Advertisement

ಮುಷರ್ರಫ್ ಗೆ ದೇವೇಗೌಡರ ಹೋಲಿಕೆ

04:19 PM Apr 17, 2017 | Team Udayavani |

ಬೆಂಗಳೂರು: ಪಾಕಿಸ್ತಾನದ ಮಾಜಿ ಅಧ್ಯಕ್ಷ ಜ.ಪರ್ವೇಜ್‌ ಮುಷರ್ರಫ್ ಜತೆಗೆ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ನಡುವೆ ಹೋಲಿಕೆ ಮಾಡಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ವಿವಾದಕ್ಕೆ ಗುರಿಯಾಗಿದ್ದಾರೆ. ಪಾಕಿಸ್ತಾನದ ಮಿಲಿಟರಿ ಕೋರ್ಟ್‌ನಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಬಗ್ಗೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜ.ಮುಷರ್ರಫ್ ಜತೆಗೆ ಸಲಹೆ ಕೇಳುವುದು ಮತ್ತು ಭಾರತದ ಬೆಳವಣಿಗೆಗಳ ಜತೆಗೆ ಮಾಜಿ ಪ್ರಧಾನಿ ದೇವೇಗೌಡರ ಜತೆಗೆ ಸಲಹೆ ಕೇಳುವುದು ಎರಡೂ ಒಂದೇ. ಏಕೆಂದರೆ ಇಬ್ಬರೂ ಮಾಜಿಗಳು ಎಂದು ಟ್ವೀಟ್‌ ಮಾಡಿದ್ದರು. ಇದರ ಜತೆಗೆ ಸುದ್ದಿವಾಹಿನಿಯೊಂದರ ಜತೆಗಿನ ಚರ್ಚೆಯಲ್ಲಿ ಕೂಡ ಈ ಬಗ್ಗೆ ಪ್ರಸ್ತಾಪ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ.

Advertisement

ಈ ಟ್ವೀಟ್‌ಗೆ ಸಾಮಾಜಿಕ ಜಾಲತಾಣ ಮತ್ತು ಮೈಕ್ರೋಬ್ಲಾಗಿಂಗ್‌ ತಾಣ ಟ್ವಿಟರ್‌ನಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಮಾಜಿ ಪ್ರಧಾನಿ, ದಕ್ಷಿಣ ಭಾರತದ ಹಿರಿಯ ಮುತ್ಸದ್ದಿಯೊಬ್ಬರಿಗೆ ಹೀಯಾಳಿಕೆ ಮಾಡಿದ್ದನ್ನು ಹಲವಾರು ಮಂದಿ ಖಂಡಿಸಿದ್ದಾರೆ. ಕರ್ನಾಟಕದ ಬಿಜೆಪಿ ನಾಯಕ, ಶಾಸಕ ಸಿ.ಟಿ.ರವಿ ಕೂಡ ಒಮರ್‌ ಹೇಳಿಕೆಯನ್ನು ಪ್ರಬಲವಾಗಿ ಖಂಡಿಸಿದ್ದಾರೆ. ಕರ್ನಾಟಕ ಮತ್ತು ದೇಶಕ್ಕೆ ದೇವೇಗೌಡರ ಕುಟುಂಬ ನೀಡಿದ ಕೊಡುಗೆ ನಿಮ್ಮ ಕುಟುಂಬ ನೀಡಿದ ಕೊಡುಗೆಗಿಂತಲೂ ಮಿಗಿಲಾಗಿದೆ. ಅದಕ್ಕಾಗಿಯೇ ಅವರನ್ನು ಮಣ್ಣಿನ ಮಗ ಎಂದು ಕರೆಯಲಾಗುತ್ತಿದೆ ಎಂದು ಟೀಕಿಸಿ ಟ್ವೀಟ್‌ ಮಾಡಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದವರು. ಆದರೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜ.ಪರ್ವೇಜ್‌ ಮುಷರ್ರಫ್ ಆ ದೇಶದಲ್ಲಿದ್ದ ಚುನಾಯಿತ ಸರ್ಕಾರವನ್ನು ವಜಾಗೊಳಿಸಿ ಅಧಿಕಾರದ ಚುಕ್ಕಾಣಿ ಹಿಡಿದುಕೊಂಡವರು. ಅವರಿಬ್ಬರನ್ನೂ ಒಮರ್‌ ಅಬ್ದುಲ್ಲಾ ಹೇಗೆ ಹೋಲಿಕೆ ಮಾಡುತ್ತಾರೆ ಎಂದು ಹಲವರು ಟ್ವೀಟ್‌ ಮಾಡಿ ಪ್ರಶ್ನಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯ ಗ್ರಿಡಾಡಿ ಎಂಬುವರು ಟ್ವೀಟ್‌ ಮಾಡಿ ದೇವೇಗೌಡರು ಪರಿಶ್ರಮದಿಂದ ರಾಜಕೀಯದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ನಿಮ್ಮಂತೆ ಕುಟುಂಬದ ಪ್ರಭಾವದಿಂದ ಮುಖ್ಯಮಂತ್ರಿ, ಪ್ರಧಾನಿಯಾಗಲಿಲ್ಲ ಎಂದು ಟೀಕಿಸಿದ್ದಾರೆ.

