ಗದಗ: ರಾಜ್ಯದಲ್ಲಿ ಬೆಳೆಯುವ ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಿರುವುದು ಮತ್ತು ವಿದ್ಯುತ್ ಖಾಸಗೀಕರಣ ಗೊಳಿಸುತ್ತಿರುವುದುನ್ನು ವಿರೋಧಿಸಿ ರಾಜ್ಯ ಕಬ್ಬು ಬೆಳೆಗಾರರಿಂದ ಸೆ. 26ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಕಬ್ಬಿನ ಎಫ್ ಆರ್‌ಪಿ ದರ ಟನ್‌ಗೆ ಕೇವಲ 3050 ರೂ. ನಿಗದಿ ಮಾಡಿರುವುದು ಖಂಡನೀಯ. ಜತೆಗೆ ಕಬ್ಬು ಉತ್ಪಾದನೆಗೆ ಬಳಸುವ ರಸಗೊಬ್ಬರ, ಪೊಟ್ಯಾಶ್, ಡಿಎಪಿ ದರ ಏರಿಸಲಾಗಿದೆ ಎಂದು ಆರೋಪಿಸಿದರು.
ಕಬ್ಬಿನ ಕಟಾವು ಕೂಲಿ, ಸಾಗಾಣಿಕೆ ವೆಚ್ಚ, ಬೀಜದ ಬೆಲೆ ಏರಿಕೆಯಾಗಿದೆ. ಆದರೆ, ಕೇಂದ್ರ ಸರ್ಕಾರ ಸಕ್ಕರೆ ಇಳುವರಿಯನ್ನು ಶೇ. 10ರಿಂದ 10.25 ಏರಿಕೆ ಮಾಡಿ 150 ರೂ. ಹೆಚ್ಚುವರಿ ಮಾಡಿ ಟನ್‌ಗೆ 3050 ರೂ. ನಿಗದಿ ಮಾಡಿದೆ. ಇದು ಕಬ್ಬು ಬೆಳೆಗಾರರಿಗೆ ಮಾಡಿದ ಅನ್ಯಾಯವಾಗಿದೆ. ಕೂಡಲೇ ಈ ದರ ಪುನರ್ ಪರಿಶೀಲನೆ ಆಗಲೇಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ವಿದ್ಯುತ್ ಖಾಸಗೀಕರಣ ಮಾಡಲು ಸಂಸತ್ತಿನಲ್ಲಿ ಮಂಡನೆ ಮಾಡಿರುವುದು ಖಂಡನೀಯ. ರೈತರಿಗೆ ಕೃಷಿ ಪಂಪ್ ಸೆಟ್‌ಗಳಿಗೆ ನೀಡುವ ಉಚಿತ ವಿದ್ಯುತ್ ನಿಲ್ಲಿಸುವ ಹುನ್ನಾರದಿಂದ ಸಂಸತ್ತಲ್ಲಿ 2022 ವಿದ್ಯುತ್ ಬಿಲ್ ಮಂಡಿಸಲಾಗಿದೆ.
ಇದಕ್ಕೆ ಈಗಾಗಲೇ ತಮಿಳುನಾಡು, ತೆಲಂಗಾಣ, ಆಂಧ್ರ, ಪಂಜಾಬ್, ಕೇರಳ, ಬಿಹಾರ್ ರಾಜ್ಯ ಸರ್ಕಾರಗಳು ವಿರೋಧ ವ್ಯಕ್ತಪಡಿಸಿವೆ. ಅದರಂತೆ ನಮ್ಮ ರಾಜ್ಯ ಕೂಡ ವಿದ್ಯುತ್ ಕಾಯ್ದೆ ಖಾಸಗೀಕರಣ ಮಾಡುವುದನ್ನು ವಿರೋಧಿಸಬೇಕು. ರೈತರನ್ನು ಸಂರಕ್ಷಿಸಬೇಕೆಂದರು.
ರಾಜ್ಯಾದ್ಯಂತ ಅತಿವೃಷ್ಟಿಯಿಂದಾಗಿ ರೈತರ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಬೆಳೆಸಾಲ ಕಟ್ಟಲು ಸಂಕಷ್ಟ ಎದುರಾಗಿದ್ದು, ರೈತರ ಸಾಲವನ್ನು ಒಂದು ವರ್ಷ ನವೀಕರಣ ಮಾಡಿ ಇರುವ ಸಾಲದ ಮೇಲೆ ಶೇ. 25ರಷ್ಟು ಹೆಚ್ಚುವರಿ ಯಾಗಿ ಸಾಲ ನೀಡುವ ಯೋಜನೆ ಕೂಡಲೇ ಜಾರಿಗೆ ತರಬೇಕು. ಜತೆಗೆ ಎಲ್ಲ ಕೃಷಿ ಉತ್ಪನ್ನಗಳಿಗೆ ಖಾತರಿ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೆ ತರಬೇಕೆಂದರು.