Advertisement

ಕಂಕುಳಲ್ಲಿ ಮಗು, ಮುಖದಲ್ಲಿ ಕರ್ತವ್ಯದ ನಗು : ಮಹಿಳಾ ಕಾನ್ ಸ್ಟೇಬಲ್ ಕರ್ತವ್ಯನಿಷ್ಠೆಗೆ ಸಲಾಂ!

09:56 AM Mar 03, 2020 | Hari Prasad |

ನೋಯ್ಡಾ: ಸಂಸಾರದ ಜವಾಬ್ದಾರಿ ಮತ್ತು ಕರ್ತವ್ಯ ನಿಷ್ಠೆಯನ್ನು ಸಮನಾಗಿ ನಿಭಾಯಿಸುವುದರಲ್ಲಿ ಮಹಿಳೆಯರದ್ದು ಸದಾ ಎತ್ತಿದ ಕೈ. ಇದಕ್ಕೊಂದು ನಿದರ್ಶನವೆಂಬಂತೆ ಉತ್ತರಪ್ರದೇಶದ ನೋಯ್ಡಾದಲ್ಲಿ ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ಕಂಕುಳಲ್ಲಿ ತಮ್ಮ ಒಂದೂವರೆ ವರ್ಷದ ಮಗುವನ್ನು ಎತ್ತಿಕೊಂಡು ಮುಖ್ಯಮಂತ್ರಿಯವರ ಕಾರ್ಯಕ್ರಮದ ರಕ್ಷಣಾ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡು ಇದೀಗ ಇಂಟರ್ನೆಟ್ ಲೋಕದ ಗಮನ ಸೆಳೆದಿದ್ದಾರೆ.

Advertisement

ಮಗುವಿನ ತಂದೆಗೆ ಇಂದು ಪರೀಕ್ಷೆಗೆ ಹಾಜರಾಗಲಿದ್ದುದರಿಂದ ತನ್ನ ಒಂದೂವರೆ ವರ್ಷದ ಮಗನನ್ನು ತಾನೇ ನೋಡಿಕೊಳ್ಳಬೇಕಾಗಿದ್ದ ಅನಿವಾರ್ಯತೆ ಇತ್ತು ಮತ್ತು ಇನ್ನೊಂದೆಡೆ ಖುದ್ದು ಮುಖ್ಯಮಂತ್ರಿಯೇ ಭಾಗವಹಿಸುತ್ತಿರುವ ಕಾರ್ಯಕ್ರಮವಾಗಿದ್ದರಿಂದ ಕರ್ತವ್ಯಕ್ಕೂ ಗೈರಾಗುವಂತಿರಲಿಲ್ಲ, ಹಾಗಾಗಿ ಮಗುವನ್ನು ಜೊತೆಯಲ್ಲಿ ಕರೆದುಕೊಂಡೇ ಕಂಕುಳಲ್ಲಿರಿಸಿಕೊಂಡು ಕರ್ತವ್ಯ ನಿಭಾಯಿಸಿರುವುದಾಗಿ ಮಹಿಳಾ ಕಾನ್ ಸ್ಟೇಬಲ್ ಪ್ರೀತಿ ರಾಣಿ ಅವರು ಹೇಳಿಕೊಂಡಿದ್ದಾರೆ.

ಪ್ರೀತಿ ರಾಣಿ ಅವರು ಗ್ರೇಟರ್ ನೋಯ್ಡಾದ ದಾದ್ರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ನೋಯ್ಡಾಗೆ ಭೇಟಿ ನೀಡಿದ ಹಿನ್ನಲೆಯಲ್ಲಿ ಮುಂಜಾನೆ 6 ಗಂಟೆಯಿಂದಲೇ ಪ್ರೀತಿ ರಾಣಿ ಅವರು ವಿಐಪಿ ಕರ್ತವ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೌತಮ್ ಬುದ್ಧ ನಗರಕ್ಕೆ ಎರಡು ದಿನಗಳ ಭೇಟಿಯಲ್ಲಿದ್ದು ಇಂದು ನೋಯ್ಡಾಕ್ಕೆ ಭೇಟಿ ನೀಡಿ ಅಲ್ಲಿ 1452 ಕೋಟಿ ರೂಪಾಯಿಗಳ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದರು. ಮತ್ತು 1369 ಕೋಟಿ ರೂಪಾಯಿಗಳ ಯೋಜನೆಗಳಿಗೆ ಶಂಕು ಸ್ಥಾಪನೆಯನ್ನೂ ಸಹ ಅವರು ನೆರವೇರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next