Advertisement

ಓಲೈಕೆ ರಾಜಕಾರಣ ಸಲ್ಲ: ಸೂಲಿಬೆಲೆ

03:28 PM Jan 29, 2018 | |

ಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿಗಳು ಜಾತಿ, ಧರ್ಮದ ನಡುವೆ ಒಡಕು ಉಂಟು ಮಾಡುವ ಮೂಲಕ ಅಧಿಕಾರಕ್ಕೆ ಬರಬಹುದು ಎಂಬ ಭ್ರಮೆಯಲ್ಲಿ ಇರುವಂತಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

Advertisement

ನಗರದ ಕುವೆಂಪು ರಂಗಮಂದಿರದಲ್ಲಿ ಸಂಸ್ಕಾರ ಭಾರತಿ ವತಿಯಿಂದ ಆಯೋಜಿಸಿದ್ದ ಭಾರತ ಮಾತಾ ಪೂಜನ್‌ ಕಾರ್ಯಕ್ರಮದಲ್ಲಿ ಭಾರತದ ಆಂತರಿಕ ಸವಾಲುಗಳು  ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು. ಜಾತಿ ಜನಗಣತಿ ನಡೆಸುವ ಮೂಲಕ ಯಾವ ಜನರ ಓಲೈಕೆ ಮಾಡಿದರೆ ಅಧಿಕಾರಕ್ಕೆ ಮತ್ತೆ ಬರಬಹುದು ಎಂಬ ಕೆಟ್ಟ ಅಲೋಚನೆ ಮಾಡಿರುವುದು ದುರದೃಷ್ಟಕರ. ಕೆಟ್ಟ
ಕುತಂತ್ರ ರಾಜಕಾರಣದ ನೆಲೆಯಲ್ಲಿ ಮುನ್ನಡೆಯಬೇಕು ಎಂದು ಮುಖ್ಯಮಂತ್ರಿ ನಿರ್ಧರಿಸಿದಂತಿದೆ ಎಂದು ದೂರಿದರು. 
ಸಾರ್ವಜನಿಕರಲ್ಲಿ ಧಾರ್ಮಿಕ ಹಾಗೂ ಭಾವನಾತ್ಮಕವಾಗಿ ಗೊಂದಲ ಮೂಡಿಸುವ ರಾಜಕಾರಣಿಗಳೇ ದೇಶದ ಸಮಸ್ಯೆ. ಚುನಾವಣೆಗೂ ಆರು ತಿಂಗಳ ಮೊದಲು ಯಾವುದೇ ಜಾತಿ, ಧರ್ಮದ ವಿಚಾರವಿರುವುದಿಲ್ಲ. ಆದರೆ ಚುನಾವಣೆ ಹತ್ತಿರವಾದಂತೆ ಹಿಂದೂ, ಮುಸ್ಲಿಂ ವಿಚಾರ ನೆನಪಾಗುವ ಮೂಲಕ ಕೋಮು ಭಾವನೆ ಕೆರಳಿಸುವ ಕೆಲಸ ಮಾಡುತ್ತಿರುವುದು ದುರದೃಷ್ಟಕರ
ಸಂಗತಿ ಎಂದರು. 

