಿ ನ್ಯಾಯ ನಿಷ್ಠೆಯಿಂದ ನಾಡು ಬೆಳಗಿಸಿದ ಆದರ್ಶ ರಾಜ ಮಾವೇಲಿ (ಮಹಾಬಲಿ) ತಮ್ಮನ್ನೆಲ್ಲ ಭೇಟಿ ಮಾಡಿ, ಯೋಗಕ್ಷೇಮ ವಿಚಾರಿಸಿ ಹೋಗುತ್ತಾನೆ ಎಂಬ ನಂಬಿಕೆಯಿಂದ ಮಲಯಾಳಿಗಳು ಓಣಂ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಶ್ರದ್ಧಾ ಭಕ್ತಿಯಿಂದ, ಸಂಭ್ರಮ, ಸಡಗರ ದಿಂದ ಆಚರಿಸುವುದು ರೂಢಿ. ಹತ್ತು ದಿನಗಳ ತನಕ ಆಚರಿಸುವ ಓಣಂ ಹಬ್ಬದ ಪ್ರಮುಖ ದಿನವಾದ “ತಿರುವೋಣಂ’ವನ್ನು ಸೆ. 11ರಂದು ವಿಶೇಷ ಸಂಭ್ರಮದಿಂದ ಕೊಂಡಾಡಲಿದ್ದಾರೆ.

Advertisement

ಸುಖ, ಶಾಂತಿ, ನೆಮ್ಮದಿಯ ಮತ್ತು ಭಾವೈಕ್ಯದ, ಸಾಮರಸ್ಯದ ಸಂದೇಶವನ್ನು ಸಾರುವ ಓಣಂ ಹಬ್ಬ ತನ್ನದೇ ಆದ ವೈಶಿಷ್ಟ್ಯವನ್ನು ಪಡೆದುಕೊಂಡಿದ್ದು, ಕೇರಳೀಯರ ನಾಡಹಬ್ಬವಾಗಿಯೂ, ರಾಷ್ಟ್ರೀಯ ಹಬ್ಬ ವಾಗಿಯೂ ಆಚರಿಸುತ್ತಾರೆ. ಓಣಂ ಹಬ್ಬ ದಂಗವಾಗಿ ವಿಶೇಷವಾಗಿ ರೂಪು ಪಡೆಯುವ ಹೂವಿನ ರಂಗೋಲಿ “ಪೂಕಳಂ’ ರಚಿಸಿ “ಮಾವೇಲಿ’ಯನ್ನು ಬರಮಾಡಿಕೊಳ್ಳುತ್ತಾರೆ. ಮನೆ, ಮಠ, ದೇವಸ್ಥಾನ, ದೈವಸ್ಥಾನ, ತರವಾಡು ಮನೆಗಳಲ್ಲಿ ಪೂಕಳಂ ರಚಿಸಿ ಸಂಭ್ರಮಿಸುವ ಕೇರಳೀಯರು “ಸದ್ಯ’ವನ್ನು ಉಂಡು (ವಿವಿಧ ಬಗೆಯ ಭೋಜನ) ಪರಸ್ಪರ ಶುಭಾಶಯವನ್ನು ಕೋರಿ ಮುಂದಿನ ದಿನಗಳಲ್ಲಿ ಸುಖ, ಶಾಂತಿ, ನೆಮ್ಮದಿಯ ಬದುಕಿಗಾಗಿ ಪ್ರಾರ್ಥಿಸುತ್ತಾರೆ. ಹೆಣ್ಣು ಮಕ್ಕಳ ಉತ್ಸವವೆಂದೇ ಪರಿಗಣಿಸಿ ರುವ ಉತ್ರಾಡಂ ಸೆಪ್ಟಂಬರ್‌ 10ರಂದು ಗಂಡು ಮಕ್ಕಳು ಹಾಗೂ ಇತರರಿಗಿರುವ ತಿರುವೋಣಂ ಸೆ. 11ರಂದು ಆಚರಿಸುವರು.

