Advertisement

ರಾಜ್ಯ ಒಲಿಂಪಿಕ್ಸ್‌ಗೆ ಯಶಸ್ಸಿನ ಗರಿ

12:34 PM Feb 18, 2017 | |

ಭರ್ಜರಿ ಎಂಟು ವರ್ಷಗಳ ನಂತರ ಕರ್ನಾಟಕ ಸರ್ಕಾರ ಆಯೋಜಿಸಿರುವ ರಾಜ್ಯ ಒಲಿಂಪಿಕ್ಸ್‌ ಯಶಸ್ವಿಗೊಂಡಿದೆ. ಇದೇ ಮೊದಲ ಬಾರಿಗೆ ಆತಿಥ್ಯ ವಹಿಸಿದ್ದ ಅವಳಿನಗರ ಹುಬ್ಬಳ್ಳಿ-ಧಾರವಾಡ ಸಂಘಟನೆಯಲ್ಲಿ ತಾವು ಯಾರಿಗೂ ಕಮ್ಮಿ ಇಲ್ಲ ಅನ್ನುವುದನ್ನು ತೋರಿಸಿಕೊಟ್ಟಿದೆ. ಇದರ ಫ‌ಲವಾಗಿ ಯಾವುದೇ ಅಡೆ ತಡೆಗಳಿಲ್ಲದೆ ಕ್ರೀಡಾಕೂಟ ಯಶಸ್ಸಿನ ಗರಿ ಸಿಕ್ಕಿಸಿಕೊಂಡಿದೆ.

Advertisement

ಕ್ರೀಡಾ ಕೂಟಗಳು ಹೆಚ್ಚಿನ ಪ್ರಮಾಣದಲ್ಲಿ ನಡೆದಂತೆ ಅಥ್ಲೀಟ್‌ಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶ ಸಿಕ್ಕಂತಾಗುತ್ತದೆ. ಇಂತಹ ಒಂದು ಅವಕಾಶ ಈ ಬಾರಿ ರಾಜ್ಯದ ಕ್ರೀಡಾಪಟುಗಳಿಗೆ ಸಿಕ್ಕಿತ್ತು. ಹೀಗಾಗಿ ಎಷ್ಟೋ ಉದಯೋನ್ಮುಖ ಕ್ರೀಡಾಪಟುಗಳು ಹುಟ್ಟಿಕೊಂಡಿದ್ದಾರೆ. ಯಾವ ಕ್ರೀಡೆಯಲ್ಲಿ ಯಾವ ರಾಜ್ಯ ಬಲಿಷ್ಠವಾಗಿದೆ ಅನ್ನುವುದು ಕೂಡ ಸಾಬೀತಾಗಿದೆ. ಈ ನಿಟ್ಟಿನದಲ್ಲಿ ರಾಜ್ಯ ಸರ್ಕಾರ ಇನ್ನು ಮುಂದೆಯಾದರೂ ಒಲಿಂಪಿಕ್ಸ್‌, ಕಾಮನ್‌ವೆಲ್ತ್‌, ಏಷ್ಯನ್‌ಗೆàಮ್ಸ್‌, ವಿಶ್ವಚಾಂಪಿಯನ್‌ಶಿಪ್‌…. ಸೇರಿದಂತೆ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ರಾಜ್ಯದ ಪ್ರತಿಭೆಗಳು ಮಿಂಚುವಂತೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾಪಟುಗಳಿಗೆ ಬೇಕಾದ ತರಬೇತಿ ಸೌಲಭ್ಯವನ್ನು ಒದಗಿಸುವುದನ್ನು ಸರ್ಕಾರ ಮಾಡಬೇಕು.

