Advertisement

ಲಕ್ಷದ್ವೀಪ ಸರಕು ಸಾಗಾಟ: ಹೂಳು ತೊಡಕು!

01:24 PM Sep 22, 2022 | Team Udayavani |

ಬಂದರು: ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪಕ್ಕೆ ಮಂಗಳೂರಿನ ಹಳೆಬಂದರಿನಿಂದ ಸರಕು ಸಾಗಾಟ ಮಾಡಲು ಅವಕಾಶ ಲಭಿಸಿದರೂ ಅಳಿವೆ ಬಾಗಿಲಿನಲ್ಲಿ (ನೇತ್ರಾವತಿ ಹಾಗೂ ಫಲ್ಗುಣಿ ನದಿ ಸಂಗಮಿಸಿ ಸಮುದ್ರ ಸೇರುವ ಸ್ಥಳ) ಹೂಳು ತುಂಬಿರುವ ಕಾರಣದಿಂದ ನೌಕೆ ಸಂಚಾರ ಇನ್ನೂ ಆರಂಭವಾಗಿಲ್ಲ.

Advertisement

ಲಕ್ಷದ್ವೀಪಕ್ಕೆ ಸರಕು ಸಾಗಾಟ ಮಾಡುವುದರಿಂದ ಕರಾವಳಿಯ ಸ್ಥಳೀಯ ವ್ಯಾಪಾರ ವಹಿವಾಟಿನಲ್ಲಿ ಚೇತರಿಕೆ ಕಂಡುಬರುತ್ತದೆ. ಜತೆಗೆ ಸ್ಥಳೀಯ ವ್ಯಾಪಾರಕ್ಕೂ ಹೆಚ್ಚು ಅವಕಾಶ ಲಭಿಸಿದಂತಾಗುತ್ತದೆ.

ಹಳೆಬಂದರಿನಿಂದ ಲಕ್ಷದ್ವೀಪಕ್ಕೆ ಪ್ರತೀ ವರ್ಷ ಸೆ. 15ರಿಂದ ಮೇ 15ರ ವರೆಗೆ ಮಾತ್ರ (ಮೇ 16ರಿಂದ ಸೆ. 14ರ ವರೆಗೆ ನಿಷೇಧ) ಸರಕು ಸಾಗಾಟಕ್ಕೆ ನಿಯಮಾವಳಿ ಪ್ರಕಾರ ಅವಕಾಶವಿದೆ. ಅಕ್ಕಿ, ಆಹಾರ ವಸ್ತುಗಳು, ತರಕಾರಿ, ಕಲ್ಲು, ಮಣ್ಣು, ಜಲ್ಲಿ, ಸಿಮೆಂಟ್‌, ಇಟ್ಟಿಗೆ, ಬ್ಲಾಕ್‌, ಸ್ಟೀಲ್‌ ಸಾಗಿಸಲಾಗುತ್ತದೆ. ಆದರೆ ಸೆ. 15ರಿಂದ ಸಾಗಾಟ ಮಾಡಲು ಅವಕಾಶ ಇದ್ದರೂ ಅಳಿವೆಯಲ್ಲಿ ಹೂಳು ತುಂಬಿ ಸಾಗಾಟಕ್ಕೆ ಅವಕಾಶ ದೊರೆಯಲಿಲ್ಲ.

1 ನೌಕೆಯು ಸಾಮಾನ್ಯವಾಗಿ 500 ಟನ್‌ ಸಾಮರ್ಥ್ಯದ ಸರಕು ಸಾಗಾಟ ಮಾಡಲು ಅವಕಾಶವಿದೆ. ಆದರೆ ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿದ ಕಾರಣದಿಂದ 300 ಟನ್‌ನಷ್ಟು ಮಾತ್ರ ಸಾಗಾಟ ಮಾಡಬಹುದಾಗಿದೆ. ಇದು ಸಾಗಾಟಗಾರರಿಗೆ ನಷ್ಟವಾಗುತ್ತದೆ. ಹೀಗಾಗಿ ಹೂಳು ತೆಗೆಯದೆ ಸರಕು ಸಾಗಾಟ ಆರಂಭವಾಗದು.

ಅಳಿವೆ ಬಾಗಿಲಿನಲ್ಲಿ ಸರಕು ನೌಕೆ ಸಾಗಾಟಕ್ಕೆ 4 ಮೀ. ಆಳದವರೆಗೆ ಹೂಳು ತೆಗೆದಿರಬೇಕು. ಆದರೆ ಇದೀಗ 2.30 ಮೀ. ವರೆಗೆ ಹೂಳು ಇದೆ. ಮೀನುಗಾರಿಕೆ ಬೋಟ್‌ಗಳು ಇಲ್ಲಿ ಆತಂಕದಿಂದಲೇ ಸಂಚರಿಸಬಹುದಾಗಿದೆ. ಆದರೆ ಸರಕು ಸಾಗಾಟ ನೌಕೆಗೆ ಕಷ್ಟ.

