Advertisement

ಮಡಿಕೇರಿಯ ಬೆರಗು ಓಂಕಾರೇಶ್ವರ ದೇವಾಲಯ 

11:14 AM Jun 02, 2018 | |

ಓಂಕಾರೇಶ್ವರ ದೇವಾಲಯ ಶಿವನಿಗೆ ಸಮರ್ಪಿತವಾದ ಪುರಾತನ ದೇವಾಲಯ. ಇದು ಮಡಿಕೇರಿ ಪಟ್ಟಣದಲ್ಲಿದೆ. ದೇವಾಲಯದ ವಿಶೇಷತೆ ಎಂದರೆ ಅದರ ನಿರ್ಮಾಣ ಗೋಥಿಕ್‌ ಮತ್ತು ಇಸ್ಲಾಮಿಕ್‌ ಶೈಲಿಗಳ ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ. ಇದು ಕೂರ್ಗ್‌ನ ಪ್ರಸಿದ್ಧ ಧಾರ್ಮಿಕ ಸ್ಥಳ ಕೂಡ. ಈ  ದೇವಸ್ಥಾನವನ್ನು 18 ನೇ ಶತಮಾನದಲ್ಲಿ, ರಾಜ ಲಿಂಗರಾಜೇಂದ್ರ ನಿರ್ಮಿಸಿದನು ಎಂದು ಇತಿಹಾಸದಲ್ಲಿ ಉಲ್ಲೇಖಗಳಿವೆ. 

Advertisement

ಸ್ಥಳ ಪುರಾಣ 
ಪುರಾಣದ ಪ್ರಕಾರ, ರಾಜನು ಪ್ರಾಯಶ್ಚಿತ್ತ ಮಾಡಿಕೊಳ್ಳುವ ಸಲುವಾಗಿಯೇ ಈ ದೇವಾಲಯವನ್ನು ನಿರ್ಮಿಸಿದನಂತೆ. ಇದರ ಹಿಂದೆ ಕಥೆಯೇ ಇದೆ.  ತನ್ನ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ರಾಜನು ಒಬ್ಬ ಬ್ರಾಹ್ಮಣನನ್ನು ಕೊಲ್ಲಿಸಿದ್ದನಂತೆ. ಆ ನಂತರ ರಾಜನಿಗೆ ದುಃಸ್ವಪ್ನಗಳು ಕಾಡಲು ಆರಂಭಿಸಿದವಂತೆ.  ಇದರಿಂದ ಮುಕ್ತನಾಗಲು  ಕೆಲವು ಜ್ಞಾನಿಗಳ ಸಲಹೆಯನ್ನು ರಾಜ ಕೇಳಿದ್ದಾನೆ. ಅವರು, ಶಿವನ ದೇವಸ್ಥಾನವನ್ನು ನಿರ್ಮಿಸಿದರೆ ಪರಿಹಾರ ಆಗುತ್ತದೆ ಅಂದರಂತೆ. ಆ ಸಲಹೆಯಂತೆ  ರಾಜನು ಓಂಕಾರೇಶ್ವರ ಶಿವಲಿಂಗವನ್ನು ಆಗಿನಕಾಲದಲ್ಲಿ  ಪವಿತ್ರ ಪಟ್ಟಣ ಎಂದೆನಿಸಿದ ಕಾಶಿಯಿಂದ ತಂದು, ಅದಕ್ಕಾಗಿ ದೇವಾಲಯ ನಿರ್ಮಿಸಿ ಪ್ರತಿಷ್ಠಾಪಿಸಿದನಂತೆ. ಹೀಗೆ ಮಾಡುತ್ತಿದ್ದಂತೆಯೇ ರಾಜನು ದುಃಸ್ವಪ್ನಗಳಿಂದ ಮುಕ್ತಿಹೊಂದಿದ ಎಂದು ಇತಿಹಾಸ ಹೇಳುತ್ತಿದೆ.   