ಓಣಂ ಹಬ್ಬದ ಪ್ರಮುಖ ದಿನವಾದ “ತಿರುವೋಣಂ’ ಸಂಭ್ರಮದಿಂದ ಆಚರಿಸು ವರು. ಬೆಳಗ್ಗೆ ಎದ್ದು ಶುಚೀಭೂìತರಾಗಿ ಸಮೀಪದ ದೇವಸ್ಥಾನಗಳಿಗೆ, ಮಂದಿರಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಕುಟುಂಬ ಸಮೇತರಾಗಿ ಓಣಂ ಸಂತೋಷವನ್ನು ಹಂಚಿಕೊಳ್ಳುತ್ತಾರೆ. ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವುದೂ ಇದೆ.

ಕೇರಳೀಯರು ಎಲ್ಲೇ ಇರಲಿ. ಓಣಂ ಬಂತೆಂದರೆ ತವರಿಗೆ ತಲುಪಿ ಕುಟುಂಬದ ಜತೆ ಸೇರಿಕೊಳ್ಳುತ್ತಾರೆ. ಸುಖದುಃಖಕ್ಕೆ ಮಿಡಿಯುತ್ತಾರೆ. ಕೇರಳೀಯರಿಗೆ ಓಣಂ ಕೇವಲ ಹಬ್ಬ ಮಾತ್ರವಲ್ಲ. ಅದು ಸಮೃದ್ಧಿಯ ದಿನವೂ ಹೌದು. ಕೃಷಿಕರ ದಿನವೂ ಹೌದು. ಈ ಕಾರಣದಿಂದ ಓಣಂ ಕೇರಳೀಯರಿಗೆ ರಾಷ್ಟ್ರೀಯ ಹಬ್ಬ.

ಮಾವೇಲಿ ರಾಜನು ವರ್ಷಕ್ಕೊಮ್ಮೆ ಭೂಮಿಗೆ ಬಂದು ತನ್ನ ಪ್ರಜೆಗಳ ಸಂಕಷ್ಟಗಳನ್ನು ಪರಿಹರಿಸುತ್ತಾನೆ ಎಂಬ ನಂಬಿಕೆಯಲ್ಲಿ ಆಚರಿಸುವ ಓಣಂ ಅತ್ತ ನಕ್ಷತ್ರದಿಂದ ತಿರುವೋಣಂ ವರೆಗಿನ 10 ದಿವಸಗಳ ಕಾಲ ಸಂಭ್ರಮದಿಂದ ಕುಣಿದಾಡುತ್ತಾರೆ. ಓಣಂಗೆ ಸಂಬಂಧಿಸಿ ಹಲವು ಕಥೆಗಳನ್ನು ಹೆಣೆಯಲಾಗಿದೆ. ಕನ್ನಡಿಗರು ನಂಬಿರುವ ಮಹಾಬಲಿಯನ್ನು ಮಲಯಾಳಿಗಳು “ಮಾವೇಲಿ’ ಎನ್ನುವ ಬಲಿಚಕ್ರವರ್ತಿಯ ಸುತ್ತ ಓಣಂ ಸಂಬಂಧ ಕಥೆಯನ್ನು ಹೆಣೆಯಲಾಗಿದೆ.