Advertisement

1 ಕೋ.ರೂ ವೆಚ್ಚದಲ್ಲಿ ಡ್ರೆಜ್ಜಿಂಗ್‌

ಬಂದರು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರವೀಣ್‌ ಅವರು “ಸುದಿನ’ ಜತೆಗೆ ಮಾತನಾಡಿ, “ಅಳಿವೆ ಬಾಗಿಲಿನಲ್ಲಿ ತಾತ್ಕಾಲಿಕವಾಗಿ 1 ಕೋ.ರೂ ವೆಚ್ಚದಲ್ಲಿ ಹೂಳೆತ್ತಲು ಅನುಮತಿ ದೊರೆತಿದೆ. ಕಾಮಗಾರಿ ನಡೆಸಲು ಅಳಿವೆಯಲ್ಲಿ ಅಲೆಗಳ ತೀವ್ರತೆ ತೊಡಕಾಗಿದೆ. ಜತೆಗೆ, ಸರ್ವೇ ಬೋಟ್‌ ತೆರಳಲೂ ಕಷ್ಟವಿದೆ. ಹೀಗಾಗಿ ಅಲೆಗಳ ತೀವ್ರತೆ ಕಡಿಮೆಯಾದ ಕೂಡಲೇ ಇಲ್ಲಿ ಡ್ರೆಜ್ಜಿಂಗ್‌ ಮಾಡಲಾಗುತ್ತದೆ. ಈ ಬಗ್ಗೆ ಮೀನುಗಾರಿಕೆ ಇಲಾಖೆಯವರ ಜತೆಗೆ ಮಾತುಕತೆ ಕೂಡ ನಡೆಸಲಾಗಿದೆ’ ಎಂದರು.

29 ಕೋ.ರೂ. ವೆಚ್ಚದಲ್ಲಿ ಡ್ರೆಜ್ಜಿಂಗ್‌ ಕೈಗೊಳ್ಳಲು ಈ ಹಿಂದೆ ಕೇಂದ್ರ ಸರಕಾರ ನಿರ್ಧಾರ ಮಾಡಿತ್ತು. ತಾತ್ಕಾಲಿಕವಾಗಿ ಡ್ರೆಜ್ಜಿಂಗ್‌ ಮಾಡುವ ಅನಿವಾರ್ಯ ಇಲ್ಲ ಎಂದೇ ಭಾವಿಸಲಾಗಿತ್ತು. ಆದರೆ ಈ ಕಾಮಗಾರಿ ಆರಂಭಕ್ಕೆ ಇನ್ನೂ ಹಲವು ಸಮಯ ಅಗತ್ಯವಿರುವ ಕಾರಣದಿಂದ ಸದ್ಯ 1 ಕೋ.ರೂ ವೆಚ್ಚದಲ್ಲಿ ಡ್ರೆಜ್ಜಿಂಗ್‌ ಮಾಡಬೇಕಾದ ಅನಿವಾರ್ಯವಿದೆ. ಹಾಗಾಗಿ ಶಾಸಕ ವೇದವ್ಯಾಸ್‌ ಕಾಮತ್‌ ಅವರ ಕೋರಿಕೆಯ ಮೇರೆಗೆ ಅನುಮತಿ ದೊರಕಿದೆ.

ಲಕ್ಷದ್ವೀಪ ಸರಕು ರಫ್ತುದಾರರಾದ ಹರೀಶ್‌ ಕಾವ ಅವರು “ಸುದಿನ’ ಜತೆಗೆ ಮಾತನಾಡಿ, “ಹೂಳೆತ್ತುವ ಕಾಮಗಾರಿಯನ್ನು ಶೀಘ್ರ ಮುಗಿಸಿ ಸರಕು ಸಾಗಾಟಕ್ಕೆ ಅವಕಾಶ ಮಾಡಿ ಕೊಡಬೇಕಿದೆ. ಜತೆಗೆ ಮಂಗಳೂರಿನ ಬಂದರು ಇಲಾಖೆಯ ಹಿಂಭಾಗ ದಲ್ಲಿರುವ ಹೊಸ ಜೆಟ್ಟಿಯಲ್ಲಿ ಸರಕು ಸಂಗ್ರಹ ಹಾಗೂ ಸಾಗಾಟಕ್ಕೆ ಅವಕಾಶ ಮಾಡಿಕೊಡುವ ವಾಣಿಜ್ಯ ಬಳಕೆಗೆ ನೀಡುವ ಮಹತ್ವದ ನಿರ್ಧಾರ ಕೈಗೊಂಡರೆ ಉತ್ತಮ’ ಎನ್ನುತ್ತಾರೆ.

