ಬಾಗಲಕೋಟೆ: ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಮೈಸೂರು ಮಹಾರಾಜರ ಅರಮನೆಯಲ್ಲಿ ಗೊಂಬೆಯಾಟ ಪ್ರದರ್ಶಿಸಿ ಗಮನ ಸೆಳೆದ ಹಿರಿಯ ಕಲಾವಿದೆ. ಅಂತಹ ಹಿರಿಯ ಕಲಾವಿದೆಯೀಗ, ಪ್ರಶಸ್ತಿ ಹಣಕ್ಕಾಗಿ ಪರದಾಡುವ ಪರಿಸ್ಥಿತಿ ಬಂದಿದೆ.
ಹೌದು. ಈ ಹಿರಿಯ ಕಲಾವಿದೆಯ ಹೆಸರು ನಾಗಮ್ಮ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ದೊಡ್ಡಬೋಗನಹಳ್ಳಿ ಇವರೂರು. 76 ವಯಸ್ಸಿನ ಈ ಹಿರಿಯ ಕಲಾವಿದೆ, ಪಾರಂಪರಿಕ ಗೊಂಬೆಯಾಟ ಕಲೆಯನ್ನೇ ನಂಬಿ ಜೀವಿಸಿದವರು. ಈ ಕಲೆಗಾಗಿಯೇ ಜೀವ ಮುಡುಪಿಟ್ಟ ನಾಗಮ್ಮ ಇದೀಗ ತೀವ್ರ ಬಡತನ, ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಜತೆಗೆ ಒಂದಷ್ಟು ಅನಾರೋಗ್ಯವೂ ಇದೆ. ನಡೆದಾಡಲೂ ಆಗದ ಪರಿಸ್ಥಿತಿ.ಸದಾ ಇಬ್ಬರು ಸಹಾಯಕರು ಬೇಕೇ ಬೇಕು. ಸದ್ಯ ಅಳಿಯನ ಊರಲ್ಲಿ ಆರೈಕೆ ಪಡೆಯುತ್ತಿದ್ದಾರೆ.
ಪ್ರಶಸ್ತಿ ಬಂದಿದ್ದೇ ಬಲು ಅಪರೂಪ: ಮೈಸೂರು ಮಹಾರಾಜ ಅರಮನೆಯಲ್ಲಿ ಗೊಂಬೆಯಾಟ ಪ್ರದರ್ಶಿಸಿ ಗಮನ ಸೆಳೆದ ಈ ಹಿರಿಯ ಕಲಾವಿದೆ ನಾಗಮ್ಮ ಎಂದಿಗೂ ಪ್ರಶಸ್ತಿ ಬಯಸಿದವರಲ್ಲ. ಆದರೆ 2020ನೇ ಸಾಲಿನ ಕರ್ನಾಟಕ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ ಇವರಿಗೆ ಹುಡುಕಿಕೊಂಡು ಬಂದಿತ್ತು. ಆ ಪ್ರಶಸ್ತಿಗೆ ಆಯ್ಕೆಯಾದ ರೀತಿಯೂ ಕುತೂಹಲ ಮತ್ತು ರೋಚಕವೂ ಇದೆ.
ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯರೂ ಆಗಿರುವ ಗೊಂಬೆಯಾಟ ಕಲಾವಿದ ಸಿದ್ದಪ್ಪ ಬಿರಾದಾರ ಅವರು ಇಡೀ ರಾಜ್ಯದ ಗೊಂಬೆಯಾಟ ಕಲಾವಿದರ ಅಧ್ಯಯನ ಮಾಡುವ ವೇಳೆ ಈ ನಾಗಮ್ಮ ಪರಿಚಯವಾಗಿದ್ದರು. ಅವರ ಕಲೆ, ಆರ್ಥಿಕ ಪರಿಸ್ಥಿತಿ ಎಲ್ಲವನ್ನೂ ಕಂಡಿದ್ದ ಸಿದ್ದಪ್ಪ ಅವರು ಬಯಲಾಟ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡುವ ವೇಳೆ ಈ ಕಲಾವಿದೆ ನಾಗಮ್ಮ ಅವರ ಹೆಸರು ಸೂಚಿಸಿದ್ದರು. ಆದರೆ ಅಕಾಡೆಮಿಯ ಆಡಳಿತಾಧಿಕಾರಿಗಳು, ರಿಜಿಸ್ಟ್ರಾರ್ ಮತ್ತು
ಎಲ್ಲ ಸದಸ್ಯರು ಕೂಡ ಪ್ರಶಸ್ತಿ ಆಯ್ಕೆ ಮಾಡಬೇಕಿತ್ತು. ಈ ವೇಳೆ ನಾಗಮ್ಮ ಅವರು ಸಂದರ್ಶನಕ್ಕೆ ಸಿಕ್ಕಿರಲಿಲ್ಲ.