ದಾಖಲೆ ನಿರ್ಮಿಸಿದ ವಿಶ್ವಂಬರ, ಜಾಯಿಲಿನ್‌


ಈ ಕೂಟದಲ್ಲಿ ಮೂರು ರಾಜ್ಯ ದಾಖಲೆಗಳು ನಿರ್ಮಾಣವಾಗಿವೆ. 800 ಮೀ. ಮತ್ತು 1500 ಮೀ. ಓಟದಲ್ಲಿ ಬೆಂಗಳೂರಿನ ಪರ ಸ್ಪರ್ಧಿಸಿರುವ ಕುಂದಾನಗರಿಯ ಹುಡುಗ ವಿಶ್ವಂಬರ ಎರಡರಲ್ಲಿಯೂ 30 ವರ್ಷದ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. 800 ಮೀ. ಓಟವನ್ನು 1 ನಿಮಿಷ 47.5 ಸೆಕೆಂಡ್‌ನ‌ಲ್ಲಿ ಗುರಿ ಮುಟ್ಟಿ ರಾಜ್ಯ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ 1986ರಲ್ಲಿ ದಾಮೋದರ ಗೌಡ 1 ನಿಮಿಷ 50.4 ಸೆಕೆಂಡ್‌ನ‌ಲ್ಲಿ ಗುರಿ ಮುಟ್ಟಿದ್ದು ದಾಖಲೆಯಾಗಿತ್ತು. ಅದೇ ರೀತಿ 1500 ಮೀ. ಓಟದಲ್ಲಿ 3 ನಿಮಿಷ 45.4 ಸೆಕೆಂಡ್‌ನ‌ಲ್ಲಿ ಗುರಿ ಮುಟ್ಟಿ ದಾಖಲೆ ನಿರ್ಮಿಸಿದರು. ಇದಕ್ಕೂ ಮುನ್ನ 1986ರಲ್ಲಿ ಸತ್ಯನಾರಾಯಣ 3 ನಿಮಿಷ 51.1 ಸೆಕೆಂಡ್‌ನ‌ಲ್ಲಿ ಗುರಿ ಮುಟ್ಟಿದ್ದೇ ದಾಖಲೆಯಾಗಿತ್ತು.
ಟ್ರಿಪಲ್‌ ಜಂಪ್‌ನಲ್ಲಿ ಮೂಡಬಿದಿರೆ ಅಥ್ಲೀಟ್‌ ಜಾಯಿಲಿನ್‌ ಎಂ.ಲೋಬೋ 13.13 ಮೀ. ಜಿಗಿದು ರಾಜ್ಯ ದಾಖಲೆ ಸ್ಥಾಪಿಸಿದರು. ಇದಕ್ಕೂ ಮುನ್ನ 2014ರಲ್ಲಿ ಲಕ್ನೋದಲ್ಲಿ ನಡೆದ ಅಂತಾರಾಜ್ಯ ಕ್ರೀಡಾಕೂಟದಲ್ಲಿ ಜಾಯಿಲಿನ್‌ 13.05 ಜಿಗಿದು ದಾಖಲೆ ಹೊಂದಿದ್ದರು. ಇದೀಗ ತಮ್ಮದೇ ದಾಖಲೆಯನ್ನು ಮುರಿದಂತಾಗಿದೆ.

ಮುಂದಿನ ಭೇಟಿ ಕರಾವಳಿಯಲ್ಲಿ
ರಾಜ್ಯ ಸರ್ಕಾರ ಎರಡು ವರ್ಷಗಳಿಗೊಮ್ಮೆ ರಾಜ್ಯ ಒಲಿಂಪಿಕ್ಸ್‌ ನಡೆಸಲು ತೀರ್ಮಾನಿಸಿದೆ. ಈಗಾಗಲೇ ವಿದ್ಯಾಕಾಶಿಯಲ್ಲಿ ಯಶಸ್ಸುಗೊಂಡಿರುವ ಹುಮ್ಮಸ್ಸಿನಲ್ಲಿಯೇ ಮುಂದಿನ ಒಲಿಂಪಿಕ್ಸ್‌ ಕರಾವಳಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ಕ್ರೀಡಾಕೂಟವನ್ನು ನಡೆಸುವುದರಿಂದ ರಾಜ್ಯದಲ್ಲಿರುವ ವಿವಿಧ ರೀತಿಯ ಸಂಸ್ಕೃತಿ ಕಂಡುಬರಲಿದೆ. ಅಷ್ಟೇ ಅಲ್ಲ, ಅಲ್ಲಿಯ ಸ್ಥಳೀಯ ಕ್ರೀಡಾಪಟುಗಳಿಗೂ ಆದ್ಯತೆ ದೊರೆಯಲಿದೆ.

