Advertisement

ಸೋಮವಾರ ಸಂತೆ ಬಂದ್ರೆ ಪಪಂ ಸಿಬ್ಬಂದಿಗೆ ಹಬ್ಬ

10:58 AM Nov 25, 2021 | Team Udayavani |

ಕಾಳಗಿ: ಪಟ್ಟಣ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿದ್ದು, ಇಲ್ಲಿ ನಡೆಯುವ “ಸೋಮವಾರ’ ಸಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿಗೆ ಹಬ್ಬವಿದ್ದಂತೆ ಆಗಿದೆ. ಇಲ್ಲಿ ಚುನಾಯಿತ ಜನಪ್ರತಿನಿಧಿಗಳು ಇಲ್ಲದೇ ಇರುವುದರಿಂದ ಈ ಕುರಿತು ಪ್ರಶ್ನಿಸುವವರು ಇಲ್ಲದಂತಾಗಿದೆ.

Advertisement

ಪ್ರತಿ “ಸೋಮವಾರ’ ನಡೆಯುವ ಸಂತೆಯಲ್ಲಿ ವ್ಯಾಪಾರಿಗಳಿಂದ ತಮಗಿಚ್ಛೆ ಬಂದಂತೆ ಪಪಂ ಸಿಬ್ಬಂದಿ ಕರ ವಸೂಲಿ ಮಾಡುತ್ತಿದ್ದಾರೆ. ಸೋಮವಾರ ಸಂತೆ ಪಟ್ಟಣದ ಸುತ್ತಮುತ್ತಲಿನ 50 ಹಳ್ಳಿಗಳಲ್ಲಿ ಪ್ರಖ್ಯಾತಿ ಪಡೆದಿದೆ. ಸಂತೆಗೆ ನೂರಾರು ಸಂಖ್ಯೆಯಲ್ಲಿ ವ್ಯಾಪಾರಸ್ಥರು ವಿವಿಧ ಸ್ಥಳಗಳಿಂದ ತಮ್ಮ ಗಂಟುಮೂಟೆ ಕಟ್ಟಿಕೊಂಡು ಬರುತ್ತಾರೆ. ಇಲ್ಲಿಗೆ ವ್ಯಾಪಾರಕ್ಕೆ ಬರುವ ಪ್ರತಿಯೊಬ್ಬರಿಂದಲೂ ತೆರಿಗೆ ನೆಪದಲ್ಲಿ ಪಪಂ ಸಿಬ್ಬಂದಿ ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ವ್ಯಾಪಾರಸ್ಥರು ಬೇಸತ್ತು ಹೋಗಿದ್ದಾರೆ.

ಪಪಂ ಸಿಬ್ಬಂದಿ ವ್ಯಾಪಾರಿಗಳಿಂದ ಪಡೆಯುವ ಹಣಕ್ಕೆ ಯಾವುದೇ ರಸೀದಿ ನೀಡುವುದಿಲ್ಲ. ಬಿಳಿ ಹಾಳೆ ತುಂಡು ಮಾಡಿಕೊಂಡು 10ರೂ., 20ರೂ., 30ರೂ., 50ರೂ. ಹೀಗೆ ಮನಬಂದಂತೆ ಕೈಯಿಂದಲೇ ಬರೆದುಕೊಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಬಹುತೇಕ ರೈತರೇ ವ್ಯಾಪಾರಸ್ಥರಾಗಿದ್ದು, ರಸೀದಿ ತೆಗೆದುಕೊಂಡು ನಾವೇನು ಮಾಡೋಣ ಎಂದು ಹಣ ನೀಡಿ ಕಳಿಸುತ್ತಿದ್ದಾರೆ.

ತೆರಿಗೆ ಹೆಸರಲ್ಲಿ ಈ ರೀತಿ ವಸೂಲಿಯಾಗುವ ಹಣ ಸರ್ಕಾರದ ಬೊಕ್ಕಸಕ್ಕೆ ಸೇರುವುದೇ ಇಲ್ಲ. ಕಳೆದ ಒಂದೂವರೆ ವರ್ಷದಿಂದ ಇದೇ ರೀತಿಯಾಗಿ ಬಿಳಿ ಚೀಟಿ ಬರೆದುಕೊಡುತ್ತಿದ್ದಾರೆ. ಅಲ್ಲದೇ ಕರ ವಸೂಲಿ ಮಾಡುತ್ತಿರುವ ಪಪಂ ಸಿಬ್ಬಂದಿ ನಮ್ಮ ಗಂಟು ಮೂಟೆಗಳನ್ನು ನೋಡಿ ಮನಸ್ಸಿಗೆ ತೋಚಿದಷ್ಟು ಹಣವನ್ನು ಚೀಟಿಯಲ್ಲಿ ಬರೆಯುತ್ತಿದ್ದಾರೆ. ಬೇರೆ ಊರಿನಿಂದ ವ್ಯಾಪಾರಕ್ಕೆ ಬರುವ ನಾವು ತಕರಾರು ಮಾಡದೇ ಸುಮ್ಮನೇ ಅವರು ಕೇಳಿದಷ್ಟು ಹಣ ನೀಡಿ ಸುಮ್ಮನಾಗುತ್ತಿದ್ದೇವೆ ಎಂದು ಕೆಲವು ತರಕಾರಿ ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಶೀಘ್ರವೇ ಪಟ್ಟಣ ಪಂಚಾಯಿತಿ ಚುನಾವಣೆ ನಡೆಸಿ, ವ್ಯಾಪಾರಿಗಳು, ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ರೈತರು, ವ್ಯಾಪಾರಸ್ಥರು ಮನವಿ ಮಾಡಿದ್ದಾರೆ.

ಪಟ್ಟಣ ಪಂಚಾಯಿತಿ ಸಿಬ್ಬಂದಿಯಿಂದಲೇ ವಾರಕ್ಕೊಮ್ಮೆ ಸೋಮವಾರ ಸಂತೆಯಲ್ಲಿ ಒಬ್ಬ ವ್ಯಾಪಾರಿಯಿಂದ 20ರೂ. ಕರ ವಸೂಲಿ ಮಾಡಲಾಗುತ್ತಿದೆ. ಪ್ರತಿ ವಾರದ ಅಂದಾಜಿನ ಮೇಲೆ ಹಣ ಸಂಗ್ರಹಿಸಿ ರಜಿಸ್ಟರ್‌ನಲ್ಲಿ ಬರೆದು ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡುತ್ತೇವೆ. ಈ ಸಲ ಕೊರೊನಾ ಕಾರಣದಿಂದ ಟೆಂಡರ್‌ ತೆಗೆದುಕೊಳ್ಳಲು ಯಾರೂ ಮುಂದೆ ಬಂದಿಲ್ಲ. ಡಿಸೆಂಬರ್‌ನಲ್ಲಿ ವಾರದ ಸಂತೆಯ ಕರ ವಸೂಲಿ ಟೆಂಡರ್‌ ಕರೆಯಲಾಗುತ್ತದೆ. -ವೆಂಕಟೇಶ ತೆಲಾಂಗ್‌, ಮುಖ್ಯಾಧಿಕಾರಿ, ಪಪಂ

Advertisement

-ಭೀಮರಾಯ ಕುಡ್ಡಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next