Advertisement

ಇನ್ ದಿ ಏರ್.. ಶ್ರೀಶಾಂತ್ ಟೇಕ್ಸ್ ಇಟ್…: ಮೊದಲ ಟಿ20 ವಿಶ್ವಕಪ್ ಗೆಲುವಿಗೆ 15ರ ಸಂಭ್ರಮ

11:45 AM Sep 24, 2022 | Team Udayavani |

ಮುಂಬೈ: ಟಿ20 ಎಂಬ ಚುಟುಕು ಮಾದರಿಯ ಮೊದಲ ವಿಶ್ವಕಪ್ ನಲ್ಲಿ ಭಾರತದ ತಂಡ ಸಾಧಿಸಿದ ವಿಜಯ ಯಾತ್ರೆಗೆ ಇಂದು 15 ವರ್ಷದ ಸಂಭ್ರಮ. 2007 ಸೆ.24ರಂದು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಯುವ ತಂಡ ವಿಶ್ವಕಪ್ ಗೆದ್ದು ಬೀಗಿತ್ತು.

Advertisement

ಕೆಲ ತಿಂಗಳ ಹಿಂದಷ್ಟೇ ಏಕದಿನ ವಿಶ್ವಕಪ್ ನಲ್ಲಿ ಹೀನಾಯವಾಗಿ ಸೋಲನುಭವಿಸಿದ್ದ ಭಾರತ ತಂಡದಲ್ಲಿ ಭಾರೀ ಬದಲಾವಣೆಗಳಾಗಿದ್ದವು. ಟಿ20 ವಿಶ್ವಕಪ್ ಗೆ ಅನುಭವಿಗಳ ಬದಲು ಯುವ ಪಡೆಯನ್ನು ಕಟ್ಟಲಾಗಿತ್ತು. ಯುವ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಮೊದಲ ಬಾರಿ ತಂಡದ ನಾಯಕನಾಗಿದ್ದರು.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರು ಸ್ಟುವರ್ಟ್ ಬ್ರಾಡ್ ಅವರ ಆರು ಎಸೆತಕ್ಕೆ ಆರು ಸಿಕ್ಸರ್ ಬಾರಿಸಿದ್ದರು. ಅಲ್ಲದೆ ಕೇವಲ 12 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದ್ದರು. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದ್ದರು.

ಕೂಟದಲ್ಲಿ ಹಲವು ಅಚ್ಚರಿಗಳಿಗೆ ಕಾರಣವಾಗಿ ಫೈನಲ್ ಪ್ರವೇಶ ಪಡೆದಿದ್ದ ಭಾರತದ ತಂಡ ಅಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು ಎದುರಿಸಿತ್ತು. ಈಗಾಗಲೇ ಲೀಗ್ ಹಂತದಲ್ಲಿ ಪಾಕ್ ವಿರುದ್ಧ ಬಾಲ್ ಔಟ್ ಎಂಬ ವಿಭಿನ್ನ ನಿಯಮದ ಮೂಲಕ ಜಯ ಸಾಧಿಸಿದ್ದ ಭಾರತ ಮತ್ತೊಂದು ಹೈ ವೋಲ್ಟೇಜ್ ಪಂದ್ಯಕ್ಕೆ ಸಜ್ಜಾಗಿತ್ತು.

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 157 ರನ್ ಗಳಿಸಿದ್ದರೆ, ಪಾಕಿಸ್ಥಾನ ತಂಡ 152 ರನ್ ಮಾತ್ರ ಗಳಿಸಿ ಐದು ರನ್ ಅಂತರದ ಸೋಲನುಭವಿಸಿತ್ತು.

Advertisement

ಇದನ್ನೂ ಓದಿ:ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…ಕೇರಳ ಆಟೋ ಚಾಲಕನ ಅಳಲೇನು?!

ಗೌತಮ್ ಗಂಭೀರ್ 75 ರನ್ ಗಳಿಸಿದ್ದರೆ, ರೋಹಿತ್ ಶರ್ಮಾ 30 ರನ್ ಕೊಡುಗೆ ನೀಡಿದ್ದರು. ಉಳಿದ ಯಾರಿಂದಲೂ ಹೇಳಿಕೊಳ್ಳುವ ಪ್ರದರ್ಶನ ತಂಡಕ್ಕೆ ಸಿಗಲಿಲ್ಲ. ಪಾಕಿಸ್ಥಾನ ಪರ ಉಮರ್ ಗುಲ್ ಮೂರು ವಿಕೆಟ್ ಕಿತ್ತಿದ್ದರು.

ಸಾಧಾರಣ ಗುರಿ ಬೆನ್ನತ್ತಿದ್ದ ಪಾಕ್ ಗೆ ಇಮ್ರಾನ್ ನಜೀರ್ 33 ರನ್ ಮತ್ತು ಯೂನಿಸ್ ಖಾನ್ 24 ರನ್ ಗಳಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮಿಸ್ಬಾ ಉಲ್ ಹಕ್ ಆಡುತ್ತಿದ್ದರು. ಕೊನೆಯ ಓವರ್ ನಲ್ಲಿ 13 ರನ್ ಬೇಕಾಗಿತ್ತು. ಕೈಯಲ್ಲಿ ಇದ್ದಿದ್ದು ಒಂದು ವಿಕೆಟ್. ಜೋಗಿಂದರ್ ಶರ್ಮಾರ ಎರಡನೇ ಎಸೆತವನ್ನು ಸಿಕ್ಸರ್ ಗೆ ಅಟ್ಟಿದ ಮಿಸ್ಬಾ ಮೂರನೇ ಎಸೆತವನ್ನು ಫೈನ್ ಲೆಗ್ ಗೆ ಸ್ಕೂಪ್ ಮಾಡಿದ್ದರು. ಆದರೆ ಮಿಸ್ ಟೈಮ್ ಆಗಿದ್ದ ಚೆಂಡು ಶ್ರೀಶಾಂತ್ ಕೈ ಸೇರಿತ್ತು.

ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ಬೀಗಿತ್ತು. ಹೊಸ ನಾಯಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಯುವಪಡೆ ಇತಿಹಾಸ ಸೃಷ್ಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next