29 ಕೋ.ರೂ ಡ್ರೆಜ್ಜಿಂಗ್‌ಗೆ 6ನೇ ಬಾರಿ ಟೆಂಡರ್‌!

ಮೀನುಗಾರರಿಗೆ ಹಾಗೂ ವಾಣಿಜ್ಯ ವ್ಯವಹಾರದ ಹಡಗುಗಳಿಗೆ ನಿತ್ಯ ಸಮಸ್ಯೆ ಆಗುತ್ತಿರುವ ಮಂಗಳೂರಿನ ಅಳಿವೆಬಾಗಿಲು ವ್ಯಾಪ್ತಿಯಲ್ಲಿ ತುಂಬಿರುವ ಹೂಳನ್ನು ಪೂರ್ಣ ಪ್ರಮಾಣದಲ್ಲಿ ಮೇಲಕ್ಕೆತ್ತುವ (ಡ್ರೆಜ್ಜಿಂಗ್‌) 29 ಕೋ.ರೂ.ಗಳ ಮಹತ್ವದ ಯೋಜನೆ ಇನ್ನೂ ಟೆಂಡರ್‌ ಹಂತದಲ್ಲಿಯೇ ಬಾಕಿಯಾಗಿದೆ. 5 ಬಾರಿ ಟೆಂಡರ್‌ ಆಗಿದ್ದರೂ ಕಾನೂನಾತ್ಮಕ, ತಾಂತ್ರಿಕ ಕಾರಣದಿಂದ ಯಾರಿಗೂ ಟೆಂಡರ್‌ ನೀಡಲು ಸಾಧ್ಯವಾಗಿಲ್ಲ. ಇದೀಗ 6ನೇ ಬಾರಿ ಟೆಂಡರ್‌ ಕರೆಯಲಾಗಿದೆ. ಈಗಲೂ ಕೆಲವು ತಾಂತ್ರಿಕ ಸಮಸ್ಯೆ ಎದುರಾಗಿದೆ. ಹೀಗಾಗಿ, ಸಿಎಂ ಅಧ್ಯಕ್ಷತೆಯ ಮೆರಿಟೈಮ್‌ ಬೋರ್ಡ್‌ನಲ್ಲಿ ವಿಶೇಷ ಅನುಮತಿ ಪಡೆದು ಟೆಂಡರ್‌ ಒಪ್ಪಿಗೆ ಪಡೆಯಲು ಈ ಬಾರಿ ಅವಕಾಶವಿದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ, 7ನೇ ಬಾರಿಗೆ ಟೆಂಡರ್‌ ಕರೆಯುವುದು ಅನಿವಾರ್ಯ!

ಅವಕಾಶ ಕಲ್ಪಿಸಲಾಗುವುದು: ನಿಯಮಾವಳಿ ಪ್ರಕಾರ ಮೇ 15ರಿಂದ ಸೆ. 15ರ ವರೆಗೆ ಮಂಗಳೂರು ಹಳೆಬಂದರಿನಿಂದ ಸರಕು ಸಾಗಾಟಕ್ಕೆ ನಿಷೇಧವಿದೆ. ಇದರಂತೆ ಸದ್ಯ ಸರಕು ಸಾಗಾಟಕ್ಕೆ ಅವಕಾಶವಿದೆ. ಆದರೆ, ಅಳಿವೆಬಾಗಿಲಿನಲ್ಲಿ ಹೂಳು ತುಂಬಿರುವ ಕಾರಣದಿಂದ ನೌಕೆ ತೆರಳಲು ಸಮಸ್ಯೆಯಾಗಿದೆ. ಕಡಲ ಅಲೆಗಳ ತೀವ್ರತೆ ಕೊಂಚ ಕಡಿಮೆಯಾದ ಕೂಡಲೇ ಹೂಳೆತ್ತುವ ಕೆಲಸ ನಡೆಸಿ ಸರಕು ಸಾಗಾಟಕ್ಕೆ ಅವಕಾಶ ಕಲ್ಪಿಸಲಾಗುವುದು. – ಯೋಗೀಶ್‌, ಬಂದರು ಸಂರಕ್ಷಣಾಧಿಕಾರಿ-ಮಂಗಳೂರು ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next