Advertisement

ಒಲಿಂಪಿಕ್ಸ್, ಕನಸು ನನಸಾಗಿಸಲು ಸಿದ್ಧತೆ ಮುಖ್ಯ

12:46 PM Sep 19, 2018 | Team Udayavani |

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರನ್ನು ಕಂಡಾಗ ಒಂದು ಅವಕಾಶ ನನಗೂ ಸಿಕ್ಕಿದ್ದರೆ ನಾನೂ ಪಾಲ್ಗೊಳ್ಳುತ್ತಿದ್ದೆ, ಪದಕ ಗೆಲ್ಲಲು ಪ್ರಯತ್ನ ಪಡುತ್ತಿದ್ದೆ ಎಂಬ ಆಸೆ ಪ್ರತಿಯೊಬ್ಬ ಕ್ರೀಡಾಳುವಿನ ಮನದಲ್ಲೊಮ್ಮೆ ಹಾದು ಹೋಗುತ್ತದೆ. ಪದಕ ಗೆದ್ದ ಮೇಲಿನ ಪ್ರಯಾಣಕ್ಕಿಂತ ಪದಕ ಗೆಲ್ಲುವವರೆಗಿನ ಪ್ರಯಾಣ ಸುಲಭವಾಗಿ ಏನೂ ಇರುವುದಿಲ್ಲ. ಅದಕ್ಕೆ ಸಾಕಷ್ಟು ತಯಾರಿಯ ಜತೆಗೆ ಸರಿಯಾದ ಮಾರ್ಗದರ್ಶಕರ ಅಗತ್ಯ ಪ್ರತಿಯೊಬ್ಬ ಕ್ರೀಡಾಪಟುವಿಗೂ ಇರುತ್ತದೆ.

Advertisement

ಇತ್ತೀಚಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರ ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದ್ದು, ಹೆಚ್ಚಿನ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಅದರಲ್ಲಿಯೂ ರಾಜ್ಯದ ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗಳಿಸುತ್ತಿರುವುದು ಖುಷಿಯ ಸಂಗತಿಯಾಗಿದೆ.

ಜೀವನದಲ್ಲಿ ಒಂದು ಬಾರಿಯಾದರೂ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಗಳಿಸಬೇಕು ಎಂಬ ಮಹದಾಸೆ ಪ್ರತಿಯೊಬ್ಬ ಕ್ರೀಡಾಪಟುವಿಗೂ ಇರುತ್ತದೆ. ಆ ಹಂತಕ್ಕೆ ತಲುಪಲು ದಿನಂಪ್ರತಿ ಕಠಿನ ಅಭ್ಯಾಸ ಅಗತ್ಯವಿರುತ್ತದೆ. ಆದರೆ ಯಾವುದೇ ಕ್ರೀಡಾಕೂಟದಲ್ಲಿ ಮಿಂಚಲು ತಳಮಟ್ಟದ ಅಡಿಪಾಯ ಮಾತ್ರ ಅತೀ ಮುಖ್ಯ. ಇತ್ತೀಚಿನ ದಿನಗಳಲ್ಲಿ ಕೆಲವು ಪ್ರದೇಶಗಳಲ್ಲಿ ಕ್ರೀಡಾ ಶಾಲೆಗಳು ಎಂದು ಪ್ರತ್ಯೇಕವಾಗಿ ಪ್ರಾರಂಭವಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ಹೆಚ್ಚಿನ ರಾಜ್ಯಗಳಲ್ಲಿ ಕ್ರೀಡಾ ಶಾಲೆಗಳಿಲ್ಲ. ಜತೆಗೆ ಅರಿವಿನ ಕೊರತೆಯೂ ಇದೆ. ಅದರಲ್ಲಿಯೂ ಗ್ರಾಮೀಣ ಪ್ರದೇಶದ ಕ್ರೀಡಾಪಟುವಿಗೆ ಕ್ರೀಡೆಯಲ್ಲಿ ಆಸಕ್ತಿ ಇದ್ದರೂ, ಅವಕಾಶ ದಕ್ಕುವುದಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ಶಾಲೆ- ಕಾಲೇಜು ಮಟ್ಟದಲ್ಲಿಯೇ ತಯಾರಿ ನಡೆಸುವುದು ಅತ್ಯಗತ್ಯವಾಗಿದೆ.

