Advertisement

ಫೆ.3ರಂದು ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ

03:45 AM Jan 22, 2017 | Team Udayavani |

ಬೆಂಗಳೂರು: ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪಚುನಾವಣೆಗೆ ಫೆ.3ರಂದು ನಡೆಯುವ ಮತದಾನಕ್ಕೆ
ಅಂತಿಮ ಕಣ ಸಿದ್ಧವಾಗಿದ್ದು, ಮಹಿಳೆ ಸೇರಿ ಒಟ್ಟು 17 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

Advertisement

ಆಗ್ನೇಯ ಶಿಕ್ಷಕರ ಕ್ಷೇತ್ರದ ಸದಸ್ಯರಾಗಿದ್ದ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ರಾಜೀನಾಮೆ ನೀಡಿ, ವಿಧಾನಸಭೆಗೆ ಸ್ಪರ್ಧಿಸಿ ಗೆದ್ದಿದ್ದರಿಂದ ಈ ಸ್ಥಾನ ತೆರವುಗೊಂಡಿದೆ. ಇದನ್ನು ಉಳಿಸಿಕೊಳ್ಳುವ ಅಥವಾ ಗಳಿಸಿಕೊಳ್ಳುವ ವಿಚಾರದಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಡಲಿವೆ.

ಚುನಾವಣಾ ಸಿದ್ಧತೆಗಳ ಕುರಿತು ಬೆಂಗಳೂರು ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಅವರು ಶನಿವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು. ನಾಮಪತ್ರ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಮುಗಿದ ಮೇಲೆ ಕಾಂಗ್ರೆಸ್ಸಿನ ಟಿ.ಎಸ್‌.ನಿರಂಜನ್‌, ಬಿಜೆಪಿಯ ಪಿ.ಆರ್‌.ಬಸವರಾಜು, ಜೆಡಿಎಸ್‌ನ ರಮೇಶ್‌ಬಾಬು ಸೇರಿ 17 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಈ ಪೈಕಿ ಮಹಿಳಾ ಅಭ್ಯರ್ಥಿಯೊಬ್ಬರಿದ್ದಾರೆಂದು ಹೇಳಿದರು.

ಆಗ್ನೇಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಗೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳು ಹಾಗೂ ದಾವಣಗೆರೆ ಜಿಲ್ಲೆಯ ದಾವಣಗೆರೆ, ಜಗಳೂರು ಮತ್ತು ಹರಿಹರ ತಾಲೂಕುಗಳು ಬರುತ್ತವೆ. 15,139 ಪುರುಷರು ಹಾಗೂ 6,215 ಮಹಿಳೆಯರು ಸೇರಿ ಒಟ್ಟು 21,354 ಜನರು ಮತದಾನದ ಹಕ್ಕು ಹೊಂದಿದ್ದಾರೆ.

ಕೋಲಾರದಲ್ಲಿ 3,528, ಚಿಕ್ಕಬಳ್ಳಾಪುರದಲ್ಲಿ 2,818, ತುಮಕೂರು- 7,508, ಚಿತ್ರದುರ್ಗ- 4,255, ದಾವಣಗೆರೆ ಜಿಲ್ಲೆಯಲ್ಲಿ 3,345 ಮತದಾರರಿದ್ದಾರೆ ಎಂದು ಹೇಳಿದರು. ಪ್ರಾಶಸ್ತ್ಯದ ಮತಗಳ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಹೀಗಾಗಿ, ಮತದಾನಕ್ಕೆ ಬ್ಯಾಲೆಟ್‌ ಪೇಪರ್‌ ಬಳಸಲಾಗುತ್ತದೆ. ಮತದಾರನ ಬಲಗೈ ತೋರು ಬೆರಳಿಗೆ ಶಾಯಿ ಹಾಕಲು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು ಕೋರಲಾಗಿದೆ. ಮತಪತ್ರದಲ್ಲಿ “ನೋಟಾ’ ಅವಕಾಶ ಇರುತ್ತದೆ ಎಂದು ವಿವರಿಸಿದರು.

Advertisement

ಫೆ.1ರಂದು ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಫೆ.3ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಇದಕ್ಕಾಗಿ ಐದು ಜಿಲ್ಲೆಗಳಲ್ಲಿ 38 ಮತಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 180 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜತೆಗೆ ನೀತಿ ಸಂಹಿತೆ ಜಾರಿಗೆ ಜಿಲ್ಲಾಮಟ್ಟದಲ್ಲಿ 5 ಮತ್ತು ತಾಲೂಕು ಮಟ್ಟದಲ್ಲಿ 35 ತಂಡಗಳನ್ನು ರಚಿಸಲಾಗಿದೆ. 31 ಸಂಚಾರಿ ವಿಚಕ್ಷಕರನ್ನು ನೇಮಿಸಲಾಗಿದೆ. ಅದೇ ರೀತಿ, ಕೃಷಿ ಇಲಾಖೆ ಕಾರ್ಯದರ್ಶಿ
ಮಹೇಶ್ವರರಾವ್‌ ಅವರನ್ನು ಚುನಾವಣಾ ಆಯೋಗದಿಂದ ಚುನಾವಣಾ ವೀಕ್ಷಕರನ್ನಾಗಿ ನೇಮಿಸಲಾಗಿದೆ ಎಂದು
ಹೇಳಿದರು.

ಫೆ. 6ಕ್ಕೆ ಮತ ಏಣಿಕೆ: ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಫೆ.6ರಂದು ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ನಡೆಯಲಿದೆ. ಇದಕ್ಕಾಗಿ 14 ಟೇಬಲ್‌ಗ‌ಳ ವ್ಯವಸ್ಥೆ ಮಾಡಲಾಗುತ್ತದೆ. ಮತದಾನ ಮುಗಿದ ಬಳಿಕ ಮತಗಟ್ಟೆಗಳಿಂದ ಮತಪೆಟ್ಟಿಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಸಂಗ್ರಹಿಸಿ, ಬಳಿಕ ಮತ ಏಣಿಕೆ ನಡೆಯುವ ಸರ್ಕಾರಿ ಕಲಾ ಕಾಲೇಜಿನ ಭದ್ರತಾ ಕೊಠಡಿಯಲ್ಲಿ ಇಡಲಾಗುವುದು.

ಮತ ಏಣಿಕೆ ಕೇಂದ್ರಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಸಂಬಂಧಪಟ್ಟ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ
ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next