ಇದೀಗ ಅಲ್ಪಸಂಖ್ಯಾತರ ಮೇಲಿನ ಕೇಸ್‌ ವಾಪಾಸ್‌ ಪಡೆದು ಜಾತಿಗಳ ಓಲೈಕೆ ಮಾಡುತ್ತಿದ್ದಾರೆ. ಕೋಮು ಸಾಮರಸ್ಯ
ಕದಡುವ ಕೆಲಸ ಫಲಿಸುವುದಿಲ್ಲ ಎಂದು ರಾಜಕಾರಣಿಗಳಿಗೆ ಮನವರಿಕೆ ಮಾಡಿಕೊಟ್ಟರೆ ಅಲ್ಪ ಪ್ರಮಾಣದಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ತಿಳಿಸಿದರು. ದೇಶದಲ್ಲಿ 30 ರಾಜ್ಯಗಳಿದ್ದರೆ 3 ಸಾವಿರ ಜಾತಿಗಳ ಉದಯವಾಗಿವೆ. ಗುಜರಾತ್‌ ಚುನಾವಣೆ ವೇಳೆಯಲ್ಲಿ ಜಾತಿಯ ವಿಷ ಬೀಜ ಬೆಳೆಯುವಂತೆ ವಾತಾವರಣ ನಿರ್ಮಾಣವಾಗಿದ್ದು ಎಚ್ಚರಿಕೆಯ ಗಂಟೆ ಎಂದು
ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಸ್ತಾಪಿಸಿದ್ದರು. ಇಂತಹ ಜಾತಿಯತೆ ಬಗ್ಗೆ ಇಡೀ ದೇಶವೇ ಒಗ್ಗಟ್ಟಾಗಿ
ವಿರೋಧಿಸಬೇಕಿದೆ ಎಂದರು.

ರಜಪೂತ, ಪಟೇಲ್‌ ಹೀಗೆ ದೇಶದ ಎಲ್ಲ ಕಡೆಗಳಲ್ಲಿಯೂ ಆಯಾ ಪ್ರಾಂತ್ಯದ ಜಾತಿ ವಿಷಬೀಜ ಬಿತ್ತುವ ಕೆಲಸ ದುಷ್ಟ
ಸಂಘಟಿತ ಶಕ್ತಿಗಳು ನಡೆಸುತ್ತಿವೆ. ರಾಜ್ಯದಲ್ಲಿಯೂ ವೀರಶೈವ ಮತ್ತು ಲಿಂಗಾಯತ ಸೇರಿದಂತೆ ಜಾತಿ ಜಾತಿಗಳ
ನಡುವೆ ಒಡಕುಂಟು ಮಾಡುವ ಪ್ರಯತ್ನ ನಡೆದಿದೆ. ಶ್ರೇಷ್ಠ ಪರಂಪರೆ ಹೊಂದಿದ್ದ ಭಾರತ ದೇಶ ದಿಕ್ಕು ತಪ್ಪಲು
ಜಾತಿಗಳ ಒಡಕೇ ಮುಖ್ಯ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು. ರಾಜಕೀಯ ಇತಿಹಾಸದಲ್ಲಿ ಜಾತಿಯ
ಹೆಸರು ಉಲ್ಲೇಖೀಸದೇ ವಿಕಾಸವಾದದ ವಿಚಾರಧಾರೆಯಿಂದಲೇ ಪ್ರಧಾನಿ ನರೇಂದ್ರ ಮೋದಿ ಚುನಾವಣೆಯಲ್ಲಿ ಮತ ಕೇಳುತ್ತಾ ಬಂದಿದ್ದಾರೆ. ಜಾತಿ ವಿಚಾರ ಹೊರತುಪಡಿಸಿ ವಿಕಾಸದ ಹಾದಿಯಲ್ಲೂ ಮುನ್ನಡೆಯಬಹುದು ಎಂಬ ಬಾಗಿಲು ತೆರೆದಿಟ್ಟಿದ್ದಾರೆ.
ಉಳಿದ ರಾಜಕಾರಣಿಗಳು ಇದನ್ನು ಅನುಸರಿಸುವ ಸಾಧ್ಯತೆ ತೆರೆದಿಟ್ಟಿದ್ದಾರೆ ಎಂದರು. ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಕಾರ ಭಾರತಿ ಅಧ್ಯಕ್ಷ ಹೊಸಹಳ್ಳಿ ವೆಂಕಟರಾಮ್‌ ಅಧ್ಯಕ್ಷತೆ ವಹಿಸಿದ್ದರು.
ಭೂಪಾಳಂ ವಿಜಯ್‌ಕುಮಾರ್‌, ಅರುಣ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next