Advertisement
26 ವರ್ಷದ ನೀರಜ್ ಚೋಪ್ರಾ ಪ್ಯಾರಿಸ್‌ನಲ್ಲೂ ಚಾಂಪಿಯನ್ ಆಗಿ ಮೂಡಿಬಂದರೆ ಒಲಿಂಪಿಕ್ಸ್ ಚರಿತ್ರೆಯಲ್ಲಿ ಜಾವೆಲಿನ್ ಸ್ವರ್ಣ ಉಳಿಸಿಕೊಂಡ ವಿಶ್ವದ ಕೇವಲ 5ನೇ ಅಥ್ಲೀಟ್ ಎನಿಸಲಿದ್ದಾರೆ. ಉಳಿದ ಸಾಧಕರೆಂದರೆ ಸ್ವೀಡನ್‌ನ ಎರಿಕ್ ಲೆಮ್ಮಿಂಗ್ (1908, 1912), ಫಿನ್ಲಂಡ್‌ನ ಜಾನಿ ಮೈರ (1920, 1924), ಜೆಕ್ ಗಣರಾಜ್ಯದ ಜಾನ್ ಝಿಲೆಜ್ನಿ (1992, 1996 ಮತ್ತು 2000) ಮತ್ತು ನಾರ್ವೆಯ ಆ್ಯಂಡ್ರೀಸ್ ತೊರ್ಕಿಲ್ಡ್‌ಸೆನ್ (2004, 2008). ಇವರಲ್ಲಿ ಝಿಲೆಜ್ನಿ ಅವರದು ಹ್ಯಾಟ್ರಿಕ್ ಸಾಧನೆಯಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಭಾರೀ ಸಿದ್ಧತೆ ನಡೆಸಿರುವ ನೀರಜ್ ಚೋಪ್ರಾ ಈ ವರ್ಷ ವಿಶ್ವ ಮಟ್ಟದ ಮೂರೇ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಆದರೆ ಇಲ್ಲಿ ನಿರೀಕ್ಷಿತ ಮಟ್ಟ ತಲುಪಿಲ್ಲ. ದೋಹಾ ಡೈಮಂಡ್ ಲೀಗ್‌ನಲ್ಲಿ ಇವರಿಗೆ ಲಭಿಸಿದ್ದು ದ್ವಿತೀಯ ಸ್ಥಾನ (88.36 ಮೀ.). ಇದೇ ಈ ಸೀಸನ್‌ನಲ್ಲಿ ನೀರಜ್ ದಾಖಲಿಸಿದ ಆತ್ಯುತ್ತಮ ಸಾಧನೆ. ಅನಂತರ ಮೇ 28ರಂದು ನಡೆದ ಓಸ್ಟ್ರಾವಾ ಗೋಲ್ಡನ್ ಸ್ಪೈಕ್ ಕೂಟದಿಂದ ಹಿಂದೆ ಸರಿದರು. ತೊಡೆಯ ಸ್ನಾಯು ಸಂಬಂಧಿ ನೋವು ಇದಕ್ಕೆ ಕಾರಣವಾಗಿತ್ತು. ಬಳಿಕ ಪಾವೊ ನುರ್ಮಿ ಗೇಮ್ಸ್‌ನಲ್ಲಿ ಪುನರಾಗಮನ ಸಾರಿದರು. ಇಲ್ಲಿ 85.97 ಮೀ. ಸಾಧನೆಗೈದರು.
ಟೋಕಿಯೊದಲ್ಲಿ 87.58 ಮೀ. ಸಾಧನೆಯೊಂದಿಗೆ ಚಿನ್ನ ಗೆದ್ದ ಬಳಿಕ ನೀರಜ್ ಚೋಪ್ರಾ ಅವರ ಒಟ್ಟು ಪ್ರದರ್ಶನವೇನೋ ಸ್ಥಿರವಾಗಿದೆ. 15 ಸ್ಪರ್ಧೆಗಳಲ್ಲಿ 85 ಮೀಟರ್‌ಗೂ ಕಡಿಮೆ ದೂರ ದಾಖಲಿಸಿದ್ದು 2 ಸಲ ಮಾತ್ರ. ಪ್ಯಾರಿಸ್‌ನಲ್ಲಿ ಅವರು ಸಂಪೂರ್ಣ ಫಿಟ್ ಆಗಿರುವುದರಿಂದ ಭಾರತೀಯರ ನಿರೀಕ್ಷೆ ಗರಿಗೆದರಿದೆ.
Related Articles
ಟೋಕಿಯೊದಲ್ಲಿ ಬೆಳ್ಳಿ ಪದಕ ಗೆದ್ದ ಜೆಕ್ ತ್ರೋವರ್ ಜಾಕುಬ್ ವಾದ್ಲೆಶ್, ಜರ್ಮನಿಯ ಜೂಲಿಯನ್ ವೆಬರ್, ಮಾಜಿ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ ಅವರ ಪ್ರಬಲ ಪೈಪೋಟಿ ನೀರಜ್‌ಗೆ ಎದುರಾಗಲಿದೆ. ಇವರಲ್ಲಿ ವಾದ್ಲೆಶ್, ದೋಹಾ ಡೈಮಂಡ್ ಲೀಗ್’ನಲ್ಲಿ ಭಾರತೀಯನನ್ನು ಹಿಂದಿಕ್ಕಿದ್ದರು.
Advertisement
ಭಾರತದ ಮತ್ತೋರ್ವ ಜಾವೆಲಿನ್ ಎಸೆತಗಾರ ಕಿಶೋರ್ ಜೇನಾ ಕೂಡ ಸ್ಪರ್ಧೆಯಲ್ಲಿದ್ದಾರೆ. ಕಳೆದ ವರ್ಷದ ಏಷ್ಯಾಡ್‌ನಲ್ಲಿ 87.54 ಮೀ. ಸಾಧನೆಯಿಂದಾಗಿ ಅವರು ನೇರವಾಗಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದರು. ಅನಂತರ 80 ಮೀ. ಗಡಿ ದಾಟಲು ಇವರಿಂದಾಗಲಿಲ್ಲ ಎಂಬುದೊಂದು ಹಿನ್ನಡೆ.