Related Articles
ಆಗ ಪಾಂಡವಪುರದ ತಹಶೀಲ್ದಾರ್ ಮೂಲಕ ಆ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯನ್ನು ಕಲಾವಿದೆಯ ಮನೆಗೆ ಕಳುಹಿಸಿ, ಬಳಿಕ ಪ್ರಶಸ್ತಿ ಆಯ್ಕೆ ಸಮಿತಿ ಸಭೆಯ ವೇಳೆಯೇ ವಿಡಿಯೋ ಕಾಲ್ ಮೂಲಕ ಸಂದರ್ಶನ ನಡೆಸಿ ಅವರನ್ನು ಆಯ್ಕೆ ಮಾಡಲಾಗಿತ್ತು. ಅರ್ಜಿಯೂ ಹಾಕದೇ, ಯಾವುದೇ ಲಾಬಿಯೂ ಮಾಡದೇ ಈ ಹಿರಿಯ ಕಲಾವಿದೆಗೆ ಪ್ರಶಸ್ತಿ ಅರಸಿ ಬಂದಿತ್ತು. ಪ್ರಶಸ್ತಿ ಹಣಕ್ಕಾಗಿ ಅಲೆದಾಟ: ಕಳೆದ ಏ.18ರಂದು ಬಾಗಲಕೋಟೆಯಲ್ಲಿ ಈ ರಾಜ್ಯಮಟ್ಟದ ಪ್ರಶಸ್ತಿ
ಪ್ರದಾನವಾಗಿದ್ದು, ಈ ಹಿರಿಯ ಕಲಾವಿದೆ ಇಬ್ಬರು ಸಹಾಯಕರೊಂದಿಗೆ ವೇದಿಕೆ ಹತ್ತಿ, ತಮ್ಮ ಕಲಾ ಜೀವಮಾನದ ರಾಜ್ಯಮಟ್ಟದ ಪ್ರಶಸ್ತಿ ಸ್ವೀಕರಿಸಿ ಖುಷಿ ಪಟ್ಟಿದ್ದರು. ಕರ್ನಾಟಕ ಬಯಲಾಟ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪುರಸ್ಕೃತರಿಗೆ 50 ಸಾವಿರ ನಗದು ಚೆಕ್ ಕೂಡ ಕೊಡಲಾಗಿದ್ದು, ಒಟ್ಟು 5 ಜನ ಗೌರವ ಪ್ರಶಸ್ತಿ 9 ಜನ ವಾರ್ಷಿಕ ಪ್ರಶಸ್ತಿ (25 ಸಾವಿರ ನಗದು) ಪುರಸ್ಕೃತರಿಗೆಲ್ಲ ಚೆಕ್ ಕೊಡಲಾಗಿತ್ತು.
