ಕಲಬುರಗಿ: ಮಹಾನ್ ಮಾನವತಾವಾದಿ ಕನ್ನಡದ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞರ ಜಯಂತಿಯನ್ನು ಫೆ. 20ರಂದು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲು ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ| ಶರಣಪ್ಪ ಸತ್ಯಂಪೇಟ್ ಅಧ್ಯಕ್ಷತೆಯಲ್ಲಿ ನಡೆದ ಸಭೆ ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು.
ಕನ್ನಡದ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞ ಜಯಂತಿ ಸಮಾರಂಭದ ಅಂಗವಾಗಿ ಮಧ್ಯಾಹ್ನ 12:30 ಕ್ಕೆ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕವಿ ಸರ್ವಜ್ಞ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಗುವುದು. ಶಿಷ್ಠಾಚಾರದಂತೆ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸಲು ಸಭೆ ನಿರ್ಣಯ ಕೈಗೊಂಡಿತು. ಸರ್ವಜ್ಞನ ಜೀವನ ಮತ್ತು ಸಾಧನೆ ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ.ವೀರಭದ್ರಪ್ಪ ಅವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲು ಸಭೆ ಒಪ್ಪಿಗೆ ಸೂಚಿಸಿತು.
ಅಲ್ಲದೇ ಅಂದು ಸರ್ಕಾರದ ಎಲ್ಲ ಕಚೇರಿಗಳಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ, ತಾಲೂಕಾ ಮಟ್ಟದಲ್ಲಿಯೂ ಕವಿ ಸರ್ವಜ್ಞರ ಜಯಂತಿ ಆಚರಣೆ ಮಾಡುವಂತೆ ಸುತ್ತೋಲೆ ಹೊರಡಿಸಬೇಕು ಎಂದು ತಿಳಿಸಲಾಯಿತು. ಜಯಂತಿ ಆಚರಣೆ ಅಂಗವಾಗಿ ತ್ರಿಪದಿ ಕವಿ ಸರ್ವಜ್ಞರ ಭಾವಚಿತ್ರದ ಬೃಹತ್ ಮೆರವಣಿಗೆಯನ್ನು ಬೆಳಗ್ಗೆ 10:30 ಕ್ಕೆ ಸೂಪರ್ ಮಾರ್ಕೆಟ್ ಜನತಾ ಬಜಾರ್‌ದಿಂದ ಡಾ|ಎಸ್.ಎಂ.ಪಂಡಿತ ರಂಗಮಂದಿರದವರೆಗೆ ಆಯೋಜಿಸಲು ಸಹ ಸಭೆ ನಿರ್ಣಯ ಕೈಗೊಂಡಿತು.
ಶಿಷ್ಠಾಚಾರ ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ, ಡಿವೈ.ಎಸ್‌ಪಿ ಶಿವಲಿಂಗಪ್ಪ ಪಟ್ಟಣ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮಾಳೆಗಾಂವ, ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ಶಿವಶರಣಪ್ಪ ಕುಂಬಾರ, ಚಿತ್ತಾಪುರ ತಾಲೂಕಾಧ್ಯಕ್ಷ ಪ್ರಭು ಬೆಣ್ಣೂರ, ಸಮಾಜದ ಪ್ರಮುಖರಾದ ಭೀಮಾಶಂಕರ ಕುಂಬಾರ, ಹಣಮಂತ ಕುಂಬಾರ, ವಿಠuಲ ಕುಂಬಾರ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಜಯಂತಿ ಕಾರ್ಯಕ್ರಮದ ರೂಪುರೇಷೆ ವಿವರಿಸಿದರು.