Advertisement

ಓಣಂ ಹಬ್ಬವನ್ನು ಮಲಯಾಳಿಗಳು ವಿಶಿಷ್ಟವಾಗಿ ಆಚರಿಸುತ್ತಾರೆ. ಇಲ್ಲಿನ ಪ್ರಧಾನ ಆಕರ್ಷಣೆ ಹೂವಿನ ರಂಗೋಲಿ ಪೂಕಳಂ. ಇದಕ್ಕಾಗಿ ಮಕ್ಕಳು ಓಣಂ ಪಾಟನ್ನು (ಹಾಡು) ಹಾಡುತ್ತಾ ಹೂಗಳನ್ನು ಕೊಯ್ದು ತರುತ್ತಾರೆ. ಬಳಿಕ ಮನೆಯ ಮುಂಭಾಗದಲ್ಲಿ ಪೂಕಳಂ ರಚಿಸಲಾಗುತ್ತದೆ. ಇದರಲ್ಲೂ ಎರಡು ರೀತಿ ಇದೆ. ಒಂದು ಸಾಧಾರಣ ಪೂಕಳಂ. ಇನ್ನೊಂದು ವಾಮನನ ಪ್ರತಿರೂಪವಾದ ತ್ರಿಕ್ಕಾಕ್ಕರೆಯಪ್ಪನನ್ನು ಹೂ ರಂಗೋಲಿಯ ಮಧ್ಯದಲ್ಲಿ ಸ್ಥಾಪಿಸಲಾಗುತ್ತದೆ.

ಓಣಂ ಸದ್ಯ
ಓಣಂ ಹಬ್ಬದ ದಿನದಲ್ಲಿ ಹೂವಿನ ರಂಗೋಲಿ ಪೂಕಳಂ ಹೇಗೆ ವೈಶಿಷ್ಟ್ಯವನ್ನು ಪಡೆದಿದೆಯೋ ಅದೇ ರೀತಿ “ಓಣಂ ಸದ್ಯ’ (ಓಣಂ ಭೋಜನ) ಅಷ್ಟೇ ಮಹತ್ವವನ್ನು ಪಡೆದಿದೆ. ಪರಂಪರಾಗತ ಶೈಲಿಯ ಉಪ್ಪೇರಿ, ಕಿಚ್ಚಡಿ, ರಸಂ, ಅವಿಲ್‌, ಓಲನ್‌, ಕಾಳನ್‌, ತೋರನ್‌, ಪಚ್ಚಿಡಿ, ಕೂಟುಕ್ಕರಿ, ಸಾಂಬಾರು, ಕುರುಮ ಹೀಗೆ ಖಾದ್ಯಗಳ ಪಟ್ಟಿ ಬೆಳೆಯುತ್ತದೆ. ಬಾಳೆ ಹಣ್ಣಿಗೆ ಪ್ರಾಶಸ್ತ್ಯ ಹೆಚ್ಚು. ಮೊಸರಿನಿಂದ, ಮಿಶ್ರಿತ ತರಕಾರಿಗಳಿಂದ, ಹಣ್ಣು ಹಂಪಲುಗಳಿಂದ ಶುದ್ಧ ಶಾಕಾಹಾರಿಯ ಸುಮಾರು 60 ಕ್ಕೂ ಹೆಚ್ಚು ನಮೂನೆಗಳ ಭಕ್ಷ್ಯಗಳನ್ನು ತಯಾರಿಸಿ ಸೇವಿಸುವರು. ವಿವಿಧ ರೀತಿಯ ಪಾಯಸವನ್ನು ಉಣ್ಣುವರು. ವೆಳ್ಳ (ಪಾಲ್‌) ಪಾಯಸ, ಅಡಪಾಯಸ, ಸೇಮಿಗೆ ಪಾಯಸ, ಕಡಲೆ ಪಾಯಸ, ಹೆಸರು ಬೇಳೆ ಪಾಯಸ, ಅಕ್ಕಿ ಪಾಯಸ, ಹಲಸಿನ ಪಾಯಸ ಹೀಗೆ ಸುಮಾರು ಏಳು ಬಗೆಯ ಪಾಯಸಗಳೊಂದಿಗೆ ಅನೇಕ ರೀತಿಯ ಸಿಹಿ, ಖಾದ್ಯಗಳನ್ನು ತಯಾರಿಸಿ ಸಂಭ್ರಮಿಸುವರು.

Advertisement

Udayavani is now on Telegram. Click here to join our channel and stay updated with the latest news.

Next