ತರಗತಿ ಹೇಗಿರಬೇಕು?
ಯಾವುದೇ ಕ್ರೀಡೆಯಲ್ಲಿ ಪಳಗುವ ಮುನ್ನ ಆಸಕ್ತಿ ಮುಖ್ಯ. ಅದಕ್ಕೆಂದು ಶಾಲಾ- ಕಾಲೇಜು ಮಟ್ಟದಲ್ಲಿನ ಕಠಿನ ಮುಖ್ಯ. ಹೆಚ್ಚಿನ ಶಾಲೆಗಳಲ್ಲಿ ದೈಹಿಕ ಶಿಕ್ಷಕರು ಇದ್ದೇ ಇರುತ್ತಾರೆ. ಅವರ ಗರಡಿಯಲ್ಲಿ ಪಳಗಿದ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಬಹಳಷ್ಟು ಉದಾಹರಣೆಗಳಿವೆ. ಅದಕ್ಕೆಂದು ಶಾಲಾ-ಕಾಲೇಜು ದಿನಗಳ ತರಬೇತಿ ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚೆಗೆ ಎಲ್ಲ ಶಾಲಾ ಮಟ್ಟದಲ್ಲಿ ಪಠ್ಯ ಚಟುವಟಿಕೆಯ  ಜತೆಗೆ ಪಠ್ಯೇತರ ಚಟುವಟಿಕೆಗೂ ಪ್ರತ್ಯೇಕ ಸಮಯ ನಿಗದಿಯಾಗಿರುತ್ತದೆ. ಅದೇ ರೀತಿ ದೈಹಿಕ ಶಿಕ್ಷಣದ ತರಗತಿಗಳು ಇದ್ದು, ಈ ಸಮಯದಲ್ಲಿ ದೈಹಿಕ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಬೆಳೆಸುವಲ್ಲಿ ಸಹಕರಿಸುತ್ತಾರೆ.

ಶಾಲಾ ಮಟ್ಟದಿಂದಲೇ ನೇರವಾಗಿ ಒಲಿಂಪಿಕ್ಸ್‌ ಕ್ರೀಡಾಕೂಡಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಅದರ ಬದಲಾಗಿ, ತಾಲೂಕು, ಜಿಲ್ಲಾ ರಾಜ್ಯ, ರಾಷ್ಟ್ರ ಸಹಿತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಅಡಿಪಾಯ ಹಾಕಿಕೊಡುವ ಜವಾಬ್ದಾರಿ ದೈಹಿಕ ಶಿಕ್ಷಕರದ್ದಾಗಿರುತ್ತದೆ. ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ಶಾಲಾ- ಕಾಲೇಜು ಮಟ್ಟದಲ್ಲಿ ಅಗತ್ಯವಿರುವ ಕ್ರೀಡಾ ಉಪಕರಣಗಳು (ವಾಲಿಬಾಲ್‌, ಬಾಸ್ಕೆಟ್‌ಬಾಲ್‌, ಟೆನ್ನಿಸ್‌) ಕೆಲವೊಂದು ಶಾಲೆ- ಕಾಲೇಜುಗಳಲ್ಲಿ ಲಭ್ಯವಿರುವುದಿಲ್ಲ. ಅಲ್ಲದೇ, ವಿಶಾಲವಾದ ಮೈದಾನದ ವ್ಯವಸ್ಥೆ ಕೂಡ ಇರುವುದಿಲ್ಲ. ಈ ಬಗ್ಗೆ ಆಯಾ ರಾಜ್ಯ ಸರಕಾರಗಳು ಗಮನಹರಿಸಿದರೆ ಉತ್ತಮ ಕ್ರೀಡಾಪಟು ತಯಾರಾಗಲು ಸಾಧ್ಯವಿದೆ.