ಯಾವ ಕ್ರೀಡೆಯಲ್ಲಿ ಯಾರು ಮೇಲುಗೈ
ಈ ಒಲಿಂಪಿಕ್ಸ್‌ನಲ್ಲಿ ಪ್ರಮುಖವಾಗಿ ಕಂಡುಬಂದಿರುವುದು ಯಾವ ಕ್ರೀಡೆಯಲ್ಲಿ ಯಾವ ರಾಜ್ಯ, ಯಾವ ಕ್ರೀಡಾ ಕ್ಲಬ್‌ ಮೇಲಿಗೈ ಸಾಧಿಸಿದೆ ಅನ್ನುವುದು ಸ್ಪಷ್ಟವಾಗಿದೆ. ವೇಟ್‌ಲಿಫ್ಟಿಂಗ್‌ನಲ್ಲಿ ಎಸ್‌ಡಿಎಂ ನ್ಪೋರ್ಟ್ಸ್ ಕ್ಲಬ್‌, ಬೆಂಗಳೂರಿನ ಸಾಯ್‌ ಕೇಂದ್ರಗಳು ಮೇಲುಗೈ ಸಾಧಿಸಿವೆ. ಅದೇ ರೀತಿ ಬಾಕ್ಸಿಂಗ್‌, ಜುಡೋದಲ್ಲಿ ಬೆಳಗಾವಿ. ಕುಸ್ತಿಯಲ್ಲಿ ಧಾರವಾಡ, ದಾವಣಗೆರೆ, ಬಾಗಲಕೋಟೆ ಸ್ಪರ್ಧಿಗಳು ಪದಕದ ಬೇಟೆಯಾಡಿವೆ. ಅಥ್ಲೆಟಿಕ್ಸ್‌ನಲ್ಲಿ ಬೆಂಗಳೂರು ಮತ್ತು ದಕ್ಷಿಣ ಕನ್ನಡದ ಸ್ಪರ್ಧಿಗಳ ಪ್ರಾಬಲ್ಯ. ಹಾಕಿಯಲ್ಲಿ ಕೊಡಗು, ಫ‌ುಟ್ಬಾಲ್‌ನಲ್ಲಿ ಬೆಳಗಾವಿ, ಬೆಂಗಳೂರು, ಧಾರವಾಡ. ನೆಟ್‌ಬಾಲ್‌ ಮತ್ತು ಬಾಸ್ಕೆಟ್‌ ಬಾಲ್‌ಗ‌ಳಲ್ಲಿ ಬೆಂಗಳೂರು, ಮಂಗಳೂರು ಪ್ರಬಲವಾಗಿವೆ.

