ಉದಯಪುರ: ರಾಜಸ್ಥಾನದ ಉದಯಪುರ ಜಿಲ್ಲೆಯ ಜಾವರ್-ಮೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬ್ರಾಡ್ ಗೇಜ್ ರೈಲ್ವೆ ಹಳಿಯಲ್ಲಿ ಸ್ಫೋಟ ಸಂಭವಿಸಿದೆ.
ಅಸರ್ವಾ-ಉದಯ್‌ಪುರ ಎಕ್ಸ್‌ಪ್ರೆಸ್ ರೈಲು ಹಾದುಹೋಗುವ ಗಂಟೆಗಳ ಮೊದಲು ಶನಿವಾರ ಮತ್ತು ಭಾನುವಾರ ಮಧ್ಯರಾತ್ರಿಯಲ್ಲಿ ಈ ಘಟನೆ ನಡೆದಿದೆ. ಅಡಚಣೆಯಿಂದಾಗಿ ಡುಂಗರ್‌ಪುರದಲ್ಲಿ ರೈಲು ನಿಲುಗಡೆಯಾಗಿದೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ “ಉದಯ್ ಪುರ-ಅಹಮದಾಬಾದ್ ರೈಲು ಮಾರ್ಗದ ಓಡಾ ರೈಲ್ವೇ ಸೇತುವೆಯ ಮೇಲೆ ರೈಲ್ವೆ ಹಳಿಗಳಿಗೆ ಹಾನಿಯಾದ ಘಟನೆಯು ಆತಂಕಕಾರಿಯಾಗಿದೆ. ಹಿರಿಯ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಡಿಜಿ ಪರಿಶೀಲನೆಗೆ ಪೊಲೀಸರಿಗೆ ಸೂಚಿಸಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಅನಿಲ್ ವಿಷ್ಣೋಯ್ ಮಾತನಾಡಿ, ಶನಿವಾರ ರಾತ್ರಿ ಗ್ರಾಮಸ್ಥರು ಓಡಾ ರೈಲ್ವೆ ಸೇತುವೆಯ ಮೇಲೆ ಸ್ಫೋಟದ ಶಬ್ದವನ್ನು ಕೇಳಿದ್ದಾರೆ. ಸ್ಥಳೀಯ ಗ್ರಾಮಸ್ಥರು ಬೆಳಗ್ಗೆ ಟ್ರ್ಯಾಕ್ ನೋಡಲು ಆಗಮಿಸಿದಾಗ ಹಳಿ ಒಡೆದಿದ್ದು, ಹಲವು ನಟ್ ಬೋಲ್ಟ್‌ಗಳು ನಾಪತ್ತೆಯಾಗಿವೆ ಎಂದು ತಿಳಿಸಿದರು.
ಗಣಿಯಲ್ಲಿ ಬಳಸಲಾದ ಸ್ಫೋಟಕಗಳನ್ನು ಟ್ರ್ಯಾಕ್ ಹಾನಿ ಮಾಡಲು ಬಳಸಲಾಗಿದೆ ಎಂದು ಮೇಲ್ನೋಟಕ್ಕೆ ತೋರುತ್ತಿದೆ. ಸ್ಥಳದಿಂದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ಅವರು ಹೇಳಿದ್ದಾರೆ.
ಆರೋಪಿಗಳಿಗೆ ಕಠಿಣ ಶಿಕ್ಷೆ
ಉದಯಪುರದಿಂದ ಸುಮಾರು 35 ಕಿಮೀ ದೂರದ ಟ್ರ್ಯಾಕ್‌ನಲ್ಲಿ ಸ್ಫೋಟ ಸಂಭವಿಸಿದೆ. ATS, NIA ಮತ್ತು ರೈಲ್ವೆಯ RPF ನ ತಂಡಗಳು ಸ್ಥಳದಲ್ಲಿವೆ. ತನಿಖೆ ನಡೆಯುತ್ತಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿದೆ. ಸೇತುವೆ ಪುನಶ್ಚೇತನಕ್ಕೆ ತಂಡ ಸ್ಥಳದಲ್ಲಿಯೇ ಸಿದ್ಧ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.