ಒಮರ್‌ ಬರೆದುಕೊಂಡಿದ್ದೇನು?
ಗಲ್ಲು ಶಿಕ್ಷೆಗೆ ಗುರಿಯಾಗಿರುವ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಬಗ್ಗೆ ಚಾನಲ್‌ಗಳು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜ.ಮುಷರ್ರಫ್ ಜತೆ ಮಾತನಾಡುವುದು ಮತ್ತು ಭಾರತದ ಬೆಳವಣಿಗೆಗಳ ಜತೆಗೆ ಮಾಜಿ ಪ್ರಧಾನಿ ದೇವೇಗೌಡರ ಜತೆ ಮಾತನಾಡುವುದು ಎರಡೂ ಒಂದೇ. ಏಕೆಂದರೆ ಇಬ್ಬರೂ ಮಾಜಿಗಳು.

ಹೋಗಲಿ ಬಿಡ್ರಪ್ಪಾ…
ಮೈಕ್ರೋಬ್ಲಾಗಿಂಗ್‌ ತಾಣ ಟ್ವಿಟರ್‌ನಲ್ಲಿ ಒಮರ್‌ ಅಬ್ದುಲ್ಲಾ ವಿರುದ್ಧ 2 ದಿನಗಳಿಂದ ಟೀಕಾ ಪ್ರಹಾರ ನಡೆಸುತ್ತಿರುವ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ವಿಚಾರವನ್ನು ಇನ್ನಷ್ಟು ಎಳೆದಾಡುವುದು ಬೇಡ ಎಂದಿದ್ದಾರೆ. ಈ ಬಗ್ಗೆ ಪಕ್ಷದ ವಕ್ತಾರ ಕುನ್ವರ್‌ ಡ್ಯಾನಿಷ್‌ ಅಲಿ ಮಾಹಿತಿ ನೀಡಿದ್ದಾರೆ. ದೇವೇಗೌಡರ ಬಗ್ಗೆ ಮಾತನಾಡುವವರ ಸಾಮರ್ಥ್ಯದ ಬಗ್ಗೆ ಜನರೇ ನಿರ್ಧರಿಸಲಿದ್ದಾರೆ ಎಂದಿದ್ದಾರೆ. ‘ಒಮರ್‌ ಲಂಡನ್‌ನಲ್ಲಿ ಶಿಕ್ಷಣ ಪಡೆದವರು. ಅವರು ತಮ್ಮ ಜ್ಞಾನವನ್ನು ಮತ್ತೂಬ್ಬರನ್ನು ಹೀಯಾಳಿಸಲು ಬಳಸಬಹುದು. ನಮ್ಮ ನಾಯಕ ಗ್ರಾಮೀಣ ಹಿನ್ನೆಲೆಯಿಂದ ಬಂದವರು. ಹೀಗಾಗಿ ಈ ವಿಚಾರದ ಬಗ್ಗೆ ಮಾತನಾಡದಿರಲು ತೀರ್ಮಾನಿಸಿದ್ದೇವೆ’ ಎಂದಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next