Advertisement

ಈಜು: ಬಸವನಗುಡಿ ಕೇಂದ್ರದ ಆಧಿಪತ್ಯ
ಈಜು ಸ್ಪರ್ಧೆಯಲ್ಲಿ ಬಸವನಗುಡಿ ಈಜು ಕೇಂದ್ರವನ್ನು ಮೀರಿಸುವವರು ಯಾರು? ಇಂತಹ ಒಂದು ಪ್ರಶ್ನೆಯನ್ನು ಬಸವನಗುಡಿ ಕೇಂದ್ರ ಹುಟ್ಟು ಹಾಕಿದೆ. ಹೌದು, ರಾಜ್ಯ ಒಲಿಂಪಿಕ್ಸ್‌ನಲ್ಲಿಯೇ ಅತಿ ಹೆಚ್ಚು ಪದಕವನ್ನು ಕೊಳ್ಳೆ ಹೊಡೆದಿದೆ. ಒಟ್ಟು 90 ಪದಕವನ್ನು ಬಸವನಗುಡಿ ಕೇಂದ್ರದ ಸ್ಪರ್ಧಿಗಳು ಪಡೆದಿದ್ದಾರೆ. ಇದರಲ್ಲಿ 31 ಚಿನ್ನ, 33 ಬೆಳ್ಳಿ, 29 ಕಂಚಿನ ಪದಕಗಳು ಸೇರಿವೆ. ಪುರುಷರ ವೈಯಕ್ತಿಕ ವಿಭಾಗದಲ್ಲಿ ಅವಿನಾಶ್‌ ಮತ್ತು ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಶ್ರೇಯಾ ಆರ್‌.ಭಟ್‌ ಚಾಂಪಿಯನ್‌ಶಿಪ್‌ ಪಡೆದಿದ್ದಾರೆ.

ಒಲಿಂಪಿಕ್ಸ್‌ ಪ್ರಭಾವದ ನೆರಳು ಅಲ್ಲಗಳೆಯಲಾಗದು
2008 ಬೀಜಿಂಗ್‌, 2012 ಲಂಡನ್‌ ಮತ್ತು 2016ರ ರಿಯೋ ಒಲಿಂಪಿಕ್ಸ್‌ ನಲ್ಲಿ ಭಾರತೀಯ ಸ್ಪರ್ಧಿಗಳು ನೀಡಿರುವ ಪ್ರದರ್ಶನ ರಾಜ್ಯ ಒಲಿಂಪಿಕ್ಸ್‌ ಮೇಲೂ ಬಿದ್ದಿದೆ. ಈ ಹಿಂದಿನ ಮೂರು ಒಲಿಂಪಿಕ್ಸ್‌ನಲ್ಲಿ ಭಾರತ ಬ್ಯಾಡ್ಮಿಂಟನ್‌, ಕುಸ್ತಿ, ಶೂಟಿಂಗ್‌, ಬಾಕ್ಸಿಂಗ್‌ನಲ್ಲಿ ಪದಕ ಪಡೆದಿದೆ. ಹೀಗಾಗಿ ಈ ಕ್ರೀಡೆಗಳಲ್ಲಿ ಸಹಜವಾಗಿ ಸ್ಪರ್ಧೆ ಹೆಚ್ಚಿನ ಪ್ರಮಾಣದಲ್ಲಿತ್ತು. ಜತೆಗೆ ಕಠಿಣ ಸ್ಪರ್ಧೆಗಳು ಇದ್ದವು. ಹಾಗೇ ರಿಯೋ ಒಲಿಂಪಿಕ್ಸ್‌ನಲ್ಲಿ ನಡೆದ ಜಿಮ್ನಾಸ್ಟಿಕ್‌ನಲ್ಲಿ ದೀಪಾ ಕರ್ಮಾಕರ್‌ ಪದಕ ಪಡೆಯಲಾಗದಿದ್ದರೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತೀಯರ ಹೃದಯ ಗೆದ್ದಿದ್ದರು. ಇದರ ಪ್ರಭಾವದಿಂದ ಜಿಮ್ನಾಸ್ಟಿಕ್‌ನಲ್ಲಿ ಹೆಚ್ಚಿನ ಸ್ಪರ್ಧಿಗಳು ಕಂಡುಬಂದರು. ಸಾಮಾನ್ಯವಾಗಿ ಚಿಕ್ಕ ವಯಸ್ಸಿನ ಮಕ್ಕಳೇ ಆಗಿದ್ದರೂ ನೋಡುಗರ ಮನೆ ಗೆದ್ದರು.

ಮಂಜು ಮಳಗುಳಿ

Advertisement

Udayavani is now on Telegram. Click here to join our channel and stay updated with the latest news.

Next