ಓಂಕಾರೇಶ್ವರ ದೇವಸ್ಥಾನವು ಒಂದು ವಿಶಿಷ್ಠ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ವಿಶೇಷ ಎಂದರೆ ಈ ದೇವಾಲಯವು ಮುಸ್ಲಿಂ ದರ್ಗಾಗಳಲ್ಲಿ ಕಂಡುಬರುವಂಥ ವಿನ್ಯಾಸವನ್ನು ಹೊಂದಿದೆ. ದೇವಾಲಯದ ರಚನೆಯು ನಾಲ್ಕು ಮೂಲೆಗಳಲ್ಲಿ ನಾಲ್ಕು ಮಿನರೆಟ್‌ಗಳನ್ನು ಹಾಗೂ  ಮಧ್ಯಭಾಗದಲ್ಲಿ ದೊಡ್ಡ ಗುಮ್ಮಟವನ್ನು ಒಳಗೊಂಡಿದೆ.  ಗಮನಿಸಬೇಕಾದ ವಿಷಯ ಏನೆಂದರೆ, ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳು ಕಂಬಗಳಿಂದ ಕೂಡಿದ್ದು, ಮಧ್ಯಭಾಗದಲ್ಲಿರುವ ಗರ್ಭಗೃಹದಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಲಾಗಿರುತ್ತದೆ.   ಆದರೆ ಈ ದೇವಸ್ಥಾನದಲ್ಲಿ ಪ್ರವೇಶದ್ವಾರದ ಬಳಿಯ ಶಿವಲಿಂಗವನ್ನು ಸ್ಥಾಪಿಸಲಾಗಿದೆ. ದೇವಾಲಯದ ಇತಿಹಾಸವನ್ನು ತಾಮ್ರದ ತಟ್ಟೆಯಲ್ಲಿ ಕೆತ್ತಿ ಅದನ್ನು ಪ್ರವೇಶ ಬಾಗಿಲಿನ ಚೌಕಟ್ಟಿನಲ್ಲಿ ಅಳವಡಿಸಲಾಗಿದೆ.

ಓಂಕಾರೇಶ್ವರ ದೇವಾಲಯದ ಆವರಣದಲ್ಲಿ ನೀರಿನ ಟ್ಯಾಂಕ್‌ ಇದೆ. ಈ ತೊಟ್ಟಿಯ ಮಧ್ಯಭಾಗದಲ್ಲಿ ಒಂದು ಮಂಟಪವನ್ನು ನಿರ್ಮಿಸಲಾಗಿದೆ. ಇದನ್ನು ತಲುಪಲು ಕಾಲುದಾರಿಯ ಮೂಲಕ ಹೋಗಬೇಕು. ದೇವಾಲಯವು ಬೆಳಿಗ್ಗೆ 6-30 ರಿಂದ 12 ಹಾಗೂ ಸಾಂಯಕಾಲ 5 ರಿಂದ 8 ಗಂಟೆಯವರೆಗೆ ತೆರೆದಿರುತ್ತದೆ. ಈ ದೇವಸ್ಥಾನದ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿನ ಪುಷ್ಕರಣಿಯಲ್ಲಿರುವ ಮೀನುಗಳು.  ಬಣ್ಣ ಬಣ್ಣಗಳ ಮೀನುಗಳು ಇಡೀ ಪುಷ್ಕರಣಿಗೆ ಆಕರ್ಷಣೆಯನ್ನು ಒದಗಿಸುತ್ತಿವೆ.  ಇನ್ನು ವಿಶಾಲವಾದ ಆವರಣ ಹೊಂದಿರುವ ಈ ದೇವಸ್ಥಾನವನ್ನು  ಸುತ್ತಾಡಲು ಕನಿಷ್ಠ ಪಕ್ಷ$ 2 ಗಂಟೆಗಳಾದರೂ ಬೇಕು.  ಪ್ರತಿತಿಂಗಳು ಈ ದೇವಸ್ಥಾನದಲ್ಲಿ ಪೂರ್ಣಿಮೆಯಂದು ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯುತ್ತದೆ.

Advertisement

ಕೂರ್ಗ್‌ ತಲುಪುವ ಮಾರ್ಗ 
ಓಂಕಾರೇಶ್ವರ ದೇವಾಲಯ ಮಡಿಕೇರಿ ಪಟ್ಟಣದಲ್ಲಿದೆ. ಈ ಪಟ್ಟಣವು ಕರ್ನಾಟಕದ ಇತರ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.ಕೆಎಸ್‌ಆರ್‌ಟಿಸಿ ಬಸ್ಸುಗಳು ಮತ್ತು ಬಾಡಿಗೆ ಕ್ಯಾಬ್‌ಗಳ ಮೂಲಕ ಮಡಿಕೇರಿ ತಲುಪಬಹುದು. ರೈಲು ಮೂಲಕ ಬರುವವರಿಗೆ ಹತ್ತಿರದ ರೈಲಿನ ನಿಲ್ದಾಣಗಳು ಹಾಸನ, ಕಾಸರಗೋಡು. 

ಆಶಾ ಎಸ್‌.ಕುಲಕರ್ಣಿ

Advertisement

Udayavani is now on Telegram. Click here to join our channel and stay updated with the latest news.

Next