Advertisement

ಒಲಿಂಪಿಕ್ಸ್‌ನಲ್ಲಿ ಹಲವಾರು ಕ್ರೀಡೆಗಳು ಇರುತ್ತವೆ. ಕೆಲವೊಂದು ಕ್ರೀಡೆಗಳಲ್ಲಿ ಭಾರತ ಸ್ಪರ್ಧಿಸುದಿಲ್ಲ. ಏಕೆಂದರೆ ಅಂತಹ ಕ್ರೀಡೆಯ ಬಗ್ಗೆ ಇಲ್ಲಿನ ಕ್ರೀಡಾಪಟುಗಳಿಗೆ ಮಾಹಿತಿ ಬೇಕಿದೆ. ಅಲ್ಲದೆ, ಹೊಸ ಕ್ರೀಡೆಯ ತರಬೇತುದಾರರ ಕೊರತೆ ಕೂಡ ಭಾರತದಲ್ಲಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರೀಡಾ ಇಲಾಖೆ ಗಮನಹರಿಸಿದರೆ ಭಾರತ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಚೀನಾ ದೇಶಕ್ಕೂ ಸವಾಲೊಡ್ಡಬಹುದು.

ಚೀನಾ ಮುಂದು
ಒಲಿಂಪಿಕ್ಸ್‌ ಅಂದಾಕ್ಷಣ ನೆನಪಿಗೆ ಬರುವುದು ಚೀನಾ ದೇಶದ ಸಾಧನೆ. 1949ರಿಂದ 8 ಬೇಸಗೆ ಕಾಲದ ಒಲಿಂಪಿಕ್ಸ್‌ ಮತ್ತು 9 ಚಳಿಗಾಲದ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾಗವಹಿಸಿದೆ. ಅದರಲ್ಲಿ ಬೇಸಗೆ ಕಾಲದ ಒಲಿಂಪಿಕ್ಸ್‌ನಲ್ಲಿ 385 ಪದಕ, ಚಳಿಗಾಲದ ಒಲಿಂಪಿಕ್ಸ್‌ ನಲ್ಲಿ 44 ಪದಕ ಪಡೆಯಿತು. ಇದಕ್ಕೆ ಕಾರಣ ಚೀನಾ ದೇಶದಲ್ಲಿ ಕ್ರೀಡಾಪಟುಗಳಿಗೆ ನೀಡುತ್ತಿರುವ ಪ್ರೋತ್ಸಾಹ ಮತ್ತು ಅಲ್ಲಿನ ಸೌಲಭ್ಯ. ಚೀನಾ ದೇಶ ಒಲಿಂಪಿಕ್ಸ್‌ ನಲ್ಲಿ ಆ ಮಟ್ಟಿನ ಸಾಧನೆಗೆ ಕಾರಣವಿದೆ. ಏಕೆಂದರೆ ಇಲ್ಲಿನ 7 ರಿಂದ 70 ವರ್ಷದೊಳಗಿನ ಹೆಚ್ಚಿನವರು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಾರೆ. ನಗರ ಪ್ರದೇಶದ ಮಂದಿ ಫಿಟ್‌ನೆಸ್‌ ಕಾಯ್ದುಕೊಳ್ಳಲು ಸ್ಪೋರ್ಟ್ಸ್  ಕ್ಲಬ್‌ಗೂ ತೆರಳುತ್ತಾರೆ. ಅಷ್ಟೇ ಅಲ್ಲ, ಚೀನಾದಲ್ಲಿ 6,20,000ಕ್ಕೂ ಹೆಚ್ಚು ಜಿಮ್ನಾಶಿಯಮ್‌ ಕ್ರೀಡಾಂಗಣವಿದೆ. 

 ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next