ಆದರೆ ಈ ಹಿರಿಯ ಕಲಾವಿದೆ ನಾಗಮ್ಮ ಅವರಿಗೆ ಕೊಟ್ಟ ಚೆಕ್ (ಪ್ರಶಸ್ತಿ ಕೊಡುವ ವೇಳೆ ಕವರ್‌ನಲ್ಲಿಟ್ಟು ಕೊಡಲಾಗಿತ್ತು)ಗೆ ಅಕಾಡೆಮಿಯ ರಿಜಿಸ್ಟ್ರಾರ್ ಸಹಿಯೇ ಮಾಡಿಲ್ಲ. ಅದನ್ನು ನಾಗಮ್ಮ ಅವರೂ ನೋಡಿಲ್ಲ. ತಮ್ಮೂರಿಗೆ ಹೋಗಿ ಬ್ಯಾಂಕ್ ಖಾತೆಗೆ ಚೆಕ್ ಹಾಕಿದ್ದು, ಅದು ವಾಪಸ್ ಆಗಿದೆ. ಹಣ ಜಮೆಯಾಗದ ಕುರಿತು ಅಕಾಡೆಮಿ ಸಿಬ್ಬಂದಿಗೆ ತಿಳಿಸಿದರೆ, ಚೆಕ್ ಕಳುಹಿಸಿ ಆ ಮೇಲೆ ಮತ್ತೊಂದು ಚೆಕ್ ಕಳುಹಿಸುತ್ತೇವೆ, ಇಲ್ಲವೇ ಬ್ಯಾಂಕ್ ಖಾತೆಗೆ ಹಾಕ್ತೀವಿ ಎಂಬ ಉತ್ತರ ಬಂದಿದೆ.
ಕಳೆದ ಏ.18ರಂದೇ ಪ್ರಶಸ್ತಿ ಮತ್ತು ಚೆಕ್ ಕೈ ಸೇರಿದರೂ ಆ ಹಣ ಸಿಕ್ಕಿಲ್ಲ. ಪ್ರಶಸ್ತಿಯ ಹಣದಲ್ಲೇ ಒಂದಷ್ಟು ಆಸ್ಪತ್ರೆಯ ಖರ್ಚು ಪೂರೈಸಿಕೊಳ್ಳಬೇಕೆಂದಿದ್ದ ಕಲಾವಿದೆ, ಕಳೆದೊಂದು ವಾರದಿಂದ ಇಬ್ಬರು ಸಹಾಯಕರೊಂದಿಗೆ 2-3 ಬಾರಿ ಬ್ಯಾಂಕ್‌ಗೆ ಅಲೆಯುವಂತಾಗಿದೆ. ಅದೂ ಸದ್ಯ ಕಲಾವಿದೆ ಇರುವ ಊರಿಂದ 68 ಕಿ.ಮೀ ದೂರದಲ್ಲಿ ಅವರು ಖಾತೆ ಹೊಂದಿರುವ ಬ್ಯಾಂಕ್ ಇದೆ.
ಒಟ್ಟಾರೆ ಅಧಿಕಾರಿ-ಸಿಬ್ಬಂದಿಗಳ ಬೇಜವಾಬ್ದಾರಿ ಯಿಂದ ಈ ಹಿರಿಯ ಕಲಾವಿದೆಯೊಬ್ಬರು ಪ್ರಶಸ್ತಿ ಹಣಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಅಕಾಡೆಮಿ ಸದಸ್ಯರು, ಹಿರಿಯ ಕಲಾವಿದರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿ ಪ್ರದಾನ ದಿನದಂದು ಎಲ್ಲರಿಗೂ ಚೆಕ್ ಕೊಡಲಾಗಿದೆ. ಆದರೆ ನಾಗಮ್ಮ ಅವರಿಗೆ ಕೊಟ್ಟ ಚೆಕ್‌ಗೆ ಸಹಿ ಮಾಡದೇ ಇರುವುದು ಬಳಿಕ ಗೊತ್ತಾಗಿದೆ. ಈಗಾಗಲೇ ಒಂದು ಬಾರಿ ಆರ್ ಟಿಜಿಎಸ್ ಮಾಡಿಸಿದ್ದು, ಅದೂ ರಿಟನ್ ಆಗಿದೆ. ಕೂಡಲೇ ಅವರಿಗೆ ಪ್ರಶಸ್ತಿ ಹಣ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು.
ಎನ್. ಹೇಮಾವತಿ, ರಿಜಿಸ್ಟ್ರಾರ್,
ಕರ್ನಾಟಕ ಬಯಲಾಟ ಅಕಾಡೆಮಿ.
ಶ್ರೀಶೈಲ ಕೆ.ಬಿರಾದಾರ