ಗಾಂಧಿನಗರಕ್ಕೆ ದಿನ ಕಳೆದಂತೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ “ಓಂ ಶ್ರೀ ಸ್ವಸ್ತಿಕ್’ ಸಿನಿಮಾ ಹೊಸ ಸೇರ್ಪಡೆ. ಈ ಚಿತ್ರದ ವಿಶೇಷ ಅಂದರೆ, ನಟನೆ ಶಾಲೆ ವಿದ್ಯಾರ್ಥಿಗಳೇ ಸೇರಿ ಮಾಡಿದ ಸಿನಿಮಾ ಇದು. ಹೌದು, ಪುಟಾಣೆ ಫಿಲ್ಮ್ ಇನ್ಸ್‌ಟಿಟ್ಯೂಟ್ ವಿದ್ಯಾರ್ಥಿಗಳು ಈ ಚಿತ್ರದ ಆಕರ್ಷಣೆ. ಅವರೇ ಮೊದಲ ಸಲ ಕ್ಯಾಮೆರಾ ಮುಂದೆ ನಿಂತು, ನಟಿಸಿದ್ದಲ್ಲದೆ ತಮ್ಮ ಪಾತ್ರಗಳಿಗೂ ಡಬ್ಬಿಂಗ್ ಮಾಡಿ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇತ್ತೀಚೆಗೆ ತಮ್ಮ ಚಿತ್ರದ ಬಗ್ಗೆ ಮಾಹಿತಿ ಕೊಡಲೆಂದೇ ನಿರ್ದೇಶಕ ಕಮ್ ನಿರ್ಮಾಪಕ ಪುಟಾಣೆ ರಾಮರಾವ್ ಅವರು, ತಂಡದ ಜೊತೆ ಪತ್ರಕರ್ತರ ಮುಂದೆ ಆಗಮಿಸಿದ್ದರು.
ಮೊದಲು ಮಾತು ಶುರುಮಾಡಿದ ರಾಮರಾವ್, “ಪುಟಾಣೆ ನಟನೆ ಶಾಲೆ ವಿದ್ಯಾರ್ಥಿಗಳೇ ಚಿತ್ರದ ಆಕರ್ಷಣೆ. ನಮ್ಮ ಶಾಲೆಯಲ್ಲೇ ಅವರಿಗೆ ತರಬೇತಿ ಕೊಟ್ಟು, ಅನುಭವ ಆಗಬೇಕು ಎಂಬ ಕಾರಣಕ್ಕೆ ಈ ಚಿತ್ರ ನಿರ್ಮಿಸಿದ್ದೇವೆ. ಇನ್ನು ಮುಂದೆ ನಮ್ಮ ಸಂಸ್ಥೆ ಮೂಲಕ ವರ್ಷಕ್ಕೆ ಒಂದು ಚಿತ್ರ ನಿರ್ಮಿಸಿ, ಕಲಿಯುವ ವಿದ್ಯಾರ್ಥಿಗಳಿಗೊಂದು ವೇದಿಕೆ ಕಲ್ಪಿಸುವ ಉದ್ದೇಶ ನಮ್ಮದು. ಇಲ್ಲಿ ಪ್ರೀತಿ, ಪ್ರೇಮ, ದ್ವೇಷ, ಅಸೂಯೆ ಮತ್ತು ಒಂದಷ್ಟು ಸೆಂಟಿಮೆಂಟ್ ವಿಷಯಗಳೊಂದಿಗೆ ಈಗಿನ ಟ್ರೆಂಡ್ ಕಥೆ ಹೆಣೆದಿದ್ದೇನೆ. ಈಗಾಗಲೇ ಶೇ.75 ರಷ್ಟು ಚಿತ್ರೀಕರಣವಾಗಿದೆ. ಉಳಿದಂತೆ ಎರಡು ಫೈಟ್ಸ್ ಮತ್ತು ಎರಡು ಹಾಡುಗಳನ್ನು ಚಿತ್ರೀಕರಿಸಿದರೆ ಚಿತ್ರ ಪೂರ್ಣಗೊಳ್ಳಲಿದೆ’ ಎಂಬ ವಿವರ ಅವರದು.
ಚಿತ್ರಕ್ಕೆ ಸಂತೋಷ್ ನಾಯಕ. ಇವರಿಗೆ ಇದು ಮೊದಲ ಅನುಭವ. ಮೂಲತಃ ಶಿವಮೊಗ್ಗದವರಾದ ಸಂತೋಷ್‌ಗೆ, ಒಳ್ಳೆಯ ನಟ ಆಗಬೇಕು ಎಂಬ ಆಸೆ, ಈ ಚಿತ್ರದ ಮೂಲಕ ಈಡೇರಿದೆಯಂತೆ. ಅವರಿಲ್ಲಿ ಹಳ್ಳಿ ಹುಡುಗನಾಗಿ ಕಾಣಿಸಿಕೊಂಡಿದ್ದಾರಂತೆ. ಅವರಿಗೆ ರಂಜಿತಾ ಎಂಬ ನಾಯಕಿ ಇದ್ದು, ಅವರಿಗೂ ಇದು ಮೊದಲ ಚಿತ್ರ. ಅವರಿಲ್ಲಿ ತುಂಬಾ ಓದಿಕೊಂಡು, ಹಳ್ಳಿಯಲ್ಲಿರುವ ಹುಡುಗಿ ಪಾತ್ರ ಸಿಕ್ಕಿದೆಯಂತೆ. ಮೊದಲ ಚಿತ್ರವಾಗಿರುವುದರಿಂದ ಸಹಜವಾಗಿಯೇ ಭಯ ಮತ್ತು ಖುಷಿ ಎರಡೂ ಇದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರಲಿ ಎಂದರು ಅವರು.
ಚಿತ್ರದಲ್ಲಿ ಯತೀಶ್, ನಿತಿನ್, ರಾಹುಲ್, ಅಜಯ್, ಮಾ.ಚಿರಂಜೀವಿ, ಸ್ನೇಹಾ, ವಿನಯ್, ಶೃತಿಶೆಟ್ಟಿ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಭೋಗೇಶ್ ಎಸ್.ಕಾರಟಕಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದರೆ, ಲೋಕಿ ಸಂಗೀತವಿದೆ. ಧನರಾಜ್ ಚೌಹಾಣ್ ಛಾಯಾಗ್ರಹಣವಿದೆ. ತಮ್ಮೇನಹಳ್ಳಿ ದಾಸ್ ಹಾಗು ನಾಗಮುಖ ಸಾಹಿತ್ಯವಿದೆ. ಚಿತ್ರದಲ್ಲಿ ನಿರ್ದೇಶಕ ಪುಟಾಣೆ ರಾಮರಾವ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸಬರ ಚಿತ್ರತಂಡಕ್ಕೆ ಶುಭ ಕೋರಲು, ನಿರ್ದೇಶಕರಾದ ವಿಶಾಲ್‌ರಾಜ್, ಹರಿಸಂತೋಷ್ ಮತ್ತು ಕಲಾವಿದ ಅರವಿಂದ್ ಆಗಮಿಸಿ, ಹೊಸ ಪ್ರಯತ್ನ ಕುರಿತು ಮಾತನಾಡಿದರು. ಈ ವೇಳೆ ವಿನಯ್ ಆರ್.ಪುಟಾಣೆ, ಧನ್‌ರಾಜ್ ಚೌಹಾಣ್ ಇತರರು ಇದ್ದರು.