ಹಾವೇರಿ: ಹಾನಗಲ್ಲ ಉಪಚುನಾವಣೆ ಉಸ್ತುವಾರಿ ಜವಾಬ್ದಾರಿ ನೀಡಿದ್ದರೂ ಪ್ರಚಾರದಿಂದ ದೂರವೇ ಉಳಿದಿದ್ದ ಹಾವೇರಿ ಶಾಸಕ ನೆಹರು ಓಲೇಕಾರ ಅವರನ್ನು ರವಿವಾರ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಮಾತುಕತೆ ನಡೆಸಿದರು. ನಗರದಲ್ಲಿರುವ ಓಲೇಕಾರ ಅವರ ನಿವಾಸಕ್ಕೆ ಆಗಮಿಸಿ ಚುನಾವಣೆ ಪ್ರಚಾರ ಕುರಿತು ಚರ್ಚಿಸಿದರು. ಅಭ್ಯರ್ಥಿ ಶಿವರಾಜ ಸಜ್ಜನರ ಅವರನ್ನು ಗೆಲ್ಲಿಸಲು ಎಲ್ಲರೂ ಒಟ್ಟಾಗಿ ಪ್ರಚಾರದಲ್ಲಿ ತೊಡಗಬೇಕೆಂದು ಸಿಎಂ ಹೇಳಿದರು. ಉಸ್ತುವಾರಿ ಜವಾಬ್ದಾರಿ ನೀಡಿದ್ದರೂ ಇದುವರೆಗೆ ಶಾಸಕ ಓಲೇಕಾರ ಪ್ರಚಾರಕ್ಕೆ ತೆರಳಿರಲಿಲ್ಲ. ನಾಮಪತ್ರ ಸಲ್ಲಿಕೆ ದಿನವೂ ಹೋಗಿರಲಿಲ್ಲ. ಸಿಎಂ ಭೇಟಿ ಬಳಿಕ ವೈಮನಸ್ಸು ಮರೆತು ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ಓಲೇಕಾರ ತಿಳಿಸಿದ್ದಾರೆ. ಈ ವೇಳೆ ಸಂಸದ ಶಿವಕುಮಾರ ಉದಾಸಿ ಇದ್ದರು.
ನನ್ನ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ ಆಗಮಿಸಿದ್ದರು. ಬೇರೆ ಕೆಲಸ ಇದ್ದುದರಿಂದ ಪ್ರಚಾರಕ್ಕೆ ಹೋಗಿರಲಿಲ್ಲ. ಹಾನಗಲ್ಲ ಉಪ ಚುನಾವಣೆಯಲ್ಲಿ ಪಕÒದ ಅಭ್ಯರ್ಥಿ ಗೆಲ್ಲಿಸಲು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚಿಸಲಾಯಿತು. ಯಡಿಯೂರಪ್ಪ ಅವರು ಪ್ರಚಾರಕ್ಕೆ ಬಂದಾಗ ನಾನು ಪಾಲ್ಗೊಳ್ಳುತ್ತೇನೆ.
ನೆಹರು ಓಲೇಕಾರ, ಹಾವೇರಿ ಶಾಸಕ
ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದ ಪ್ರಚಾರ
ಹಾನಗಲ್ಲ: ಹಾನಗಲ್ಲ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ರವಿವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಬಿಜೆಪಿ ಪ್ರಚಾರ ಸಭೆ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜಾಧ್ಯಕ್ಷ ನಳೀನ್‌ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಸಚಿವರು, ಬಿಜೆಪಿ ನಾಯಕರ ದಂಡು ಸೇರುವ ಮೂಲಕ ಉಪಚುನಾವಣೆ ರಣಕಹಳೆ ಮೊಳಗಿಸಿದರು.ಹುಬ್ಬಳ್ಳಿಯಿಂದ ಹಾವೇರಿಗೆ ಆಗಮಿಸಿದ ಸಿಎಂ ಸ್ಥಳೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಾನಗಲ್ಲಗೆ ತೆರಳಿದರು. ಮಾರ್ಗಮಧ್ಯೆ ಅಕ್ಕಿಆಲೂರಿನ ಮುತ್ತಿನಕಂತಿಮಠಕ್ಕೆ ಭೇಟಿ ನೀಡಿ ಚಂದ್ರಶೇಖರ ಶಿವಾಚಾರ್ಯ ಶ್ರೀಗಳಿಂದ ಆಶೀರ್ವಾದ ಪಡೆದರು. ಬಳಿಕ ನೇರವಾಗಿ ಹಾನಗಲ್ಲಗೆ ಆಗಮಿಸಿ ಸಂಸದ ಶಿವಕುಮಾರ ಉದಾಸಿ ಅವರ ಮನೆಯಲ್ಲಿ ರಾಜ್ಯಾಧ್ಯಕ್ಷ ಕಟೀಲ್, ಸಚಿವರಾದ ಬಿ.ಸಿ. ಪಾಟೀಲ, ಮುನಿರತ್ನ, ಮಾಧುಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದರು. ನಂತರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕ್ಷೇತ್ರದ ಅಪಾರ ಜನಸ್ತೋಮ ಸೇರಿಸಿ ಶಕ್ತಿ ಪ್ರದರ್ಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರು.