ಕಡೂರು: ಅಸ್ಸಾಂ ಮಾದರಿಯಲ್ಲಿ ರಾಜ್ಯದಲ್ಲೂ “ಗೃಹಿಣಿ ಶಕ್ತಿ’ ಯೋಜನೆ ಜಾರಿಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಯೋಜನೆ ಬಡ ಕುಟುಂಬದ ನೆಮ್ಮದಿಗೆ ಸಹಕಾರಿಯಾಗಲಿದೆ ಎಂದರು.
ರಾಜ್ಯ ಸರಕಾರ ಬಡ ಕುಟುಂಬಗಳಿಗೆ ದಿನನಿತ್ಯದ ಅಗತ್ಯ ವಸ್ತುಗಳ ಖರೀದಿ, ಆರೋಗ್ಯ ಕಾಪಾಡಲು ಈಗಾಗಲೇ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಇದರೊಂದಿಗೆ “ಗೃಹಿಣಿ ಶಕ್ತಿ’ ಯೋಜನೆ ಜಾರಿ ಮಾಡಿದಲ್ಲಿ ಬಡಕುಟುಂಬಗಳಿಗೆ ಸಹಾಯ ಮಾಡಿದಂತಾಗುತ್ತದೆ ಎಂದು ಹೇಳಿದರು.
ಮಾತಿನಲ್ಲಿ ಹಿಡಿತ ಅಗತ್ಯ
ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತಿನಲ್ಲಿ ಸಮತೋಲನ ಕಳೆದುಕೊಳ್ಳುತ್ತಿದ್ದು, ಅವರು ಯೋಚಿಸಿ ಮಾತನಾಡಬೇಕು. ಕಾಂಗ್ರೆಸ್‌ನಿಂದ ಗೆದ್ದು ಬಿಜೆಪಿಗೆ ಬಂದ 17 ಶಾಸಕರು ಏನು ಮಾಡಿದ್ದಾರೋ ಅದನ್ನು ಹಿಂದೆ ಅವರ ನಾಯಕರೂ ಮಾಡಿದ್ದರು. 2007ರಲ್ಲಿ ಈಗಿನ ಕಾಂಗ್ರೆಸ್ ನಾಯಕರು ಜೆಡಿಎಸ್‌ನಲ್ಲಿದ್ದರು. ಜೆಡಿಎಸ್‌ನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದರು. ಈಗ 17 ಶಾಸಕರ ಬಗ್ಗೆ ಏನು ಮಾತನಾಡಿದ್ದಾರೋ ಅದು ಕಾಂಗ್ರೆಸ್ ನಾಯಕರಿಗೂ ಅನ್ವಯಿಸುತ್ತದೆ. ಆದ್ದರಿಂದ ಹರಿಪ್ರಸಾದ್ ಮಾತನಾಡುವ ಮೊದಲು ಯೋಚಿಸಬೇಕು. ಇಲ್ಲವಾದರೆ ತನಗೆ ತಿರುಗು ಬಾಣವಾದೀತು ಎಂದು ಸಲಹೆ ನೀಡಿದರು.
Related Articles
ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಗೆ ಸಮಯ ಸಿಕ್ಕಿಲ್ಲ
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಈಗಾಗಲೇ ವರಿಷ್ಠರ ಜತೆ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಆದಷ್ಟು ಬೇಗನೆ ತಿಳಿಸುವುದಾಗಿ ಪಕ್ಷದ ವರಿಷ್ಠರು ತಿಳಿಸಿದ್ದಾರೆ.ಮಂಗಳವಾರ ರಾಷ್ಟ್ರೀಯ ಕಾರ್ಯಕಾರಿಣಿ ಇತ್ತು. ಹೀಗಾಗಿ ಹೆಚ್ಚು ಸಮಯಾವಕಾಶ ಲಭಿಸಲಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ನೀರಾವರಿ ಕ್ಷೇತ್ರದಲ್ಲಿ ಮೈಲುಗಲ್ಲು
ಬೆಂಗಳೂರು: ನಾರಾಯಣಪುರ ಎಡದಂಡೆ ಕಾಲುವೆ ಆಧುನೀಕರಣ ಯೋಜನೆ ದೇಶಕ್ಕೆ ಮಾದರಿಯಾಗಿದ್ದು, ರಾಜ್ಯದ ನೀರಾವರಿ ಕ್ಷೇತ್ರದಲ್ಲಿ ಮೈಲುಗಲ್ಲು ಸಾಧಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಗುರುವಾರ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಾರಾಯಣಪುರ ಎಡದಂಡೆ ಕಾಲುವೆ ಆಧುನೀಕರಣ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದು ಏಷ್ಯಾದಲ್ಲೇ ವಿಶಿಷ್ಟವಾಗಿದ್ದು, ಕೇಂದ್ರ ಹಾಗು ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಅನುಷ್ಠಾನವಾಗಲಿದೆ ಎಂದರು. ಬಂಜಾರ ಮತ್ತು ಲಮಾಣಿ ತಾಂಡಾಗಳಿಗೆ ಗ್ರಾಮಗಳ ಮಾನ್ಯತೆ ನೀಡಬೇಕು ಎಂಬುದು ಹಲವು ದಶಕಗಳ ಬೇಡಿಕೆಯಾಗಿತ್ತು. ಮನೆಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಸಾಮಾಜಿಕ ಪರಿವರ್ತನೆ ತರುವ ಬೃಹತ್ ಕಾರ್ಯಕ್ರಮ ಇದಾಗಿದೆ. ಅಲೆಮಾರಿಗಳಂತೆ ಬದುಕುತ್ತಿದ್ದವರಿಗೆ ಜೀವನ ಭದ್ರತೆ ಕೊಡುವ ಯೋಜನೆ ಇದಾಗಿದೆ. ಇಂತಹ ಯೋಜನೆಗಳಿಂದ ರಾಜ್ಯಕ್ಕೆ ಒಳಿತಾಗುತ್ತದೆ ಎಂದರು.