Advertisement

ಗಾಂಧಿ ಜಯಂತಿಯಂದು ಗಾಂಧಿ ಅನುಯಾಯಿ ಸ್ವಾಮೀಜಿ ಪುಣ್ಯತಿಥಿ

10:45 PM Oct 03, 2019 | Sriram |

ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಗುರುಗಳಾದ ಶ್ರೀವಿಶ್ವಮಾನ್ಯತೀರ್ಥ ಶ್ರೀಪಾದರ ಆರಾಧನೋತ್ಸವ ಬುಧವಾರ ಅವರ ವೃಂದಾವನವಿರುವ ತಲಪಾಡಿ ಸಮೀಪದ ಕಣ್ವತೀರ್ಥ ಮಠದ ಆವರಣದಲ್ಲಿ ಜರುಗಿತು.

Advertisement

ಈ ಬಾರಿಯ ವಿಶೇಷವೆಂದರೆ ಮಹಾತ್ಮಾ ಗಾಂಧಿಯವರಿಂದ ಪ್ರೇರಣೆ ಪಡೆದಿದ್ದ ಶ್ರೀ ವಿಶ್ವಮಾನ್ಯತೀರ್ಥರ ಪುಣ್ಯತಿಥಿ ಗಾಂಧಿ ಜಯಂತಿಯಂದು ಘಟಿಸಿದ್ದು.

ಶ್ರೀ ವಿಶ್ವಮಾನ್ಯತೀರ್ಥರು ಬಲುದೊಡ್ಡ ಗಾಂಧೀವಾದಿಗಳಾಗಿದ್ದರು. ಅವರ ಉಡುಗೆಗಳೂ ಖಾದಿಯಾಗಿದ್ದವು. ಗಾಂಧೀಜಿಯವರು ವಿದೇಶಿ ಬಟ್ಟೆಗಳನ್ನು ಬಹಿಷ್ಕರಿಸುವ ಹೋರಾಟದ ವೇಳೆ ವಿಶ್ವಮಾನ್ಯರು ಬೆಂಬಲ ನೀಡಿ ಉಡುಪಿಯಲ್ಲಿ ವಿದೇಶೀ ಬಟ್ಟೆಗಳನ್ನು ಸುಟ್ಟಿದ್ದರು.

ತಮ್ಮ ಎರಡನೆಯ ಪರ್ಯಾಯದಲ್ಲಿ 1936-37ರ ಅವಧಿಯಲ್ಲಿ ಪೇಜಾವರ ಮಠದಲ್ಲಿ ತಮ್ಮ ಗುರು ಶ್ರೀ ವಿಶ್ವಜ್ಞತೀರ್ಥರ ಸ್ಮರಣಾರ್ಥ ಸ್ಥಾಪಿಸಿದ ವಾಚನಾಲಯವನ್ನು ಆಗಿನ ಕಾಂಗ್ರೆಸ್‌ ಅಧ್ಯಕ್ಷ, ಮುಂದೆ ಪ್ರಥಮ ರಾಷ್ಟ್ರಪತಿಯಾದ ಬಾಬುರಾಜೇಂದ್ರಪ್ರಸಾದರಿಂದ ಉದ್ಘಾಟನೆ ನೆರವೇರಿಸಿದ್ದರು.

1931ರಲ್ಲಿ ಜನಿಸಿದ ಶ್ರೀವಿಶ್ವೇಶತೀರ್ಥರಿಗೆ 1938ರ ಡಿಸೆಂಬರ್‌ 3ರಂದು ಹೊಸಪೇಟೆ ಸಮೀಪದ ಹಂಪಿಯ ಚಕ್ರತೀರ್ಥದಲ್ಲಿರುವ ವ್ಯಾಸರಾಜಪ್ರತಿಷ್ಠಾಪಿತ ಯಂತ್ರೋದ್ಧಾರ ಪ್ರಾಣದೇವರ ಸನ್ನಿಧಿಯಲ್ಲಿ ಶ್ರೀವಿಶ್ವಮಾನ್ಯರು ಸನ್ಯಾಸಾಶ್ರಮವನ್ನು ನೀಡಿದ್ದರು. ಒಂದು ದಿನ ಬಿಟ್ಟು ಏಕಾದಶಿ ಮರುದಿನ ದ್ವಾದಶಿ ಪೂಜೆ ಮುಗಿಸಿ ಹಂಪಿಯ ಪಾಳುಬಿದ್ದ ಸ್ಮಾರಕಗಳನ್ನು ಗುರುಗಳು ಎಂಟು ವರ್ಷದ ಶಿಷ್ಯನಿಗೆ ತೋರಿಸಿದ್ದರು. ವಿಶ್ವಮಾನ್ಯತೀರ್ಥರು ಗಾಂಧೀವಾದಿಗಳಾದ ಕಾರಣ ಗಾಂಧೀಜಿಯವರಿಗೆ ಪತ್ರ ಬರೆದು ತಾವು ಚಳವಳಿಯಲ್ಲಿ ಪಾಲ್ಗೊಳ್ಳುವ ಬಯಕೆ ವ್ಯಕ್ತಪಡಿಸಿ ಮಠದ ಜವಾಬ್ದಾರಿಯನ್ನು ವಿಶ್ವೇಶತೀರ್ಥರಿಗೆ ಆಶ್ರಮವಾದ ತತ್‌ಕ್ಷಣ ನೀಡಿದ್ದರು.

Advertisement

“ಉದಯವಾಣಿ’ ಶ್ರೀ ವಿಶ್ವೇಶತೀರ್ಥ ಶ್ರೀಪಾದರನ್ನು ಸಂಪರ್ಕಿಸಿದಾಗ “ಗಾಂಧೀಜಿಯವರಿಗೆ ಪತ್ರ ಬರೆದು ಅವರಿಂದ ಒಪ್ಪಿಗೆ ಬಂದ ಬಳಿಕವೇ ಗುರುಗಳು ಮಠದ ಜವಾಬ್ದಾರಿಯನ್ನು ನಮಗೆ ನೀಡಿ ಸಾಬರಮತಿ ಆಶ್ರಮಕ್ಕೆ ಹೋಗಿದ್ದರು. ಅವರಿಗೆ ಗಾಂಧೀಜಿಯವರ ಜತೆ ನಿಕಟ ಸಂಪರ್ಕವಿತ್ತು.

ಅಲ್ಲಿಯೇ ಸಮೀಪದ ಒಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು ಎಂದು ಅವರಿಗೆ ನಿಕಟ ಸಂಪರ್ಕವಿದ್ದ, ಧಾರವಾಡದ ಸ್ವಾತಂತ್ರ್ಯ ಹೋರಾಟಗಾರ ಬುರ್ಲಿ ಬಿಂದು ಮಾಧವ ರಾಯರು ನಮಗೆ ತಿಳಿಸಿದ್ದರು. ಈಗ 150ನೆಯ ಗಾಂಧೀಜಿ ಜನ್ಮಜಯಂತಿ ದಿನವೇ ಗುರುಗಳ ಆರಾಧನೆ ಬಂದದ್ದು ವಿಶೇಷ.

ಈ ಹಿಂದೆ ಹೀಗೆ ಗಾಂಧಿ ಜಯಂತಿಯಂದು ಆರಾಧನೋತ್ಸವ ನಡೆದದ್ದು ಜ್ಞಾಪಕಕ್ಕೆ ಬರುತ್ತಿಲ್ಲ’ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next