ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 5 ಒಮಿಕ್ರಾನ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಗರಿಷ್ಠ ಎಚ್ಚರಿಕೆಗೆ ಕ್ರಮ ವಹಿಸಲಾಗಿದ್ದು , ಟ್ರಾವೆಲ್ ಹಿಸ್ಟರಿ ಇಲ್ಲದೆ ಹೊಸ ವೈರಸ್ ಸೋಂಕು ಹೇಗೆ ಬಂತು ಎನ್ನುವ ಬಗ್ಗೆ ತಪಾಸಣೆ ನಡೆಸಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ತಿಳಿಸಿದ್ದಾರೆ.
ರವಿವಾರ ಬೆಳಗಾವಿಗೆ ತೆರಳುವ ವೇಳೆ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಮಂಗಳೂರಿನ ಒಂದು ನರ್ಸಿಂಗ್ ಕಾಲೇಜಿನ ಸೋಂಕಿತರಲ್ಲಿ ಒಬ್ಬರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಎಲ್ಲ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಶಾಲೆ, ಕಾಲೇಜು ಕ್ಯಾಂಪಸ್‌ಗಳಲ್ಲಿ ಇರುವ ಎಲ್ಲರ ಸ್ವಾéಬ್ ಟೆಸ್ಟ್ ಮಾಡಲಾಗಿದೆ. ಅಲ್ಲದೆ, ಎಲ್ಲರ ಹಿಸ್ಟರಿ ಸಂಗ್ರಹಿಸಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದವರು ವಿವರಿಸಿದರು.
ಪತ್ತೆಯಾಗಿರುವ ಒಮಿಕ್ರಾನ್ ಸೋಂಕಿತರು ಹೊರ ರಾಜ್ಯ, ಹೊರ ದೇಶಗಳಿಗೆ ಹೋಗಿಲ್ಲ. ಒಬ್ಟಾಕೆ ಮಂಗಳೂರಿನಲ್ಲಿ ಕಲಿಯುತ್ತಿರುವ ಹೊರ ರಾಜ್ಯದ ವಿದ್ಯಾರ್ಥಿನಿ. ಹಾಗಿದ್ದರೂ ಒಮಿಕ್ರಾನ್ ಪ್ರಕರಣ ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಇದನ್ನೂ ಓದಿ:ಫಿಲಿಪೈನ್ಸ್ನಲ್ಲಿ ರೈ ಚಂಡಮಾರುತದ ಅಟ್ಟಹಾಸ; 112 ಸಾವು
ಕೇರಳದಲ್ಲಿ ಈಗ ಕೊರೊನಾ ಪಾಸಿಟಿವಿಟಿ ದರ ಶೇ. 8-9 ರಷ್ಟಿದೆ. ದ.ಕ. ಜಿಲ್ಲೆ ಯು ಕೇರಳದ ಜತೆಗೆ 40 ಕಿ.ಮೀ. ಉದ್ದಕ್ಕೆ ಗಡಿಭಾಗ ಹೊಂದಿದ್ದು ಮಂಗಳೂರು 10 ಕಿ.ಮೀ. ಅಂತರದಲ್ಲಿದೆ. ಜಿಲ್ಲೆಯ ಪ್ರವೇಶಕ್ಕೆ 70ಕ್ಕಿಂತ ಹೆಚ್ಚು ಪ್ರವೇಶ ಮಾರ್ಗಗಳಿವೆ. ಎಲ್ಲ ಮಾರ್ಗಗಳಲ್ಲೂ ನಿಗಾ ಇಟ್ಟಿದ್ದು ತಪಾಸಣೆ ಮಾಡಲಾಗತ್ತಿದೆ. ಪ್ರತಿದಿನ ಓಡಾಡುವವರು, ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಗೆ ಆರೋಗ್ಯ ಇಲಾಖೆಯಿಂದ ಟೆಸ್ಟ್ ನಡೆಸಲಾಗುತ್ತಿದೆ. ಗಡಿ ಪ್ರವೇಶಿಸುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಎರಡು ಡೋಸ್ ವ್ಯಾಕ್ಸಿನ್ ತೆಗೆದುಕೊಂಡಿದ್ದರೂ ಕೇರಳದಿಂದ ಬಂದ ಕಾರ್ಮಿಕರು, ವಿದ್ಯಾರ್ಥಿಗಳು ಪ್ರಯಾಣದ ಬಗ್ಗೆ ಮಾಹಿತಿ ನೀಡಬೇಕು. ಈ ಬಗ್ಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸ್ಪಷ್ಟಪಡಿಸಿದರು.