ಇಸ್ಲಾಮಾಬಾದ್ : ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿ ಚೀನ ಸಹಯೋಗದಲ್ಲಿ ನಡೆಯುತ್ತಿರುವ ಸಿಪಿಇಸಿ ಯೋಜನೆಯ ಕಾಮಗಾರಿಗಳಲ್ಲಿ ಚೀನೀಯರೊಂದಿಗೆ ಕೆಲಸ ಮಾಡುವ ಸ್ಥಳೀಯರನ್ನು ತೀವ್ರ ತಪಾಸಣೆಗೆ ಗುರಿಪಡಿಸಿ, ಅನುಮತಿ ಪತ್ರ ನೀಡುವ ವಿಲಕ್ಷಣಕಾರಿ ಕ್ರಮವನ್ನು ಇದೀಗ ಪಾಕ್ ಪೊಲೀಸರು ಆರಂಭಿಸುತ್ತಿದ್ದಾರೆ.
ಈ ರೀತಿಯ ಕಟ್ಟುನಿಟ್ಟಿನ ತಪಾಸಣೆ ಮತ್ತು ಭದ್ರತಾ ಅನುಮತಿ ಪತ್ರ ಕೇವಲ ಸ್ಥಳೀಯರಿಗೆ ಮಾತ್ರವೇ ಕಡ್ಡಾಯವಾಗಿದೆ, ಹೊರತು ವಿದೇಶೀಯರಿಗಲ್ಲ ಎಂಬುದೇ ವಿಶೇಷವಾಗಿದೆ. ಹಾಗೆಂದು ಸಿಪಿಇಸಿ ಯೋಜನೆಗಳಲ್ಲಿ ದುಡಿಯ ಬಯಸುವ ಸ್ಥಳೀಯ ಪಾಕಿಗಳು ಈ ಭದ್ರತಾ ಕ್ರಮವನ್ನು ಪ್ರಶ್ನಿಸುವಂತಿಲ್ಲವಾಗಿದೆ.
ಪಾಕ್ ಸೇನೆಯ ಈ ಹೊಸ ಭದ್ರತಾ ಕ್ರಮಕ್ಕೆ ಕಾರಣವೇನೆಂದರೆ ಕಳೆದ ತಿಂಗಳಲ್ಲಿ ಸಿಪಿಇಸಿ ಯೋಜನೆಯಡಿ ನಿರ್ಮಾಣವಾಗುತ್ತಿದ್ದ ವಿದ್ಯುತ್ ಘಟಕದ ತಾಣದಿಂದ ಚೀನೀ ಇಂಜಿನಿಯರ್ ಒಬ್ಬ ನಾಪತ್ತೆಯಾಗಿದ್ದ. ಇದಕ್ಕೆ ಸ್ಥಳೀಯರೇ ಕಾರಣ ಎಂಬ ಗುಮಾನಿಯನ್ನು ಚೀನ ವ್ಯಕ್ತಪಡಿಸಿದ್ದು ತನ್ನ ಕೆಲಸಗಾರರಿಗೆ ಸಂಪೂರ್ಣ ರಕ್ಷಣೆ, ಭದ್ರತೆ ನೀಡುವ ಜವಾಬ್ದಾರಿಯನ್ನು ಪಾಕಿಸ್ಥಾನ ನಿರ್ವಹಿಸಬೇಕು ಎಂದು ಚೀನ ಖಡಕ್ ಆಗಿ ಹೇಳಿದೆ.
ಸಿಪಿಇಸಿ ಯೋಜನೆಗಳಲ್ಲಿ ದುಡಿಯ ಬಯಸುವ ಪಾಕ್ ಕಾರ್ಮಿಕರ ಸಂಪೂರ್ಣ ವಿವರಗಳನ್ನು ಕಲೆ ಹಾಕುವ ಪ್ರಕ್ರಿಯೆಯನ್ನು ಪೊಲೀಸರು ಇದೀಗ ಆರಂಭಿಸಲಿದ್ದಾರೆ ಎಂದು ಗೊತ್ತಾಗಿದೆ.
ಚೀನೀ ಕೆಲಸಗಾರರೊಂದಿಗೆ ಯಾವುದೇ ಹೊಸ ಪಾಕ್ ಕಾರ್ಮಿಕರು ದುಡಿಯಲು ಆರಂಭಿಸುವ ಮುನ್ನ ಅವರ ಸಂಪೂರ್ಣ ವೈಯಕ್ತಿಕ ಮಾಹಿತಿಗಳನ್ನು ಕಲೆ ಹಾಕಿ ಅವರಿಗೆ ಅನುಮತಿ ಪತ್ರ ನೀಡಿದ ಬಳಿಕವೇ ಅವರನ್ನು ಕೆಲಸಕ್ಕೆ ನಿಯೋಜಿಸುವಂತೆ ಪಾಕ್ ಸರಕಾರ ಆದೇಶಿಸಿದೆ.
ಚೀನೀ ಇಂಜಿನಿಯರ್ ನಾಪತ್ತೆಯಾಗಿರುವುದು ಬಂಡುಕೋರ ಪೀಡಿತ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ಅಲ್ಲ; ಬದಲು ಅತ್ಯಂತ ಸದೃಢ ಪಾಕ್ ಪಂಜಾಬ್ ಪ್ರಾಂತ್ಯದ ಹೃದಯ ಭಾಗದಲ್ಲೇ ಎನ್ನುವುದು ಪಾಕಿಸ್ಥಾನಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಹೇಳಲಾಗಿದೆ.
ಸಿಪಿಇಸಿ ಯೋಜನೆಯಲ್ಲಿ ದುಡಿಯುವ ಚೀನೀ ಕಾರ್ಮಿಕರಿಗೆ ಸರಿಯಾದ ಭದ್ರತೆ ಇಲ್ಲದಿರುವುದು ಮತ್ತು ಈ ಯೋಜನೆಗೆಂದು ಬಿಡುಗಡೆಯಾಗುವ ಹಣದ ಬಹುಪಾಲು ಭ್ರಷ್ಟರ ಕೈವಶವಾಗುವುದರ ಬಗ್ಗೆ ತೀವ್ರ ಕಳವಳ, ಆಕ್ಷೇಪ ವ್ಯಕ್ತಪಡಿಸಿದ್ದ ಚೀನ ಸದ್ಯದ ಮಟ್ಟಿಗೆ ತಾನು ಸಿಪಿಇಸಿ ಯೋಜನೆಯನ್ನು ನಿಲ್ಲಿಸುವುದಾಗಿ ಈಚೆಗೆ ಹೇಳಿತ್ತು.