ಅಸ್ಸಾಂ: ಮಳೆಕಾಡು ಸಂಶೋಧನಾ ಕೇಂದ್ರ(ಆರ್ ಎಫ್ ಆರ್ ಐ)ದ ವಸತಿಗೃಹದ ಕ್ಯಾಂಪಸ್ ಆವರಣದ ತಡೆಬೇಲಿಯಿಂದ ಚಿರತೆಯೊಂದು ಜಿಗಿದು ಸರಣಿ ದಾಳಿ ನಡೆಸಿದ ಪ್ರಕರಣದಲ್ಲಿ ಮೂವರು ಅರಣ್ಯಾಧಿಕಾರಿಗಳು ಸೇರಿದಂತೆ ಕನಿಷ್ಠ 15 ಮಂದಿ ಗಾಯಗೊಂಡಿರುವ ಘಟನೆ ಅಸ್ಸಾಂನ ಜೋಹ್ರಾತ್ ನಲ್ಲಿ ನಡೆದಿದೆ.
ಇದನ್ನೂ ಓದಿ:ರಾಹುಲ್ ಗಾಂಧಿಯನ್ನು ‘ಶ್ರೀರಾಮ’ನಿಗೆ ಹೋಲಿಸಿದ ಸಲ್ಮಾನ್ ಖುರ್ಷಿದ್
ಕಳೆದ 24ಗಂಟೆಯಲ್ಲಿ ಅರಣ್ಯಾಧಿಕಾರಿಗಳು ಮತ್ತು ಮಳೆಕಾಡು ಸಂಶೋಧನಾ ಕೇಂದ್ರದ ನಿವಾಸಿಗಳ ಮೇಲೆ ಚಿರತೆ ಮಹಿಳೆಯರು ಮತ್ತು ಮಕ್ಕಳ ಮೇಲೆ ದಾಳಿ ನಡೆಸಿತ್ತು ಎಂದು ವರದಿ ತಿಳಿಸಿದೆ.
ಅರಣ್ಯಾಧಿಕಾರಿಯೊಬ್ಬರು ಸೆರೆಹಿಡಿದಿರುವ ವಿಡಿಯೋ ಮೈ ಜುಮ್ಮೆನ್ನಿಸುವಂತಿದೆ. ಆರ್ ಎಫ್ ಆರ್ ಐ ಕ್ಯಾಂಪಸ್ ನಲ್ಲಿ ಚಿರತೆ ಅಡ್ಡಾಡುತ್ತಿದ್ದು, ಏಕಾಏಕಿ ತಡೆಬೇಲಿಯಿಂದ ಹಾರಿ ಕಾರಿನ ಮೇಲೆ ದಾಳಿ ನಡೆಸಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಆರ್ ಎಫ್ ಆರ್ ಐ ಜೋಹ್ರಾತ್ ಹೊರವಲಯದಲ್ಲಿ ದಟ್ಟ ಕಾಡುಗಳಿಂದ ಆವೃತ್ತವಾಗಿದ್ದು, ಚಿರತೆ ಅಲ್ಲಿಂದ ಕ್ಯಾಂಪಸ್ ನೊಳಕ್ಕೆ ನುಗ್ಗಿರುವುದಾಗಿ ಶಂಕಿಸಲಾಗಿದೆ. ಚಿರತೆಯನ್ನು ಸೆರೆಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿರತೆ ಕ್ಯಾಂಪಸ್ ನೊಳಗೆ ಇದ್ದಿರುವುದರಿಂದ ನಿವಾಸಿಗಳು ಮನೆಯೊಳಗೆ ಇರುವಂತೆ ಅಧಿಕಾರಿಗಳು ಸೂಚಿಸಿರುವುದಾಗಿ ವರದಿ ತಿಳಿಸಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.